ಅಭಿವೃದ್ಧಿಗೆ ನಾವು ಹಣ ಕೊಡ್ತಿದ್ದೀವಿ. ಜನ ಖುಷಿಯಾಗಿದ್ದಾರೆ. ಬಿಜೆಪಿ ಗೆ ಹೊಟ್ಟೆಯುರಿ: ಸಿ.ಎಂ ಸಿದ್ದರಾಮಯ್ಯ

Share

ಪಿರಿಯಾಪಟ್ಟಣ ಏ 27-ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಅಪಾರ ಹಣ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಇದೇ ಹೊಟ್ಟೆಯುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು.

ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ 439.88 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗಳನ್ನು ನೆರವೇರಿಸಿ ಬಳಿಕ ಸಾವಿರಾರು ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ, ಅಂಬೇಡ್ಕರ್-ಬಾಬು ಜಗಜೀವನ್ ರಾಮ್ ಜನ್ಮ‌ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪಿರಿಯಾಪಟ್ಟಣ ಕೃಷಿ ಪ್ರಧಾನ ಕ್ಷೇತ್ರ. ಹೀಗಾಗಿ 300 ಕ್ಕೂ ಹೆಚ್ಚು ರೈತರಿಗೆ 100 ಕೋಟಿಗೂ ಅಧಿಕ ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ಇಂದು ವಿತರಿಸಲಾಗಿದೆ. ಕೃಷಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗಿದ್ದರಿಂದ ಗ್ರಾಮೀಣ ರೈತರು ಯಂತ್ರಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ವಿವರಿಸಿದರು.

ಹಿಂದಿನ ವರ್ಷ ಜಲಾಶಯಗಳೆಲ್ಲಾ ತುಂಬಿ ರಾಜ್ಯದಲ್ಲಿ ಮಳೆ ಬೆಳೆ ಚನ್ನಾಗಿ ಆಗಿದೆ. ಈ ವರ್ಷವೂ ಒಳ್ಳೆ ಮಳೆ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ ಎಂದರು.

ರಾಜ್ಯದ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ಹಣ ಗ್ಯಾರಂಟಿಗಳ ಮೂಲಕ ತಲುಪುತ್ತಿದೆ. ಈ ಗ್ಯಾರಂಟಿಗಳಲ್ಲದೆ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಫಲ ಕೂಡ ನಾಡಿನ ದೊರೆಗಳಾದ ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಜನರಿಗೆ ಪ್ರತೀ ದಿನ ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾಣಿಸುತ್ತಿದೆ. ಆದರೆ, ಬಿಜೆಪಿ ಮಾತ್ರ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದೆ ಎಂದು ಟೀಕಿಸಿದರು.

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳಿಕೊಂಡು, ದೇವರು ಧರ್ಮದ ಹೆಸರಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ದಿಕ್ಕು ತಪ್ಪಿಸಿ ಕಾಲ‌ ಕಳೆದು ಮನೆಗೆ ಹೋದರು ಎಂದು ವಿವರಿಸಿದರು.‌

Girl in a jacket
error: Content is protected !!