ಬೆಂಗಳೂರು, ಆ. 01: ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣ ನಾಳೆ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ .
ಈ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಚಿವ ಸಂಪುಟ ಕುರಿತಂತೆ ಚರ್ಚಿಸಿದ್ದು ಯಾರೆಲ್ಲ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಿದರು.
ಒಂದೆಡೆ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳು ಆಗಬೇಕಾಗಿದೆ. ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಶೀಘ್ರ ರಚನೆ ಆಗಲೇಬೇಕಾಗಿದೆ. ಅದನ್ನು ಅರಿತು ಹೈಕಮಾಂಡ್ ಸಂಪುಟ ವಿಸ್ತರಣೆಗೆ ಮುಂದಾಗಿದೆ. ಅಷ್ಟಕ್ಕೂ ರಾಜ್ಯ ಸಚಿವ ಸಂಪುಟ ಯಾವಾಗ ರಚನೆ ಆಗಲಿದೆ?
ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಬೊಮ್ಮಾಯಿ!
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಐದು (ಜುಲೈ 28) ದಿನಗಳಾಗಿವೆ. ಆದರೆ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಇದೀಗ ಸಂಪುಟ ಸೇರಲು ಉತ್ಸುಕರಾಗಿರುವ ಶಾಸಕರಿಗೆ ಸಿಹಿ ಸುದ್ದಿಯನ್ನು ಹೈಕಮಾಂಡ್ ಕೊಟ್ಟಿದೆ. ನಾಳೆ ಅಂದರೆ ಸೋಮವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ಬಂದಿದೆ ಎನ್ನಲಾಗಿದೆ. ಹೀಗಾಗಿ ನಾಳೆಯೆ ದೆಹಲಿಗೆ ತೆರಳಿ ಸಂಪುಟ ಸೇರುವವರ ಪಟ್ಟಿಯೊಂದಿಗೆ ಸಿಎಂ ಬೊಮ್ಮಾಯಿ ಬೆಂಗಳೂರಿಗೆ ಬರಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ‘ಹೊಸ ಸಂಪುಟ ರಚನೆಗೆ ಹೈಕಮಾಂಡ್‌ನಿಂದ ನಮಗೆ ಸಲಹೆ ಬರಬೇಕು. ಕರೆ ಬಂದರೆ ಸೋಮವಾರ ದೆಹಲಿಗೆ ಹೋಗುತ್ತೇನೆ’ ಎಂದಿದ್ದಾರೆ. ಆ ಮೂಲಕ ಶೀಘ್ರ ಸಚಿವ ಸಂಪುಟ ರಚನೆ ಆಗುವ ಸಾಧ್ಯತೆಯಿದೆ.
ಹೀಗಾಗಿ ಆಗಸ್ಟ್ 5ರಂದೇ ಉಳಿದ 33 ಜನರೂ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ. ರಾಜ್ಯದ ವಿಧಾನಸಭಾ ಶಾಸಕರ ಸಂಖ್ಯೆಗೆ ತಕ್ಕೆ ಒಟ್ಟು 34 ಜನರು ಮಂತ್ರಿಗಳಾಗಬಹುದು. ಈಗಾಗಲೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ಇನ್ನು ಉಳಿದಿರುವ 33 ಮಂತ್ರಿಸ್ಥಾನಗಳನ್ನು ಒಮ್ಮೆಲೆ ಭರ್ತಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ. ಇದು ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ಆತಂಕ ಸೃಷ್ಟಿಸಿದೆ. ಈಗ ಮಂತ್ರಿಯಾಗದಿದ್ದರೆ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಮತ್ತೆ ಮಂತ್ರಿಸ್ಥಾನ ಸಿಗುವುದಿಲ್ಲ ಎಂಬುದು ಶಾಸಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಆರ್. ಅಶೋಕ ಸೇರಿದಂತೆ ರಾಜ್ಯ ಬಿಜೆಪಿ ಪ್ರಭಾವಿ ನಾಯಕರು ಮಂತ್ರಿ ಸ್ಥಾನಕ್ಕಾಗಿ ದೆಹಲಿಯಲ್ಲಿ ಉಳಿದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅಷ್ಟಕ್ಕೂ ಹಿರಿಯ ಶಾಸಕರ ಆತಂಕಕ್ಕೆ ಕಾರಣವಾಗಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದವರ ಕಾರ್ಯಕ್ಷಮತೆ ನೋಡಿಕೊಂಡು ಈ ಸಲ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಯಡಿಯೂರಪ್ಪ ಸಂಪುಟದಲ್ಲಿನ ಹಿರಿಯ ಶಾಸಕರಿಗೆ ಈಗ ಅವಕಾಶ ಸಿಗುತ್ತದೆಯಾ ಎಂಬ ಆತಂಕ ಶುರುವಾಗಿದೆ. ಮತ್ತೊಂದೆಡೆ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ಕೊಡಲು ಹೈಕಮಾಂಡ್ ನಿರ್ಧಾರ ಮಾಡಿದೆ.
ತಾನು ಅಂದುಕೊಂಡಂತೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಬದಲಿಸಿದೆ. ಆದರೆ ತಾನು ಅಂದುಕೊಂಡವರನ್ನು ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಅದರಲ್ಲೂ, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ನಸಚಿವ ಅಮಿತ್ ಶಾ ಅವರಿಗೆ ಸಾಧ್ಯವಾಗಿಲ್ಲ ಎಂಬ ಮಾತಿದೆ. ಹೀಗಾಗಿ ಮಂತ್ರಿ ಮಂಡಲ ಸೇರುವವರ ಬಗ್ಗೆ ಕೂಲಂಕುಶವಾಗಿ ಅಳೆದು ತೂಗಿ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ. ಅದು ಬಹಳಷ್ಟು ಹಿರಿಯರಿಗೆ ಅವಕಾಶ ತಪ್ಪಲು ಕಾರಣವಾಗಲಿದೆ ಎಂಬ ಮಾಹಿತಿ ಇದೆ
‘ಸೋಮವಾರ ಕರೆ ಬಂದರೆ ದೆಹಲಿಗೆ ಹೋಗುತ್ತೇನೆ’ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಳಂಕಿತರಿಗೆ ಸಚಿವಸ್ಥಾನ ಕೊಡುವುದಿಲ್ಲ ಎಂಬ ಮಾತಿದೆ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ‘ಅದನ್ನು ಮಾಧ್ಯಮಗಳಲ್ಲಿ ಕೇಳಿದ್ದೇನೆ. ನೊಡೋಣ ಏನಾಗುತ್ತದೆಯೊ?’ ಎಂದಿದ್ದಾರೆ. ಇನ್ನು ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಬೊಮ್ಮಾಯಿ ಬೆಂಬಲ ಕೊಟ್ಟಿದ್ದಾರೆ ಎಂಬುದಕ್ಕೆ, ‘ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಎಲ್ಲವೂ ನಿಮಗೆ ಗೊತ್ತಿದೆಯಲ್ಲಾ? ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇನ್ನು ಹಲವು ಶಾಸಕರು ಹಿಂದೆ ಮುಂದೆ ಸಚಿವ ಸ್ಥಾನಕ್ಕಾಗಿ ಓಡಾಡ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ ಅವರು, ‘ಅಂಥದ್ದು ಏನಿಲ್ಲ. ಪ್ರತಿಯೊಬ್ಬರಿಗೂ ಆಸೆಯಿರುತ್ತೆ, ಕಾತುರವಿರುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ಬದಲಾವಣೆ ಮಾಡಿದಷ್ಟು ಸುಲಭವಾಗಿ ಮಂತ್ರಿ ಮಂಡಲ ರಚನೆ ಅಸಾಧ್ಯ ಎಂಬ ಯೋಚನೆ ಇದೀಗ ವ್ಯಕ್ತವಾಗುತ್ತಿದೆ. ಹಿಂದೆ ಮಂತ್ರಿಸ್ಥಾನದ ಅಸಮಾಧಾನದಿಂದಲೇ ಸರ್ಕಾರಗಳು ಪತನವಾಗಿರುವ ಉದಾಹರಣೆಗಳೂ ಸಾಷಕಷ್ಟಿವೆ. ಆದರೆ ಬಿಜೆಪಿ ಹೈಕಮಾಂಡ್ ಈಗ ಬಳಹಷ್ಟು ಪ್ರಬಲವಾಗಿದೆ. ಆದರೂ ಕೂಡ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಸಂಪುಟ ವಿಸ್ತರಣೆ ಎಂಬುದು ಬಿಜೆಪಿ ಹೈಕಮಾಂಡ್‌ಗೂ ಕಷ್ಟದ ಕೆಲಸವಾಗಿದೆ. ಇಲ್ಲದಿದ್ದರೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದಷ್ಟೇ ಸುಲಭವಾಗಿ ಮಂತ್ರಿ ಮಂಡಲವೂ ರಚನೆ ಆಗುತ್ತಿತ್ತು ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿವೆ.
ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಆಪ್ತರಿಗೆ ಮಂತ್ರಿ ಪದವಿ ಕೊಡದಿದ್ದಲ್ಲಿ ಸುಮ್ಮನಿರುತ್ತಾರಾ? ಎಂಬ ಚರ್ಚೆಯೂ ಇದೀಗ ಬಿಜೆಪಿ ವಲಯದಲ್ಲಿ ಶುರುವಾಗಿದೆ.