ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ

Share

ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ

ಹಂಪೆಯ ವಿರೂಪಾಕ್ಷ ದೇವಾಲಯದ ಮುಂದಿನ ಬೀದಿಯನ್ನು ವಿರೂಪಾಕ್ಷ ಬೀದಿ, ಪಂಪಾ ರಥವೀದಿ, ಹಂಪೆ ಬಜಾರು ಎಂದೆಲ್ಲಾ ಕರೆಯಲಾಗುತ್ತದೆ. ಇದು ಪಂಪಾವಿರೂಪಾಕ್ಷರ ರಥೋತ್ಸವಕ್ಕಾಗಿ ನಿರ್ಮಿಸಿದ್ದ ರಥವೀದಿ. ಈ ಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳಿದ್ದು, ಇವು ಅಂದಿನ ವ್ಯಾಪಾರ-ವಾಣಿಜ್ಯದ ಮಳಿಗೆಗಳೂ ಆಗಿದ್ದವು. ಇದು ಸುಮಾರು ಒಂದು ಕಿ.ಮೀ ದೂರವಿದ್ದು, ಎದುರು ಬಸವಣ್ಣ ಮಂಟಪದವರೆಗೂ ವಿಸ್ತರಿಸಿತ್ತು. ಬೀದಿಯ ಕೊನೆಗೆ ಎಡಭಾಗದಲ್ಲಿ ವಿಸ್ತಾರವಾಗಿರುವ ಅನೇಕ ಮಂಟಪಗಳಿವೆ. ಈ ಮಂಟಪಗಳು ಹಿಂದೆ ಬಹುದೊಡ್ಡ ಮಠವೇ ಆಗಿದ್ದವು. ಈ ವಿಸ್ತಾರವಾದ ಕಟ್ಟಡ ಕನ್ನಡ ವಿಶ್ವವಿದ್ಯಾಲಯದ ಪ್ರಾರಂಭಿಕ ಚಟುವಟಿಕೆಗಳ ಕಾರ್ಯಾಗಾರವೇ ಆಗಿತ್ತು. ಕುಲಪತಿ-ಕುಲಸಚಿವರಿಂದ ಹಿಡಿದು ಗ್ರಂಥಾಲಯದವರೆಗೆ ಎಲ್ಲ ಇಲಾಖೆ, ವಿಭಾಗ, ವಿದ್ಯಾರ್ಥಿಗಳ ಆಗರವೇ ಇದಾಗಿತ್ತು. ಅದೇ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯಕ್ಕೆ ೧೯೯೨ರ ರಣಮಳೆಯು ಬರಸಿಡಿಲಿನಂತೆ ಎರಗಿತ್ತು. ಈ ಮಳೆಯಿಂದ ವಿಶ್ವವಿದ್ಯಾಲಯವಿದ್ದ ಎಲ್ಲ ಮಂಟಪಗಳನ್ನು ಒಳಗೊಂಡಂತೆ ಇಡೀ ವಿರೂಪಾಕ್ಷ ರಥವೀದಿಯೇ ಪ್ರವಾಹದಲ್ಲಿ ಮುಳುಗಿಹೋಗಿತ್ತೆಂದರೆ ಅದೆಷ್ಟು ನೀರು ಇಲ್ಲಿ ಹರಿದು ಹೋಗಿರಬೇಕು. ಈ ಅನಾಹುತದಲ್ಲಿ ವಿಶ್ವವಿದ್ಯಾಲಯದ ಕಡತಗಳು, ಗ್ರಂಥಾಲಯದ ಪುಸ್ತಕಗಳು ಸೇರಿದಂತೆ ಎಲ್ಲವೂ ಪ್ರವಾಹದಲ್ಲಿ ಮುಳುಗಿಹೋಗಿದ್ದವು. ಇದನ್ನು ಕಂಡ ದಿನಪತ್ರಿಕೆಗಳು ಕನ್ನಡ ವಿಶ್ವವಿದ್ಯಾಲಯವೇ ಮುಳುಗಿಹೋಯಿತೆಂದು ಸುದ್ದಿಮಾಡಿದವು. ಇದಕ್ಕೆ ಉತ್ತರ ನೀಡಿದ ಅಂದಿನ ಕುಲಪತಿಗಳಾದ ಚಂದ್ರಶೇಖರ ಕಂಬಾರರು “ಮುಳುಗಿದ್ದು ವಿಶ್ವವಿದ್ಯಾಲಯವಲ್ಲ, ಕಲ್ಲು ಮಂಟಪಗಳು ಎಂದು ಒತ್ತಿ ಹೇಳಿದ್ದರು. ನಿಜ, ನೀರಿನಲ್ಲಿ ಮುಳುಗಿದ್ದುದು ವಿಶ್ವವಿದ್ಯಾಲಯವಲ್ಲ ಎಂಬುದು ಏಳುನೂರು ಎಕರೆಗಳಲ್ಲಿ ಇಂದು ಹಸಿರನ್ನು ಹೊದ್ದು ವಿರಾಜಮಾನವಾಗಿ ಬೆಳಗುತ್ತಿರುವ ವಿದ್ಯಾರಣ್ಯ ಆವರಣದಿಂದ ತಿಳಿಯುತ್ತದೆ.

ಇದಾಗಿ ಸರಿಯಾಗಿ ಒಂದು ವರ್ಷದ ಬಳಿಕ ಅದೇ ತಾನೆ ಎಂ.ಎ. ಮುಗಿಸಿ ಎಂ.ಫಿಲ್. ಅಥವಾ ಪಿಎಚ್.ಡಿ. ಅಧ್ಯಯನ ಮಾಡುವುದೆಂದು ಅರ್ಜಿಯನ್ನು ಹಾಕಿದ್ದೆ. ಅದರಲ್ಲಿ ಎಂ.ಫಿಲ್. ಅಧ್ಯಯನಕ್ಕೆ ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ಎಂ.ಫಿಲ್. ಅಧ್ಯಯನಕ್ಕೆ ನಮ್ಮದು ೧೯೯೩-೯೪ನೇ ಸಾಲಿನ ಎರಡನೇ ಬ್ಯಾಚ್. ಹಿಂದಿನ ಸಾಲಿಗಿಂತ ಎಂ.ಫಿಲ್. ಅಧ್ಯಯನದ ಕ್ರಮಬದ್ಧ ಶೈಕ್ಷಣಿಕ ಚಟುವಟಿಕೆಗಳು ನಡೆದದ್ದು ನಮ್ಮ ಸಾಲಿನಿಂದ ಎಂದರೆ ತಪ್ಪಾಗಲಾರದು. ಅಂದು ಇಡೀ ವಿಶ್ವವಿದ್ಯಾಲಯಕ್ಕೆ ಎಂ.ಫಿಲ್‌ಗೆ ಆಯ್ಕೆಯಾದವರು ಆರು ಜನ ವಿದ್ಯಾರ್ಥಿಗಳು ಮಾತ್ರ. ಆದರೆ ಇಂದು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆಯೆಂದರೂ ಸಾವಿರದಷ್ಟಾಗಿದೆ. ಅಂದು ಖಾಯಂ ಉದ್ಯೋಗಿಗಳ ಸಂಖ್ಯೆಯೂ ಬೆರಳೆಣಿಕೆಯೆ ಆಗಿತ್ತು. ಖಾಯಂ ಅಧ್ಯಾಪಕರೇ ಇರಲಿಲ್ಲ. ಪ್ರಾಧ್ಯಾಪಕರೆಲ್ಲರೂ ಹೊರಗಿನಿಂದ ತಾತ್ಕಾಲಿಕ ಅವಧಿಗಾಗಿ ಬಂದವರೇ ಆಗಿದ್ದರು. ಅದೂ ನಾಡಿನ ವಿವಿಧ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪರಿಣತ ವಿದ್ವಾಂಸರೆಲ್ಲರನ್ನೂ ಇಲ್ಲಿಗೆ ಕರೆತಂದು ಕೂಡಿಹಾಕಿದಂತಿತ್ತು. ಈಗ ಇರುವ ಹಿರಿಯ ಪ್ರಾಧ್ಯಾಪಕರಲ್ಲಿ ಅನೇಕರು ಅಂದು ಸಂಶೋಧನಾ/ಯೋಜನಾ ಸಹಾಯಕರಾಗಿದ್ದರು.

ಎಂ.ಫಿಲ್. ಅಥವಾ ಪಿಎಚ್.ಡಿ. ಅಧ್ಯಯನ ವೈವಿಧ್ಯಮಯ ಸಂಶೋಧನಾ ಶಿಸ್ತನ್ನು ಒಳಗೊಂಡಿತ್ತು. ಯುಜಿಸಿಯು ಇತ್ತೀಚೆಗೆ ತಂದಿರುವ ಗುಣಾಂಕ ಪದ್ಧತಿ(ಅಡಿeಜiಣ sಥಿsಣem) ಮತ್ತು ಕೋರ್ಸ್‌ವರ್ಕ್ ವ್ಯವಸ್ಥೆಯನ್ನು ಕನ್ನಡ ವಿಶ್ವವಿದ್ಯಾಲಯ ೧೯೯೩ರಲ್ಲೇ ಅಳವಡಿಸಿಕೊಂಡಿತ್ತೆಂಬುದು ಹೆಮ್ಮೆಯ ಸಂಗತಿ. ಎಂ.ಫಿಲ್. ಅಧ್ಯಯನದ ಮೊದಲ ನಾಲ್ಕು ತಿಂಗಳು ಬೋಧನೆ ಮತ್ತು ಅಧ್ಯಯನಕ್ಕೆ ಮೀಸಲು. ಈ ಹಂತದಲ್ಲಿ ಕುಲಪತಿ ಮತ್ತು ಕುಲಸಚಿವರನ್ನೂ ಒಳಗೊಂಡಂತೆ ನಾಡಿನ ವಿವಿಧೆಡೆಗಳಿಂದ ಬಂದಿದ್ದ ವಿವಿಧ ಶಿಸ್ತುಗಳ ಪ್ರಾಧ್ಯಾಪಕರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗೂ ಈ ಬಗೆಯ ಅವಕಾಶ ದೊರೆತಿರಲು ಸಾಧ್ಯವಿಲ್ಲ. ಅಲ್ಲದೆ ನಮ್ಮ ನಂತರದವರಿಗೂ ಈ ಅವಕಾಶ ಸಿಗಲಿಲ್ಲ. ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಯಾದ ನನಗೆ ಪ್ರೊ.ಕೀ.ರಂ, ಓ.ಎಲ್.ಎನ್. ಎಚ್.ಎಸ್.ಆರ್, ಕೆ.ವಿ.ಎನ್. ತೆಲಗಾವಿ, ಬಿಳಿಮಲೆ, ಕಂಬಾರರು ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿ ಮೂಡಿಸಿ ಸಂಶೋಧನೆ, ವಿಮರ್ಶೆ ಮತ್ತು ಬರವಣಿಗೆಗೆ ಬುನಾದಿ ಹಾಕಿದವರು. ಮೊದಲ ಹಂತವನ್ನು ಪೂರೈಸಿ ಪ್ರೌಢಪ್ರಬಂಧದ ಕಾರ್ಯಕ್ಕೆ ಕೈಹಾಕಿದಾಗ ಸಂಶೋಧನಾ ವಿಷಯ ಆಯ್ಕೆಗೆ ಅನೇಕ ಚರ್ಚೆಗಳು ನಡೆಯುತ್ತಿದ್ದವು. ಗೆಳೆಯರು ಅವರವರ ಶಿಸ್ತುಗಳತ್ತ ಗಮನಹರಿಸಿದ್ದರು.

ಈ ಮಧ್ಯೆ ನಗರೀಕರಣ, ನೀರು ಸರಬರಾಜು ವ್ಯವಸ್ಥೆ ಮುಂತಾದ ವಿಷಯಗಳ ಅಧ್ಯಯನಗಳ ಪ್ರಸ್ತಾಪ ಬಂದಿತ್ತು. ನನ್ನ ಮಾರ್ಗದರ್ಶಕರಾದ ಲಕ್ಷ್ಮಣ್ ತೆಲಗಾವಿಯವರೊಂದಿಗೆ ಹಂಪೆ-ವಿಜಯನಗರದ ಬಗ್ಗೆ ಚರ್ಚಿಸುತ್ತಾ ಹಂಪೆಯ ಬಜಾರುಗಳ ಅಧ್ಯಯನಕ್ಕೆ ಉತ್ಸುಕನಾಗಿ ಅನುಮತಿಯನ್ನೂ ಪಡೆದೆ. ನನಗೆ ಎಲ್ಲಿಲ್ಲದ ಖುಷಿ, ಕಾರಣವೆಂದರೆ ವಿಶ್ವವಿದ್ಯಾಲಯವಿದ್ದುದೇ ಬಜಾರದ ಸಾಲುಮಂಟಪಗಳಲ್ಲಿ. ಇಂತಹ ಅವಕಾಶ ಯಾರಿಗುಂಟು ಯಾರಿಗಿಲ್ಲ? ಬಜಾರದಲ್ಲಿದ್ದುಕೊಂಡೇ ಹಂಪೆಯ ಬಜಾರುಗಳ ಅಧ್ಯಯನ ಕೈಗೊಳ್ಳುವುದೆಂದರೆ ನನಗೆ ರೋಮಾಂಚನವೇ ಸರಿ. ಆದರೆ ಕೆಲವರಿಗೆ ಇದು ವಿಚಿತ್ರವೆನ್ನಿಸಿರಲೂ ಸಾಕು. ಅಧ್ಯಯನ ವಿಷಯದನ್ವಯ ಹಂಪೆಯನ್ನು ಸುತ್ತುವ, ಕ್ಷೇತ್ರ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದೆನು. ಹೀಗೆ ಮಾಹಿತಿಗಾಗಿ ಹಂಪೆಯ ಸ್ಮಾರಕ, ದೇಗುಲಗಳನ್ನು ಖುದ್ದಾಗಿ ನೋಡುವ ಮತ್ತು ಅಧ್ಯಯನಕ್ಕೆ ಒಳಪಡಿಸುವ ಅವಕಾಶ ನನ್ನದಾಯಿತು. ಅದೂ ಎಂ.ಫಿಲ್. ಗೆಳೆಯರೊಂದಿಗೆ. ಅದರಲ್ಲಿ ಬಸವರಾಜ ಮಠದ, ಡಿ.ಎಸ್.ನಾರಾಯಣ, ಗುರುನಾಥ ಹೂಗಾರ ಮತ್ತು ರೇಣುಕಾಪ್ರಸಾದ್ ಅವರ ಸಹಕಾರವನ್ನು ಇಲ್ಲಿ ನೆನೆಯಲೇಬೇಕು. ಮೈಸೂರಿನ ರಾಮಕೃಷ್ಣ ಆಶ್ರಮ ಸೇರಿದ ನಾರಾಯಣ ನನ್ನೊಂದಿಗೆ ಬಜಾರುಗಳ ಉದ್ದಗಲಗಳನ್ನು ಅಳೆದದ್ದಿದೆ. ಈ ಮಧ್ಯೆ ೧೯೯೪ ಜುಲೈ ೨೨ ಇರಬೇಕು. ಅಂದು ಕೋದಂಡರಾಮ ದೇವಾಲಯ ನೋಡುವುದೆಂದು ಮಧ್ಯಾಹ್ನ ಮೂರರ ಹೊತ್ತಿಗೆ ಗೆಳೆಯ ರೇಣುಕಾಪ್ರಸಾದ್ ಜೊತೆ ಹೊರಟೆ. ತುಂಗಭದ್ರಾ ನದಿ ದಂಡೆಯುದ್ದಕ್ಕೂ ಹರಡಿರುವ ಸ್ಮಾರಕ, ಸಾಲುಮಂಟಪಗಳನ್ನು ನೋಡುತ್ತಾ ಮುನ್ನಡೆದೆವು. ಅಂದು ನದಿಯಲ್ಲಿ ನೀರು ತಳಭಾಗದಲ್ಲಿತ್ತು. ಹಾಗೆ ಮುಂದೆ ಯಂತ್ರೋದ್ಧಾರಕ, ಸೂರ್ಯನಾರಾಯಣ ಗುಡಿ ಮತ್ತು ಅಲ್ಲಿನ ಶಿಲ್ಪಗಳನ್ನು ನೋಡಿ ಕೋದಂಡರಾಮ ದೇವಾಲಯದ ಬಳಿ ಬಂದೆವು. ಅದರಲ್ಲಿ ಬೃಹತ್ ಬಂಡೆಗಲ್ಲಿನ ಮೇಲೆ ಕಡೆದ ಆಳೆತ್ತರದ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯನ ಸುಂದರ ಮತ್ತು ಆಳವಾಗಿ ಕಡೆದ ಮೂರ್ತಿಗಳಿವೆ. ದೇವಾಲಯಕ್ಕೆ ರಾಮ ಹಿಡಿದ ಕೋದಂಡದಿಂದಲೇ ಈ ಹೆಸರು ಬಂದಿದೆ. ಹಂಪೆಯಲ್ಲಿ ವಿರೂಪಾಕ್ಷನನ್ನು ಬಿಟ್ಟರೆ ಕೋದಂಡರಾಮ ದೇವಾಲಯವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ.

ಈ ದೇವಾಲಯವನ್ನು ನೋಡಿ ಮುಂದೆ ಚಕ್ರತೀಥಕ್ಕೆ ಹೆಜ್ಜೆಯಿಟ್ಟೆವು. ಚಕ್ರತೀರ್ಥವೆಂದರೆ ತುಂಗಭದ್ರಾ ನದಿಯು ಪೂರ್ವದಿಂದ ಉತ್ತರಕ್ಕೆ ತನ್ನ ಪಥವನ್ನು ಹೊರಳಿಸಿರುವ ಕ್ಷೇತ್ರ. ಅದು ಅನೇಕ ಧಾರ್ಮಿಕ ಶಿಲ್ಪಗಳನ್ನು ಪವಿತ್ರ ಸ್ಥಳ. ವೈಷ್ಣವರು ವಿಷ್ಣುವಿನ ವಿವಿಧ ಅವತಾರ ಮತ್ತು ಅವನ ಇಪ್ಪತ್ನಾಲ್ಕು ರೂಪಗಳನ್ನು ಬಂಡೆಗಲ್ಲಿನಲ್ಲಿ ಮೂಡಿಸಿದ್ದರೆ, ಸ್ಪರ್ಧೆ ಎನ್ನುವಂತೆ ಶೈವರು ಕೋಟಿಲಿಂಗಗಳನ್ನು ಕಡೆದಿದ್ದಾರೆ. ಈ ಕೋಟಿಲಿಂಗಗಳು ಇರುವುದು ತುಂಗಭದ್ರಾ ನದಿಯ ತಳಭಾಗದಲ್ಲಿ. ಇವುಗಳನ್ನು ನೋಡುವುದೆಂದು ಇಬ್ಬರೂ ಹೊರಟಾಗ ಅಲ್ಲಿ ಹಣ್ಣುಕಾಯಿಗಳನ್ನು ಮಾರುತ್ತಿದ್ದ ಅಜ್ಜಿಯು ಎಲ್ಲಿಗೆ ಹೋಗುತ್ತೀರೆಂದು ಪ್ರಶ್ನಿಸಿದಳು. ನಾವು ಕೋಟಿಲಿಂಗ ನೋಡಲು ಹೋಗುತ್ತೇವೆಂದು ಹೇಳಿ ಹೊರಡಲನುವಾದೆವು. ನದಿಯ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲದ ನಮಗೆ ಕೋಟಿಲಿಂಗವನ್ನು ನೋಡುವ ತವಕ ಮಾತ್ರವಿತ್ತು. ಆದರೆ ಅಜ್ಜಿ ನಮ್ಮನ್ನು ತಡೆದು ಜಲಾಶಯದಿಂದ ಯಾವ ಕ್ಷಣದಲ್ಲಾದರೂ ನೀರು ಬಿಡುತ್ತಾರೆಂಬ ಸುದ್ದಿಯಿದೆ. ನದಿಗೆ ಇಳಿಯಬೇಡಿ ಎಂದು ಆಜ್ಞಾಪಿಸಿದಳು. ಅಜ್ಜಿಯ ಒತ್ತಾಯಕ್ಕೆ ಮಣಿದು ಕೋಟಿಲಿಂಗವನ್ನು ನೋಡದೆ ಹಿಂತಿರುಗಿ ಮಂಟಪಗಳಲ್ಲಿದ್ದ ವಿಶ್ವವಿದ್ಯಾಲಯಕ್ಕೆ ಮರಳಿದೆವು. ನದಿಯಿಂದ ಹಿಂತಿರುಗಿ ಅರ್ಧ ತಾಸು ಆಗಿರಲಿಲ್ಲ. ಆಗಲೇ ತುಂಗಭದ್ರಾ ನದಿಯ ಪ್ರವಾಹದ ಸುದ್ದಿ ವಿಶ್ವವಿದ್ಯಾಲಯದ ತುಂಬೆಲ್ಲಾ ಕಾಳ್ಗಿಚ್ಚಿನಂತೆ ಹರಡಿತು. ವಿಷಯವೇನೆಂದು ಹೊರಗೆ ಬಂದು ನೋಡಿದರೆ ಪರಮಾಶ್ಚರ್ಯ ಕಾದಿತ್ತು.


ರ್ಧ ಗಂಟೆಗೆ ಮುನ್ನ ತಳಭಾಗದಲ್ಲಿ ಹರಿಯುತ್ತಿದ್ದ ತುಂಗಭದ್ರೆ ಕ್ಷಣಾರ್ಧದಲ್ಲಿ ತನ್ನ ಎರಡೂ ದಂಡೆಗಳ ಮೇಲೂ ಉಕ್ಕಿಹರಿದು ನಾವಿರುವ ಮಂಟಪದವರೆಗೂ ದಾಂಗುಡಿ ಇಟ್ಟಿದ್ದಳು. ಕೆಲವೇ ಕ್ಷಣಗಳ ಹಿಂದೆ ತಳಭಾಗದಲ್ಲಿ ಹರಿಯುತ್ತಿದ್ದ ನೀರು ವಿಶ್ವವಿದ್ಯಾಲಯದ ಮಂಟಪದವರೆಗೆ ಬಂದಿತ್ತೆಂದರೆ, ನಮಗೆ ಊಹಿಸಿಕೊಳ್ಳುವುದೂ ಅಸಾಧ್ಯದ ಮಾತು. ತುಂಗಭದ್ರೆಯ ರೌದ್ರತೆಯನ್ನು ಕಂಡು ಎದೆ ಝಲ್ಲೆಂದಿತು.

ಮುಂದುವರೆಯುವುದು…

Girl in a jacket
error: Content is protected !!