ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

Share

ಬೆಂಗಳೂರು, ಆ. 30-“ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್ ಅವರು ಮಾತನಾಡಿದರು.

“ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಬೇಕು. ಹೀಗಾಗಿ ನಿಮ್ಮೆಲ್ಲರ ಜೊತೆ ಒಂದು ದಿನ ಚರ್ಚೆ ಮಾಡಿ, ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧ” ಎಂದರು.

“ತಮಗೆ ಬಹುಮತ ಇದ್ದರೂ ಇಡೀ ದೇಶದಲ್ಲಿ ಮಧ್ಯದಲ್ಲೇ ಜನಾದೇಶ ಬಯಸಿ ಚುನಾವಣೆಗೆ ಹೋಗಿದ್ದರೆ ಅದು ರಾಮಕೃಷ್ಣ ಹೆಗಡೆ ಅವರು ಮಾತ್ರ. ಅವರಲ್ಲಿ ಕ್ಷಮಿಸುವ ಗುಣ, ಹೃದಯ ಶ್ರೀಮಂತಿಕೆ ಇತ್ತು. ಅವರಲ್ಲಿ ನಾವು ಎಂದಿಗೂ ದ್ವೇಷ ರಾಜಕಾರಣ ನೋಡಲಿಲ್ಲ. ಇದು ನಮ್ಮೆಲ್ಲರಿಗೂ ದೊಡ್ಡ ಆದರ್ಶ. ಅವರದ್ದು ಪರಿಶುದ್ಧ ಆಡಳಿತ ಹಾಗೂ ರಾಜಕಾರಣ” ಎಂದರು.

“ರಾಮಕೃಷ್ಣ ಹೆಗಡೆ ಅವರು ಕನಕಪುರದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಸೋಲಿಸಲು ನಾನು ವಿದ್ಯಾರ್ಥಿ ನಾಯಕನಾಗಿ ಹೋರಾಟ ಮಾಡಿದೆ. ನನ್ನ ಹೋರಾಟ ಗಮನಿಸಿ 1985 ರಲ್ಲಿ ಪಕ್ಷ ನನಗೆ ಟಿಕೆಟ್ ನೀಡಿತು. ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹಿನ್ನಡೆಯಾದಾಗ, ನನ್ನ ನಾಯಕತ್ವಕ್ಕೆ ಬೆಂಬಲ ಸಿಗಲಿಲ್ಲ ಎಂದು ಮತ್ತೆ ಚುನಾವಣೆಗೆ ಹೋದರು” ಎಂದು ಮೆಲುಕು ಹಾಕಿದರು.

“ಆ ಸಂದರ್ಭದಲ್ಲಿ ನನಗೆ ದೇವೇಗೌಡರ ವಿರುದ್ಧ ಸಾತನೂರಿನಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿತು. ಆಗ ನಾನು ಸೇರಿದಂತೆ ಬಹುತೇಕರು ಹೆಗಡೆ ಅವರ ಹೆಸರಿನ ಅಲೆಯಲ್ಲಿ ಕೊಚ್ಚಿ ಹೋದೆವು. ನಂತರ ನಾನು ಜಿಲ್ಲಾ ಪರಿಷತ್ ಸದಸ್ಯನಾಗಿ ರಾಜಕೀಯ ಮುಂದುವರಿಸಿದೆ. ರಾಜೀವ್ ಗಾಂಧಿ ಅವರು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಮಾಡಿದಾಗ ಕರ್ನಾಟಕಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರು ಹಾಕಿದ್ದ ಅಡಿಪಾಯ ಅಧ್ಯಯನ ಮಾಡಿದ್ದರು. ಅದರ ಪರಿಣಾಮ ಇಂದು ನಾವು ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಸಾವಿರಾರು ನಾಯಕರನ್ನು ತಯಾರು ಮಾಡುತ್ತಿದ್ದೇವೆ” ಎಂದು ಸ್ಮರಿಸಿದರು.

“ನಾನು ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನೋಡಿದ್ದೇನೆ. ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ನಡೆದ ಚರ್ಚೆಯಲ್ಲಿ ಹೆಗಡೆ ಅವರು ಮಾಡಿದ ಭಾಷಣ ನಾನು ಕಂಡ ಅತ್ಯುತ್ತಮ ಭಾಷಣಗಳಲ್ಲಿ ಒಂದು. ವೀರೇಂದ್ರ ಪಾಟೀಲರ ಜೊತೆ ಉತ್ತಮ ಸ್ನೇಹ ಹೊಂದಿದ್ದರೂ ಅವರು ತಮ್ಮ ಪಕ್ಷದ ಸಿದ್ಧಾಂತದ ಗೆರೆ ದಾಟಲಿಲ್ಲ” ಎಂದು ಶ್ಲಾಘಿಸಿದರು.

“ರಾಮಕೃಷ್ಣ ಹೆಗಡೆ ಅವರು ತಮ್ಮ ಬದುಕಿನಲ್ಲಿ ಬಿಟ್ಟುಹೋದ ಆದರ್ಶ, ಸಾಕ್ಷಿಗುಡ್ಡೆಗಳು ಇನ್ನೂ ಜೀವಂತವಾಗಿವೆ. ಅವರೊಬ್ಬ ದೂರದೃಷ್ಟಿ ನಾಯಕ. ತಮ್ಮ ಜಾತಿಯವರು, ಮನೆಯವರನ್ನು ಬೆಳೆಸಬೇಕು ಎಂಬ ಹಂಬಲ ಇರಲಿಲ್ಲ. ನೂರಾರು ನಾಯಕರನ್ನು ಅವರು ಬೆಳೆಸಿದ್ದಾರೆ. ಕೆಲವರು ಅವರ ಪ್ರಾಮಾಣಿಕತೆಗೆ ನಿಯತ್ತು ತೋರಿದರು. ಮತ್ತೇ ಕೆಲವರು ಹತ್ತಿದ ಏಣಿಯನ್ನು ಒದೆಯುವಂತೆ ಬಿಸಾಕಿದರು. ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ವಿಧಾನಸಭೆಗೆ ಹೋಗುತ್ತಿರುವಾಗ ದೇಶಪಾಂಡೆ ಅವರು ಗಾಬರಿಯಿಂದ ಕೆಳಗೆ ಇಳಿದು ಬರುತ್ತಿದ್ದರು. ನಾನು ಯಾಕೆ ಗಾಬರಿ ಎಂದು ಕೇಳಿದೆ. ಆಗ ಅವರು ಹೇಳಿದರು. ಆ ಸಂದರ್ಭದಲ್ಲಿ ಕೇವಲ ದೇಶಪಾಂಡೆ ಅವರು ಮಾತ್ರ ಧ್ವನಿ ಎತ್ತಿದ್ದರು, ಉಳಿದವರು ಅಧಿಕಾರದ ಆಸೆಗೆ ಮೌನಕ್ಕೆ ಶರಣಾಗಿದ್ದರು” ಎಂದು ಹೇಳಿದರು.

ಹೆಗಡೆ ಅವರ ಬೆಂಬಲ ಕೋರಿದ್ದೆ

“ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಸಂಸತ್ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿತು. ಆಗ ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ಅವರ ನಡುವೆ ಭಿನ್ನಾಭಿಪ್ರಾಯ ಇತ್ತು. ಆಗ ನಾನು ಹೆಗಡೆ ಅವರ ಬೆಂಬಲ ಕೊರಲು ಹೋಗಿ ಭೇಟಿ ಮಾಡಿದ್ದೆ. ನಾನು ಪಕ್ಷದ ವ್ಯವಸ್ಥೆಯಲ್ಲಿದ್ದು ನಿನಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನಿನಗೆ ಒಳ್ಳೆಯದಾಗಲಿ ಎಂದು ನೇರವಾಗಿ ಹೇಳಿದರು. ಅವರ ಪಕ್ಷದ ಅಭ್ಯರ್ಥಿಗೆ ಹೆಗಡೆ ಅವರು ಸಹಾಯ ಮಾಡದೇ ಇದ್ದಿದ್ದರೆ ಆ ಚುನಾವಣೆಯಲ್ಲಿ ನಾನು ಗೆದ್ದು ಸಂಸತ್ತಿಗೆ ಹೋಗುತ್ತಿದ್ದೆ” ಎಂದು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿದರು

“ಬೆಂಗಳೂರು ಜಾಗತಿಕ ನಗರವಾಗಿದೆ. 25 ಲಕ್ಷ ಐಟಿ ಉದ್ಯೋಗಿಗಳು ಇಲ್ಲಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಇಂದು ಈ ಮಟ್ಟಕ್ಕೆ ಬೆಳೆಯಲು ರಾಮಕೃಷ್ಣ ಅವರ ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕೊಟ್ಟ ಅನುಮತಿಯೂ ಒಂದು ಕಾರಣ. ಅದರಿಂದ ಬೆಂಗಳೂರಿನಲ್ಲಿ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿನ ಇಂಜಿನಿಯರ್ ಕಾಲೇಜುಗಳಲ್ಲಿ ಸಜ್ಜನ್ ಜಿಂದಾಲ್ ಸೇರಿದಂತೆ ಅನೇಕ ಉದ್ಯಮಿಗಳು ಹೊರಗಿಂದ ಬಂದು ಇಲ್ಲಿ ಓದಿದರು” ಎಂದರು.

“ಬೆಂಗಳೂರಿಗೆ ಕಾವೇರಿ ನೀರು ಬರಲು ಕಾರಣವಾಗಿದ್ದೇ ರಾಮಕೃಷ್ಣ ಹೆಗಡೆ ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ನಾವು ಈಗ ಆರನೇ ಹಂತದ ಯೋಜನೆಗೆ ಮುಂದಾಗಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರಿನಲ್ಲಿ ಸಂಪನ್ಮೂಲ ಸೋರಿಕೆ ತಡೆಯಲು ಮುಂದಾಗಿದ್ದೇವೆ. ಇ ಖಾತಾ ಮೂಲಕ ಎಲ್ಲಾ ಆಸ್ತಿಗಳ ದಾಖಲೆ ಡಿಜಿಟಲ್ ಮಾಡಲಾಗುತ್ತಿದೆ. ಆಮೂಲಕ ಎಲ್ಲವನ್ನು ಸುವ್ಯವಸ್ಥೆಯಡಿ ತರಲಾಗುತ್ತಿದೆ. ನನ್ನ ಬದುಕಿನಲ್ಲಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ. ಕೆಲವರು ಟೀಕೆ ಮಾಡುತ್ತಾರೆ ಮಾಡಲಿ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ” ಎಂದರು.

Girl in a jacket
error: Content is protected !!