ಸಿದ್ದರಾಮಯ್ಯನವರು ಬೆಲೆ ಏರಿಕೆಗೇ ತಜ್ಞರ ಸಮಿತಿ ರಚಿಸಿದಂತಿದೆ: ವಿಜಯೇಂದ್ರ ಟೀಕೆ
by-ಕೆಂಧೂಳಿ
ಮೈಸೂರು,ಏ,08- ರಾಜ್ಯದ ಸಿದ್ದರಾಮಯ್ಯನವರ ಸರಕಾರವು 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದೆ. ಸಿದ್ದರಾಮಯ್ಯನವರು ಬೆಲೆ ಏರಿಕೆಗೇ ತಜ್ಞರ ಸಮಿತಿ ರಚಿಸಿದಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಜನಸಾಮಾನ್ಯರಿಗೆ ಬರೆ ಎಳೆಯುವ ಕೆಲಸವನ್ನು ಬೇರೆ ರಾಜ್ಯಗಳಲ್ಲಿ ಯಾರೂ ಮಾಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನವರು, ಸಿದ್ದರಾಮಯ್ಯನವರು ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರಕಾರಕ್ಕೆ ದಿಕ್ಕು ದೆಸೆ ಇಲ್ಲ; ಪೆಟ್ರೋಲ್, ನೀರಿನ ದರ, ಡೀಸೆಲ್ ದರ ಹೆಚ್ಚಿಸಿದ್ದಾರೆ. ಕಸದ ಮೇಲೂ ಸುಂಕ ವಿಧಿಸುತ್ತಿದ್ದಾರೆ. ಹಾಲಿನ ದರ 9 ರೂ. ಜಾಸ್ತಿ ಆಗಿದೆ. ಪೆಟ್ರೋಲ್- ಡೀಸೆಲ್‍ನಲ್ಲಿ 7.50 ರೂ. ತೆರಿಗೆ ಹೆಚ್ಚಿಸಿದ್ದಾರೆ ಎಂದು ನುಡಿದರು.
48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ ಸಿದ್ದರಾಮಯ್ಯನವರು ಜನರಿಗೆ ಕಪಾಳಮೋಕ್ಷ ಮಾಡುತ್ತಿದ್ದಾರಾ? ಮೋದಿಯವರು ಮಾಡುತ್ತಿದ್ದಾರಾ ನೀವೇ ಹೇಳಿ ಎಂದು ಪ್ರಶ್ನಿಸಿದರು. ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಿಸಿದ್ದರೂ ಅದನ್ನು ಜನರ ಮೇಲೆ ಹೇರುವುದಿಲ್ಲ; ಕಂಪೆನಿಗಳೇ ಅದನ್ನು ಭರಿಸಲಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾಗಿ ಗಮನ ಸೆಳೆದರು.
ವೇತನ ಇಲ್ಲ- ಇದು ಹಣಕಾಸಿನ ಸ್ಥಿತಿಗೆ ಕೈಗನ್ನಡಿ..
ಪೊಲೀಸ್ ಇಲಾಖೆಗೆ 1ನೇ ತಾರೀಕಿನಂದು ಸಂಬಳ ಆಗಬೇಕಿತ್ತು. 7 ತಾರೀಕು ಕಳೆದರೂ ಆಗಿಲ್ಲ. ಶಿಕ್ಷಕರಿಗೆ ಸಂಬಳ ಇನ್ನೂ ಕೊಡುತ್ತಿಲ್ಲ. ಸರಕಾರಿ ನೌಕರರಿಗೆ ಸಂಬಳ ಕೊಟ್ಟಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿಗೆ ಇದೇ ಸರಿಯಾದ ಕೈಗನ್ನಡಿ ಎಂದು ಬಿ.ವೈ. ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.
ಗ್ಯಾಸ್ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಗುಡಿಸಲಿನಲ್ಲಿ ವಾಸಿಸುವ ಬಡವರು ಕೂಡ ಎಲ್‍ಪಿಜಿ ಗ್ಯಾಸ್ ಬಳಸಬೇಕೆಂದು ಉಜ್ವಲ ಯೋಜನೆಯನ್ನು ತಂದವರು ಪ್ರಧಾನಿ ನರೇಂದ್ರ ಮೋದಿ ಜೀ ಅವರು. ಮಾರ್ಚ್ 2023ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1107 ರೂ. ಇತ್ತು. ಈಗ ಅದು 50 ರೂ. ಹೆಚ್ಚಳದ ಬಳಿಕವೂ 850 ಆಗಿದೆ. ಆಗಸ್ಟ್ 2023ರಲ್ಲಿ 907 ರೂ.ಗೆ ತಂದಿದ್ದರು. ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಸಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಿಸಿದ್ದಾರೆ. ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿಲ್ಲ. ರಾಹುಲ್ ಗಾಂಧಿಯವರಂಥ ಪುಣ್ಯಾತ್ಮ ಪ್ರಧಾನಿ ಆಗಿದ್ದರೆ ಸಿಲಿಂಡರ್ ಬೆಲೆ 2,500 ರೂ. ಆಗುತ್ತಿತ್ತು ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದ ಕಾರಣ ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್, ಸಿಲಿಂಡರ್ ವಿಚಾರದಲ್ಲಿ ತೀರ್ಮಾನ ಮಾಡಿದೆ. ಮುಖ್ಯಮಂತ್ರಿಗಳೇ ಹಾಲಿನ ದರ ಏರಿಸಿದ್ದೀರಲ್ಲಾ? ಕಸದ ಮೇಲೆ ತೆರಿಗೆ ಹಾಕುತ್ತಿದ್ದೀರಲ್ಲವೇ? ನೀರಿನ ದರ ಏರಿಸಿದ್ದೀರಲ್ಲವೇ? ಹಾಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ತರುತ್ತಿದ್ದೀರಾ ಎಂದು ಪ್ರಶ್ನಿಸಿದರು.