ಟರ್ಫ್ಕ್ಲಬ್ ನಾಮನಿರ್ದೇಶನಕ್ಕೆ ಕಿಕ್ಬ್ಯಾಕ್ ಆರೋಪ-ಸಿಎಂಗೆ ಕ್ಲೀನ್ಚಿಟ್ ನೀಡಿದ ಲೋಕಾಯುಕ್ತ
ಬೆಂಗಳೂರು,ಜ,೧೯- ಟರ್ಫ್ಕ್ಲಬ್ ವ್ಯವಸ್ಥಾಪಕ ಸಮಿತಿಯ ಸ್ಪೀವರ್ಡ್ ಹುದ್ದೆಗೆ ತಮ್ಮ ಆಪ್ತರನ್ನು ನೇಮಕ ಮಾಡಲಾಗಿದೆ ಇದಕ್ಕಾಗಿ ೧.೩೦ ಕೋಟಿ ಕಿಕ್ಬ್ಯಾಕ್ ಪಡೆದಿದ್ದಾರೆ ಎನ್ನುವ ಆರೋಪದ ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ’ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ’ಸಿಎಂ ಸಿದ್ದರಾಮಯ್ಯ ಅವರು ೧.೩೦ ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರು ವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಜತೆಗೆ, ಎಲ್.ವಿವೇಕಾನಂದ ಅವರನ್ನು ಟರ್ಫ್ ಕ್ಲಬ್ ಸಮಿತಿಗೆ ನಾಮನಿರ್ದೇಶನ ಮಾಡುವಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಸೂಕ್ತ ಸಾಕ್ಷ್ಯಾಧಾರಗಳಿಲ್ಲ’ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ದೂರುದಾರರು ಹಾಗೂ ಸಿಎಂ ಸಿದ್ದರಾಮಯ್ಯ, ವಿವೇಕಾನಂದ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸ-ಲಾಗಿದೆ. ಸಮಗ್ರ ತನಿಖಾ ವರದಿ ಹಾಗೂ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಲಾಗಿದೆ. ಇದನ್ನು ನ್ಯಾಯಾಲಯ ಅಂಗೀಕರಿಸಿದೆ ಎಂದು ಲೋಕಾಯುಕ್ತ ಉನ್ನತ ಮೂಲಗಳು ತಿಳಿಸಿವೆ.
೨೦೧೩ ಹಾಗೂ ೨೦೧೮ ರ ಮೇ ೧೭ ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ೧.೩೦ ಕೋಟಿ ರೂ. ಕಿಕ್ಬ್ಯಾಕ್ ಪಡೆದು ಎಲ್.ವಿವೇಕಾನಂದ ಅವರನ್ನು ಟರ್ಫ್ ಕ್ಲಬ್ನ ವ್ಯವಸ್ಥಾಪನಾ ಸಮಿತಿಗೆ (ಸ್ಟೀವರ್ಡ್ ಹುದ್ದೆ) ನಾಮನಿರ್ದೇ ಶನ ಮಾಡಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ೨೦೨೩ ರ ಜೂನ್ ೭ ರಂದು ಮೊದಲ ಬಾರಿಗೆ ’ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಪ್ರಕರಣದ ಪುನರ್ ತನಿಖೆ ನಡೆಸಬೇಕೆಂದು ೨೦೨೪ರ ಫೆಬ್ರವರಿಯಲ್ಲಿಆದೇಶಿಸಿತ್ತು.