ಸ್ಥಗಿತಗೊಂಡ ಯೋಜನೆಗಳು ಶೀಘ್ರ ಪುನರಾರಂಭ-ಬೊಮ್ಮಾಯಿ

Share

ಬೆಂಗಳೂರು,ಸೆ,೨೨: ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿರುವ ಅನುಮೋದನೆ ಪಡೆದ ಯೋಜನೆಗಳನ್ನು ಆರಂಭಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಿಯಮ ೬೯ ರಡಿ ಜೆಡಿಎಸ್‌ನ ಎಚ್.ಡಿ.ರೇವಣ್ಣ ಮತ್ತು ಇತರ ಸದಸ್ಯರ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಯಾವುದೇ ಕಾಮಗಾರಿಗಳನ್ನು ತಡೆ ಹಿಡಿದಿಲ್ಲ. ಪ್ರವಾಹ, ಕೋವಿಡ್ ಸಂಕಷ್ಟದಿಂದಾಗಿ ಕಾಮಗಾರಿಗಳು ಕುಂಠಿತ ಆಗಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹಣಕಾಸು ನಿರ್ವಹಣೆ ಅತಿ ಮುಖ್ಯ ಎಂದು ಹೇಳಿದರು.
ಈಗಾಗಲೇ ಆಡಳಿತಾತ್ಮಕ ಒಪ್ಪಿಗೆ ಪಡೆದು ಕಾರ್ಯದೇಶ ಆಗಿರುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಟೆಂಡರ್ ಹಂತದಲ್ಲಿ ಸ್ಥಗಿತವಾಗಿರುವ ಮತ್ತು ಟೆಂಡರ್ ಆಗಬೇಕಾಗಿರುವ ಕಾಮಗಾರಿಗಳು ನಂತರದ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರೂ.೯೪೦ ಕೋಟಿ, ನಗರಾಭಿವೃದ್ಧಿ ಇಲಾಖೆಯ ರೂ.೨೩೨ ಕೋಟಿ ಮತ್ತು ಲೋಕೋಪಯೋಗಿ ಇಲಾಖೆ ರೂ.೪,೦೦೭ ಕೋಟಿ ಮೊತ್ತದ ಕಾಮಗಾರಿಗಳಿವೆ. ಕೇವಲ ಜೆಡಿಎಸ್ ಶಾಸಕರ ಕ್ಷೇತ್ರ ಮಾತ್ರವಲ್ಲ ಬಿಜೆಪಿ ಶಾಸಕ ಕ್ಷೇತ್ರಗಳಲ್ಲೂ ಇದೇ ಕಾರಣಗಳಿಗೆ ಅನುದಾನ ತಡೆ ಹಿಡಿಯಲಾಗಿದೆ ಎಂದು ಹೇಳಿದರು.
ವಿಷಯ ಪ್ರಸ್ತಾಪಿಸಿದ ಎಚ್.ಡಿ.ರೇವಣ್ಣ, ರಾಜಕೀಯ ಕಾರಣಗಳಿಗಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಕಳೆದ ಅಧಿವೇಶನದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯನ್ನು ಈಡೇರಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ. ಅನ್ನದಾನಿ, ಮಾಗಡಿ ಮಂಜುನಾಥ್, ಸಿ.ಎನ್.ಬಾಲಕೃಷ್ಣ, ಡಿ.ಸಿ. ತಮ್ಮಣ್ಣ, ಲಿಂಗೇಶ್, ಸುರೇಶ್ ಗೌಡ ಮತ್ತು ದಾಸರಹಳ್ಳಿ ಮಂಜುನಾಥ್ ಧ್ವನಿಗೂಡಿಸಿದರು.

 

Girl in a jacket
error: Content is protected !!