ಬೆಂಗಳೂರು,ಮೇ,೧೩:’ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು
’ಚಾಮರಾಜನಗರದಲ್ಲಿ ೨೪ ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ಕೊಟ್ಟಿದೆ. ಇದಕ್ಕೆ ಸರ್ಕಾರದ ಯಾರು ಹೊಣೆಗಾರರು ಎಂದು ನೀವೇ ತೀರ್ಮಾನಿಸಿ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದರು.
ಇನ್ನು ಮುಖ್ಯಮಂತ್ರಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಈಗ ಸುಮ್ಮನಾಗಿದ್ದಾರೆ. ಕೇಂದ್ರದಿಂದ ಎಷ್ಟು ಪ್ರಮಾಣದಲ್ಲಿ ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲವೇ? ಲಸಿಕೆ ವಿತರಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಯಾಕೆ ಸುಮ್ಮನಿದೆಯೋ ಗೊತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ೨೫ ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ? ಎಂದು ಪ್ರಶ್ನಿಸಿದರು
ಲಾಕ್ ಡೌನ್ ಸಂತ್ರಸ್ತ ಪ್ರತಿ ಕುಟುಂಬಕ್ಕೆ ೧೦ ಸಾವಿರ ರುಪಾಯಿ ನೆರವು ನೀಡಬೇಕು ಎಂಬುದು ನಮ್ಮ ಆಗ್ರಹ. ಗೊಬ್ಬರದ ಬೆಲೆ ಕಡಿಮೆ ಮಾಡಬೇಕು. ತರಕಾರಿ, ಹೂ ಬೆಳೆದು, ನಷ್ಟ ಆದವರಿಗೆ ಪರಿಹಾರ ಕೊಡಬೇಕು. ಸಾಂಪ್ರದಾಯಿಕ ವೃತ್ತಿ ಆಧರಿಸಿದವರಿಗೆ, ಜಿಮ್, ಸಿನಿಮಾ ತಂತ್ರಜ್ಞರಿಗೆ ನೆರವು ಸಿಗಬೇಕು. ನಿಮ್ಮಿಂದ ಇದನ್ನು ನಿಭಾಯಿಸಲು ಆಗುತ್ತಿಲ್ಲ. ಕೋವಿಡ್ ಪ್ರಕರಣದ ಸಂಖ್ಯೆ ಕಡಿಮೆ ಮಾಡಲು ಪರೀಕ್ಷೆ ನಡೆಸುವುದನ್ನೇ ಕಡಿಮೆ ಮಾಡಿದ್ದೀರಿ ಎಂದರು.