ಬೆಂಗಳೂರು,ಏ,23:ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಬಿಡುಗಡೆ ಮಾಡಿರುವ ಆಡಿಯೋವನ್ನು ನಾನು ನೋಡಿಲ್ಲ. ಈ ಬಗ್ಗೆಯೂ ತನಿಖೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿರುವ ಸಂಭಾಷಣೆಯನ್ನು ನಾನು ಕೇಳಿಲ್ಲ. ಆಡಿಯೋ ಇಬ್ಬರ ಮಧ್ಯೆ ನಡೆದಿದ್ದರೆ ಅವರ ಅರ್ಹತೆ, ವಿಶ್ವಾಸಾರ್ಹತೆಯನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುವುದು ಎಂದರು.ಆಡಿಯೋ ಕೂಡ ತನಿಖೆಗೆ ಒಳಪಡುತ್ತದೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮಕೈಗೊಳ್ಳುತ್ತೇವೆ ಎಂದರು. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಷ್ಟೇ ದೊಡ್ಡವರು ಇದರ ಹಿಂದೆ ಇದ್ದರೂ ಬಿಡಲ್ಲ ಎಂದು ಅವರು ಹೇಳಿದರು.ಯಾವುದೇ ಬ್ಯಾಚಿನ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮಗಳಾಗಿದ್ದರೆ ಅದರ ಬಗ್ಗೆಯೂ ತನಿಖೆಯಾಗುತ್ತದೆ. ಅಕ್ರಮವನ್ನು ಬಯಲಿಗೆಳೆದು ಸತ್ಯವನ್ನು ಹೊರ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದವರು ಸ್ಪಷ್ಟಪಡಿಸಿದರು.ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಲೆಗಳಿಗೆ ಇ-ಮೇಲ್ ಮೂಲಕ ಬಂದ ಹುಸಿ ಬಾಂಬ್ ಬೆದರಿಕೆ ಪಾಕಿಸ್ತಾನದಿಂದ ಬಂದಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇ-ಮೇಲ್ ಎಲ್ಲಿಂದ ಬಂದಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು.ಒಂದು ವೇಳೆ ಪಾಕಿಸ್ತಾನದಿಂದ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದರೆ ಅಲ್ಲಿನ ರಾಜಭಾರ ಕಚೇರಿಗೆ ಮಾಹಿತಿ ನೀಡಿ ಇ-ಮೇಲ್ ಕಳುಹಿಸಿದವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ ಎಂದರು.೨೯ ರಂದು ದೆಹಲಿಗೆ ದೆಹಲಿಯಲ್ಲಿ ಈ ತಿಂಗಳ ೨೯ ರಂದು ಮುಖ್ಯ ನ್ಯಾಯಾಧೀಶರು ಮತ್ತು ಮುಖ್ಯಮಂತ್ರಿಗಳ ಸಮಾವೇಶವಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವುದಾಗಿ ಅವರು ಹೇಳಿದರು.