ಕೇಂದ್ರ ಸರ್ಕಾರ ಭಾರತೀಯರನ್ನು ಸುಳ್ಳಿನ ಪ್ರವಾಹದಲ್ಲಿ ಮುಳುಗಿಸಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ: ಸಿ.ಎಂ ಸಿದ್ದರಾಮಯ್ಯ

Share

ಬೆಳಗಾವಿ ,ಏ ,28-ನಾವು ಬಿಜೆಪಿ-RSS ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗಲ್ಲ-ಬಗ್ಗಲ್ಲ. ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ. ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಸಿದ್ದರಾಮಯ್ಯ ಗುಡುಗಿದರು.

AICC ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯ ದೇಶ ವಿರೋಧಿ ಆಡಳಿತ, ಜನ ವಿರೋಧಿ ಕ್ರಮಗಳನ್ನು ಖಂಡಿಸಿ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿ ಕಿಡಿಗೇಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿ-RSS ಗೆ ನೇರವಾಗಿ ಸೆಡ್ಡು ಹೊಡೆದರು.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದ್ದೀರಿ ತೋರಿಸಿ ಜನರಿಗೆ ಎಂದು ಸವಾಲು ಹಾಕಿದರು.

ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ ? ಸ್ವಾತಂತ್ರ್ಯ. ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ ಆಗ ಎಂದು ಪ್ರಶ್ನಿಸಿದರು.

ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್ ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಲೋಪ ಅಲ್ಲವಾ ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದಾ ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸ್ತೀರಾ ಎಂದು ಪ್ರಶ್ನಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ RSS ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ ನೀವು. ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನು ಕೊಟ್ಟಿದ್ದೀರಿ ಎಂದು ದೇಶದ ಜನಕ್ಕೆ ವಿವರಿಸಿ ಎಂದು ಸವಾಲು ಹಾಕಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ 32% ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ25 ಇಳಿಸಿದಿರಿ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಿದಿರಿ. ನಾಚಿಕೆ ಆಗುತ್ತಿಲ್ಲ ನಿಮಗೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿಯ ಆಡಳಿತವನ್ನು ಪ್ರಶ್ನಿಸಬಾರದಾ ? ಭಾರತೀಯರನ್ನು ನಿರಂತರ ಸುಳ್ಳುಗಳಲ್ಲಿ ಇನ್ನೂ ಎಷ್ಟು ವರ್ಷ ಮರಳು ಮಾಡ್ತೀರಿ. ಸತ್ಯ ಹೇಳಿ ಎಂದು ಸವಾಲು ಹಾಕಿದರು.

ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟೀಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ-RSS ನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ ಎಂದರು.

ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ‌ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ, ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಸರ್ಕಾರಕ್ಕೆ ಆ ಶಕ್ತಿ ಇನ್ನೂ ಇದೆ ಎಂದರು.

ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ ಹೇಳಿ ಎಂದರು.

ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಿರಂತರವಾಗಿ ಭಾರತೀಯರನ್ನು ಸುಳ್ಳುಗಳ ಸರಮಾಲೆಯಲ್ಲಿ ಮುಳುಗಿಸಿ, ಸಮಾಜವನ್ನು ಬಿರುಕಿ ಮೂಡಿಸಿ ಕಾಲ ಕಳೆಯುತ್ತಿದೆ. ನಿಮಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ. ನಾವು ಉತ್ತರ ಕೊಡ್ತೀವಿ ಎಂದರು.

Girl in a jacket
error: Content is protected !!