ಮೂರುದಳದ ಕಮಲದಲ್ಲಿ ನೂರು ಧ್ವನಿಗಳ ‘ಬೇಗುದಿ’

Share

ತುರುವನೂರು ಮಂಜುನಾಥ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ‘ರಾಜೀನಾಮೆಯ ಹೇಳಿಕೆ ನಂತರ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.ರಾಜಕೀಯ ತಂತ್ರಗಾರಿಕೆ ಬಲ್ಲ ಬಿಎಸ್‌ವೈ ಅವರು ಅದರ ಮೂರು ದಿನದ ಹಿಂದೆ ನಾಯಕತ್ವದ ವಿಚಾರವಾಗಿ ಯಾವುದೇ ವಿಚಾರಗಳು ಹೈಕಮಾಂಡ್ ಮುಂದಿಲ್ಲ ಎಂದಿದ್ದರು ಆದರೆ ತಮ್ಮ ಪುತ್ರ ವಿಜಯೇಂದ್ರ ದೇಹಲಿಗೆ ಹೋಗಿ ಬರುತ್ತಿದ್ದಂತೆ ‘ವರಿಷ್ಠರು ಬಯಸಿದರೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಒಂದು ರೀತಿ ಬಿರುಗಾಳಿ ಬೀಸಿದಂತಾಗಿತ್ತು.
ಆ ಹೇಳಿಕೆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹೈಕಮಾಂಡ್‌ಗೆ ಸಂದೇಶ ರವಾನಿಸುವ ಉದ್ದೇಶವಾಗಿತ್ತು. ಇದರಿಂದ ಪದೇ ಪದೇ ನಾಯಕತ್ವ ಬದಲಾವಣೆ ಎಂದು ಬೀದಿ ಬೀದಿಯಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದವರ ಬಾಯಿ ಮುಚ್ಚಿಸಬೇಕಿತ್ತು ಮತ್ತು ಹೈಕಮಾಂಡ್‌ಗೂ ಕೂಡ ತಮ್ಮ ಸಂದೇಶವನ್ನು ರವಾನಿಸಬೇಕಿತ್ತು ಹೀಗಾಗಿ ಈ ಸಂದೇಶ ಕೊಡುವ ಮೂಲಕ ಎಲ್ಲರ ಬಾಯಿಮುಚ್ಚಿಸಲು ಯತ್ನಿಸಿದರು ಆದರೆ ಒಳಬೇಗುದಿಯ ಕುದಿ ನಿಲ್ಲದೆ ಮುನ್ನಡಯುತ್ತಿದೆ ಇದು ಎಲ್ಲಿಗೆ ಹೋಗುತ್ತದೆ ಎಂದರೆ ಬಿಜೆಪಿ ಮೂಲಗಳ ಪ್ರಕಾರ ಸಿಎಂ ಕೆಳಗಿಳಿಯುವವರೆಗೂ ಎನ್ನುತ್ತದೆ.


ಬರ-ನೆರೆ, ಕೋವಿಡ್ ವೇಳೆ ಕೇಂದ್ರವು ನೆರವಿಗೆ ಬರದೇ ಇದ್ದಾಗಲೂ, ತಮ್ಮದೇ ಬಿಜೆಪಿ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣಿಸಿದಾಗಲೂ ಮೌನವಾಗಿಯೇ ಇದ್ದ ಯಡಿಯೂರಪ್ಪ, ಈಗ ದಿಢೀರ್ ಮಾತಿನ ವರಸೆ ಬದಲಿಸಿರುವುದರ ಹಿಂದೆ ಈ ಎಲ್ಲ ಆಯಾಮಗಳೂ ಇದ್ದಂತಿವೆ.
’ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರು ಎಷ್ಟು ದಿನ ಮುಂದುವರಿಯಿರಿ ಎನ್ನುತ್ತಾರೋ ಅಲ್ಲಿಯವರೆಗೂ ಇರುತ್ತೇನೆ. ರಾಜೀನಾಮೆ ಕೊಡಿ ಎಂದ ದಿನ ಕೊಟ್ಟು ಹೋಗುತ್ತೇನೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು ಹೀಗೆ ಹೇಳಬೇಕಾದರೆ ’ನೀವು ಗೌರವಯುತವಾಗಿ ನಿರ್ಗಮಿಸಿ’ ಎಂದು ಬಿಜೆಪಿ ವರಿಷ್ಠರು ಸೂಚನೆ ಕೊಟ್ಟಿರಬೇಕು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಉಂಟು.

’ನನಗೆ ಕೊಟ್ಟಿರುವ ಅವಕಾಶವನ್ನು ಶಕ್ತಿ ಮೀರಿ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಉಳಿದಿದ್ದು ವರಿಷ್ಠರಿಗೆ ಬಿಟ್ಟಿದ್ದು’ ಎಂದು ಅವರು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ’ಕೋವಿಡ್‌ನಂತಹ ಕರುಣಾಜನಕ ಕಾಲದಲ್ಲೂ ವಯಸ್ಸು, ಆರೋಗ್ಯ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಹಾಗಿದ್ದರೂ ನನ್ನನ್ನು ಕುರ್ಚಿಯಿಂದ ಇಳಿಸುವ ಲೆಕ್ಕಾಚಾರವನ್ನು ವರಿಷ್ಠರು ಮಾಡುತ್ತಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ, ತಮ್ಮ ಭದ್ರ ಮತಬ್ಯಾಂಕ್ ಎಂದು ಅವರು ನಂಬಿಕೊಂಡಿರುವ ವೀರಶೈವ-ಲಿಂಗಾಯತರಿಗೆ ಸಂದೇಶ ರವಾನಿಸಿ, ಅನುಕಂಪ ಗಿಟ್ಟಿಸುವ ಅಂದಾಜು ಇದರ ಹಿಂದೆ ಇದ್ದಂತಿದೆ.


’ನನ್ನನ್ನು ಇಳಿಸುವುದಾದರೆ ಇಳಿಸಿ; ನಾನೂ ಒಂದು ಕೈ ನೋಡುವೆ’ ಎಂದು ವರಿಷ್ಠರಿಗೆ ಸವಾಲು ಒಡ್ಡುವ ಮತ್ತೊಂದು ಉದ್ದೇಶವೂ ಇದೆ. ’ಪರ್ಯಾಯ ನಾಯಕರು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿರುವುದು ಸರಳ ಹೇಳಿಕೆಯಲ್ಲ. ’ನನ್ನ ಬಿಟ್ಟರೆ ಪರ್ಯಾಯ ನಾಯಕ ಇದ್ದರೆ ತಂದು ಕೂರಿಸಿ ನೋಡುವಾ’ ಎಂದು ವರಿಷ್ಠರಿಗೆ ಪರೋಕ್ಷವಾಗಿ ಸವಾಲು ಒಡ್ಡಲು ಇದನ್ನು ಹೇಳಿದಂತಿದೆ.
ಇನ್ನೊಂದು ವಿಶೇಷ ಎಂದರೆ ತಮ್ಮ ಸಮುದಾಯಕ್ಕೆ ಸಂದೇಶವನ್ನು ರವಾನಿಸಿದ್ದಾರೆ, ಯಡಿಯೂರಪ್ಪ ಕುರ್ಚಿಗೆ ಆತುವರೆಯುವವರಲ್ಲ ಹಾಗಾಗಿ ಈ ಮಾತನಾಡಿದ್ದಾರೆ ಅವರನ್ನು ಇಳಿಸುವ ಯತ್ನ ನಡೆದರೆ ಅವರನ್ನು ರಕ್ಷಿಸುವ ಸಮುದಾಯ ಬಂಡೇಳಲಿ ಎನ್ನುವುದು ಕೂಡ ಇದರಲ್ಲಿ ಅಡಗಿದೆ ಹೀಗಾಗಿ ಅವರ ಈ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿದೆ.

ಒಳಬೇಗುದೆಯ ಕುದಿ ಸ್ಪೋಟ

ಈ ಹೇಳಿಕೆಯ ನಂತರ ಅತೃಪ್ತರು ಕೆಲವರು ಸಭೆಗಳನ್ನು ಮಾಡಿದ್ದಾರೆ, ದೆಹಲಿಯಲ್ಲಿ ಕೆಲ ಸಭೆಗಳು ನಡೆದಿದ್ದಾವೆ ಈ ವೇಳೆ ದೆಹಲಿಯಿಂದ ಸಂದೇಸ ರವಾನೆಯಾಗಿದೆ ಅದೇನಂದರೆ ಯಾವುದೆ ಹೇಳಿಕೆಗಳನ್ನು ಯಾರು ನೀಡಬೇಡಿ ಎಂದು ಹಾಗಾಗಿ ಒಂದು ದಿನ ಮೌನವಾಗಿದ್ದ ಎಲ್ಲವೂ ಸರಿಯಾಗಿದೆ ಎನ್ನುವಾಗಲೆ ಶಾಸಕ ಸುನೀಲ್ ಕುಮಾರ್ ಮಾಡಿದ ಟ್ವೀಟ್ ಬಿಜೆಪಿಯಲ್ಲಿ ಒಳಬೇಗುದೆಯ ಕುದಿ ಮತ್ತಷ್ಟು ಸ್ಪೋಟವಾದಂತಿದೆ.
ಎಲ್ಲ ಶಾಸಕರ ಅಭಿಪ್ರಾಯ ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್ ಒತ್ತಾಯಿಸುವ ಮೂಲಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದಂತಿದೆ.


ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ಅಸಹನೆ ಯ ಕುದಿ ತಣ್ಣಗಾಗಿಲ್ಲ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ ಒದಗಿಸುತ್ತದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ವಿಜಯ ನಗರ ಸಾಮ್ರಾಜ್ಯ ಪತನ’ದ ಕತೆಯನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಸುನಿಲ್‌ಕುಮಾರ್ ಟ್ವೀಟ್ ಮಾಡಿರುವುದು ಪಕ್ಷದೊಳಗೆ ನಾನಾ ವಿಧದ ಚರ್ಚೆಯನ್ನು ಹುಟ್ಟುಹಾಕಿದೆ.‘ಯಾರೂ ಕೂಡ ಯಡಿಯೂರಪ್ಪ ಪರ-ವಿರುದ್ಧ ಸಹಿ ಸಂಗ್ರಹ ಮಾಡುವುದಾಗಲಿ, ಹೇಳಿಕೆ ನೀಡುವುದಾಗಿ ಮಾಡಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಟ್ಟುನಿಟ್ಟಾಗಿ ಹೇಳಿದ್ದರು. ಯಡಿಯೂರಪ್ಪ ಕೂಡ ಅದನ್ನೇ ಪ್ರತಿಪಾದಿಸಿದ್ದರು. ‘ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಹೇಳಿಕೆ ನೀಡಬಾರದು ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ’ ಎಂದು ಕೆಲವು ನಾಯಕರು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಶಾಸಕ ಸುನಿಲ್ ಕುಮಾರ್ ಮಾಡಿರುವ ಈ ಟ್ವೀಟ್ ಈಗ ಹಲವು ವಿಧದ ವಿಶ್ಲೇಷಣೆಗಳಿಗೂ ಕಾರಣವಾಗಿದೆ.

ನಾಯಕತ್ವ ಬದಲಾಗಲಿದೆಯೇ?

ಈ ಎಲ್ಲಾ ಬೆಳವಣಿಗೆಗಳು ಅವರವರ ಸ್ವ ಹಿತಾಸಕ್ತಿಯಿಂದ ಹೊರಬಿದ್ದವಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಆರ್‌ಎಸ್‌ಎಸ್ ಮೂಲದ ಪ್ರಕಾರ ನಾಯಕತ್ವ ಬದಲಾವಣೆ ಆಗಲೇ ಬೇಕು ಎನ್ನುವುದು ದೃಡನಿಲುವು ತಾಳಿದೆ. ಆದರೆ ದೆಹಲಿ ನಾಯಕರು ಒಂದಿಷ್ಟು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಆರೋಗ್ಯದ ಕಡೆ ಗಮನ ಹರಿಸುತ್ತಿರುವುದರಿಂದ ಈ ಬೆಳವಣಿಗೆ ತೀವ್ರತೆ ಪಡೆಯುತ್ತಿಲ್ಲವಷ್ಟೆ. ಆದರೆ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ನೀವು ಗೌರವಯುತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಿರಿ ಎಂದು.

ಹೀಗಾಗಿಯೇ ಸಿಎಂ ಪುತ್ರ ವಿಜಯೇಂದ್ರ ಇತ್ತೀಚೆಗೆ ದೆಹಲಿಗೆ ಹೋದರು.
ಅವರ ಈ ಭೇಟಿ ಖಾಸಗಿ ವಿಷಯಕ್ಕೆ ಸಂಬಂಧಿಸಿದ್ದಾದರೂ ರಾಜಕೀಯ ವಲಯಗಳಲ್ಲಿ ಅದು ರೆಕ್ಕೆ,ಪುಕ್ಕ ಸೇರಿಸಿಕೊಂಡು ವಿಜೃಂಭಿಸಿತು.
ವಿಜಯೇಂದ್ರ ತಮ್ಮ ಖಾಸಗಿ ಕಾರ್ಯಕ್ರಮವನ್ನು ಮುಗಿಸಿದ ನಂತರ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಹೊಚ್ಚಹೊಸ ಸುದ್ದಿಗಳ ಮಹಾಪೂರದಿಂದ ಕಂಗೊಳಿಸಿತು.
ಈ ಭೇಟಿಯ ಸಂದರ್ಭದಲ್ಲಿ ಅರುಣ್ ಸಿಂಗ್ ಹೇಳಿದ್ದಾರೆನ್ನಲಾದ ಮಾತುಗಳ ಸತ್ಯಾಸತ್ಯತೆ ಅನುಮಾನಾಸ್ಪದವಾದರೂ ಯಡಿಯೂರಪ್ಪ ಅವರ ತಂಡದಲ್ಲಿ ಒಂದು ರೀತಿ ಹೊಸ ಉತ್ಸಾಹಕ್ಕೂ ಕಾರಣವಾಗಿತ್ತು.


ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ವಿಜಯೇಂದ್ರ ಮುಂದೆ ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಸಚಿವ ಸಂಪುಟವನ್ನು ಪುನರ್‌ರಚಿಸಲು ವರಿಷ್ಠರು ಚಿಂತಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನುವ ಆ ಸಂದೇಶ ನಿಜವಾ? ಈ ರೀತಿಯೂ ನಡೆಯುತ್ತದಯಾ ಖಂಡಿತ ಇಲ್ಲ ಇದೊಂದು ಬಂಡಾಯ ಶಾಸಕರ ಬಾಯಿಮುಚ್ಚಿಸುವ ಒಂದು ತಂತ್ರಗಾರಿಕೆಯಷ್ಟೆ.


ಅದು ಪಕ್ಷದ ವರಿಷ್ಟರು ಒಬ್ಬ ಉಸ್ತುವಾರಿಯ ಮೂಲಕ,ಅದೂ ರಾಜ್ಯ ಬಿಜೆಪಿಯ ಒಬ್ಬ ಉಪಾಧ್ಯಕ್ಷರಿಗೆ ಇಂತಹ ಸಂದೇಶ ರವಾನಿಸುತ್ತಾರೆ ಎಂದರೆ ಬಿಜೆಪಿಯಲ್ಲಿ ಸಾಂಸ್ಥಿಕ ಚೌಕಟ್ಟಿಗೆ ಬೆಲೆಯೇ ಇಲ್ಲ ಅಂತರ್ಥ.ಸರ್ಕಾರದ ಆಗು-ಹೋಗುಗಳ ಬಗ್ಗೆ ಒಬ್ಬ ಉಪಾಧ್ಯಕ್ಷರ ಬಳಿ ಚರ್ಚಿಸುವುದಾದರೆ ಆ ಪಕ್ಷಕ್ಕೆ ರಾಜ್ಯಾಧ್ಯಕ್ಷರು ಯಾಕೆ ಬೇಕು?
ಈ ವಿಷಯದಲ್ಲಿ ಸ್ಪಷ್ಟ ಸಂದೇಶ ನೀಡಬೇಕಾದವರು ಪ್ರಧಾನಿ ನರೇಂದ್ರ ಮೋದಿ,ಅಮಿತ್ ಷಾ ಇಲ್ಲವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ.
ಅಂದ ಹಾಗೆ ರಾಜ್ಯದಲ್ಲಿ ಉಸ್ತುವಾರಿ ಹೊಣೆ ಹೊತ್ತವರ ಜವಾಬ್ದಾರಿ ಏನು? ರಾಜ್ಯದಲ್ಲಿ ತಮ್ಮ ಪಕ್ಷ ಮತ್ತು ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಿ ವರಿಷ್ಟರಿಗೆ ಈ ಕುರಿತು ವರದಿ ಒಪ್ಪಿಸುವುದು.
ಇದಕ್ಕೆ ಪ್ರತಿಯಾಗಿ ಅವರು ನೀಡುವ ಸೂಚನೆಗಳ ಆಧಾರದ ಮೇಲೆ ಆಗುತ್ತಿರುವ ಲೋಪ,ದೋಷಗಳನ್ನು ಸರಿಪಡಿಸುವುದು.ವಾಸ್ತವವಾಗಿ ಉಸ್ತುವಾರಿಯ ಹೊಣೆ ಕೇಂದ್ರೀಕೃತವಾಗಿರುವುದು ಈ ವಿಷಯದ ಮೇಲೆ.
ಆದರೆ ಅರುಣ್ ಸಿಂಗ್ ಶುರುವಿನಿಂದಲೂ ಪಕ್ಷ ಮತ್ತು ಸರ್ಕಾರದಲ್ಲಿರುವ ಅಸಮಾಧಾನದ ಮೂಲವನ್ನು ಗುರುತಿಸುವ ಬದಲು ಯಡಿಯೂರಪ್ಪ ಅವರನ್ನು ರಕ್ಷಿಸುವ ಗುರಾಣಿಯಂತಾಗಿ ಹೋಗಿದ್ದಾರೆ.
ಇರಲಿ,ಈಗ ಅವರು ಹೇಳಿ ಕಳಿಸಿದ್ದಾರೆನ್ನಲಾದ ಮಾತುಗಳನ್ನೇ ನೋಡೋಣ.ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂಬುದು ಅವರ ಮೊದಲ ಮಾತು.ಆದರೆ ನಾಯಕತ್ವ ಬದಲಾವಣೆಯ ಮಾತು ಪದೇ ಪದೇ ಕೇಳಲು ಏನು ಕಾರಣ?ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದಲ್ಲ,ಹಲವು ಬಾರಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆ.


ಶುರುವಿನಲ್ಲಿ ಯತ್ನಾಳ್ ಅವರಿಗೆ ಷೋಕಾಸ್ ನೋಟೀಸ್ ಕೊಟ್ಟಿದ್ದೇನೋ ಸರಿ,ಆದರೆ ಅದಕ್ಕೆ ಅವರೇನಾದರೂ ಉತ್ತರ ಕೊಟ್ಟಿದ್ದಾರಾ?ಕೊಟ್ಟಿದ್ದರೆ ಆ ಉತ್ತರ ಏನು?ಅನ್ನುವುದು ಬಹಿರಂಗವಾಗಬೇಕಿತ್ತು.

ಬಿಎಸ್‌ವೈ ವಿರುದ್ಧ ನೀಡಿದ ಹೇಳಿಕೆಗೆ ಕ್ರಮ ಏಕಿಲ್ಲ

ಆದರೆ ಇದುವರೆಗೆ ಆ ಕುರಿತು ಯಾವ ಮಾಹಿತಿಯೂ ಇಲ್ಲ ಸಾಲದೆಂಬಂತೆ ಮತ್ತೇ ಮತ್ತೇ ಯತ್ನಾಳ್ ಅವರು ನಾಯಕತ್ವದ ವಿರುದ್ಧ ಗುಡುಗಿದ್ದಾರೆ.ಹಾಗಿದ್ದರೆ ಯತ್ನಾಳ್ ವಿರುದ್ದ ಈ ಕ್ಷಣದವರೆಗೆ ಯಾವ ಕ್ರಮವೂ ಜರುಗದಿರುವುದು ಏಕೆ?
ಅದೇ ರೀತಿ ಸಚಿವ ಸಿ.ಪಿ.ಯೋಗೀಶ್ವರ್ ತಮ್ಮ ಅಸಮಾಧಾನವನ್ನು ದೆಹಲಿಯ ಮಟ್ಟಕ್ಕೆ ಕೊಂಡೊಯ್ದರಲ್ಲ ಅದರ ವಿರುದ್ದ ಯಡಿಯೂರಪ್ಪ ಕ್ಯಾಂಪಿನ ಕಲಿಗಳು ಆರ್ಭಟಿಸಿದರು.ಮಂತ್ರಿ ಮಂಡಲದಿಂದ ಯೋಗೀಶ್ವರ್ ವಜಾ ಆಗ್ಲೇಬೇಕ್ ಎಂದರು.


ಆದರೆ ಯೋಗೀಶ್ವರ್ ಮಾತ್ರ ಮುಂದೇನಾಗುತ್ತದೋ ನೋಡೋಣ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ ಮೌನವಾದರು.ಆದರೆ ಇದುವರೆಗೆ ಯೋಗೀಶ್ವರ್ ವಿರುದ್ದ ಯಾವುದೇ ಕ್ರಮವಾಗಿಲ್ಲ ಏಕೆ? ಹೀಗೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಯಾರೇನೇ ಅಪಸ್ವರ ಎತ್ತಿದರೂ ಅದನ್ನು ಅಡಗಿಸುವ ಕೆಲಸವಾಗಿಲ್ಲ.
ಹಾಗೊಂದು ವೇಳೆ ಇಂತಹ ಬೆಳವಣಿಗೆಗಳ ಬಗ್ಗೆ ಅಸಮಾಧಾನವಾಗಿದ್ದಿದ್ದರೆ ಮೋದಿ-ಅಮಿತ್ ಷಾ ಸುಮ್ಮನಿರುತ್ತಿದ್ದರೇ?ಒಂದು ವೇಳೆ ಅವರೇನಾದರೂ ಭಿನ್ನಮತದ ವಿರುದ್ಧ ಎಚ್ಚರಿಕೆ ನೀಡಿದ್ದರೆ ಅದನ್ನು ಧಿಕ್ಕರಿಸಬಲ್ಲ ಗುಡ್ ದಾ ಯಾರಿಗಾದರೂ ಇತ್ತೇ? ಅಂದ ಮೇಲೆ ಮೋದಿ-ಸಮಿತ್ ಷಾ ಯಾಕೆ ಮಾತನಾಡುತ್ತಿಲ್ಲ?ಅಂದರೆ ಏಕಕಾಲಕ್ಕೆ ಯಡಿಯೂರಪ್ಪ ಅವರನ್ನು ಚಿವುಟುವ ಕೆಲಸವೂ ನಡೆಯುತ್ತದೆ,ಮತ್ತೊಂದೆಡೆಯಿಂದ ಅವರನ್ನು ಸಮಾಧಾನಿಸುವ ಆಟವೂ ನಡೆಯುತ್ತಿದೆ.
ನೂರು ಧ್ವನಿಗಳ ಬೇಗುದಿ ಸ್ಪೋಟ
ಒಂದು ಮೂಲದ ಪ್ರಕಾರ ಈಗ ಕೆಲ ಶಾಸಕರು ತಮ್ಮ ಅಸಮಾಧಾನಗಳನ್ನು ಪಕ್ಷದ ಅಧ್ಯಕ್ಷ ಕಟೀಲ್ ಬಳಿ ತೋಡಿಕೊಂಡಿದ್ದಾರೆ ,ಇನ್ನೂ ಕೆಲವರು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಬಳಿ ಹೇಳಿಕೊಂಡಿದ್ದಾರೆ . ಸದ್ಯದ ಪರಿಸ್ಥಿತಿಯಲ್ಲಿ ಶಾಸಕಾಂಗ ಸಭೆ ಕರೆಯಲೇ ಬೇಕು ಅಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ಒಬ್ಬೊಬ್ಬ ಶಾಸಕರ ಅಭಿಪ್ರಾಯಗಳನ್ನು ಪರಿಗಣಿಸಲಿ ಎನ್ನುವ ನೂರು ಧ್ವನಿಗಳು ಈಗ ದ್ವನಿಸಲು ಸಿದ್ದಗೊಂಡಿವೆ.

ಹಾಗಗಿ ಸದ್ಯಕ್ಕೆ ಶಾಸಕಾಂಗ ಸಭೆ ಕರೆಯಬೇಕು ಎನ್ನುವ ಬೇಡಿಕೆಯೇ ಸುನಿಲ್‌ಕುಮಾರ್ ಅವರ ಮುಖ್ಯ ಉದ್ದೇಶವಾಗಿ ಇದು ಕೇವಲ ಸುನಿಲ್ ಕುಮಾರ್ ಅವರ ಒಬ್ಬರ ಧ್ವನಿ ಅಲ್ಲ ಎಲ್ಲರ ಧ್ವನಿಯಾಗಿ ಅವರು ದ್ವನಿಗೂಡಿಸಿದ್ದಾರೆ .ಆದರೆ ಬಿಎಸ್‌ವೈ ಇದಕ್ಕೆ ಸೊಪ್ಪು ಹಾಕುತ್ತಿಲ್ಲ ಶಾಸಕಾಂಗ ಸಭೆ ಕರೆಯುವಂತ ಯಾವುದೆ ಸಮಸ್ಯೆ ನಮ್ಮಲ್ಲಿ ಇಲ್ಲ ಎನ್ನುತ್ತಿದ್ದಾರೆ ಹೀಗಾಗಿಯೇ ಮತ್ತಷ್ಟು ಅವರ ವಿರುದ್ಧದ ಧ್ವನಿಗಳು ಹೆಚ್ಚಾಗುತ್ತಿವೆ ಹೀಗಾಗಿ ಯಾವಾಗ ಯಾವ ಸಂದರ್ಭದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎನ್ನುವುದು ಗೊತ್ತಿಲ್ಲ ಆದರೆ ಹೈಕಮಾಂಡ್ ಸ್ಪಷ್ಟವಾಗಿದೆ ಕಾಲವನ್ನು ನೋಡಿ ಅವರನ್ನು ಕೆಳಗಿಳಿಸುವ ಎಲ್ಲಾ ಅಸ್ತ್ರವನ್ನು ಸಿದ್ದಪಡಿಸಿಕೊಂಡಿದ್ದಾರೆ.

Girl in a jacket
error: Content is protected !!