ಕುಡಿಯವ ನೀರಿನ ದರ ಹೆಚ್ಚಳದ ಸುಳಿವು ನೀಡಿದ ಡಿಸಿಎಂ ಡಿ.ಕೆ.ಶಿ

Share

ಕುಡಿಯವ ನೀರಿನ ದರ ಹೆಚ್ಚಳದ ಸುಳಿವು ನೀಡಿದ ಡಿಸಿಎಂ ಡಿ.ಕೆ.ಶಿ

byಕೆಂಧೂಳಿ

ಬೆಂಗಳೂರು, ಜ.28-“ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಹೇಳಿದರು.

ನಗರದ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು, ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

“2014 ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ” ಎಂದರು.

*ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ:*

“ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ” ಎಂದರು.

“ಈ ಹಿಂದೆ ಕೊಳೆಗೇರಿ ಹಾಗೂ ಬಡವರ ಉಪಯೋಗಕ್ಕೆ ಸರ್ಕಾರ ರೂ.20 ಕೋಟಿ ಹಣ ಮೀಸಲಿಟ್ಟಿತ್ತು. ಹಿಂದಿನ ಬಿಜೆಪಿ ಸರ್ಕಾರ ಈ ಸಹಾಯಧನವನ್ನು ನಿಲ್ಲಿಸಿತ್ತು. ಇದನ್ನು ಮುಂದುವರೆಸಲಾಗುವುದು. ಬಡವರಿಗೆ ನೀರು ನೀಡಿದರೂ ಸಹ ಅದು ಕೂಡ ಲೆಕ್ಕಕ್ಕೆ ಸಿಗಬೇಕು. 1 ಪೈಸೆ ಹಣ ನೀಡಿಯಾದರೂ ಸಂಪರ್ಕ ನೀಡಬೇಕು. ಯಾರು ಎಷ್ಟು ನೀರು ಪಡೆಯುತ್ತಿದ್ದಾರೆ ಎನ್ನುವ ಲೆಕ್ಕ ಸರ್ಕಾರಕ್ಕೆ ಸಿಗಬೇಕು. ಅನೇಕ ಕಡೆ ಕೊಳೆಗೇರಿ ಹೆಸರಿನಲ್ಲಿ ಉಳ್ಳವರು ನೀರು ಪಡೆಯುತ್ತಿದ್ದಾರೆ” ಎಂದರು.

“ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಂಡಿರುವ ತೆರಿಗೆ ಪಾವತಿಗೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲಿ ನೀರಿನ ಸಂಪರ್ಕ, ಬಳಕೆಯಾಗುವ ನೀರಿನ ಬಗ್ಗೆ ನಿಖರ ಮಾಹಿತಿ ಸಿಗಬೇಕು ಎಂದು ಯೋಜನೆ ರೂಪಿಸಲಾಗಿದೆ. ಬಡವರು, ಶ್ರೀಮಂತರು, ವಸತಿ ಸಮುಚ್ಚಯಗಳು ಹೀಗೆ ಪ್ರತಿಯೊಂದು ಲೆಕ್ಕವೂ ಸಿಗಬೇಕು. ಸಾರ್ವಜನಿಕರು ಕೊಂಚವಾದರೂ ಹಣ ಪಾವತಿ ಮಾಡಿ ನೀರಿನ ಸಂಪರ್ಕ ಪಡೆಯಬೇಕು. ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಬೇಕು. ಬಿಡ್ಬ್ಯೂ ಎಸ್ ಎಸ್ ಬಿ ಉಳಿವಿಗೆ ಮತ್ತು ಎಲ್ಲರಿಗೂ ನೀರನ್ನು ಒದಗಿಸಿಕೊಡಲು ನಾವು ತೀರ್ಮಾನ ಮಾಡಬೇಕಿದೆ” ಎಂದು ಮನವಿ ಮಾಡಿದರು.

*ಬೇಸಿಗೆಗೆ ಈಗಿನಿಂದಲೇ ತಯಾರಿ*

“ಮುಂಬರುವ ಬೇಸಿಗೆ ವೇಳೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎನ್ನುವ ಸೂಚನೆ ನೀಡಲಾಗಿದೆ. ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಯಾವುದಾದರೂ ಕೆರೆ ತುಂಬಿಸಬೇಕಿದ್ದರೆ ಈ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

*ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ*

ಮೆಟ್ರೋ ಟಿಕೆಟ್ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಜೊತೆಗೆ ನೀರಿನ ಬೆಲೆ ಏರಿಕೆಯಾದರೆ ಜನರಿಗೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದೆಲ್ಲ ಆಗುತ್ತಿದೆ. ನೌಕರರಿಗೆ ಶೇ. 10 ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ” ಎಂದರು.

ಬಿಡ್ಬ್ಯೂಎಸ್ಎಸ್ ಬಿಯಲ್ಲಿಯೂ ಓಟಿಎಸ್ ವ್ಯವಸ್ಥೆ ತರಲಾಗುವುದೇ ಎಂದು ಕೇಳಿದಾಗ, “ಇದರ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವವರಿಗೆ ಈ ವ್ಯವಸ್ಥೆ ತರಲು ಅಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದ್ದೇನೆ” ಎಂದರು.

 

Girl in a jacket
error: Content is protected !!