ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ:  ಡಿ. ಕೆ. ಶಿವಕುಮಾರ್

Share

ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ನಡೆಯುತ್ತೇವೆ:  ಡಿ. ಕೆ. ಶಿವಕುಮಾರ್

*ಬೆಳಗಾವಿ,18-

“ನನ್ನನ್ನೂ ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಷ್ಟೀಯ ನಾಯಕರು. ಅವರ ಹಾಗೂ ಪಕ್ಷದ ವರಿಷ್ಟರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿ ದುಡಿಯುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಸಚಿವ ಆರ್. ಬಿ. ತಿಮ್ಮಾಪುರ ಅವರ ದಲಿತ ಸಿಎಂ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಏನೇನೋ ಹೇಳುವ ನಿಮ್ಮ (ಮಾಧ್ಯಮ) ಮಾತುಗಳಿಗೆ ನಾನು ಉತ್ತರ ನೀಡಲು ಸಿದ್ಧನಿಲ್ಲ” ಎಂದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಇದೇ ಬೆಳಗಾವಿ ನೆಲದಲ್ಲಿನ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ಸ್ವಚ್ಛ ಮಾಡಿ. ಬಿಜೆಪಿ ಮಾಡಿದ್ದ ಕೊಳೆ, ಕಸವನ್ನು ಗುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು” ಎಂದು ತಿರುಗೇಟು ನೀಡಿದರು.

ಸತೀಶ್ ಜಾರಕಿಹೊಳಿ ಅವರು ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರ ದುಬೈ ಪ್ರವಾಸದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ನಾನು ಇದರ ಬಗ್ಗೆ ಮಾತನಾಡಲು ಹೋಗುವುದಿಲ್ಲ” ಎಂದರು.

ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಇಡೀ ದೇಶದಲ್ಲಿ ಒಬ್ಬರೇ ಗಾಂಧಿ ಇರುವುದು. ನಾವೆಲ್ಲರೂ ಸಹ ಗಾಂಧಿ ವಂಶಸ್ಥರೇ, ಗಾಂಧಿ ಅವರು ಕಟ್ಟಿದ ಭಾರತದವರು. ಅದಕ್ಕೆ ನಾವು ಗಾಂಧಿ ಭಾರತ ಎಂದು ಹೆಸರಿಟ್ಟು ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದರು.

*ಮಹದಾಯಿ ಬಗ್ಗೆ ಮತ್ತೆ ಮನವಿ*

ಮಹದಾಯಿ ವಿವಾದ ಬಗೆಹರಿಯದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಕಳೆದ ಹತ್ತು ದಿನಗಳ ಹಿಂದೆ ದೆಹಲಿಯಲ್ಲಿ ಸಭೆ ನಡೆದಿತ್ತು. ನಾನು ಹಾಗೂ ಎಚ್. ಕೆ. ಪಾಟೀಲ್ ಅವರು ಇದೇ ವಿಚಾರವಾಗಿ ಇಂದು ಅರ್ಧ ಗಂಟೆ ಚರ್ಚೆ ಮಾಡಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿ ಮಾಡಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಕೇಂದ್ರ ಜಲಶಕ್ತಿ ಸಚಿವರರಿಗೆ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಖುದ್ದು ಪ್ರಧಾನಿಗಳೇ ಹೇಳಿದ್ದರು. ಹುಬ್ಬಳ್ಳಿಯ ಸಂಸದರನ್ನು ಭೇಟಿಯಾಗಿ ಅವರಿಗೂ ವಿಚಾರ ತಿಳಿಸಿದಾಗ ಅವರೂ ಸಹ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದರು. ಕಳೆದ ಬಾರಿ ನಡೆದ ಸಭೆಯಲ್ಲಿ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಯಿತ್ತು. ಆದರೆ ಆಸೆ ನೆರವೇರಲಿಲ್ಲ. ಮುಂದೆ ಸಂಸತ್ ಅಧಿವೇಶನ ನಡೆಯುವ ವೇಳೆಯಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.

Girl in a jacket
error: Content is protected !!