ಬೆಂಗಳೂರು, ಜು 30-ಕೇಂದ್ರ ಸರ್ಕಾರದಿಂದ ಯೂರಿಯಾ ಪೂರೈಕೆ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಸ್ಫಷ್ಟಪಡಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಚಿವರು ರಾಜ್ಯದಲ್ಲಿ ಕಳೆದ 2ವರ್ಷಗಳಲ್ಲಿ 3 ಮುಂಗಾರು ಹಂಗಾಮಿನಲ್ಲಿ ಇದೇ ಸರ್ಕಾರ ಅಧಿಕಾರದಲ್ಲಿದೆ. ನಾನೇ ಕೃಷಿ ಸಚಿವನಾಗಿ ಇದ್ದೇನೆ. ಈ ವರಗೆ ಉಂಟಾಗದ ಸಮಸ್ಯೆ ಈಗೇಕೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಪೂರೈಕೆಯಾಗಬೇಕಾಗಿದ್ದ ಯೂರಿಯಾ ರಸಗೊಬ್ಬರದಲ್ಲಿ ಈ ಬಾರಿ 1.36ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಇದೇ ಈ ಎಲ್ಲಾ ಸಮಸ್ಯೆಗಳು ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಕೃಷಿ ಸಚಿವರು ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದರು.
ಈ ಬಾರಿ ಮುಂಗಾರು ಬೇಗ ಪ್ರಾರಂಭವಾಗಿ ಉತ್ತಮ ಮಳೆಯಾಗಿದ್ದು, 2ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆ ಕೂಡ ಯೂರಿಯಾ ಬೇಡಿಕೆ ಹಠಾತ್ ಏರಿಕೆಗೆ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ ಅಕ್ರಮ ಸಾಗಾಟ, ಯೂರಿಯಾ ದುರ್ಬಳಕೆ ಬಗ್ಗೆ ವಿಚಕ್ಷಣ ದಳ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿದೆ. ವಿರೋಧ ಪಕ್ಷದ ಮುಖಂಡರು ಮಾಧ್ಯಮಕ್ಕೆ ತಿಳಿಸಿರುವಂತೆ ಕರ್ನಾಟಕ ರಾಜ್ಯವು ನೆರೆ ದೇಶಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶದೊಂದಿಗೆ ಯಾವುದೇ ಗಡಿಯನ್ನು ಹಂಚಿಕೊಂಡಿರುವುದಿಲ್ಲ. ಈ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ವಿರೋಧ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ರಸಗೊಬ್ಬರಗಳ ಪೂರೈಕೆ ಕಾಪು ದಾಸ್ತಾನಿಗೆ ಇರಿಸಲಾಗಿದ್ದ ಗ್ಯಾರಂಟಿ ಹಣ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಹಿಂದೆ ಇದ್ದದ್ದು ಬಿ.ಜೆ.ಪಿ ಸರ್ಕಾರ ಅವರೇ ನಿಗಧಿಪಡಿಸಿದ್ದ 4೦೦ ಕೋಟಿ ರೂ ಹಣವನ್ನು ನಾವು ಯಥಾ ಸ್ಥಿತಿಯಲ್ಲಿ ಮುಂದುವರೆಸಿದ್ದೇವೆ. ಇನ್ನೂ 6೦೦ ಕೋಟಿ ರೂಪಾಯಿ ಹೆಚ್ಚವರಿ ಹಣ ನೀಡಲು ರಾಜ್ಯ ಸರ್ಕರ ಸಿದ್ದವಿದೆ. ಪ್ರತಿಯಾಗಿ ಬಿಜೆಪಿ ನಾಯಕರು ಗೊಬ್ಬರ ಒದಗಿಸಲು ಸಾಧ್ಯವೇ ತಿಳಿಸಬೇಕು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ರಾಜ್ಯದಲ್ಲಿ ದಾವಣಗೆರೆ, ಗದಗ, ಕೊಪ್ಪಳ, ಧಾರವಾಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಸ್ವಲ್ಪ ಕಂಡುಬಂದಿರುವುದು ನಿಜ. ಆದರೆ ಅದನ್ನು ನಿಬಾಯಿಸಲಾಗುತ್ತಿದೆ. ಹೆಚ್ಚುವರಿ ದಾಸ್ತಾನು ಬೇರೆ ಜಿಲ್ಲೆಗಳಿಂದ ವರ್ಗಾವಣೆ ಮಾಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ರಸಗೊಬ್ಬರ ಅದರಲ್ಲೂ ಮುಖ್ಯವಾಗಿ ಯೂರಿಯಾ ಮತ್ತು ಡಿ.ಎ.ಪಿ. ಪೂರೈಕೆ ಕೋರಿ ಜುಲೈ 7 ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆ ನಂತರ ನಾನು ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ರಸಗೊಬ್ಬರ ಖಾತೆ ಸಚಿವರ ಭೇಟಿಗಾಗಿ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದ್ದು, ಅವಕಾಶ ಸಿಕ್ಕರೆ ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿ ವಿವರಿಸಿ ಮನವಿ ಮಾಡಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.