ಬ್ಯಾಟಿಂಗ್, ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಫೇಲ್, ಪಾಕ್ ಗೆ ಭರ್ಜರಿ ಗೆಲುವು

Share

Reported By H.D Savita

ದುಬೈ :ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತವು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದೆ. ಪಾಕ್  ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಾಕಿಸ್ತಾನ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ICC ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಗೆಲುವಿನ ಓಟದ ದಾಖಲೆಗಳನ್ನು ಪಾಕಿಸ್ತಾನ ಮುರಿದಿದೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಫಲಗೊಂಡಿತು. ಬದ್ಧವೈರಿಗಳ ವಿರುದ್ದದ ಹಿನ್ನಡೆ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸೋಲಾಗಿ ಪರಿಣಮಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಮತ್ತೆ ಪಾಕಿಸ್ತಾನ ವಿರುದ್ಧ ಭಾರತ ಮುಗ್ಗರಿಸಿದೆ.

ಪಾಕಿಸ್ತಾನದ ಮಾರಕ ಬೌಲಿಂಗ್ ದಾಳಿಗೆ ಟೀಂ ಇಂಡಿಯಾ ಆರಂಭದಲ್ಲೇ ತತ್ತರಿಸಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ, ರಿಷಬ್ ಪಂತ್ ಹೋರಾಟದಿಂದ ಚೇತರಿಸಿಕೊಂಡ ಭಾರತ 7 ವಿಕೆಟ್ ನಷ್ಟಕ್ಕೆ 151 ರನ್ ಸೇರಿಸಿತು. ಕೊಹ್ಲಿ 57 ರನ್ ಕಾಣಿಕೆ ನೀಡಿದರೆ, ಪಂತ್ 39 ರನ್ ಸಿಡಿಸಿದರು. ಈ ಮೂಲಕ 152 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು.

ಪಾಕಿಸ್ತಾನ ಆರಂಭಿಕ ಹಂತದಲ್ಲೇ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ವಿಕೆಟ್ ಕಬಳಿಸುವ ಟೀಂ ಇಂಡಿಯಾ ಪ್ರಯತ್ನ ಕೈಗೊಡಲಿಲ್ಲ. ವೇಗಿಗಳ ನಡುವೆ ಸ್ಪಿನ್ ಅಸ್ತ್ರವನ್ನು ಪ್ರಯೋಗಿಸಿ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಯಿತು.  ಆದರೆ ಬಾಬರ್ ಹಾಗೂ ರಿಜ್ವಾನ್ ಹೋರಾಟ ಪಾಕಿಸ್ತಾನ ತಂಡಕ್ಕೆ ನೆರವಾಯಿತು.

ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಬಾಬರ್ ಅಜಮ್ ಅರ್ಧಶತಕ ಸಿಡಿಸಿದರು. ಒಂದು ವಿಕೆಟ್ ಕಬಳಿಸಲು ಭಾರತ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಐವರು ಬೌಲರ್‌ಗಳ ಪ್ರಯತ್ನ ಕೈಗೂಡಲಿಲ್ಲ. ಪರಿಣಾಮವಾಗಿ ಐಸಿಸಿ ವರ್ಲ್ಡ್ ಕಪ್ ಇತಿಹಾಸದಲ್ಲಿ ಭಾರತವು ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ದ ಸೋಲು ಅನುಭವಿಸಿತು. ಇತ್ತ 10 ವಿಕೆಟ್ ಭರ್ಜರಿ ಗೆಲುವು ಕಂಡ ಪಾಕಿಸ್ತಾನ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

Girl in a jacket
error: Content is protected !!