ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ

Share

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ

by-ಕೆಂಧೂಳಿ

ಬೆಂಗಳೂರು, ಮಾ,23-ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ.

ತಮ್ಮನ್ನು ಏಪ್ರಿಲ್ ಒಂದರಿಂದ ಬಿಡುಗಡೆ ಮಾಡುವಂತೆ ಉಪಸಭಾಪತಿಗೆ ಪತ್ರ ಬರೆದು ಕೋರಿದ್ದಾರೆ,ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆಗಳಿಂದ ಬೇಸೆತ್ತು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿ ,ಇಂದಿನ ರಾಜಕೀಯ ನೋಡಿದರೆ, ಸದನದಲ್ಲಿನ ಬೆಳವಣಿಗೆಗಳಿಂದ ಮನಸ್ಸಿಗೆ ತೀವ್ರ ನೋವು ಆಗುತ್ತಿದ್ದು ನನ್ನ ಸ್ಥಾನದಲ್ಲಿ ಮುಂದುವರಿಯುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ಕಲಾಪಗಳಲ್ಲಿ ಸದನ ಸದಸ್ಯರ ಅಮಾನತು, ಸದಸ್ಯರು ನಡೆದುಕೊಳ್ಳುವ ರೀತಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಸ್ತುತ ರಾಜಕಾರಣಿಗಳನ್ನು ಸಂಭಾಳಿಸುವುದು ಕಷ್ಟ. ಸದನಕ್ಕೆ, ಸಭಾಪತಿಗಳಿಗೆ ಅವರು ಗೌರವ ಕೊಡುವುದನ್ನೇ ಮರೆತಿದ್ದಾರೆ. ಹೀಗಿರುವಾಗ ನಾನು ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಸದ್ಯದಲ್ಲೇ ಸ್ನೇಹಿತರೊಂದಿಗೆ ಚರ್ಚಿಸಿ ರಾಜೀನಾಮೆ ನೀಡುವ ಕುರಿತಾಗಿ ನಿರ್ಧಾರ ಕೈಗೊಳ್ಳುವೆ ಎಂದು ಘೋಷಿಸಿದರು.

ಮುಂದುವರಿದು… ಸದನದಲ್ಲಿ ಹಿರಿಯರಿಗೆ ಗೌರವವಿಲ್ಲ. ನಾನು ಕಳೆದ 45 ವರ್ಷಗಳಿಂದಲೂ ರಾಜಕಾರಣದಲ್ಲಿದ್ದೇನೆ. ಹಿರಿತನಕ್ಕಾದರೂ ಬೆಲೆ ಕೊಡಬೇಕಲ್ವಾ? ನಾನು ಹಿರಿಯನು ಎಂಬ ವಿಚಾರವೇ ಇಂದಿನ ರಾಜಕಾರಣಿಗಳು ಮರೆತುಬಿಟ್ಟಿದ್ದಾರೆ. ಕಲಾಪದಲ್ಲಿ ತಮ್ಮ ಮಾತಿಗೆ ಬೆಲೆನೇ ಕೊಡಲ್ಲ. ಎಷ್ಟೇ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ನನ್ನತ್ತ ತಿರುಗಿಯೂ ಅವರು ನೋಡಲ್ಲ ಎಂದರು.

ಸದನದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೆ ಬೇಜಾರಾಗುತ್ತಿದೆ. ದಿಢೀರ್ ಸದನದಲ್ಲಿ ಪ್ರತಿಭಟನೆ ಮಾಡುತ್ತಾರೆ, ಕಿರುಚಾಡುತ್ತಾರೆ. ಅನೇಕ ಮಹತ್ವದ ವಿಧೇಯಕಗಳ ಬಗ್ಗೆ ಸದನದಲ್ಲಿ ಚರ್ಚೆಗಳು ಆಗುತ್ತವೆ. ಯಾರಿಗೂ ಅದರ ಮಹತ್ವ ಬೇಕಾಗಿಲ್ಲ ಅಂತಾ ಅನಿಸುತ್ತಿದೆ. ಹೀಗಾಗಿ ರಾಜೀನಾಮೆ ನೀಡಬೇಕು ಎಂದು ತೀರ್ಮಾನಿಸಿದ್ದೀನಿ ಎಂದು ಹೊರಟ್ಟಿ ಅವರು ಅಸಮಾಧಾನ ಹೊರಹಾಕಿದರು.

Girl in a jacket
error: Content is protected !!