ಶಿವಮೊಗ್ಗ,ಜು,19: ಮಂತ್ರಿಸ್ಥಾನ ಹೋದರೆ ಹೋಗಲಿ. ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ. ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ಮಂತ್ರಿ ಸ್ಥಾನ ಇಲ್ಲಾಂದರೆ ಸಂಘಟನೆಯ ಕೆಲಸ ಮಾಡ್ತೀನಿ. ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದರು.
ಬಿಜೆಪಿ ರಸಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ಭಹಿರಂಗ ಗೊಂಡ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪದಚ್ಯುತರಾಗಲಿದ್ದಾರೆ. ಈಶ್ವರಪ್ಪ, ಶೆಟ್ಟರ್ ಟೀಂ ಹೊರ ಹೋಗುತ್ತಾರೆ. ಮೂವರಲ್ಲಿ ಒಬ್ಬರು ಅಧಿಕಾರ ಹಿಡಿತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾನು ಅದನ್ನ ಹೇಳಿಲ್ಲ, ಯಾರೋ ಹುಚ್ಚರು ಮಾಡಿದ್ದು, ಅದು ನಕಲಿ ಅಂತ ಕಟೀಲ್ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಆಡಿಯೋದಲ್ಲಿರುವುದನ್ನು ಕಟೀಲ್ ಹೇಳಿಲ್ಲ, ಅವರು ಹೇಳಲು ಸಾಧ್ಯವೂ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಪರ ಬ್ಯಾಟ್ ಬೀಸಿದರು.
ಹಾಗೆಯೇ ಅದು ನಕಲಿ ಆಡಿಯೋ ಅಂತ ಕಟೀಲ್ ಹೇಳಿದ ಮೇಲೆ ತನಿಖೆ ಮಾಡುವುದೇನೂ ಉಳಿದಿಲ್ಲ. ಆದರೆ ತನಿಖೆ ನಡೆಯಲೇಬೇಕು ಎಂದಾದರೆ ತನಿಖೆ ಆಗಲಿ ಎಂದು ಸಚಿವ ಕೆ,ಎಸ್ ಈಶ್ವರಪ್ಪ ತಿಳಿಸಿದರು.
ಪ್ರಧಾನಿ ಮೋದಿಯವರನ್ನು ನೋಡಲು ದೆಹಲಿಗೆ ಹೋದ ಮುಖ್ಯಮಂತ್ರಿಗಳು ತಮ್ಮೊಂದಿಗೆ ಆರು ಬ್ಯಾಗ್ ಒಯ್ದಿದ್ದರು ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಏನನ್ನೋ ಪೂರೈಸಿ ಮೋದಿಯವರನ್ನು ತೃಪ್ತಿ ಮಾಡುವ ಲೆವೆಲ್ಲಿನಲ್ಲಿ ಯಡಿಯೂರಪ್ಪ ಇಲ್ಲ. ಏನನ್ನೋ ಪಡೆದು ನಡೆಯುವಷ್ಟು ಕೆಳಮಟ್ಟದಲ್ಲಿ ಮೋದಿಯವರೂ ಇಲ್ಲ ಎಂದು ಹೆಚ್.ಡಿಕೆಗೆ ಟಾಂಗ್ ನೀಡಿದರು.