ಬಿಜೆಪಿ ನಾಯಕರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್ ಬದಲಿಸಿಕೊಳ್ಳಲಿ: ಡಿ.ಕೆ. ಶಿ ವ್ಯಂಗ್ಯ

Share

ಬಿಜೆಪಿ ನಾಯಕರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್ ಬದಲಿಸಿಕೊಳ್ಳಲಿ: ಡಿ.ಕೆ. ಶಿ ವ್ಯಂಗ್ಯ

by-ಕೆಂಧೂಳಿ

*ಬೆಂಗಳೂರು, ಏ.12-ಏಪ್ರಿಲ್ 17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನರ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ತಮ್ಮ ಜನಾಕ್ರೋಶ ಯಾತ್ರೆಯ ಬೋರ್ಡ್ ನಲ್ಲಿ ‘ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ’ ಎಂದು ಬದಲಾವಣೆ ಮಾಡಿಕೊಳ್ಳಲಿ ಎಂದು ಆ ಪಕ್ಷದ ನಾಯಕರಿಗೆ ಮನವಿ ಮಾಡುತ್ತಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಏ.17ರಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆಸಲಿರುವ ಹೋರಾಟದ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪೂರ್ವಸಿದ್ಧತಾ ಸಭೆ ನಡೆಸಿ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ವಸ್ತುಗಳ ಬೆಲೆ ಏನಿತ್ತು, ಈಗ ಏನಾಗಿದೆ ಎಂದು ನೋಡಬೇಕು. ಈ ಬೆಲೆ ಏರಿಕೆ ಬಿಸಿ ತಡೆಯಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಅನೇಕ ನಾಯಕರು ಇಂದು ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಜಿಲ್ಲಾ ಮಟ್ಟದಲ್ಲಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

*ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಹೋರಾಟ*

ಜೆಡಿಎಸ್ ಪಕ್ಷವೂ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಬಾರದು ಎಂದು ಹೇಳಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದವರು ‘ಸಾಕಪ್ಪಾ ಸಾಕು ಬಿಜೆಪಿ ಸರ್ಕಾರ’ ಎಂದು ಹೋರಾಟ ಮಾಡಲು ಸಲಹೆ ನೀಡುತ್ತೇನೆ. ಅವರು ಸಿದ್ಧಾಂತವನ್ನು ಬಳಸಿಕೊಂಡಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದು ತಿಳಿಸಿದರು.

ಜಾತಿ ಗಣತಿಯು ಜನಗಣತಿಯಲ್ಲ

ಜಾತಿ ಗಣತಿ ವರದಿ ವಿಚಾರದಲ್ಲಿ ತಮ್ಮ ನಿಲುವೇನು ಎಂದು ಕೇಳಿದಾಗ, “ಜಾತಿ ಗಣತಿಯು ಜನಗಣತಿಯಲ್ಲ, ಅದು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ. ನಮ್ಮ ಪಕ್ಷ ಸರ್ವರಿಗೂ ಸಮಬಾಳು, ಸಮಪಾಲು ಎಂಬ ನಿಲುವು ಹೊಂದಿದೆ. ಮುಖ್ಯಮಂತ್ರಿಗಳು ಹಾಗೂ ನಾನು ಇನ್ನು ವರದಿ ನೋಡಿಲ್ಲ. ನಾವು ಇದನ್ನು ಪರಿಶೀಲನೆ ಮಾಡುತ್ತೇವೆ. ಏನಾದರೂ ಹೆಚ್ಚು ಕಮ್ಮಿ ಇದ್ದರೆ ಎಲ್ಲರೂ ಚರ್ಚೆ ಮಾಡಿ ಅದನ್ನು ಸರಿಪಡಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

Girl in a jacket
error: Content is protected !!