ರೀಲ್ ಮತ್ತು ರಿಯಲ್

Share

           ರೀಲ್ ಮತ್ತು ರಿಯಲ್

ಆ ನಮ್ಮ ಊರಿನ ಅಂದ ಬಣ್ಣಿಸಲು ಬಲು ಸೊಗಸು. ಮೊದಲಿಗೇ ಒಂದು ಬಾವಿ ಇತ್ತು. ಅದು ಇಷ್ಟು ಸುಂದರವಾಗಿತ್ತೆಂದರೆ ಅದು ಥೇಟ್ ಗೋಡೆ ಗಡಿಯಾರದ ತರ ಇತ್ತು. ಗಡಿಯಾರದ ಕೆಳಭಾಗದಂತೆ ಇರುವ ಭಾಗದಲ್ಲಿ ಮೆಟ್ಟಿಲುಗಳು ಮಧ್ಯದಲ್ಲಿರುವ ಸಂಖ್ಯೆಗಳ ದುಂಡಾದ ಭಾಗ ಬಾವಿಯ ನೀರು ಇದ್ದಂತ ಸುಂದರ ಬಾವಿ. ಅದರ ಪಕ್ಕ ಸ್ವಲ್ಪವೇ ಜಾಗ ಅಂದರೆ ಒಂದು ಮೀ. ಜಾಗ ಬಿಟ್ಟಿದ್ದರು ಅಲ್ಲಿ ಒಂದು ಮನೆ ಇತ್ತು. ಅದರಲ್ಲಿ ಯಾರೂ ವಾಸಿಸುತ್ತಿರಲಿಲ್ಲವಾದ್ದರಿಂದ ಅದನ್ನು ‘ದೆವ್ವದ ಮನೆ’ ಎಂದು ಮಕ್ಕಳು ನಾವೇ ನಾಮಕರಣ ಮಾಡಿದ್ದೆವು.

ಬಾವಿಯ ಬಲಗಡೆಗೆ ಒಂದೆರಡು ಮರಗಳು ಇದ್ದವು ಗುಂಪಾಗಿ. ಮತ್ತೂ ಈಕಡೆ ಬಂದರೆ ಅಶ್ವತ್ಥ ಕಟ್ಟೆ ಇತ್ತು. ಅಲ್ಲಿ ಅರಳಿ ಮರಗಳು ಎರಡಿದ್ದವು. ಕಟ್ಟೆಯ ಸುತ್ತಲಿನ ನೆಲವನ್ನು ಸಿಮೆಂಟ್ ಮಾಡಿಸಿ ಬಹಳ ಶಿಸ್ತಿನಿಂದ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಾಗರಕಲ್ಲಿನ ವಿಗ್ರಹಗಳು ಮೂರಿದ್ದವು. ಅಲ್ಲಿಂದ ಊರಿನ ಕಡೆ ದಾರಿ ಮುಂದುವರೆದರೆ ಶಾಲೆಯ ದೊಡ್ಡ ಮೈದಾನವಿತ್ತು. ಮೈದಾನದದಿಂದ ದಾರಿಗಂಟಿದಂತೆ ಒಂದು ಜಾಲಿಯ ಮರ ದೊಡ್ಡದಾಗಿ ತನ್ನ ತುಂಬುಕೈಗಳನ್ನು ಚಾಚಿ ಸುಂದರವಾಗಿ ಕಾಣುತ್ತಿತ್ತು. ಆಜಾಲಿ ಮರ ಈಗಲೂ ನನಗೆ ನೆನಪಾಗುತ್ತದೆ. “ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ ಜಾಲಿಯ ಮರವು ನೆರಳಲ್ಲಾ ಮಗಳೇ ತವರೀನ ಮನೆಯು ಸ್ಥಿರವಲ್ಲಾ ” ಅನ್ನುವ ಜಾನಪದ ಸಾಲು ಕೇಳಿಸಿಕೊಂಡಾಗಲೆಲ್ಲಾ ‘ಆ ಮರದಲ್ಲಿ ನೆರಳಿತ್ತು. ಯಾಕೆ ಹಾಗೇ ಹೇಳ್ತಿದ್ದಾರೆ ’ ಅನ್ನಿಸುತ್ತಿತ್ತು. ನಾವು ಶಾಲೆಯಲ್ಲಿ ಪಿ.ಟಿ. ಪೀರಿಯಡ್ ಗೆ ಆಟವಾಡಲು ಬಂದಾಗ ಸುಸ್ತಾಗಿ ಆ ನೆರಳಲ್ಲಿ ಬಂದು ಕೂಡುತ್ತಿದ್ದೆವು. ಈಗಲೂ ನಾನು ಕೆಲಸ ಮಾಡುತ್ತಿರುವ ಶಾಲೆಯ ವೈದಾನದಲ್ಲೂ ಜಾಲಿಯ ಮರವಿದೆ. ಅಲ್ಲಿ ದಾರಿಹೋಕರು, ಮತ್ತು ಹತ್ತಿರದ ಹಳ್ಳಿಯ ಖಾಲಿ ಇರುವ ಹುಡುಗರು , ದನಗಾಹಿಗಳು ಆ ಮರದ ನೆರಳಲ್ಲಿ ಹರಟುತ್ತಿರುತ್ತಾರೆ. ನೆರಳು ನೀಡದ ಮರಗಳೇ ಇಲ್ಲ. ಆದರೆ ಸರಿಯಾಗಿ ಸೂಕ್ಷ್ಮವಾಗಿ ಯೋಚಿಸಿದಾಗ ತಿಳಿಯಿತು- ‘ಜಾಲಿಯ ಮರ ನೆರಳು ನೀಡುತ್ತದೆ ನಿಜ ಆದರೆ ಅದರ ಕೆಳಗೆ ಬೀಳುವ ಮುಳ್ಳುಗಳನ್ನು ಗಮನಿಸಿ ಆ ನೆರಳಿಗೆ ಹೋಗಿ ಮೈಯ್ಯೊಡ್ಡಬೇಕು’ ಎಂಬುದಂತೂ ಸತ್ಯ.


ಅದೇ ಮೈದಾನದಲ್ಲಿ ಒಂದು ಮೂಲೆಯಲ್ಲಿ ಆಗತಾನೇ ಒಂದು ಸಿನಿಮಾ ಟೆಂಟ್ ಶುರುವಾಗಿತ್ತು. ಅದು ಖಾದರ್ ತಾತನದು ಅಂತ ನಾವೆಲ್ಲಾ ತಿಳಿದಿದ್ದೆವು. ಯಾಕೆಂದರೆ ಅಲ್ಲಿ ಟಿಕೆಟ್ ನೋಡಿ ಒಳಗೆ ಬಿಡುತ್ತಿದ್ದದ್ದು ಖಾದರ್ ತಾತನೇ. ಊರಿನಿಂದ ಚಿಕ್ಕಪ್ಪ ಚಿಕ್ಕಮ್ಮ ಬಂದರೆ ಸಿನಿಮಾ ಚಿನ್ನಾಗಿ ಇದ್ದು ಮನೆಯಲ್ಲಿ ಹೊರಡಲು ಅನುವಾದರೆ ನಾವೂ ಮಕ್ಕಳೆಲ್ಲಾ ಹಠ ಮಾಡುತ್ತಿದ್ದೆವು. ಆಗ ಅಪ್ಪಾಜಿ “ಆಯಿತು ಬನ್ನಿ ” ಎಂದು ಕರೆದುಕೊಂಡು ಹೋಗುತ್ತಿದ್ದರು. ಖಾದರ್ ತಾತ ಅಪ್ಪಾಜಿಗೆ ಪರಿಚಯವಿದ್ದ ಕಾರಣ ಚಿಕ್ಕ ಮಕ್ಕಳಿಗೆ ಹಾಗೇ ಫ್ರೀಯಾಗಿ ಕಳಿಸುತ್ತಿದ್ದು, ದೊಡ್ಡವರಿಗೆ ಮಾತ್ರ ಟಿಕೆಟ್ ನೋಡುತ್ತಿದ್ದರು. ನಾವು ಹೋಗುವಾಗ ಅಲ್ಲಿ ಕೂರಲು ಗೋಣಿಚೀಲ ತೆಗೆದುಕೊಂಡು ಹೋಗುತ್ತಿದ್ದೆವು. ಚಿಕ್ಕವರು ನೆಲದಲ್ಲಿ ಕೂರುವುದು. ದೊಡ್ಡವರು ಉದ್ದವಾಗ ಹಲಗೆಯಿಂದ ಜೋಡಿಸಿ ಮಾಡಿದ ಬೆಂಚುಗಳ ಮೇಲೆ ಕೂತು ಸಿನಿಮಾ ನೋಡುವುದು. ಟೆಂಟ್ ಒಳಗಡೆ ಹೋದರೆ ನಾನು ಅಣ್ಣ, ತಂಗಿಯರಿಗೆ ಹೊಸದಾದ ಮಾಯಾ ಲೋಕಕ್ಕೆ ಹೋದಂತೆ ಸೋಜಿಗವೆನಿಸುತ್ತಿತ್ತು. ನೀಟಾಗಿ ಗೋಣಿಚೀಲ ಹಾಸಿಕೊಂಡು ಚಪ್ಪನಕಾಲು ಹಾಕಿಕೊಂಡು ಕೂರುತ್ತಿದ್ದೆವು. ಸಿನೀಮಾ ಪ್ರಾರಂಭದಲ್ಲಿ ದೇವರ ಪಟ ಬಂದು ಪ್ರೊಡಕ್ಷನ್ ಮುಂತಾದ ವಿವರಣೆ ಬಂದು ಮುಗಿಯುವವರೆಗೂ ಆ ದೇವರು ನಿಜವಾಗಲೂ ನಮ್ಮೆದುರು ಇರುವಂತೆ ಭ್ರಮಿಸಿ ಕೈಮುಗಿದು ಭಕ್ತಿಯಿಂದ ನೋಡುತ್ತಿದ್ದದು ಈಗಲೂ ನೆನಪಾದರೆ ನಗು ಬರುತ್ತದೆ. ಫಿಲಂ ನ ಮಧ್ಯದಲ್ಲಿ ಕಡಲೆಕಾಯಿ ಮಾರಲು ಬರುತ್ತಿದ್ದರು. ಚಿಕ್ಕಪ್ಪ ನಮ್ಮ ನಾಲ್ಕೂ ಜನಕ್ಕೆ ಒಂದು ಪೊಟ್ಟಣ ಕೊಡಿಸುತ್ತಿದ್ದರು. ಕಡಲೆಕಾಯಿ ಆಚೆ ತಿನ್ನುವ ರುಚಿಗಿಂತ ಫಿಲಂ ನೋಡುತ್ತಾ ತಿನ್ನುವಾಗ ತುಂಬಾ ರುಚಿ ಅನ್ನಿಸುತ್ತಿತ್ತು. ಫಿಲಂ ಲ್ಲಿ ಹೊಡೆದಾಟ ಬಂದರೆ ಹೆದರಿಕೊಂಡು, ಯಾರಾದರೂ ಅತ್ತರೆ ಅತ್ತು ಕಣ್ಣೀರ್ಗರೆದು, ನಕ್ಕರೆ ಏನೂ ಅರ್ಥವಾಗದಿದ್ದರೂ ನಗುತ್ತಿದ್ದೆವು. ಈಗಿನ ಮಕ್ಕಳಿಗೆ ಹೋಲಿಸಿಕೊಂಡು ಅದನ್ನೆಲ್ಲಾ ನೆನೆದರೆ ನಾವೆಷ್ಟು ಮುಗ್ಧರು ಅನ್ನಿಸುತ್ತದೆ.


ಒಮ್ಮೆ ‘ನಾಗಕನ್ಯೆ’ ಫಿಲಂ ಟೆಂಟ್ ಲ್ಲಿ ಹಾಕಿದ್ದರು. ಆ ಚಿತ್ರದಲ್ಲಿ ಮೊದಲಿಗೇ ನೆಲಮಾಳಿಗೆಯಲ್ಲಿ ಮಂತ್ರವಾದಿ. ಸುತ್ತಲೂ ಗೋಡೆಯಲ್ಲಿ ಕ್ಷುದ್ರ ದೇವಿತೆಗಳ ಚಿತ್ರಪಟಗಳು. ಮಂತ್ರವಾದಿ ಆ ದೇವತೆಗಳಿಗೆ ಕೈಯಿಂದ ಏನನ್ನೋ ಎಸೆದರೆ ಬುಸ್ ಎಂದು ಹೊಗೆ ಮೂಡುವುದನ್ನು ನಾವು ನೀರೊಲೆ ಉರಿಸುವಾಗ ಅದೇ ತರ ಹೊಗೆ ಬಂದರೆ “ಜೈ ಮಹಾಶಕ್ತಿ, ಜೈ ಕಾಪಾಲಿಕಾ” ಎಂದು ಅರಚುತ್ತಾ ಮನೆಯಲ್ಲಿ ಬೈಸಿಕೊಳ್ಳುತ್ತಿದ್ದೆವು. ವಿಷ್ಣುವರ್ಧನ್ ಕುದುರೆಯ ಮೇಲೆ ಬರುವುದು, ಮಂತ್ರವಾದಿಯೊಡನೆ ಇರುವ ಚಂದಲೆ ಹುಣ್ಣಿಮೆಯಂದು ನಾಗರ ಹಾವಾಗುವುದು ಅಂದು ಯಾರನ್ನಾದರೂ ಕಚ್ಚಿ ಸಾಯಿಸುವುದು, ಮಹಾರಾಜ ತನ್ನ ಮಗಳನ್ನು ಹೊರರಾಜ್ಯಕ್ಕೆ ಕಳಿಸುವಾಗ ಡಕಾಯಿತರು ಬಂದು ಹಾದಿಯಲ್ಲಿ ಅವಳನ್ನು ಕದ್ದೋಯ್ಯುವುದು ಅವಳು ಚಾಲಾಕಿತನದಿಂದ ತಪ್ಪಿಸಿಕೊಂಡು ಓಡುವುದು, ಆಗ ವಿಷ್ಣುವರ್ಧನ ಮತ್ತು ಡಕಾಯಿತ ಪ್ರಭಾಕರ್ ಗೆ ಹೊಡೆದಾಟವಾಗಿ ರಾಜಕುಮಾರಿಯನ್ನು ರಕ್ಷಿಸಿ ಒಂದು ಹಾಡು ನಂತರ ಮಂತ್ರವಾದಿಯ ನೆಲಮಾಳಿಗೆಯ ಗುಹೆಗೆ ಹೋಗಿ ಅಲ್ಲಿರುವ ದುಷ್ಟರೊಡನೆ ಹೊಡೆದಾಡುವಾಗ ಅವನು ಪ್ರಜ್ಙೆ ತಪ್ಪಿ ಪ್ರಾಣ ಕಳೆದುಕೊಂಡಂತೆ ಬಿದ್ದು ಬಿಡುತ್ತಾನೆ. ಅಷ್ಟರಲ್ಲಿ ನಾನು ನಿದ್ದೆ ಮಾಡಿದ್ದೆನೋ ಏನೋ ನಾನು ಹೀರೋ ಪ್ರಾಣ ಕಳೆದುಕೊಂಡ ಎಂದು ತಿಳಿದುಕೊಂಡಿದ್ದೆ. ಮುಂದಿನ ಕಥೆ ಗಿಳಿಯಲ್ಲಿ ಪ್ರಾಣ ಇರುವುದು ಆತನ ಮಗಳ ಸಹಾಯದಿಂದ ತಿಳಿದುಕೊಂಡು ಕಡೆಯಲ್ಲಿ ರಾಜಕುಮಾರಿಯನ್ನು ವಿವಾಹವಾಗುವ ಸುಖಾಂತದ ಚಿತ್ರ.


ಬೆಳಗ್ಗೆ ಶಾಲೆಗೆ ಬಂದಾಗ ಗಿರಿಜಾ ಆಕೆಯೂ ನೆನ್ನೆ ಸಿನೀಮಾ ನೋಡಿದ ಬಗ್ಗೆ ರೋಚಕವಾಗಿ ಹೇಳುತ್ತಿದ್ದಳು. ಅವರು ಯಾವುದೇ ಚಿತ್ರ ನೋಡಿದರೂ ಕಣ್ಣಿಗೆ ಕಟ್ಟುವಂತೆ ಕಥೆ ಒಪ್ಪಿಸುತ್ತಿದ್ದಳು. ಅದನ್ನು ಕೇಳಿಸಿಕೊಂಡ ನಾನು ನಾನು ನೋಡಿದಾಗಲೇ ವಿಷ್ಣುವರ್ಧನ್ ಪ್ರಾಣ ಹೋಗಿತ್ತು ॒ಮತ್ತೆ ಹೇಗೆ ಮತ್ತೇ ಬದುಕಿದ? ಎಂಬ ಜೋಜಿಗ ನನಗೆ. ಗಿರಿಜಾ ಗೆ ಕೇಳಿದೆ.. “ಅಯ್ಯೋ ಅವನು ಸಾಯಲ್ವೇ ಇರತಾನೇ ಅಂದಳು. “ಮತ್ತೇ ನೀನು ಸೆಕೆಂಡೆ ಷೋಗೆ ಹೋಗಿದ್ದೆ ಅಲ್ವಾ ಮಂತ್ರವಾದಿ ಮತ್ತೆ ಬಂದಿದ್ದನಾ ? ನಾನು ಹೋಗಿದ್ದ ಸಿನೀಮಾದ ಮುಂದಿನ ಭಾಗ ತಾನೇ ನೀನು ನೋಡಿ ಬಂದಿದ್ದು” ಎಂದು ಕೇಳಿದ್ದೆ. ಅಣ್ಣನಿಗೆ ಮನೆಯಲ್ಲಿ ಈ ವಿಷಯ ಕೇಳಿದ್ದಕ್ಕೆ “ ಲೇ ಪೆದ್ದಿ ಅದು ರೀಲ್ ಇರುತ್ತದೆ. ನಂತರ ಅದನ್ನೇ ತೋರಿಸುವುದು. ಫಸ್ಟ್ ಷೋನೂ ಅದೇ ಸೆಕೆಂಡ್ ಷೋನೂ ಅದೇ ಅಂತ ಎಷ್ಟು ಅರ್ಥ ಮಾಡಿಸಿದರೂ ನನಗಾಗ ಅರ್ಥವಾಗಿರಲಿಲ್ಲ.


ಅಂದಹಾಗೆ ಇನ್ನೊಂದು ವಿಷಯ ಮರೆತೆ ಆ ಟೆಂಡಿನ ಸುತ್ತಮುತ್ತ ಆಟವಾಡುವಾಗ ಆ ಚಿತ್ರಗಳ ರೀಲ್ ಸಿಗುತ್ತಿದ್ದವು ಅವನ್ನು ನೋಡಿ ನೋಡಿ ಫಿಲಂ ನೋಡಿದಂತೆಯೇ ಖುಷಿಪಡುತ್ತಿದ್ದೆವು. ಪೇಪರ್ ಹಾಳೆಯನ್ನು ಸುರುಳಿಯಂತೆ ಸುತ್ತಿಕೊಂಡು ಅದರ ತುದಿಗೆ ಈ ರೀಲ್ ಚಿತ್ರ ಇಟ್ಟು ಫಿಲಂ ನೋಡಿಸುವಂತೆ ಅಣ್ಣ ನಮಗೆಲ್ಲಾ ತೋರಿಸುತ್ತಿದ್ದದ್ದು ಇನ್ನೂ ನೆನಪಿದೆ. ಆ ರೀಲೇ ಬೇರೆ ಬದುಕಿನ ರಿಯಲ್ಲೇ ಬೇರೆ.

Girl in a jacket
error: Content is protected !!