ಬೆಂಗಳೂರು,ಮೇ,೨೪: ದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳಕ್ಕೆ ಪಂಚರಾಜ್ಯಗಳ ಚುನಾವಣೆಗಳು ನಡೆಸಿದ ರ‍್ಯಾಲಿಗಳೂ ಕಾರಣ ಎಂದು ಮಾಜಿ ಪ್ರದಾನಿ ಎಚ್.ಡಿ.ದೇವೇಗೌ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಎರಡನೇ ಅಲೆ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಬದಲಾಗಿ ಪಂಚರಾಜ್ಯಗಳ ಚುನಾವಣೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರು ಕೊರೊನಾ ಬಗ್ಗೆ ಪ್ರಾಮುಖ್ಯತೆ ನೀಡಿದ್ದರೆ ಇಂತ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಹಣ ಬಿಡುಗಡೆಯಲ್ಲೂ ಕೂಡ ತಾರತಮ್ಯ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಚಿಕ್ಕ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಾರೆ. ಆದರೆ, ನಮ್ಮ ರಾಜ್ಯಕ್ಕೆ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದರು.ಕೊರೊನಾ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಕೊಟ್ಟಿದ್ದೇನೆ. ನಾನು ೧೨ ಸಲಹೆಗಳನ್ನು ಕೊಟ್ಟಿದ್ದೆ. ಅದರಲ್ಲಿ ಕೆಲವು ಸಲಹೆಗಳನ್ನು ಕಾರ್ಯಗತ ಮಾಡುತ್ತಿದ್ದಾರೆ ಎಂದರು.ಮೊದಲ ಅಲೆಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿದರೆಂದು ಪ್ರಧಾನಿ ಮೋದಿ ಅವರನ್ನು ಎಲ್ಲರೂ ಹೊಗಳಿದ್ದರು.
.ಸರ್ಕಾರಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಲಾಕ್ ಡೌನ್ ಮಾಡುವ ಬಗ್ಗೆ ಒಂದು ತಿಂಗಳ ಮುಂಚೆಯೇ ಸಲಹೆ ಕೊಟ್ಟಿದ್ದರು. ಆದರೆ ಆಗ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಳ್ಳಿಗಳಲ್ಲೂ ಸೋಂಕು ಹೆಚ್ಚುತ್ತಿದೆ. ಹಾಗಾಗಿ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಹೇಳಿದರು.ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ನಮ್ಮ ಜಿಲ್ಲೆಗೂ ವೆಂಟಿಲೇಟರ್, ಔಷಧಿ ಕಳಿಸಿದ್ದಾರೆ. ಸರ್ಕಾರ ಏನೂ ಮಾಡಿಲ್ಲವೆಂದು ನಾನು ಹೇಳುವುದಿಲ್ಲ. ಆದರೆ ಇನ್ನೂ ಸಾಕಷ್ಟು ಕೆಲಸ ಮಾಡುವ ಅವಶ್ಯಕತೆ ಇದೆ. ಅರಸಿಕೆರೆ ತಾಲೂಕಿನಲ್ಲಿ ಸೋಂಕಿತರೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ೪ ಲಕ್ಷ ಖರ್ಚಾಗಿದೆ. ಅದೇ ಮನೆಯಲ್ಲಿ ತಾಯಿ, ಹೆಂಡತಿ, ತಂದೆಗೂ ಸೋಂಕು ಬಂದಿದೆ. ನಾನೇ ಮೆಡಿಕಲ್ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮವಹಿಸಲು ಸೂಚನೆ ನೀಡಿದೆ ಎಂದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕೊರತೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯಗಳ ಕೊರತೆ ಇದೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗುತ್ತಿದೆ. ವ್ಯವಸ್ಥೆಯಲ್ಲಿ ಕೆಲ ದೋಷಗಳು ಇವೆ. ಇದನ್ನು ಸರಿ ಮಾಡುವ ಕೆಲಸ ಸರ್ಕಾರ ಮಾಡಬೇಕು ಎಂದು ಗೌಡರು ಸಲಹೆ ನೀಡಿದರು.ಕೇಂದ್ರದಿಂದ ಲಸಿಕೆ, ಔಷಧಿ, ವೆಂಟಿಲೇಟರ್, ಆಕ್ಸಿಜನ್ ನಿಡೋದ್ರಲ್ಲಿ ಮಲತಾಯಿ ಧೋರಣೆ ತೋರಿದೆ ಅನ್ನುವ ವಿಚಾರ ಮಾತನಾಡಿ, ಈ ಬಗ್ಗೆ ನಾನು ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರು ಕೂಡಾ ಈ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ ಎಂದು ಹೇಳಿದರು.
ಬೀದಿಗೆ ಬಂದು ಪ್ರತಿಭಟನೆ ಮಾಡುವುದಿಲ್ಲ: ಕೊರೊನಾ ಹಿನ್ನೆಲೆ ಬೀದಿಗಳಿದು ಹೋರಾಟ ಮಾಡುವ ಸ್ಥಿತಿ ಇಲ್ಲ. ಆದರೆ ಸರ್ಕಾರವನ್ನು ಎಚ್ಚರಿಸುವ ಕೆಲಸ ನಾವು ಮಾಡುತ್ತೇವೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಯ ಸಂಕಷ್ಟಕ್ಕೆ ನೆರವಾಗಬೇಕೆಂದು ಮೂಲಕ ಮನವಿ ಮಾಡುತ್ತೇನೆ ಎಂದರು.
ಕೇಂದ್ರದಿಂದ ಹಣ ಬಿಡುಗಡೆಯಲ್ಲಿ ತಾರತಮ್ಯ-ದೇವೇಗೌಡ
Share