ವಿಜಯಪುರ ,ಏ,7: ಯುದ್ಧಪೀಡಿತ ಉಕ್ರೇನಿನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ, ದೇಶಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ನೆರವಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮುಂದಾಗಿದೆ.
ಸರ್ಕಾರದ ಮುಂದಿನ ಆದೇಶದವರೆಗೆ ಈ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ಅತಂತ್ರದಲ್ಲಿದ್ದ ವಿದ್ಯಾರ್ಥಿಗಳ ಪಾಲಿಗೆ ಆಧಾರ ಹಸ್ತ ಚಾಚುವ ಮೂಲಕ ದೇಶದ ಪ್ರಥಮ ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿದೆ.
ಈ ಕುರಿತು ವಿಜಯಪುರದಲ್ಲಿ ಇಂದು ಪ್ರಕಟಿಸಿದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್‍ರವರು, ವಿಜಯಪುರದಲ್ಲಿ ನಿನ್ನೆ ಉಕ್ರೇನಿನಿಂದ ಆಗಮಿಸಿದ 17 ಜನ ವೈದ್ಯ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಕುರಿತು ತಮ್ಮ ಪಾಲಕರೊಂದಿಗೆ ನನ್ನನ್ನು ಭೇಟಿ ಮಾಡಿ ನೆರವು ಕೋರಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿದ್ಯಾರ್ಥಿಗಳಿಗೆ ನೆರವು ಒದಗಿಸುವುದಾಗಿ ಹೇಳಿದ್ದರೂ ಇದುವರೆಗೆ ಸ್ಪಷ್ಟ ನೀತಿ ಜಾರಿಯಾಗಿಲ್ಲ. ವಿದ್ಯಾರ್ಥಿಗಳು ಗೊಂದಲಕ್ಕಿಡಾಗಿದ್ದು, ಶೈಕ್ಷಣಿಕವಾಗಿ ಅತಂತ್ರರಾಗಿದ್ದಾರೆ. ಮನೆಯಲ್ಲಿಯೇ ಖಾಲಿ ಕುಳಿತುಕೊಳ್ಳುವುದು ಬೇಡ. ಈ ವಿದ್ಯಾರ್ಥಿಗಳು ಇಂದಿನಿಂದಲೇ ಬಿ.ಎಲ್.ಡಿ.ಇ ಡೀಮ್ಡ್ ವಿವಿ ವ್ಯಾಪ್ತಿಯ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ. ಕೇವಲ ಉಕ್ರೇನನಿಂದ ಆಗಮಿಸಿದ ವಿಜಯಪುರ ಜಿಲ್ಲೆಯ 17 ವಿದ್ಯಾರ್ಥಿಗಳು ಅಲ್ಲದೇ, ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾಗೂ ಸದ್ಯ ಲಾಕ್‍ಡೌನ್ ಕಾರಣದಿಂದ ಇಲ್ಲಿಯೇ ಉಳಿದಿರುವ ಐದು ವಿದ್ಯಾರ್ಥಿಗಳಿಗೂ ಕೂಡ ಪ್ರತ್ಯೇಕ ಕ್ಲಾಸ್‍ಗಳನ್ನು ತೆಗೆದುಕೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಎಲ್ಲ ಬೋಧನೆಗಳು ಮತ್ತು ತರಬೇತಿಗಳನ್ನು ನೀಡುವುದರ ಜೊತೆಗೆ ಗ್ರಂಥಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂದಿನಿಂದಲೆ ವಿದ್ಯಾರ್ಥಿಗಳು ಆ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಗಮನ ಹರಿಸಲು ವಿಶೇಷ ಉಪನ್ಯಾಸಕರನ್ನು ನಿಯೋಜಿಸಿದ್ದಾರೆ. ಉಕ್ರೇನ್‍ನಿಂದ ಆಗಮಿಸಿರುವ ವಿದ್ಯಾರ್ಥಿಗಳಲ್ಲಿ ಪ್ರಥಮ ಎಂ.ಬಿ.ಬಿ.ಎಸ್ 8, ದ್ವಿತೀಯ ಎಂ.ಬಿ.ಬಿ.ಎಸ್ 7 ಮತ್ತು ತೃತೀಯ ಎಂ.ಬಿ.ಬಿ.ಎಸ್ 2 ವಿದ್ಯಾರ್ಥಿಗಳು ಹಾಗೂ ಚೀನಾದಿಂದ ದ್ವಿತೀಯ ಎಂ.ಬಿ.ಬಿ.ಎಸ್ 3, ತೃತೀಯ ಎಂ.ಬಿ.ಬಿ.ಎಸ್ 2 ವಿದ್ಯಾರ್ಥಿಗಳು ಇದುವರೆಗೆ ಕಾಲೇಜಿನಲ್ಲಿ ಹೆಸರು ನೋಂದಾಯಿಸಿದ್ದು, ಇಂದಿನಿಂದಲೇ ಅವರಿಗೆ ತರಗತಿಗಳು ಆರಂಭಗೊಂಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಅಮನ ಮಮದಾಪುರ ತಂದೆ ಧರ್ಮರಾಯ ಮಮದಾಪುರ ಎಂ. ಬಿ. ಪಾಟೀಲ ಅವರು ನಮಗೆಲ್ಲ ಈ ಸಂಕಷ್ಟದ ಸಮಯದಲ್ಲಿ ಆಪದ್ಭಾಂಧವರಾಗಿದ್ದಾರೆ. ನಮ್ಮ ಮಕ್ಕಳು ಡಾಕ್ಟರ್ ಆಗಬೇಕೆಂಬ ಕನಸಿಗೆ ಉಂಟಾಗಿದ್ದ ಅಡ್ಡಿಯನ್ನು ಸಧ್ಯಕ್ಕೆ ನಿವಾರಿಸಿದ್ದಾರೆ. ಎಲ್ಲ ಪೋಷಕರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ನಮ್ಮ ಮಕ್ಕಳ ಎಂ.ಬಿ.ಬಿ.ಎಸ್ ಕೋರ್ಸಿನ ಬಗ್ಗೆ ಇತರ ತಾಂತ್ರಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡುತ್ತೇವೆ. ಎಂ.ಬಿ.ಪಾಟೀಲ ಅವರ ಸಹಾಯ ನಮ್ಮ ಮಕ್ಕಳ ಭವಿಷ್ಯಕ್ಕೆ ಬೆಳಕಾಗುವಂತೆ ಮಾಡಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.