ಮಂಡ್ಯ,ಜು,23-ಉದ್ಯೋಗ ಹುಡುಕುತ್ತಿರುವ ಯುವ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯನ್ನು ಅಳವಡಿಸಿಕೊಂಡು ತಾವೇ ಖುದ್ದು ಉದ್ಯೋಗ ಸೃಷ್ಟಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಇಂದು (ಜು.23) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಹಾರ ಸಂಸ್ಕರಣಾ ಸಚಿವಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರಧಾನ ಮಂತ್ರಿಗಳು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಾಕೆ ಯೋಜನೆ” ಅರಿವು ಮೂಡಿಸುವ ಕಾರ್ಯಾಗಾರವನ್ನು ಗಾಣದಿಂದ ಎಣ್ಣೆ ತೆಗೆಯುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಿಟ್ಟರೆ ಉಳಿದವರೆಲ್ಲರು ಜಮೀನು ಹೊಂದಿದ್ದಾರೆ. ನಿಮ್ಮ ಬಳಿ ಇರುವ ಜಮೀನಿನಲ್ಲಿ 1 ಎಕರೆ ಜಾಗದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದರು.
ವಿದ್ಯಾಭ್ಯಾಸಕ್ಕೂ ವೃತ್ತಿಗೂ ಸಂಭಂದ ಇಲ್ಲ. ವಿದ್ಯಾಭ್ಯಾಸ ಲೋಕಜ್ಞಾನ. ಸಾಮಾನ್ಯಜ್ಞಾನ. ತಿಳುವಳಿಕೆ ಹಾಗೂ ಸಮಾಜದಲ್ಲಿ ಬದುಕುವ ರೀತಿ ಕಲಿಸುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಿರುವ ಕಾರಣಕ್ಕೆ ಉನ್ನತ ಕೆಲಸಗಳನ್ನೇ ಮಾಡಬೇಕು ಎಂಬ ಮಾನೋಭಾವನೆಯಿಂದ ಯುವಕರು ಹೊರ ಬರಬೇಕು. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ನೀವೇನಾದರೂ ಉದ್ದಿಮೆ ಪ್ರಾರಂಭಿಸಿದರೆ ಲಾಭ ಗಳಿಸಬಹುದು ಎಂದರು.
ಸರ್ಕಾರ 6000 ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದೆ. ಪಿ.ಎಮ್.ಎಫ್.ಎಮ್.ಇ. ಯೋಜನೆಯಡಿ ರೂ 15 ಲಕ್ಷದವರೆಗೂ ಸಹಾಯಧನ ಪಡೆಯಬಹುದು. ಕೇಂದ್ರ ಸರ್ಕಾರ ರೂ 6 ಲಕ್ಷ ಮತ್ತು ರಾಜ್ಯ ಸರ್ಕಾರ 9 ಲಕ್ಷ ರೂಪಾಯಿಗಳನ್ನ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.
ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ಸಾಲ ಹಾಗೂ ಸಬ್ಸಿಡಿ ನೀಡುವಲ್ಲಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿರುವ ಕೃಷಿ ಪದ್ಧತಿಯ ಜೊತೆಗೆ ಕನಿಷ್ಠ ಒಂದು ಎಕರೆಯಲ್ಲಾದರು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿ ಸಲಹೆ ಪಡೆದು ಸಮಗ್ರ ಕೃಷಿ ಬೆಳೆದು ನೋಡಿ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತೆಗೆಯಬಹುದು ಎಂದರು.
ರಾಷ್ಟ್ರದ ಎಲ್ಲಾ ರಾಜ್ಯಗಳಿಗಿಂತಲ್ಲೂ ಕರ್ನಾಟಕ ರಾಜ್ಯ ಕೃಷಿ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ನಮ್ಮ ಸರ್ಕಾರದ ಕೆಲಸವನ್ನು ಶ್ಲಾಘಿಸಿದ್ದಾರೆ. ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಪ್ರತಿ ತಿಂಗಳಿಗೆ ಕನಿಷ್ಠ 50 ಸಾವಿರದಿಂದ 1 ಲಕ್ಷದ ವರೆಗೂ ಆದಾಯ ಗಳಿಸಬಹುದು ಎಂದು ತಿಳಿಸಿದರು.
ನಂತರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿ ನಮಗೆ ಆಹಾರ ಸಂಸ್ಕರಣಾ ಉದ್ದಿಮೆ ಹೊಸದಲ್ಲ ನಮ್ಮ ಪೂರ್ವಜರು ಇದನ್ನು ಮಾಡುತ್ತಿದ್ದರು ಆದರೆ ಕಾಲಾಂತರದಿಂದಾಗಿ ಆಹಾರ ಸಂಸ್ಕರಣೆಯ ಕುರಿತಾಗಿ ನಮ್ಮ ಪೀಳಿಗೆ ಆಸಕ್ತಿ ಕಳೆದುಕೊಂಡಿದೆ ಎಂದು ಹೇಳಿದರು.
ನಮ್ಮ ಪ್ರಾಂತ್ಯದಲ್ಲಿ ಬೆಳೆಯಬಹುದಾದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಸಂಸ್ಕರಣೆ ಮತ್ತು ಬ್ರಾಂಡಿಂಗ್ ಮಾಡುವುದರ ಮೂಲಕ ಮಾರಾಟ ಮಾಡಿದರೆ ಹೆಚ್ಚಿನ ಮಟ್ಟದಲ್ಲಿ ಲಾಭ ಕಾಣಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾದರು ಕೃಷಿಯಿಂದ ಜಿಲ್ಲೆಯ ರೈತರು ಗಳಿಸುತ್ತಿರುವ ಆದಾಯ ತೃಪ್ತಿಕರವಾಗಿಲ್ಲ. ಭತ್ತ, ಕಬ್ಬು, ತೆಂಗು ಮೂರು ಜಿಲ್ಲೆಯ ಪ್ರಮುಖ ಬೆಳೆಯಾಗಿದೆ ಎಂದು ಹೇಳಿದರು.
ಕೃಷಿ ಪದ್ಧತಿಯಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಂಡು ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಬಹುದು. ಜಿಲ್ಲೆಯ ಮಣ್ಣಿನ ಗುಣಮಟ್ಟ ಮತ್ತು ಹವಾಮಾನಕ್ಕೆ ಸರಿ ಹೊಂದುವ ಬೆಳೆಗಳನ್ನು ಬೆಳೆಯಿರಿ. ಉದಾಹರಣೆಗೆ ಬೆಣ್ಣೆ ಹಣ್ಣು ಬೆಳೆಯಲು ನಮ್ಮ ಜಿಲ್ಲೆಯ ಹವಾಮಾನ ಸೂಕ್ತವಾಗಿದೆ. ಬೆಣ್ಣೆ ಹಣ್ಣಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಇದನ್ನು ಅರ್ಥ ಮಾಡಿಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ತಿಳಿಸಿದರು.
ಕೃಷಿ ಜಗತ್ತಿನ ತಾಂತ್ರಿಕ ಬದಲಾವಣೆಯೊಂದಿಗೆ ನಾವು ನಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಂಡು ಮುಂದೆ ಸಾಗಬೇಕು ಇಲ್ಲವಾದರೆ ಹಿಂದೆ ಉಳಿದುಕೊಳ್ಳಬೇಕಾಗುತ್ತದೆ. ಹೊಸತನಕ್ಕೆ ನಾವೀನ್ಯತೆಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ,ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ,ಕೆಫೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್. ಮೈ ಶುಗರ್ ಸಕ್ಕರೆ ಕಂಪನಿಯ ಅಧ್ಯಕ್ಷ ಸಿ.ಡಿ. ಗಂಗಾಧರ್. ಜಿಲ್ಲಾಧಿಕಾರಿ ಡಾ ಕುಮಾರ. ರಾಜ್ಯ ಕೃಷಿ ಸಮಾಜದ ಅಧ್ಯಕ್ಷ ಮಂಜುನಾಥ್ ಗೌಡ. ರಾಜ್ಯ ರೈತ ಉತ್ಪಾದಕ ಸಂಸ್ಥೆಗಳು ಸಹಕಾರ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್. ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳು ಒಕ್ಕೂಟದ ಅಧ್ಯಕ್ಷ ಕಾಸರವಾಡಿ ಮಹಾದೇವ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.