ಬೆಂಗಳೂರು, ಮೇ 27- ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ 2 ವರ್ಷ ತುಂಬಿದ ಸಂದರ್ಭದಲ್ಲಿಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ವಿಶ್ವದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಯಾವುದೇ ಸಂಭಾವನೆ ಇಲ್ಲ:
ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅರಣ್ಯದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಮಾದಪ್ಪನಹಳ್ಳಿ 153 ಎಕರೆಯಲ್ಲಿ ಬೃಹತ್ ಉದ್ಯಾನ ನಿರ್ಮಾಣ
ಬೆಂಗಳೂರಿನಲ್ಲಿ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದರು.
8,848 ವನಮಹೋತ್ಸವ:ಈಶ್ವರ ಖಂಡ್ರೆ
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಜಗತ್ತೇ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳ, ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಜವಾಬ್ದಾರಿಯಾಗಿದ್ದು, ಕಳೆದ 2 ವರ್ಷಗಳಲ್ಲಿ ಸುಮಾರು 8848 ವನಮಹೋತ್ಸವ ನಡೆಸಲಾಗಿದ್ದು, ಅರಣ್ಯ ಪ್ರದೇಶ, ರಸ್ತೆಬದಿ ಮತ್ತು ಸರ್ಕಾರಿ ಜಾಗದಲ್ಲಿ ಸುಮಾರು 8.5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸಲಾಗಿದೆ, 2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ವಿವರ ನೀಡಿದರು.
ಕಳೆದ 2 ವರ್ಷದಲ್ಲಿ ಕೃಷಿಕರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಮತ್ತು ಇತರ ಜಮೀನಿನಲ್ಲಿ ನೆಡಲು ಒಟ್ಟಾರೆ 3.70 ಕೋಟಿ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ 4000 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು:
ಬೆಂಗಳೂರು ಮಹಾನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ತಾವು ಸಚಿವನಾದ ತರುವಾಯ 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿರುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ನಡೆದಿದೆ ಎಂದು ಅರಣ್ಯ ಸಚಿವರು ತಿಳಿಸಿದರು.
ಹಳೆ ಮೈಸೂರು ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಿಧ ವ್ಯಕ್ತಿ, ಸಂಸ್ಥೆಗಳಿಗೆ ಸುಮಾರು 5050 ಎಕರೆ ಅರಣ್ಯ ಭೂಮಿಯನ್ನು ದೀರ್ಘಕಾಲದ (999 ವರ್ಷ) ಗುತ್ತಿಗೆ ನೀಡಲಾಗಿತ್ತು. ಈ 999 ವರ್ಷದ ಗುತ್ತಿಗೆ ಅವಧಿಯನ್ನು ಸರ್ಕಾರ 99 ವರ್ಷಕ್ಕೆ ಇಳಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇವುಗಳಲ್ಲಿ ಕೆಲವು ಗುತ್ತಿಗೆ ಅವಧಿ ಮುಗಿದಿದ್ದರೂ ಅರಣ್ಯ ಇಲಾಖೆಗೆ ಜಮೀನು ಬಿಟ್ಟುಕೊಡದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲ ಭೂಮಿ ಹಿಂಪಡೆಯಲು ಮತ್ತು ಆ ಸಂಸ್ಥೆಗಳಿಂದ ಇಲಾಖೆಗೆ ಬರಬೇಕಾದ ಸಾವಿರಾರು ಕೋಟಿ ರೂ. ಬಾಕಿ ವಸೂಲಿಗೆ ಕಾನೂನು ಹೋರಾಟ ಮಾಡಲಾಗುತ್ತಿದೆ. ಹೈಕೋರ್ಟ್ ನಲ್ಲಿ ಈ ಪ್ರಕರಣಗಳ ಅರ್ಜಿಯ ವಿಚಾರಣೆ ಹಂತದಲ್ಲಿದೆ ಎಂದು ವಿವರ ನೀಡಿದರು.
ಹೆಸರುಘಟ್ಟ ಹುಲ್ಲುಗಾವಲು- ಹಲವು ದಶಕಗಳ ಬೇಡಿಕೆ ಈಡೇರಿಕೆ:ಈಶ್ವರ ಖಂಡ್ರೆ
ಬೆಂಗಳೂರು ನಗರದ ಹೆಸರಘಟ್ಟದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗದ್ದು, ಇಷ್ಟು ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾವು ಸಚಿವನಾದ ಬಳಿಕ, ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ತಿಳಿಸಿದರು.
6251.31 ಎಕರೆ ಅರಣ್ಯ ತೆರವು :ಈಶ್ವರ ಖಂಡ್ರೆ
ಕಳೆದ 2 ವರ್ಷಗಳಲ್ಲಿ 1205 ಒತ್ತುವರಿ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6251.31 ಎಕರೆ ಅರಣ್ಯ ತೆರವು ಮಾಡಿಸಲಾಗಿದೆ. ಒತ್ತುವರಿ ತೆರವು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಚಿರತೆ ಸಫಾರಿಗೆ ಉತ್ತಮ ಸ್ಪಂದನೆ:ಈಶ್ವರ ಖಂಡ್ರೆ
ಬೆಂಗಳೂರಿಗೆ ಸಮೀಪದಲ್ಲೇ ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭಿಸಬೇಕೆಂಬ ಬೇಡಿಕೆ ಇತ್ತು, ತಾವು ಸಚಿವನಾದ ತರುವಾಯ ಇದಕ್ಕೆ ಚಾಲನೆ ನೀಡಿದ್ದು, ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.
ಡೀಮ್ಡ್ ಅರಣ್ಯ ಗೊಂದಲ ನಿವಾರಣೆಗೆ ಕ್ರಮ:
ನಿರ್ದಿಷ್ಟ ಕ್ಷೇತ್ರೀಯ ಮಾನದಂಡಗಳ ರೀತ್ಯ ಜಿಲ್ಲಾಮಟ್ಟದ ಸಮಿತಿಗಳ ಶಿಫಾರಸಿನಂತೆ 3,30,186.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಅಥವಾ ಡೀಮ್ಡ್ ಫಾರೆಸ್ಟ್ ಎಂದು ಅಧಿಸೂಚಿಸಲಾಗಿದೆ. ಹೀಗೆ ಗುರುತಿಸಿರುವ ಭೂಮಿಯಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಪಟ್ಟಾ ಜಮೀನು ಇರುವ ಕಾರಣ ಸುಪ್ರೀಂಕೋರ್ಟ್ ಗೆ ಮನವಿ ಮಾಡಲಾಗಿದ್ದು, ಸಮಿತಿ ರಚಿಸಿ ಪರಿಷ್ಕರಣೆ ಮಾಡಿ ಸಲ್ಲಿಸಲು ಸೂಚಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈಗ ಕೊನೆಯ ಅವಕಾಶ ಇದ್ದು, ಪರಿಭಾವಿತ ಅರಣ್ಯ ಎಂದು ಈಗಾಗಲೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರದೇಶದ ಪೈಕಿ ಕೈಬಿಡುವ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆ ಜಮೀನು ನೀಡಿ ಪರಿಭಾವಿತ ಪ್ರದೇಶದ ವ್ಯಾಪ್ತಿಯನ್ನು 3,30,186.93 ಹೆಕ್ಟೇರ್ ಉಳಿಸಿಕೊಂಡು, ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು..
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮತ್ತಿತರರು ಉಪಸ್ಥಿತರಿದ್ದರು.