ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ

Share

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ.

ನೇರಳೆ ಹಣ್ಣಿನ ರಾಶಿಯ ಬಗ್ಗೆ ಆಡಿದ ಸಿದ್ಧನ ಮಾತು, ಹುಡುಗರ ಜ್ಞಾನದ ಕಣ್ಣನ್ನು ತೆರೆಸಿತು! ಈಶನನ್ನು ,ಈಶರೂಪಿ ಸಿದ್ಧನನ್ನು ಮರೆತಿದ್ದಕ್ಕೆ ಮರುಕಪಟ್ಟರು. ” ತಾವು ತಪ್ಪು ಮಾಡಿರುವುದರಿಂದ ಇನ್ನು ಹಣ್ಣು ತಿನ್ನುವುದು ಬೇಡ, ಇವುಗಳನ್ನು ಇಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗೋಣ” – ಎಂದರು. ಆಗ ಸಿದ್ಧ ಹೇಳಿದನು;
” ಹಣ್ಣು ಬಿಡಬಹುದು, ಆದರೆ ಅವುಗಳನ್ನು ನೋಡುವ ಕಣ್ಣುಗಳನ್ನು ಬಿಡಲಾಗದು”.
ಹಣ್ಣು ಹೆಣ್ಣು ಗಂಡು ಹೊನ್ನು ಮಣ್ಣು ಮತ್ತೊಂದು ಇವೆಲ್ಲ ವಿಷಯಗಳು . ಈ ಎಲ್ಲಾ ಪ್ರಾಪಂಚಿಕ ವಿಷಯಗಳನ್ನು ಶಾಸ್ತ್ರಕಾರರು ಸಂಕ್ಷಿಪ್ತವಾಗಿ,ಶಬ್ದ, ಸ್ಪರ್ಶ,
ರೂಪ, ರಸ,ಗಂಧ ಎಂಬುದಾಗಿ ಐದು ಪ್ರಕಾರವಾಗಿ ವಿಂಗಡಿಸಿದ್ದಾರೆ. ಇವು ರೋಚಕವಾಗಿ ಕಾಣುತ್ತವೆ.

ಸಕಲ ಜೀವರಾಶಿಗಳ ಸಾಮಾನ್ಯ ಪ್ರವೃತ್ತಿ ಈ ವಿಷಯಾಭಿಮುಖವಾಗಿ ಹರಿಯುತ್ತದೆ.ವಿಷಯಗಳಲ್ಲಿ ಆನಂದವಿದೆ ಎಂದು ಭಾವಿಸಿ, ಜನರು ವಿಷಯಾಸಕ್ತರಾಗಿ ವಿಷಯ ಸುಖಗಳಲ್ಲಿ ಮುಳುಗಿ ಹೋಗಿದ್ದಾರೆ. ವಾಸ್ತವಿಕವಾಗಿ ವಿಷಯ ಸುಖವೆಂಬುದು ಒಂದು ಭ್ರಮೆಯಾಗಿದ್ದರೂ, ಪ್ರಾಪಂಚಿಕ ಅಸ್ತಿತ್ವದಲ್ಲಿ ಇದನ್ನು ಅಲ್ಲಗೆಳೆಯಲಾಗದು.ವಿಷಯಗಳ ಬಲವಾದ ಸೆಳೆತವನ್ನು ತಡೆಯುವುದು ಅತಿ ಕಷ್ಟ ! ಒಂದೊಂದು ವಿಷಯದ ಆಶೆಗಾಗಿ ಒಂದೊಂದು ವಿಧದ ಜೀವ ಬಲಿಯಾಗುತ್ತದೆ! ಪರವಶವಾಗುತ್ತದೆ! ಬೇಟೆಗಾರನ ಕೊಳಲಿನ ನಾದಕ್ಕೆ ಮರುಳಾಗಿ ಜಿಂಕೆ ಬೇಟೆಗಾರನ ವಶವಾಗಿ ಬಲಿಯಾಗುತ್ತದೆ. ಹಾವಾಡಿಗನ ಪುಂಗಿಯ ನಾದಕ್ಕೆ ಮರುಳಾಗಿ ಹಾವು ಅವನ ವಶವಾಗುತ್ತದೆ! ಗಂಡು ಮದ್ದಾನೆಯನ್ನು ಹಿಡಿಯಲು ಗುಂಡಿ ತೋಡಿ  ಲೆ ಹೊದಿಕೆಯಿಂದ ಮುಚ್ಚಲಾಗುವುದು. ಅದರಾಚೆ ಹೆಣ್ಣಾನೆಯನ್ನೋ, ಅದರ ಭಾವಚಿತ್ರವನ್ನೋ ನಿಲ್ಲಿಸಲಾಗುವುದು.

ಹೆಣ್ಣಾನೆಯ ಸ್ಪರ್ಶಸುಖದಾಶೆಗೆ ಒಳಗಾಗಿ ಗಂಡಾನೆ ಮುನ್ನುಗ್ಗಿ ಗುಂಡಿಗೆ ಬೀಳುವುದು! ದೀಪದ ರೂಪದಾಶೆಗೆ ಮರುಳಾಗಿ ಮುಗಿಬಿದ್ದು ಪತಂಗ ಸುಟ್ಟು ಕರಕಲಾಗುವುದು! ಮೀನುಗಾರನ ಗಾಳದಲ್ಲಿನ ಆಹಾರದ ರುಚಿ-ರಸಕ್ಕೆ ಮರುಳಾಗಿ ಮೀನು ಬಲೆಗೆ ಬೀಳುತ್ತದೆ ! ವಾಸನೆಗೆ ಮರುಳಾಗುವ ದುಂಬಿಯು ಕಮಲ ಪುಷ್ಪದಲ್ಲಿ ಕುಳಿತು ಪರಿಮಳವನ್ನು ಹೀರುತ್ತಾ ತನ್ನನ್ನೇ ಮರೆಯುವುದು! ರಾತ್ರಿಯಾಗುತ್ತಲೇ ಕಮಲ ಮುದುಡುವುದು.ಬೆಳಗಾಗುವುದರೊಳಗೆ
ದುಂಬಿ ಸತ್ತೇ ಹೋಗುವುದು! ಹೀಗಿರುವಾಗ ಐದೂ ವಿಷಯಗಳ ವ್ಯಾಮೋಹಕ್ಕೊಳಗಾದ ಮಾನವನ ಗತಿ ಏನಾಗಬೇಡ! ಆದ್ದರಿಂದಲೇ ಆದಿಶಂಕರರು ತಮ್ಮ ವಿವೇಕ ಚೂಡಾಮಣಿಯಲ್ಲಿ ಹೀಗೆ ಹೇಳಿದ್ದಾರೆ;

ಶಬ್ದಾದಿಭಿಃ ಪಂಚಭಿರೇವ ಪಂಚ
ಪಂಚತ್ವಮಾಪುಃ ಸ್ವಗುಣೇನ ಬದ್ಧಾಃ|
ಕುರಂಗ ಮಾತಂಗಪತಂಗಮೀನ
ಭೃಂಗಾಃ ನರಃ ಪಂಚಭಿರಂಚಿತಃ ಕಿಮ್||

ಶಬ್ದಾದಿ ಐದು ವಿಷಯವಶದಿಂದಾಗಿ ಜಿಂಕೆ ಆನೆ ಪತಂಗ ಮೀನು ದುಂಬಿಗಳು ಸತ್ತು ಹೋಗುತ್ತವೆ! ಐದಕ್ಕೂ ವಶನಾದ ಮಾನವನು ಏನಾಗುವನು? ಊಹಿಸಿ.

ಈ ವಿಷಯಗಳು ಎಂದಿಗೂ ಪೂರ್ಣತೃಪ್ತಿ ನೀಡುವುದಿಲ್ಲ. ಅನುಭವಿಸಿದಂತೆಲ್ಲ ಮತ್ತೆ ಮತ್ತೆ ಬೇಕೆನಿಸುತ್ತವೆ. ಒಂದರ ನಂತರ ಮತ್ತೊಂದರ ಆಶೆ ಚಿಗುರುತ್ತದೆ.ಇವು
ಶಾಶ್ವತವಾಗಿ ಇರುವವುಗಳಲ್ಲ. ಇಂದಿದ್ದು,ನಾಳೆ ಇಲ್ಲವಾಗುತ್ತವೆ. ಆದಾಗ್ಯೂ ಬಲವಾಗಿ ಸೆಳೆಯುತ್ತವೆ. ಅನುಭವಿಸಿದಂತೆಲ್ಲ ನಮ್ಮ ಅಂತಃಶಕ್ತಿಯನ್ನೆಲ್ಲ ಹಿಂಡಿ ಹಿಪ್ಪೆಯಾಗಿಸುತ್ತವೆ! ಆದ್ದರಿಂದಲೇ ನಚಿಕೇತನು ಯಮಧರ್ಮರಾಯನಿಗೆ ಹೀಗೆ ಹೇಳಿದನು;

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್
ಸರ್ವೇಂದ್ರಿಯಾಣಾಂ ಜರಯಂತಿ ತೇಜಃ|
ನ ವಿತ್ತೇನ ತರ್ಪಣೀಯೋ ಮನುಷ್ಯಃ (ಕಠೋಪನಿಷತ್, ೧-೧-೨೬,೨೭)

“ಯಮರಾಜ ,ನೀನು ಹೇಳುವ ಶತಾಯುಷ್ಯದ ಮಕ್ಕಳು ಮೊಮ್ಮಕ್ಕಳು, ಆನೆ ಕುದುರೆ ರಥ ಪಶುಸಂಪತ್ತು, ಬಂಗಾರ, ಭೂಮಿ,ಹಣ, ಇಚ್ಛಿಸಿದಷ್ಟು ಆಯುಷ್ಯ,ಚಕ್ರಾಧಿಪತ್ಯ, ಮಾನವನಿಗೆ ದುರ್ಲಭರಾದ ದೇವಲೋಕದ ರಂಭೆ ಊರ್ವಶಿಯರಂಥ ಸ್ತ್ರೀಯರ ಸುಖ, ಇದೆಲ್ಲ ಮರ್ತ್ಯನಿಗೆ ನಾಳೆಯವರೆಗೆ ಇರುವಂಥದ್ದು, ಇಂದಲ್ಲ ನಾಳೆ ಅಗಲುವಂಥದ್ದು. ಇವು ಎಲ್ಲ ಇಂದ್ರಿಯಗಳ ತೇಜಸ್ಸನ್ನು ನಾಶಗೊಳಿಸುತ್ತವೆ. ಹಣದಿಂದ ಈ ವಿಷಯಗಳಿಂದ ಮನುಷ್ಯ ತೃಪ್ತನಾಗಲಾರ” – ಎಂದು.ಹೀಗಾಗಿಯೇ ಉನ್ನತಿ ಸಾಧಿಸುವ ಸಾಧಕನು ವಿಷಯದಾಸನಾಗಕೂಡದು.
ವಿಷಯಂ ವಿಷವತ್ತ್ಯಜ = ವಿಷಯವನ್ನು ವಿಷದಂತೆ ತೊರೆದು ಬಿಡು- ಎಂದು ಹೇಳಲಾಗಿದೆ.

ಆದರೆ ತಿಳಿದು ನೋಡಿದರೆ ಈ ವಿಷಯಗಳು ಜಡವಾದವುಗಳು. ಸಾಮಾನ್ಯ ಚೇತನಸ್ವರೂಪದವುಗಳು. ತಮ್ಮ ಮತ್ತು ಪರರ ಜ್ಞಾನವಿಲ್ಲದವುಗಳು ಜಡಗಳು.ಇವು ತಮ್ಮಷ್ಟಕ್ಕೆ ತಾವು ಎದ್ದು ಯಾರ ಬಳಿಗೂ ಸಾಗುವುದಿಲ್ಲ, ಸುಳಿಯುವುದಿಲ್ಲ. ತಮ್ಮಷ್ಟಕ್ಕೆ ತಾವಿರುತ್ತವೆ. ಬುದ್ಧಿರೂಪ ಚೈತನ್ಯವು ಮನಸ್ಸಿನೊಂದಿಗೆ ಬೆರೆತು, ಮನಸ್ಸು ಇಂದ್ರಿಯಗಳೊಂದಿಗೆ


ಬೆರೆತು, ಇಂದ್ರಿಯಗಳು ವಿಷಯಗಳೊಂದಿಗೆ ಬೆರೆತಾಗ ವಿಷಯಗಳ ಜ್ಞಾನವುಂಟಾಗುತ್ತದೆ.ಆಗ ಮಾತ್ರ ವಿಷಯವು ತನಗೆ ಇಷ್ಟವೋ ಅನಿಷ್ಟವೋ ಉದಾಸೀನವೋ ಎನಿಸುತ್ತದೆ. ಇದನ್ನೇ ತಾರ್ಕಿಕರು ” ಆತ್ಮಾಮನಸಾ ಸಂಯುನಕ್ತಿ, ಮನ ಇಂದ್ರಿಯೇಣ, ಇಂದ್ರಿಯಮರ್ಥೇನ, ತತಃ ಪ್ರತ್ಯಕ್ಷಂ = ಆತ್ಮವು ಮನದೊಂದಿಗೆ, ಮನ ಇಂದ್ರಿಯದೊಂದಿಗೆ, ಇಂದ್ರಿಯ ಅರ್ಥದೊಂದಿಗೆ ಬೆರೆತು ಪ್ರತ್ಯಕ್ಷವಾಗುತ್ತದೆ” ಎಂದು ಹೇಳಿದ್ದಾರೆ. ಯಾವ ವಿಷಯವೂ ತನ್ನಷ್ಟಕ್ಕೆ ತಾನು ಇಷ್ಟವೂ ಅಲ್ಲ, ಅನಿಷ್ಟವೂ ಅಲ್ಲ, ಉದಾಸೀನವೂ ಅಲ್ಲ. ತನಗೆ ಅನುಕೂಲವಾದದ್ದು ಇಷ್ಟವೆನಿಸುತ್ತದೆ, ಅನಾನುಕೂಲವಾದದ್ದು ಅನಿಷ್ಟವೆನಿಸುತ್ತದೆ. ಎರಡೂ ಅಲ್ಲದ್ದು ಉದಾಸೀನವೆನಿಸುತ್ತದೆ. ಸಕ್ಕರೆ ನಮಗೆ ಇಷ್ಟ, ಆದರೆ ಅದು ಮಧುಮೇಹಿಗಳಿಗೆ ಅನಿಷ್ಟ!

ಸಾಧಕನಿಗೆ ಹೆಣ್ಣು,ಹೊನ್ನು, ಮಣ್ಣು, ಮಾಯೆಯಾಗಿ ಕಾಡುತ್ತದೆ ಎನ್ನುತ್ತೇವೆ. ಆದರೆ ನಿಜಾರ್ಥದಲ್ಲಿ ಇದಾವುದೂ ಮಾಯೆಯಲ್ಲ. ಬದಲಾಗಿ ಚಂಚಲವೃತ್ತಿಯ ನಮ್ಮ ಮನಸ್ಸೇ ನಿಜವಾದ ಮಾಯೆ! ಅಲ್ಲಮ ಪ್ರಭುವಿನ ಶೂನ್ಯ ಸಂಪಾದನೆಯ ವಚನವೊಂದು ಹೀಗಿದೆ:

ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ.
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರಾ! ಎಂದು.

ಆದ್ದರಿಂದ ವನಿತಾದಿವಿಷಯಗಳು ಮಾಯೆಯಲ್ಲ. ಅವುಗಳ ಮೇಲಿನ ಮನದ ಆಶೆಯೇ ಮಾಯೆ. ಇದು ಅತ್ಯಂತ ಪ್ರಬಲ! ಶಬ್ದಾದಿ ವಿಷಯಗಳು ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿರುತ್ತವೆ. ಅವು ಇಂದ್ರಿಯಗಳೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ಬೇಕು-ಬೇಡವೆನಿಸುತ್ತವೆ, ಸುಖ ದುಃಖವನ್ನುಂಟು ಮಾಡುತ್ತವೆ. ಆದರೆ ಮನಸ್ಸು ಹಾಗಲ್ಲ. ಅದಕ್ಕೆ ವಿಷಯಗಳ ನೇರ ಸಂಪರ್ಕವೇ ಬೇಕೆಂದಿಲ್ಲ. ಈ ಹಿಂದೆ ಇಂದ್ರಿಯಗಳೊಡನೆ ಸಂರ್ಪಕ ಪಡೆದು, ಸಂಸ್ಕಾರರೂಪದಲ್ಲಿ ಮನಸ್ಸಿನಲ್ಲಿ ಹುದುಗಿರುವ ಸೂಕ್ಷ್ಮ ವಿಷಗಳೇ ಸಾಕು! ಮನಸ್ಸಿಗೆ ನಿರ್ದಿಷ್ಟ ಪ್ರದೇಶ, ಸೀಮೆ ಇಲ್ಲ! ಎಲ್ಲೆಂದರಲ್ಲಿ ನುಗ್ಗುವುದು! ಸುಪ್ತ ಸೂಕ್ಷ್ಮ ವಿಯಷಗಳೊಂದಿಗೆ ಬೆರೆತು, ಸುಖ ದುಃಖಗಳ ಚೆಲ್ಲಾಟವಾಡುವುದು! ವಿಷಯಗಳನ್ನು ದೂರಿಟ್ಟರೂ ವಿಷಯಸಂಗ, ವಿಷಯರತಿ, ವಿಷಯಾಸಕ್ತಿ, ವಿಷಯಗಳ ಸುಖ ದುಃಖ ಕ್ಷೋಭೆ ತಪ್ಪದು! ಕರ್ಪೂರ ಸುಟ್ಟರೂ ಕರ್ಪೂರದ ವಾಸನೆ ಉಳಿಯುವಂತೆ,ಬೆಳ್ಳುಳ್ಳಿ ಕುಟ್ಟಿದ ಕಲ್ಲಿಗೆ ಬೆಳ್ಳುಳ್ಳಿ ವಾಸನೆ ಮೆತ್ತಿದಂತೆ, ವಿಷಯಗಳಿಲ್ಲದೆಯೂ ಮನದಲ್ಲಿ ವಿಷಯವಾಸನೆ ನೆಲೆ ಕಟ್ಟುತ್ತದೆ! ವಿಷಯಗಳನ್ನು ದೂರಿಡಬಹುದು, ಮನೆ ಮಾರು ತೊರೆಯಬಹುದು, ಬಗೆ ಬಗೆಯ ಗಡ್ಡ ಜಡೆ ಜರತಾರಿ ವೇಷ ಪೋಷಾಕು ಧರಿಸಬಹುದು! ಆದರೆ ಮನದೊಳಗಿನ ವಿಷಯವಾಸನೆಯನ್ನು ಮೆಟ್ಟಿ ನಿಲ್ಲುವುದು ಬಲು ಕಷ್ಟ! ದುಸ್ಸಾಧ್ಯ! ಆದ್ದರಿಂದಲೇ ಭಗವದ್ಗೀತೆಯಲ್ಲಿ

ನಿಗ್ರಹಃ ಕಿಂ ಕರಿಷ್ಯತಿ?[೩.೩೩]

ಜೀವರಾಶಿಗಳೆಲ್ಲ ಪ್ರಕೃತಿವಶವಾಗಿ ಸಾಗುತ್ತವೆ. ನಿಗ್ರಹ = ತಡೆಯೊಡ್ಡುವಿಕೆ ಏನನ್ನು ತಾನೇ ಸಾಧಿಸಬಹುದು? ಅದರಿಂದೇನು ಪ್ರಯೋಜನ? ಏನು ಮಾಡಲಾದೀತು! ಎಂಬ ಹತಾಶಭಾವವನ್ನು ವ್ಯಕ್ತಪಡಿಸಲಾಗಿದೆ. ಆದಾಗ್ಯೂ, ಕರ್ಪೂರ ಬೆಳ್ಳುಳ್ಳಿವಾಸನೆಗಳು ಕಾಲ ಕಳೆದಂತೆ ಲಯವಾಗಿ ಹೋಗುವಂತೆ, ಮಾನಸಿಕ ವಿಷಯವಾಸನೆಯೂ ಇಂಗಿಹೋಗುತ್ತದೆ, ಎಂಬ ಭರವಸೆಯನ್ನೂ ಅಲ್ಲಿ ನೀಡಲಾಗಿದೆ:

ವಿಷಯಾಃ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ|
ರಸವರ್ಜ್ಯಂ ರಸೋಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ||(ಭಗವದ್ಗೀತೆ – 2-59)

ನಿರಾಹಾರಿಯಾದವನಿಂದ ವಿಷಯಗಳು ಹಿಂದಿರುಗುವವು.ವಿಷಯಗಳಿಲ್ಲದೆಯೂ ಉಳಿದ ವಿಷಯವಾಸನೆಯು ಪರತತ್ತ್ವದ ಸಾಕ್ಷಾತ್ಕಾರದಿಂದ ನಿವೃತ್ತಿಯಾಗುತ್ತದೆ.
ಆದ್ದರಿಂದ ವಿಷಯಗಳನ್ನು ಬಿಡುವುದು ಮಾತ್ರ ಮುಖ್ಯವಲ್ಲ. ವಿಷಯವಾಸನೆಯನ್ನು ಬಿಡುವುದು ಅತಿಮುಖ್ಯ. ವಿಷಯವಾಸನೆ ಇದ್ದರೆ, ವಿಷಯವನ್ನು ಬಿಟ್ಟರೂ, ವಾಸನಾಮಯಮನಸ್ಸು ಇಂದ್ರಿಯಗಳನ್ನು ವಿಷಯಗಳತ್ತ ಪ್ರಚೋದಿಸುತ್ತದೆ. ಇಂಥ ಇಂದ್ರಿಯಗಳು ಹದ್ದಿನ ಕಣ್ಣಿನಂತೆ ಸದಾ ವಿಷಯಗಳತ್ತ ಈಣುಕಿಸುತ್ತವೆ.ಇ ಸಂಧಿ-ಗೊಂದಲಗಳನ್ನು ಹುಡುಕಿ ಬಳಸುತ್ತವೆ! ಅದಾಗದಂತೆ ತಡೆಯುವುದೆಂದರೆ ಮನೋವಾಸನೆಯನ್ನು ಗೆಲ್ಲುವುದೇ ಎಂದರ್ಥ! ಮಗುವು ಬೆಂಕಿಯನ್ನು ಮುಟ್ಟುತ್ತಿರುವಾಗ, ಆಟಿಗೆಯ ವಸ್ತುವನ್ನು ಕೈಗಿತ್ತರೆ, ಬೆಂಕಿಯನ್ನು ಮುಟ್ಟುವುದನ್ನು ತಂತಾನೇ ನಿಲ್ಲಿಸುವುದು! ಮನಸ್ಸನ್ನು ಪರಮಾತ್ಮ-ಪರತತ್ತ್ವದಲ್ಲಿ ನೆಲೆ ನಿಲ್ಲಿಸಿದಾಗ, ಮನಸ್ಸು ಇಂದ್ರಿಯಗಳನ್ನು ಪ್ರಚೋದಿಸದು! ಇಂದ್ರಿಯಗಳಿಗೆ ವಿಷಯಗಳು ಗೋಚರಿಸಿದರೂ ಪರಮಾತ್ಮಭಾವವೇ ಗೋಚರಿಸುವುದು.

ಯದಾ ಸರ್ವೇ ಪ್ರಮುಚ್ಯಂತೇ ಕಾಮಾಃ ಯೇಸ್ಯ ಹೃದಿಶ್ರಿತಾಃ|
ಅಥ ಮರ್ತ್ಯೋಮೃತೋಭವತ್ಯತ್ರ ಬ್ರಹ್ಮ ಸಮಶ್ನುತೇ|| {ಕಠೋಪನಿಷತ್-೬-೧೪]

ಯಾವಾಗ ಇವನು ಹೃದಯದಲ್ಲಿ ನೆಲೆಸಿರುವ ಕಾಮನೆಗಳಿಂದ ಪಾರಾಗುವನೋ, ಆಗ ಮರ್ತ್ಯ=ಮನುಷ್ಯನು ಅಮರ್ತ್ಯ=ಅಮರ, ಅಮೃತನಾಗುತ್ತಾನೆ. ಇಲ್ಲಿಯೇ ಈ ಜನ್ಮದಲ್ಲಿಯೇ ಬ್ರಹ್ಮವನ್ನು ಪರಮಾತ್ಮತತ್ತ್ವವನ್ನು ಪಡೆದುಕೊಳ್ಳುತ್ತಾನೆ, ಅನುಭವಿಸುತ್ತಾನೆ,ಪರಮಾತ್ಮನೇ ಆಗಿ ಉಳಿಯುತ್ತಾನೆ, ಎಂದು ಕಠೋಪನಿಷತ್‌ ವಿವರಿಸುತ್ತದೆ.

ಏವಂ ಹ ವೈ ತತ್ಸರ್ವಂ ಪರೇ ದೇವೇ ಮನಸ್ಯೇಕೀಭವತಿ|
ತೇನ ತರ್ಹ್ಯೇಷ ಪುರುಷೋ ನ ಶೃಣೋತಿ ನ ಪಶ್ಯತಿ ನ ಜಿಘ್ರತಿ ನ ರಸಯತೇ ನ ಸ್ಪೃಶತೇ ನಾಭಿವದತೇ ನಾದತ್ತೇ ನಾನಂದಯತೇ ನ ವಿಸೃಜತೇ ನೇಯಾಯತೇ ಸ್ವಪಿತೀತ್ಯಾಚಕ್ಷತೇ|| {ಪ್ರಶ್ನೋಪನಿಷತ್-೪-೨]

ವಿಷಯ ಇಂದ್ರಿಯ ಸಮೂಹವೆಲ್ಲ ಪರಮದೇವನಾದ ಮನಸ್ಸಿನಲ್ಲಿ ಒಂದಾಗುತ್ತವೆ. ಆದುದರಿಂದ ಆಗ ಆ ಪುರುಷ ಕೇಳುವುದಿಲ್ಲ, ನೋಡುವುದಿಲ್ಲ, ಮೂಸುವುದಿಲ್ಲ, ರುಚಿ ನೋಡುವುದಿಲ್ಲ, ಸ್ಪರ್ಶಿಸುವುದಿಲ್ಲ, ಮಾತನಾಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ, ಆನಂದಪಡುವುದಿಲ್ಲ, ಬಿಡುವುದಿಲ್ಲ, ಹೋಗುವುದಿಲ್ಲ. ಜನರು ಆತನನ್ನು “ನಿದ್ರಿಸುತ್ತಿದ್ದಾನೆ” ಎಂದು ಹೇಳುತ್ತಾರೆ- ಎಂದು ಪ್ರಶ್ನೋಪನಿಷತ್ತಿನಲ್ಲಿ ಪಿಪ್ಪಲಾದನು ಗಾರ್ಗ್ಯನಿಗೆ ವಿವರಿಸಿದ್ದಾನೆ. ಅದರಂತೆ ಎಲೈ ತಮ್ಮಗಳಿರಾ! ಹಣ್ಣು ಬಿಟ್ಟರೆ ಸಾಲದು,ಕಣ್ಣು ಮತ್ತೆ ಮತ್ತೆ ನೋಡುವುದು! ಕಣ್ಣನ್ನೂ ಮುಚ್ಚಬಹುದು! ಮನಸ್ಸು ಹಣ್ಣುಗಳತ್ತ ಹರಿಯುತ್ತಲೇ ಇರುವುದು! ಇದಕ್ಕಾಗಿ ಈಶ್ವರಧ್ಯಾನ, ಆತ್ಮಸಾಕ್ಷಾತ್ಕಾರದ ಸಾಧನೆಗೈಯ್ಯಬೇಕು! ಆಗ ಬ್ರಹ್ಮಾನಂದ ಪ್ರಕಟವಾಗಿ ಚಿತ್ತವು ಅಲ್ಲಿ ಮುಳುಗಿ ಹೋಗುವುದು. ಆಗ ವಿಷಯವಾಸನೆ ಸಂಪೂರ್ಣ ನಾಶವಾಗುವುದು. ಈಗ ನೀವು ಸಾಕಷ್ಟು ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ನಡೆಯಿರಿ-ಎಂದು. ಸಿದ್ಧನ ಈ ಮಾತನ್ನು ಕೇಳಿ ಹುಡುಗರೆಲ್ಲರೂ ಒಪ್ಪಿಗೆ ಸೂಚಿಸಿ ಮನೆಯ ಕಡೆಗೆ ಹೆಜ್ಜೆ ಹಾಕಿದರು. ನಾವು ಕೂಡಾ ಸದ್ಗುರು ಶ್ರೀ ಸಿದ್ದಾರೂಢರ ಈ ಉಪದೇಶದಂತೆ ನಡೆದು ಸಾಧನೆ ಮಾಡಿ ನಮ್ಮ ಚಂಚಲ ಮನಸ್ಸನ್ನು ಗೆಲ್ಲೋಣ, ಜೀವನದ ನಿಜವಾದ ಸುಖವನ್ನು ಸವಿಯೋಣ!

Girl in a jacket
error: Content is protected !!