ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜನಾಕ್ರೋಶಯಾತ್ರೆ-ಪ್ರಹ್ಲಾದ್ ಜೋಶಿ
by-ಕೆಂಧೂಳಿ
ಮೈಸೂರು, ಏ,:07- ರಾಜ್ಯದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇನ್ನೊಂದೆಡೆ ಸರಕಾರವು ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲದೆ ಇದ್ದರೂ ಮುಸ್ಲಿಮರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡಿರುವುದು ತುಷ್ಟೀಕರಣದ ಪರಾಕಾಷ್ಠೆ ಎಂದು ಟೀಕಿಸಿದರು. ಸರಕಾರವು ಸಂವಿಧಾನ ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ನಡೆದುಕೊಂಡಂತಾಗಿದೆ ಎಂದು ಅವರು ಆಕ್ಷೇಪಿಸಿದರು.
ದಲಿತರಿಗೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸರಕಾರವು ಹಾಗಿದ್ದರೆ ಕೇವಲ ದಲಿತರಿಗೆ ಮಾತ್ರ ಗ್ಯಾರಂಟಿಗಳನ್ನು ನೀಡುತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯಾಧ್ಯಕ್ಷರು, ವಿಪಕ್ಷದ ಇಬ್ಬರು ನಾಯಕರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಧರ್ಮಾಧಾರಿತ ಮೀಸಲಾತಿ ಕುರಿತು ಕಾನೂನು ತಜ್ಞರ ಜೊತೆಗೂ ಚರ್ಚಿಸಿದ್ದೇವೆ. ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು.
ತರಾತುರಿಯ ಪ್ರತಿಕ್ರಿಯೆ:
ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಮೇಲೆ ಸುಂಕ ಏರಿಸಿದ್ದಕ್ಕೆ ರಾಜ್ಯ ಸರಕಾರ ಕೂಡಲೇ ತರಾತುರಿಯ ಪ್ರತಿಕ್ರಿಯೆ ನೀಡಿದೆ. ಈ 2 ರೂಪಾಯಿಯನ್ನು ಸರಕಾರಿ ಕಂಪೆನಿಗಳು ಅರ್ಥಾತ್ ಭಾರತ ಸರಕಾರವು ಅದನ್ನು ಭರಿಸಲಿದೆ. ಆ 2 ರೂ.ಗಳನ್ನು ನಾವು ಗ್ರಾಹಕರಿಗೆ ವರ್ಗಾವಣೆ ಮಾಡುತ್ತಿಲ್ಲ ಎಂದು ತಿಳಿಸಿದರು. ಹೆಚ್ಚಿಸಿದ ತೆರಿಗೆಯಿಂದ ರಾಜ್ಯ ಸರಕಾರಕ್ಕೂ ಪಾಲು ಸಿಗಲಿದೆ. ಇವರಿಗೂ ಒಂದು ರೂ. ಬರಲಿದೆ ಎಂದರು.