ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು:ಬಸವರಾಜ ಬೊಮ್ಮಾಯಿ

Share

ಗದಗ,ಜೂ,22-ಅಕ್ರಮ ಗಣಿ ಪ್ರಕರಣಗಳ ಕುರಿತು ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗ ಶಹರದಲ್ಲಿ ಎಚ್.ಎಸ್.ಎಲ್. ಟೈಲ್ ಮತ್ತು ಗ್ರಾನೈಟ್ ಶೋ ರೂಮ್ ಉದ್ಘಾಟಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್. ಕೆ. ಪಾಟೀಲರು ಗಣಿಯಲ್ಲಿ ನೋಂದಾಗಿರುವ ಕೇಸ್‌ಗಳ ಬಗ್ಗೆ ಶೇ 90 ಕೇಸ್‌ಗಳು ಇತ್ಯರ್ಥವಾಗಿಲ್ಲ ಎಂದು ಅತ್ಯಂತ ಮಹತ್ವದ ವಿಚಾರ ಹೊರ ತಂದಿದ್ದಾರೆ. ಈಗಲೂ ಅವರದೇ ಸರ್ಕಾರ ಇದೆ. ಅವರದೇ ಸಚಿವ ಸಂಪುಟದ ಸದಸ್ಯರು ಎತ್ತಿರುವ ಪ್ರಕರಣಕ್ಕೆ ಮುಖ್ಯಮಂತ್ರಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ ಎಂದು ಹೇಳಿದರು.

ಎಚ್.ಕೆ. ಪಾಟೀಲರು ವಿಶೇಷ ನ್ಯಾಯಾಲಯ ಮಾಡಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಲವಾರು ಕೇಸುಗಳು ನೋಂದಣಿಯಾಗಿ ಎಸ್‌ಐಟಿ ರಚನೆ ಆಗಿವೆ. ಸಿಬಿಐ ತನಿಖೆ ನಡೆಯುತ್ತಿವೆ. ಎಸ್‌ಐಟಿ ಮುಖ್ಯಸ್ಥರ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿವೆ. ಎಚ್.ಕೆ. ಪಾಟೀಲರು 2017-18ರ ಪೂರ್ವದ ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಇಡಿ ದೇಶದಲ್ಲಿ ಗಣಿಗಳನ್ನು ಇ ಹರಾಜು ಮಾಡಬೇಕೆಂದು ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಿತು. ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡುವ ಹಿಂದಿನ ದಿನ ಕರ್ನಾಟಕ ಸರ್ಕಾರ ತನಗೆ ಬೇಕಾದವರಿಗೆ ಹಲವಾರು ಗಣಿ ಗುತ್ತಿಗೆ ನವೀಕರಣ ಮಾಡಿತ್ತು. ಅವುಗಳ ಬಗ್ಗೆಯೂ ತನಿಖೆ ಮಾಡಲು ಎಚ್.ಕೆ. ಪಾಟೇಲರ್ ಒಪ್ಪುತ್ತಾರಾ ಎಂದು ಪಶ್ನಿಸಿದರು.

ಇದೇ ವೇಳೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರು, ಸರ್ಕಾರಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರವಾಗುತ್ತಿರುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ಬಿ. ಆರ್ ಪಾಟೀಲ್ ಹಲವಾರು ವಿಚಾರ ಎತ್ತುತ್ತಾರೆ. ಅವರ ಮಾತಿಗೆ ಕಾಂಗ್ರೆಸ್‌ನವರು ಯಾರೂ ಮರ್ಯಾದೆ ಕೊಡುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರಿಗೆ ಕಾಂಗ್ರೆಸ್‌ನಲ್ಲಿ ಮರ್ಯಾದೆ ಇಲ್ಲ ಎನ್ನುವುದು ಬಹಳ ಸ್ಪಷ್ಟವಾಗಿದೆ ಎಂದು ಹೇಳಿದರು.

Girl in a jacket
error: Content is protected !!