ಬೆಂಗಳೂರು, ಜೂ.೬:ನಾನು ದೆಹಲಿಯ ವರಿಷ್ಠರ ನಿರ್ದೇಶನದ ಮೇರೆಗೆ ಈ ಹುದ್ದೆಯಲ್ಲಿದ್ದೇನೆ ಒಂದು ವೇಳೆ ನೀವು ಈ ಹುದ್ದೆಯಿಂದ ಕೆಳಗಿಳಿಯಿರಿ ಎಂದರೆ ಆ ತಕ್ಷಣ ರಾಜೀನಾಮೆ ಕೊಡಲು ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ಮೂಲಕ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ್ದು ಕೆಲವರು ಈ ಹೇಳಿಕೆಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ.ಕಳೆದ ಹದಿನೈದು ದಿನಗಳಿಂದ ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ನಡೆಸುತ್ತಿದ್ದ ಕಸರತ್ತಿನ ಸಂದರ್ಭದಲ್ಲೇ ಸಿಎಂ ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ಷ ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಡಿ. ದೇವರಾಜ ಅರಸುರವರ ೩೯ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ
ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ಎಲ್ಲ್ಲಿಯವರೆಗೂ ಹೈಕಮಾಂಡ್ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲು ಇಚ್ಛೆಸುತ್ತಾರೋ ಅಲ್ಲಿಯವರೆಗೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.
ಒಂದು ವೇಳೆ ದೆಹಲಿ ನಾಯಕರು ನೀವು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಸೂಚಿಸಿದರೆ, ನಾನು ಮಾರುಮಾತನಾಡದೆ ನನ್ನ ಸ್ಥಾನಕ್ಕೆ ಸಂತೋಷದಿಂದಲೇ ರಾಜೀನಾಮೆ ನೀಡುತ್ತೇನೆ ಎಂದರು.
ನನಗೆ ವರಿಷ್ಟರು ಒಂದು ಅವಕಾಶ ಕೊಟ್ಟಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಬಗ್ಗೆ ಯಾರೇ ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ಅದರ ಬಗ್ಗೆ ಗಮನ ಕೊಡುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ಮಾತಿನಲ್ಲೇ ಟಾಂಗ್ ಕೊಟ್ಟರು.ಈ ಯಡಿಯೂರಪ್ಪನವರ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ.ಎಷ್ಟು ದಿನ ವಿಶ್ವಾಸ ಇಟ್ಟು ಮುಂದುವರೆಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ.ಯಾವಾಗ ರಾಜೀನಾಮೆ ಕೊಡಿ ಅಂತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ತಿಳಿಸಿದರು.
ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.
ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಸ್ಪಷ್ಟಪಡಿಸಿದರು.
ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನ ನಾನು ಒಪ್ಪುವುದಿಲ್ಲ.ದೇಶದಲ್ಲಿ ಮತ್ತು ರಾಜ್ಯದಲ್ಲಿ ಪರ್ಯಾಯ ನಾಯಕರು ಇದ್ದೇ ಇರುತ್ತಾರೆ.ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ ಎಂದು ಅಭಿಪ್ರಾಯಪಟ್ಟರು.