ಬೆಂಗಳೂರು,ಮೇ,೧೪: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯಲು ನೀಡಲಾಗುತ್ತಿರುವ ಲಸಿಕೆ ಖರೀದಿಗೆ ರಾಜ್ಯಸರ್ಕಾರಕ್ಕೆ ಕರ್ನಾಟಕ ಕಾಂಗ್ರೆಸ್ ಪಕ್ಷ ೧೦೦ ಕೋಟಿ ರೂ ಸಹಾಯ ದನ ನೀಡಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಂಸದರರಿಗೆ ಮಂಜೂರು ಮಾಡಿರು ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿ ರೂಗಳಂತೆ ಒಟ್ಟು ೧೦೦ ಕೋಟಿ ರೂಗಳನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು
ಪ್ರತಿ ಶಾಸಕರು, ಸಂಸದರಿಗೆ ಪ್ರತಿವರ್ಷ ನೀಡಲಾಗುವ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ ೧ ಕೋಟಿ ರೂಪಾಯಿಯನ್ನು ನೀಡಲಾಗುತ್ತದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ ೨ ಕೋಟಿ ರೂಪಾಯಿ, ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ತಲಾ ೫ ಕೋಟಿ ರೂಪಾಯಿ ಸಿಗುತ್ತದೆ, ಅದರಡಿ ರಾಜ್ಯದಲ್ಲಿರುವ ೯೫ ಮಂದಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕೊರೋನಾ ಲಸಿಕೆಗೆ ಹಣ ನೀಡಲಿದ್ದಾರೆ ಎಂದರು. ಅದನ್ನು ಸರ್ಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ನೇರವಾಗಿ ಖರೀದಿಸಲು ಅವಕಾಶ ನೀಡಿ: ಕೊರೋನಾ ಲಸಿಕೆ ಖರೀದಿ ಮಾಡಿ ಜನರಿಗೆ ಸರಿಯಾಗಿ ನೀಡುವಲ್ಲಿ ಕೇಂದ್ರದ ಮೋದಿ ಹಾಗೂ ರಾಜ್ಯದ ಬಿ ಎಸ್ ವೈ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಂಪೆನಿಯಿಂದ ನೇರವಾಗಿ ಖರೀದಿ ಮಾಡಲು ಅವಕಾಶ ನೀಡಿ ಎಂದು ನಾವು ಸರ್ಕಾರವನ್ನು ಕೇಳುತ್ತೇವೆ. ಲಸಿಕೆ ಉತ್ಪಾದಕ ಕಂಪೆನಿಗಳಿಂದ ನೇರವಾಗಿ ಲಸಿಕೆ ಸಂಗ್ರಹಿಸಿ ಜನರಿಗೆ ವಿತರಿಸಲು ನೆರವಾಗಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಡೋಸ್ ಗಳ ಮಧ್ಯೆ ಅಷ್ಟೊಂದು ಅಂತರವೇಕೆ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಜವಬ್ದಾರಿಯಿಂದ ವರ್ತಿಸುತ್ತಿದೆ. ಕೋವಿಶೀಲ್ಡ್ ಲಸಿಕೆ ಡೋಸ್ ನೀಡಿಕೆಯಲ್ಲಿ ೧೪ರಿಂದ ೧೬ ವಾರಗಳ ಅಂತರವೇಕೆ, ಲಸಿಕೆ ನೀಡುವ ವಿಚಾರದಲ್ಲಿ ಕೂಡ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ, ತಜ್ಞರು ಹೇಳುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ನನಗನಿಸುತ್ತಿದೆ ಎಂದು ಆರೋಪಿಸಿದರು.