ಮಂಡ್ಯ, ಆ, 4-ಕೆ ಆರ್ ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟಿದ್ದು, ಕೆಆರ್‌ಎಸ್ ಜಲಾಶಯದ ನಿರ್ಮಾಣ 1911ರಲ್ಲಿ ಆರಂಭವಾಯಿತು. ಬರೋಬ್ಬರಿ 112 ವರ್ಷಗಳ ನಂತರ ಡ್ಯಾಂ ಕಟ್ಟಲಾಗಿದ್ದು, ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಈ ಹೆಸರು ಇಡಬೇಕಿತ್ತಲ್ವ? ಎಂದು ಪ್ರಶ್ನಿಸಿದರು. ಕೃಷ್ಣರಾಜ ಸಾಗರ ಡ್ಯಾಂಗೆ ಟಿಪ್ಪು ಹೆಸರು ತಳಕು ಹಾಕುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರಲ್ಲದೇ ಟಿಪ್ಪು ಸುಲ್ತಾನನೊಬ್ಬ ನಾಡದ್ರೋಹಿ, ಪರ್ಶಿಯಾದವನು, ಮತಾಂಧ, ಸಾವಿರಾರು ಹಿಂದೂಗಳನ್ನು ಕೊಂದು ದೇವಾಲಯಗಳನ್ನು ಕೆಡವಿದವನು ಅಂತವನ ಹೆಸರು ಕೆಆರ್‌ಎಸ್ ಗೆ ಇಡಲು ಹೊರಟಿರುವುದು ಕಾಂಗ್ರೆಸ್ ಮನಸ್ಥಿತಿಯನ್ನ ತೋರಿಸಿದೆ ಎಂದು ಕಿಡಿಕಾರಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮೈಸೂರಿನ ಮಹಾಶಿಲ್ಪಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಹಳೇ ಮೈಸೂರು ಸಾಕಷ್ಟು ಅಭಿವೃದ್ಧಿ ಕಂಡಿತ್ತು.ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ಯಾರ ಮೇಲೂ ತೆರಿಗೆ ಹಾಕಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ 2 ಲಕ್ಷ ಕೋಟಿ ಸಾಲ ಮಾಡಿ, ಜನರ ಮೇಲೆ ತೆರಿಗೆಯ ಬರೆ ಎಳೆದಿದೆ. ಇಂಥ ಮುಖ್ಯಮಂತ್ರಿಯನ್ನ ನಾಲ್ವಡಿ ಹೋಲಿಕೆ ಮಾಡುವುದು ಕೂಡ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಗೌರವ ಉಳಿಯಬೇಕಾದ್ರೆ ಕೂಡಲೇ ರಾಜ್ಯದ ಜನತೆ, ನಾಲ್ವಡಿ ಕುಟುಂಬಕ್ಕೆ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದ್ರೆ ಜನರು ನಿಮ್ಮ ಪಕ್ಷವನ್ನು ಧೂಳಿಪಟ ಮಾಡ್ತಾರೆ. ತಕ್ಷಣವೇ ರಾಜಮನೆತನಕ್ಕೆ ಕ್ಷಮೆಯಾಚಿಸಿ ಗೌರವ ಉಳಿಸಿಕೊಳ್ಳಿ, ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ ಉಪಸ್ಥಿತರಿದ್ದರು.