ಬೆಂಗಳೂರು,ಸೆ,25: ಖಾದಿ ಸಂಘ-ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸನ್ನು ಸಾಕಾರ ಗೊಳಿಸಲು ಅಕ್ಟೋಬರ್ 2 ರಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಖಾದಿ ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು ಎಂಟಿಬಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು,ಸದಸ್ಯರು, ಉಪ ಸಭಾಧ್ಯಕ್ಷರು,ಉಪ ಸಭಾಪತಿ ಹಾಗೂ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.
ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬಿ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಸ್ಥಾಪಿಸಲಾಗಿದೆಯಾದರೂ ಅದು ಲಾಭದಾಯಕವಾಗಿಲ್ಲ.ರಾಜ್ಯದಲ್ಲಿ ಖಾದಿ ಉತ್ಪನ್ನಗಳನ್ನು ಉತ್ಪಾದಿಸುವ ಸುಮಾರು 200 ಸಂಸ್ಥೆಗಳಿದ್ದು,ಇವುಗಳಲ್ಲಿ ಸುಮಾರು 20 ಸಾವಿರ ನೂಲುವವರು ಮತ್ತು ನೇಕಾರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ,ಕೊರೊನಾದಿಂದಾಗಿ ಖಾದಿ ಸಂಘ-ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಹಾಗಾಗಿ,ಅಕ್ಟೋಬರ್ 2ರ ಗಾಂಧಿ ಜಯಂತಿಯ ಸುಸಂದರ್ಭದಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವುಗಳ ನೆರವಿಗೆ ಎಲ್ಲ ಜನಪ್ರತಿನಿಧಿಗಳು ಬರಬೇಕಿದೆ ಎಂದು ಸಚಿವ ಎನ್.ನಾಗರಾಜು ಎಂಟಿಬಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.