ಗಣತಿಯ ಲಾಭ ನಿಮಗೋ? ಅಥವಾ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೋ?-ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

Share

ಬೆಂಗಳೂರು,ಏ,17,ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಗಣತಿಯ ಲಾಭ ನಿಮಗೋ? ಅಥವಾ ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೋ? ಎಂದು ಕಾಲೆಳೆದಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಅಕ್ರಮಬದ್ಧ ಜಾತಿ ಗಣತಿ ಬಗ್ಗೆ ಜನರ ಆಕ್ರೋಶ ಸರಿ ಇದೆ. ಸುಳ್ಳುಲೆಕ್ಕ ಗೊತ್ತಿದೆ. ಕಳ್ಳಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಲೋಕಕ್ಕೆ ಕಾಣದೇ? ಗಣತಿ ಹೆಸರಿನಲ್ಲಿ ಜನರನ್ನು ಛಿದ್ರಗೊಳಿಸಿ ರಾಜ್ಯದ ನೆಮ್ಮದಿಗೆ ಕೊಳ್ಳಿ ಇಟ್ಟು ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ರಾಜ್ಯ ಕಾಂಗ್ರೆಸ್ ಸರಕಾರದ ಹಿಡೆನ್‌ ಅಜೆಂಡಾ! ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಗಣತಿಯನ್ನೇ ಗುರಾಣಿ ಮಾಡಿಕೊಂಡಿದೆ! ಎಂದು ಅವರು ಗುಡುಗಿದ್ದಾರೆ.

“ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ?” ಎಂದು ಕನಕದಾಸರ ಪದವನ್ನು ಉಲ್ಲೇಖಿಸಿರುವ ಕೇಂದ್ರ ಸಚಿವರು; ಹೀಗೆಂದರೇನು ಸನ್ಮಾನ್ಯ ಮುಖ್ಯಮಂತ್ರಿಗಳೇ? ಕನಕದಾಸರ ಆಶಯ ಅರ್ಥಪೂರ್ಣ. ನಿಮ್ಮ ಪ್ರಾಯೋಜಿತ ಗಣತಿ ವರದಿಯ ದುರಾಶಯ ಪ್ರಶ್ನಾರ್ಹ. ಹೇಳುವುದು ಒಂದು, ಮಾಡಿದ್ದು ಇನ್ನೊಂದು ಎಂದು ಕುಟುಕಿದ್ದಾರೆ.

“ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ,ಎಂಬ ಬಸವಣ್ಣ ಅವರ ವಚನದ ಉಲ್ಲೇಖ ಮಾಡಿ, ಎಲ್ಲರನ್ನೂ ಒಳಗೊಳ್ಳುವ ಬಸವಣ್ಣನವರ ವಚನವನ್ನು ಬರೆದುಕೊಂದ್ದೀರಿ. ಇವರು ನಮ್ಮವರಲ್ಲ, ಇವ ನಮ್ಮನಲ್ಲ..ʼ ಎಂದು ಕೃತಿಯಲ್ಲಿಯೇ ತೋರುತ್ತೀರಿ! ಬೂಟಾಟಿಕೆಗೂ ಇತಿಮಿತಿ ಬೇಡವೇ ಸಿದ್ದರಾಮಣ್ಣ..? ಎಂದು ಕುಮಾರಸ್ವಾಮಿ ಅವರು ಪ್ರಹಾರ ನಡೆಸಿದ್ದಾರೆ.

ಸಾಮಾಜಿಕ ನ್ಯಾಯ ಎಂದರೆ ನಿಮಗೆ ಬೇಡವಾದ ಸಮಾಜಗಳ ತುಚ್ಛೀಕರಣ! ಸಾಮಾಜಿಕ ನ್ಯಾಯವೆಂದರೆ ಒಂದು ನಿರ್ದಿಷ್ಟ ಸಮಾಜದ ತುಷ್ಠೀಕರಣ!! ಜಾತಿ ಸಮೀಕರಣವಲ್ಲ, ರಾಜಕೀಯ ಲಾಭಕ್ಕೆ ಜಾತಿಗಳ ಏಕೀಕರಣಕ್ಕೆ ಕೈ ಹಾಕಿದ್ದೀರಿ. ಗಣತಿಯ ಲಾಭ ನಿಮಗೋ? ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೋ? ನಿಮ್ಮ ಒಳಮರ್ಮ ರಾಹುಲ್ ಗಾಂಧಿ ಅರ್ಥವಾದಂತೆ ಇಲ್ಲ, ಪಾಪ.. ಎಂದು ಅವರು ಟಾಂಗ್ ನೀಡಿದ್ದಾರೆ.

ಹಿಂದೆ ವೀರೇಂದ್ರ ಪಾಟೀಲ್‌ ಅವರಿಗೆ ಎಸಗಿದ ಅನ್ಯಾಯಕ್ಕೆ ನಿಮ್ಮ ಪಕ್ಷ ಬೆಲೆ ತೆತ್ತಿದೆ, ನೆನಪಿಲ್ಲವೇ? ನೀವೂ, ನಿಮ್ಮ ಪಕ್ಷ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ತಪ್ಪು ತಿದ್ದಿ ನಡೆಯುವ ಗುಣಲಕ್ಷಣ ನಿಮಗೂ ಇಲ್ಲ, ನಿಮ್ಮ ಪಕ್ಷಕ್ಕೂ ಇಲ್ಲ. ನೆಮ್ಮದಿಯಾಗಿದ್ದ ಕರ್ನಾಟಕವನ್ನು ಕೆಣಕಿದ್ದೀರಿ. ಗಣತಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತೀರಿ. ಜನರಿಗೆ ನಿಮ್ಮ ಅಸಲಿಯೆತ್ತು ಗೊತ್ತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Girl in a jacket
error: Content is protected !!