ವಸತಿ ಇಲಾಖೆ ಅಕ್ರಮ ಮರೆಮಾಚಲು ಹೆಚ್.ಕೆ. ಪಾಟೀಲ್ ಪತ್ರ ತೇಲಿ ಬಿಡಲಾಗಿದೆ!- ಹೆಚ್ ಡಿಕೆ ಆರೋಪ

Share

ಬೆಂಗಳೂರು,ಜೂ,22-ವಸತಿ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಆಕ್ರಮಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸಚಿವ ಹೆಚ್.ಕೆ. ಪಾಟೀಲ್ ಬರೆದಿರುವ ಪತ್ರವನ್ನು ತೇಲಿ ಬಿಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.ವಸತಿ ಇಲಾಖೆಯಲ್ಲಿ ಏನೆಲ್ಲಾ ಅಕ್ರಮಗಳು ನಡೆದಿವೆ ಎಂಬುದನ್ನು ಜನರು ಹಾದಿಬೀದಿಗಳಲ್ಲಿ ಮಾತನಾಡುತ್ತಿದ್ದಾರೆ. ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರು, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಆಡಿಯೋದಲ್ಲಿ ಏನಿದೆ ಎಂಬುದನ್ನು ಎಲ್ಲರೂ ಕೇಳಿದ್ದಾರೆ. ವಸತಿ ಇಲಾಖೆಯ ಬಗ್ಗೆ ಕೇಳಿಬಂದಿರುವ ಈ ಆರೋಪದ ಬಗ್ಗೆ ನನಗೇನು ಅಚ್ಚರಿ ಆಗಿಲ್ಲ. ಪಾಟೀಲ್ ಅವರ ಆರೋಪಗಳ ಬಗ್ಗೆಯೂ ನನಗೆ ಅಚ್ಚರಿ ಆಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಹೇಳಿದರು.

ಸರ್ಕಾರ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ದುಡ್ಡು ಬಿಡುಗಡೆ ಆಗಲು ಸ್ವತ ಆಡಳಿತ ಪಕ್ಷ ಶಾಸಕರು ಸೇರಿ ಎಲ್ಲಾ ಪಕ್ಷಗಳ ಶಾಸಕರು ಹಣ ಕೊಡಬೇಕಿದೆ. ಕೆಲ ಶಾಸಕರು ನಿಮ್ಮದೊಂದು ಲೆಟರ್ ಕೊಡಿ‌ ಸರ್, ದುಡ್ಡು ತಗೊಂಡು ಬರ್ತೀವಿ ಅಂತಾರೆ. ಹೆಸರಿಗೆ ಶಾಸಕರ ಪಾತ್ರವಷ್ಟೇ. ಮಿಕ್ಕಿದ್ದೆಲ್ಲವನ್ನೂ ಮಧ್ಯವರ್ತಿಗಳು ನೋಡಿಕೊಳ್ಳುತ್ತಾರೆ. ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ. ಇದು ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿದೆ ಎಂದು ಅವರು ಆರೋಪ ಮಾಡಿದರು.

ಮನೆ ಎನ್ನುವುದು ಸಮಾಜದಲ್ಲಿ ಪ್ರತಿಯೊಬ್ಬರ ಕನಸು. ಆದರೆ, ಬಡಜನರ ಪಾಲಿಗೆ ಇದೊಂದು ಗಗನ ಕುಸುಮ. ಅಂತಹ ಬಡಜನರಿಂದಲೇ ವಸತಿ ಇಲಾಖೆಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಎಲ್ಲಾ ಇಲಾಖೆಯಲ್ಲೂ ಇದು ನಡೆಯುತ್ತಿದೆ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ.
ಮುಂದಿನ ಚುನಾವಣೆ ಬರುವವರೆಗೆ ಕಾಯಬೇಕು.
ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಆಯಾ ಇಲಾಖೆಗಳಲ್ಲಿ ಅವರೇ ರೆಟ್ ಫಿಕ್ಸ್ ಮಾಡಿಕೊಂಡಿದ್ದಾರೆ! ಎಷ್ಟು ಕೊಡಬೇಕು ಅಂತಾ ರೇಟ್ ಕಾರ್ಡ್ ಇದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ರಾಜ್ಯದ ಉದ್ದಗಲಕ್ಕೂ ಸುರಂಗ ರಸ್ತೆ ಮಾಡಲಿ:

ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸುರಂಗ ರಸ್ತೆಯನ್ನು ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಲಿ. ಬೇಡ ಎಂದವರು ಯಾರು? ನೋಡೋಣ ಯಾವ ಯಾವ ಟನಲ್‌ ರೋಡ್ ಟುಡ್ ಮಾಡ್ತಾರೆ ಅಂತ. ಅವರ ಮಾತುಗಳು ಯಾವುವು ನಿಜ ಆಗಲ್ಲ. ಈಗ 2027ಕ್ಕೆ ಎತ್ತಿನಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನೂ ಆ ನೀರು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಬಂದಿಲ್ಲ. ಈಗಾಗಲೇ 14ರಿಂದ 15 ಸಾವಿರ ಕೋಟಿ ಈಗಾಗಲೇ ಲೂಟಿ‌ ಆಗಿದೆ. 2013ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಗುದ್ದಲಿ ಪೂಜೆ ಮಾಡಿತ್ತು.
ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡ್ತೀವಿ ಎಂದು ಹೇಳಿದ್ದರು. ಎಲ್ಲಿ ಬಂದಿದೆ ನೀರು? 2013ರಿಂದ 2025ಕ್ಕೆ ಬಂದರೂ ಇನ್ನೂ ನೀರಿಲ್ಲ. ಎತ್ತಿನಹೊಳೆ ನೀರು ಕೊಡ್ತೀವಿ ಎಂದು ಹೇಳಿದವರು ಆ ಜಿಲ್ಲೆಗಳಿಗೆ ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅಲ್ಲಿನ ರೈತರು ಬೆಳೆಯುವ ತರಕಾರಿಯನ್ನೂ ಯಾರು ಕೊಳ್ಳಬಾರದು, ಆ ರೀತಿ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆಶಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ ಎಂದು ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು; ಡಿಕೆಶಿ ಏನಿದ್ದರೂ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ ಎಂಬುದನ್ನು ನೋಡೋಣ. ನಮ್ಮ ಕೈಯಲ್ಲಿ ಏನು ಇಲ್ಲ, ಎಲ್ಲಾ ಭಗವಂತನ ಕೈಯಲ್ಲಿ ಇದೆ. ನೋಡೋಣ, ಏನಾಗುತ್ತದೋ ಎಂದು ಅವರು ಹೇಳಿದರು.

ಮಂಡ್ಯದ ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾಸಂಸ್ಥೆಗೆ ಗುತ್ತಿಗೆಗೆ ನೀಡುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮೈಶುಗರ್ ಸ್ಕೂಲ್‌ನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಬಿಡುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಎಂದರೆ ಹೇಗೆ? ಇದು ಹಗಲು ದರೋಡೆ ಆಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ ₹25 ಕೋಟಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ತಯಾರಿದ್ದೇನೆ. ಗುತ್ತಿಗೆ ನೀಡುವ ಆಲೋಚನೆ ಸರಿ ಅಲ್ಲ ಎಂದು ಸಚಿವರು ಹೇಳಿದರು.

 

Girl in a jacket
error: Content is protected !!