ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ವಿಜಯೇಂದ್ರ
by- ಕೆಂಧೂಳಿ
ಬೆಂಗಳೂರು,ಫೆ,07-ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರಕಾರವು ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಂಜೆ 5 ಗಂಟೆತನಕ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಿಗ್ಗೆ 10ರಿಂದ 5ಗಂಟೆವರೆಗೆ ಹೋಗಿ ಎಂಬ ಮಾತನ್ನು ರಾಜ್ಯ ಸರಕಾರ ಹೇಳುತ್ತಿರುವುದು ದುರ್ದೈವ ಎಂದು ಟೀಕಿಸಿದರು. ಒಂದು ಕಡೆ ತಮ್ಮ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಜನರು ಸಮೃದ್ಧರಾಗಿದ್ದಾರೆ; ಆಲ್ ಈಸ್ ವೆಲ್ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮತ್ತು ಭರಾಟೆಯಿಂದ ರಾಜ್ಯದಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ ಎಂದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯೂಹಕ್ಕೆ ಬಡವರು ಸಿಲುಕಿದ್ದಾರೆ. ರಾಜ್ಯ ಸರಕಾರವು ದೌರ್ಜನ್ಯಕ್ಕೆ ಅವಕಾಶ ಕೊಡುವುದನ್ನು ಬದಿಗಿಟ್ಟು ಮುಗ್ಧ ಬಡಜನರ- ರೈತರ ರಕ್ಷಣೆಗೆ ಧಾವಿಸಲು ಅವರು ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಅನುದಾನ ಇಲ್ಲದೇ ಶಾಸಕರು ಅಭಿವೃದ್ಧಿರಹಿತ ಕ್ಷೇತ್ರದೊಂದಿಗೆ ಕೈಕಟ್ಟಿ ಕುಳಿತಿರುವ ದಾರುಣ ಪರಿಸ್ಥಿತಿ ಇದೆ. ರೈತರ ಗೋಳು ಸರಕಾರ ಕೇಳುತ್ತಿಲ್ಲ; ಹಗಲು ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಇದಲ್ಲದೇ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಚುನಾಯಿತ ಸರಕಾರ, ಮುಖ್ಯಮಂತ್ರಿಗಳು ಇದ್ದಾರಾ ಎಂದು ಜನರು ಪ್ರಶ್ನಿಸುವಂತಾಗಿದೆ. ಸರಕಾರ ರಾಜ್ಯದ ಅಭಿವೃದ್ಧಿ ಸೇರಿ ಎಲ್ಲವನ್ನೂ ಮರೆತಿದೆ. ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ವಸೂಲಾತಿ ದೌರ್ಜನ್ಯದಿಂದ ಭಯಭೀತರಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಪ್ರಾಣ ಕಳಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಶಾಸಕ ಶೈಲೇಂದ್ರ ಬೆಲ್ದಾಳೆ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್ ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು