ಸೌತಾಂಪ್ಟನ್,ಜೂ,20: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿರಿಸಿನ ಆಟದಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಪರ್ವ ಸೃಷ್ಟಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಶನಿವಾರ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ 40+ ರನ್ ಬಾರಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ನಿರ್ಮಿಸಿದ್ದಾರೆ. 92 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್, 105 ಎಸೆತಗಳಿಗೆ 40 ರನ್ ಬಾರಿಸಿದ್ದರು. 58.4 ಓವರ್‌ಗೆ ಭಾರತ 3 ವಿಕೆಟ್ ಕಳೆದು 134 ರನ್ ಗಳಿಸಿತ್ತು. ಕೊಹ್ಲಿ ಮತ್ತು ಅಜಿಂಕ್ಯ ರಹಾನೆ (22) ಆಡುತ್ತಿದ್ದರು. ಈ ಓವರ್ ವೇಳೆ ಭಾರತ ತಂಡ ರೋಹಿತ್ ಶರ್ಮಾ (34), ಶುಬ್ಮನ್ ಗಿಲ್ (28), ಮತ್ತು ಚೇತೇಶ್ವರ ಪೂಜಾರ (8) ವಿಕೆಟ್ ಕಳೆದುಕೊಂಡಿತ್ತು.
ಇದೇ ಪಂದ್ಯದಲ್ಲಿ ಕೊಹ್ಲಿ 61 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮಾಜಿ ನಾಯಕ ಎಂಎಸ್ ಧೋನಿ (60) ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. 32ರ ಹರೆಯದ ಕೊಹ್ಲಿ 254 ಏಕದಿನ ಪಂದ್ಯಗಳಲ್ಲಿ 12169 ರನ್, 89 ಟಿ20ಐ ಪಂದ್ಯಗಳಲ್ಲಿ 3159 ರನ್ ದಾಖಲೆ ಹೊಂದಿದ್ದಾರೆ.