ಬೆಂಗಳೂರು, ಮೇ ೧೭: ರಾಜ್ಯದಲ್ಲಿ ಎಲ್ಲರಲ್ಲೂ ಭಯ ಹುಟ್ಟಿಸಿರುವ ಕಪ್ಪು ಶಿಲೀಂಧ್ರದ ಔಷಧಗಳನ್ನು ತರಿಸಿಕೊಳ್ಳುವುದರತ್ತ ರಾಜ್ಯ ಸರ್ಕಾರ ಗಮನಹರಿಸಬೇಕು ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗ ತರಿಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಪ್ಪು ಶಿಲೀಂಧ್ರದ ಸಮಸ್ಯೆಯು ಪಿಡುಗಾಗಿ, ಮಹಾಮಾರಿಯಾಗಿ ಕಾಡುವ ಆತಂಕವನ್ನು ಜನರ ಮುಂದೊಡ್ಡಿದೆ. ಅದರ ಚಿಕಿತ್ಸೆಗೆ ಅಗತ್ಯವಿರುವ ಔಷಧ ಕೊರತೆಯನ್ನು ಕರ್ನಾಟಕ ಎದುರಿಸುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಔಷಧದ ೧,೦೫೦ ವಾಯ್ಲ್‌ಗಳು (ಶೀಶೆ) ಮಾತ್ರ ಇವೆ ಎಂಬ ಆಘಾತಕಾರಿ ಅಂಶವು ಭಯ ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.
ಕಪ್ಪು ಶಿಲೀಂಧ್ರ ಸಮಸ್ಯೆ ರಾಜ್ಯದಲ್ಲಿ ಈಗಾಗಲೇ ಗಂಭೀರ ಸ್ವರೂಪದಲ್ಲೇ ಕಾಣಿಸಿಕೊಂಡಿದೆ. ಹಲವರು ಬಲಿಯಾಗಿದ್ದಾರೆ. ಕೋವಿಡ್‌ನಿಂದ ಗುಣವಾಗುವ ೪೦೦ ಮಂದಿ ಪ್ರತಿ ವಾರ ಈ ಸಮಸ್ಯೆಗೆ ಸಿಲುಕುವ ಸಾಧ್ಯತೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ತಿಳಿಸಿದೆ. ಹೀಗಿರುವಾಗ ಎದುರಾಗಿರುವ ಔಷಧ ಕೊರತೆ ದುರಂತದ ಮುನ್ಸೂಚನೆ ನೀಡುತ್ತಿದೆ ಎಂದಿದ್ದಾರೆ.
ಔಷಧಿಯ ೨೦,೦೦೦ ವಯಲ್‌ಗಳನ್ನು ಶೀಘ್ರವೇ ಪೂರೈಕೆ ಮಾಡುವಂತೆ ರಾಜ್ಯ ಔಷಧ ಉಗ್ರಾಣ ಕೇಂದ್ರವು ಕೇಂದ್ರ ಸರ್ಕಾರವನ್ನು ಕೋರಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ ಎಂದು ಹೇಳಿದ್ದಾರೆ.
ಕಪ್ಪು ಶಿಲೀಂಧ್ರ ಸಮಸ್ಯೆ ಮಹಾರಾಷ್ಟ್ರದಲ್ಲಿ ಹಲವು ತಿಂಗಳಿಗೆ ಮೊದಲೇ ಕಾಣಿಸಿಕೊಂಡಿತ್ತು. ಸಮಸ್ಯೆ ಇಲ್ಲಿಯೂ ಕಾಣಿಸಿಕೊಳ್ಳುವ ಅಪಾಯದ ಬಗ್ಗೆ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈ ಸಮಸ್ಯೆ ದೊಡ್ಡದಾಗುವ ಎಚ್ಚರಿಕೆಗಳಿದ್ದರೂ ಔಷಧದ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಔಷಧ ಸಂಗ್ರಹ ಈ ಹೊತ್ತಿನ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಬ್ಲಾಕ್ ಫಂಗಸ್ ಔಷಧ ತರಿಸಿಕೊಳ್ಳುವಂತೆ ಸರ್ಕಾರಕ್ಕೆ ಎಚ್‌ಡಿಕೆ ಸಲಹೆ
Share