ಜನವಿರೋಧಿ ಕೇದ್ರದ ಬೆಲೆ ಏರಿಕೆ ಬಗ್ಗೆಯೂ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಲಿ ; ಸಿಎಂ ವ್ಯಂಗ್ಯ

Share

ಜನವಿರೋಧಿ ಕೇದ್ರದ ಬೆಲೆ ಏರಿಕೆ ಬಗ್ಗೆಯೂ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಲಿ ; ಸಿಎಂ ವ್ಯಂಗ್ಯ

by-ಕೆಂಧೂಳಿ

ಬೆಂಗಳೂರು,ಏ,07-ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ,ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಬಿಚ್ಚಿಟ್ಟು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಎರಡು ರೂಪಾಯಿಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂಬುದನ್ನು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು.

ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೊಟೇಲ್ ತಿಂಡಿ ವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧೀ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆಲ್ಲ ಗೊತ್ತು. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ ಎಂದು ಟೀಕಿಸಿದ್ದಾರೆ.

ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಎರಡು ಆಯ್ಕೆ: ಒಂದೋ ಅವರು ಪ್ರಧಾನ ಮಂತ್ರಿಯವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು, ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದಿದ್ದಾರೆ.

Girl in a jacket
error: Content is protected !!