ಬೆಂಗಳೂರು,ಡಿ.೧೪- ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಧಿಕಾರರೂಢ ಬಿಜೆಪಿ ಪ್ರಮುಖ ಪ್ರತಿ ಪಕ್ಷವಾದ ಕಾಂಗ್ರೆಸ್ ಸಮಬಲ ಸಾಧಿಸಿದ್ದು, ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೫ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ೧೨ ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ೧೧, ಜೆಡಿಎಸ್ ೧ ಮತ್ತು ಪಕ್ಷೇತರರು ೧ ಸ್ಥಾನದಲ್ಲಿ ಜಯಗಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ೬ ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದ್ದ ಬಿಜೆಪಿ, ಈ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದ್ದು, ಕಳೆದ ಬಾರಿ ೧೩ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್, ಕೆಲ ಸ್ಥಾನಗಳನ್ನು ಕಳೆದುಕೊಂಡಿದೆ.
ಆದರೆ, ಜೆಡಿಎಸ್‌ನಿಂದ ಕೆಲ ಸ್ಥಾನಗಳನ್ನು ಕಸಿದುಕೊಂಡು ಜೆಡಿಎಸ್ ಭದ್ರಕೋಟೆಯ ಜಿಲ್ಲೆಗಳಲ್ಲಿ ಪ್ರಾಬಲ್ಯ ತೋರಿದೆ. ಕಳೆದ ಚುನಾವಣೆಯಲ್ಲಿ ೬ ಪರಿಷತ್ ಸ್ಥಾನಗಳಲ್ಲಿ ಜಯಗಳಿಸಿದ್ದ ಜೆಡಿಎಸ್ ಈಗ ೧ ಸ್ಥಾನಗಳಿಗಷ್ಟೇ ತೃಪ್ತಿ ಪಡುವಂತಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲ ತಂದಿದೆ. ವಿಧಾನಸಭಾ ಉಪಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದ ಬಿಜೆಪಿ, ಪರಿಷತ್ ಚುನಾವಣೆಂiiಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಮಾಜಕಲ್ಯಾಣ ಸಚಿವ ಕೋಟಾಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಎಂ.ಬಿ ಪಾಟೀಲ್ ಸಹೋದರ ಸುನಿಲ್‌ಗೌಡ ಪಾಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಸಹೋದರ ಪ್ರದೀಪ್‌ಶೆಟ್ಟರ್ ಮತ್ತೆ ವಿಧಾನ ಪರಿಷತ್‌ಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರ ಪುತ್ರ ಬಿ.ಎಚ್ ಅರುಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸೂರಜ್‌ರೇವಣ್ಣ ಗೆಲುವಿನ ನಗೆ ಬೀರಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ ಕೊಂಡಯ್ಯ ಇದೇ ಮೊದಲ ಬಾರಿಗೆ ಸೋಲನುಭವಿಸಿರುವುದು ಅಚ್ಚರಿ ಮೂಡಿಸಿದೆ. ಈ ಚುನಾವಣೆಯಲ್ಲಿ ಮತದಾರರು ಕುಟುಂಬ ರಾಜಕಾರಣಕ್ಕೂ ಮಣೆ ಹಾಕಿದ್ದು, ಚುನಾವಣಾ ಕಣದಲ್ಲಿದ್ದ ಹಾಲಿ ಶಾಸಕರು, ಮಾಜಿ ಸಚಿವರ ಪುತ್ರರು, ಸಹೋದರರು ಗೆಲುವು ಸಾಧಿಸಿದ್ದಾರೆ.
ಕೊಡಗು ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದು, ಇಲ್ಲಿ ಕಾಂಗ್ರೆಸ್‌ನ ಡಾ. ಮಂತರಗೌಡ ವಿರುದ್ಧ ೧೦೨ ಮತಗಳ ಅಂತರದಿಂದ ಸುಜಾಕುಶಾಲಪ್ಪ ಗೆದ್ದಿದ್ದಾರೆ.
ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ೧ ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಸಚಿವ ಹಾಗೂ ವಿಧಾನ ಪರಿಷತ್ ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ, ಬಿಜೆಪಿಯಿಂದ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಗೆದ್ದು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿಯ ಡಿ.ಎಸ್ ಅರುಣ್ ಜಯಭೇರಿ ಬಾರಿಸಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಧಾರವಾಡ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಲೀಂ ಅಹಮದ್ ಮತ್ತು ಬಿಜೆಪಿಯ ಪ್ರದೀಪ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ.
ಕಲಬುರಗಿ ಕ್ಷೇತ್ರದಿಂದ ಬಿಜೆಪಿಯ ಬಿ.ಜಿ ಪಾಟೀಲ್, ಕಾಂಗ್ರೆಸ್‌ನ ಶಿವಾನಂದ್ ಪಾಟೀಲ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್, ಕಾಂಗ್ರೆಸ್‌ನ ಸೋಮಶೇಖರ್ ಅವರಿಗಿಂತ ಹೆಚ್ಚು ಮತ ಪಡೆದು ಸತತ ೩ನೇ ಪ್ರಯತ್ನದ ನಂತರ ವಿಧಾನ ಪರಿಷತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ. ಡಿ. ತಿಮ್ಮಯ್ಯ ಗೆಲುವು ಸಾಧಿಸಿದ್ದು, ಮತ್ತೊಂದು ಸ್ಥಾನಕ್ಕೆ ಜೆಡಿಎಸ್‌ನ ಮಂಜೇಗೌಡ ಬಿಜೆಪಿಯ ರಘುಕೌಟಿಲ್ಯ ಗೆಲುವಿಗಾಗಿ ಪೈಪೋಟಿ ನಡೆಸಿದ್ದು, ಫಲಿತಾಂಶ ಪ್ರಕಟವಾಗಬೇಕಿದೆ.
ಹಾಸನದಿಂದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಸೂರಜ್‌ರೇವಣ್ಣ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿ ವಿಧಾನ ಪರಿಷತ್‌ಗೆ ಪ್ರವೇಶ ಪಡೆದಿದ್ದಾರೆ. ಇಲ್ಲಿ ಸೂರಜ್ ರೇವಣ್ಣ ಕಾಂಗ್ರೆಸ್‌ನ ಎಂ. ಶಂಕರ್ ವಿರುದ್ಧ ಜಯ ಸಾಧಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಬಿಜೆಪಿ ಗೆದ್ದಿದ್ದು, ಇಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಅವರು ಕಾಂಗ್ರೆಸ್‌ನ ಭೀಮಾನಾಯಕ್ ವಿರುದ್ಧ ಜಯ ಸಾಧಿಸಿದ್ದಾರೆ.
ಬೆಂಗಳೂರು ನಗರದಲ್ಲೂ ಕಮಲ ಅರಳಿದ್ದು, ಬಿಜೆಪಿಯ ಗೋಪಿನಾಥರೆಡ್ಡಿ ಅವರು ಕಾಂಗ್ರೆಸ್‌ನ ಯುಸೂಫ್ ಶರೀಫ್ (ಕೆಜಿಎಫ್ ಬಾಬು) ವಿರುದ್ಧ ಜಯ ಗಳಿಸಿದ್ದಾರೆ.
ವಿಜಯಪುರ ದ್ವಿಸದಸ್ಯ ಕಾಂಗ್ರೆಸ್‌ನ ಸುನೀಲ್‌ಗೌಡ ಪಾಟೀಲ್ ಗೆಲುವು ಸಾಧಿಸಿದ್ದು, ಬಿಜೆಪಿಯ ಪಿ.ಎಚ್ ಪೂಜಾರ್ ಸಹ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್‌ನ ಘಟಾನುಘಟಿ ನಾಯಕ ಕೆ.ಸಿ ಕೊಂಡಯ್ಯ ಅವರಿಗೆ ಸೋಲಾಗಿದ್ದು, ಬಿಜೆಪಿಯ ವೈ.ಎಂ ಸತೀಶ್ ಕೊಂಡಯ್ಯ ಅವರಿಗೆ ಸೋಲಿನ ರುಚಿ ತೋರಿಸಿ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಕನ್ ಜಾರಕಿಹೋಳಿ ಗೆಲವು ಸಾಧಿಸಿದ್ದಾರೆ. ಆ ಮೂಲಕ ಬಿಜೆಪಿಗೆ ಅಲ್ಲಿ ತೀವ್ರ ಮುಖಭಂಗ ಅನುಭವಿಸದಂತಾಗಿದೆ
ಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ೬ ಮತಗಳ ಅಂತರದಿಂದ ಕಾಂಗ್ರೆಸ್‌ನ ಗಾಯತ್ರಿಶಾಂತೇಗೌಡ ಅವರನ್ನು ಪರಾಭವಗೊಳಿಸಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ ಜಯಗಳಿಸಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದ್ದ ಜೆಡಿಎಸ್‌ನ ಅನಿಲ್‌ಕುಮಾರ್ ಸೋತಿದ್ದಾರೆ.
ಕೋಲಾರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದು, ಕಾಂಗ್ರೆಸ್‌ನ ಅನಿಲ್‌ಕುಮಾರ್ ಬಿಜೆಪಿ ಅಭ್ಯರ್ಥಿ ಡಾ. ವೇಣುಗೋಪಾಲ್ ವಿರುದ್ಧ ಜಯಗಳಿಸಿದ್ದಾರೆ.
ರಾಯಚೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಬಣಹಟ್ಟಿ ಅವರನ್ನು ಸೋಲಿಸಿದ್ದಾರೆ.
ಜೆಡಿಎಸ್‌ನ ಭದ್ರಕೋಟೆ ಮಂಡ್ಯದಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ದಿನೇಶ್‌ಗೂಳಿಗೌಡ ಅವರು ಜೆಡಿಎಸ್‌ನ ಅಪ್ಪಾಜಿಗೌಡ ಅವರನ್ನು ಪರಾಭವಗೊಳಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಸ್. ರವಿ ಗೆಲುವು ಸಾಧಿಸಿದ್ದು, ಇಲ್ಲಿ ಜೆಡಿಎಸ್‌ನ ಹಾಲಿ ವಿಧಾನ ಪರಿಷತ್ ಸದಸ್ಯ ರಮೇಶ್‌ಗೌಡ ಸೋಲನುಭವಿಸಿದ್ದಾರೆ. ಬೀದರ್ ಕ್ಷೇತ್ರದಿಂದ ಕಾಂಗ್ರೆಸ್‌ನ ಭೀಮ್‌ರಾವ್ ಪಾಟೀಲ್ ಜಯಗಳಿಸಿದ್ದು, ಇವರು ಕಾಂಗ್ರೆಸ್‌ನ ಹಾಲಿ ಶಾಸಕ ರಾಜಶೇಖರ್ ಅವರ ಸಹೋದರರು.
ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೆಳಗಾವಿ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಂತೇಶ ಕವತಗಿ ಮಟ ಸೋಲುವ ಸಾಧ್ಯತೆಗಳಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ ಹೊಳೆಹಟ್ಟಿ ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್‌ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚಿನ ಮತ ಗಳಿಸಿದ್ದು, ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಮಂಡ್ಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ
ಒಟ್ಟು ೪೦೧೯ ಮತಗಳ ಪೈಕಿ ದಿನೇಶ್ ಗೂಳಿಗೌಡರು ೨೦೪೪ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಸಮೀಪ ಸ್ಪರ್ಧಿ ಜೆಡಿಎಸ್‌ನ ಅಪ್ಪಾಜಿಗೌಡ ಅವರು ೧೮೭೭ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.ಬಿಜೆಪಿ ಅಭ್ಯರ್ಥಿ ಕೇವಲ ೫೦ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ