ಸ್ನೇಹ,ನಂಬಿಕೆ ಮತ್ತು ಅಗೋಚರ ಶಕ್ತಿ
ಭಾರತ್ ವಿಜಯ್ ಮಿಲ್ಸ್ ಕಾಂಪೌಂಡಿನಲ್ಲಿ ಕಾಲಿಡುತ್ತಿದ್ದಂತೆಯೇ ಜೊತೆಯಲ್ಲಿದ್ದ ಸಹೋದ್ಯೋಗಿ ಖತ್ರಿ ನಾವು ಹೋಗಬೇಕಿದ್ದ ಮಾರ್ಕೆಟಿಂಗ್ ವಿಭಾಗದತ್ತ ಸರಸರನೆ ನಡೆಯತೊಡಗಿ ನನಗೆ ದಾರಿತೋರಿಸುವಂತೆ ಮುನ್ನಡೆಯತೊಡಗಿದ್ದ. ಮುಖ್ಯ ದ್ವಾರದಲ್ಲಿದ್ದ ರಿಸೆಪ್ಷನ್ ನಲ್ಲಿ ನಾವು ಎಕ್ಸ್ ಪೋರ್ಟ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅನೆರಾವ್ ಅವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ನೊಂದಾಯಿಸಿ ಮೊದಲನೇ ಮಹಡಿಯಲ್ಲಿದ್ದ ಅನೆರಾವ್ ಅವರ ಕೋಣೆಗೆ ಹೋದೆವು. ಅನೆರಾವ್ ಯಾವುದೋ ಮೀಟಿಂಗ್ ನಲ್ಲಿ ವ್ಯಸ್ತವಾಗಿದ್ದ ಕಾರಣ ಅವರ ಕೋಣೆಯಿಂದ ಮೂರನೇ ಕೋಣೆಯಲ್ಲಿದ್ದ ಸಿಇಒ ಅವರ ಆಪ್ತ ಕಾರ್ಯದರ್ಶಿ ಸೋಮನ್ ನಾಯರ್ ಅವರನ್ನು ಮಾತನಾಡಿಸೋಣ ಎಂದುಕೊಂಡು ಅತ್ತ ನಡೆದವನಿಗೆ ಅನೆರಾವ್ ಅವರ ಆಪ್ತಕಾರ್ಯದರ್ಶಿ ಪಟೇಲ್ ರ ಕೂಗು ಬೆನ್ನ ಹಿಂದೆ ಕೇಳಿಬಂತು. “ಸರ್, ಬನ್ನಿ, ಸಾಹೇಬರು ನಿಮ್ಮನ್ನು ಬರ ಹೇಳಿದ್ದಾರೆ” ಎನ್ನುವ ಪಟೇಲರ ಮಾತಿನಂತೆ ನಾಯರ್ ದರ್ಶನದ ಆಕಾಂಕ್ಷೆಯನ್ನ ಬಿಟ್ಟು ಅನೆರಾವ್ ಅವರ ಕೋಣೆಯತ್ತ ಹೆಜ್ಜೆ ಹಾಕಿದೆ.
ವಿಶಾಲವಾದ ಕೋಣೆಯ ಮೂಲೆಯೊಂದರಲ್ಲಿ ದೊಡ್ಡದೇ ಎನ್ನಬಹುದಾದ ಗಾಜು ಹೊದಿಕೆಯ ಮೇಜಿನ ಹಿಂದೆ ಎತ್ತರದ ಆರಾಮದಾಯಕ ಕುರ್ಚಿಯಲ್ಲಿ ಕುಳಿತು ಕಡತವನ್ನೋದುತ್ತಿದ್ದ ಅನೆರಾವ್ ನಮ್ಮ ಕಾಲ ಸಪ್ಪಳದಿಂದ ತಲೆ ಎತ್ತಿದರು. ನಮ್ಮನ್ನು ನೋಡಿದ ಒಡನೆಯೇ ಮುಖದಲ್ಲಿ ಮಂದಹಾಸವನ್ನು ತರುತ್ತಾ ಅವರ ಮುಂದಿರುವ ಕುರ್ಚಿಗಳಲ್ಲಿ ಆಸೀನರಾಗಲು ವಿನಂತಿಸಿದರು.
ಅನೆರಾವ್ ವಯಸ್ಸು ಸುಮಾರು ಮೂವತ್ತೈದು ಇದ್ದಿರಬಹುದು. ಈ ವಯ್ಯಸ್ಸಿಗಾಗಲೆ ಸಿಂಟೆಕ್ಸ್ ಸಮೂಹ ಸಂಸ್ಥೆಗಳ ಭಾಗವಾದ ಭಾರತ್ ವಿಜಯ್ ಮಿಲ್ಸ್ ನಲ್ಲಿ ತಮ್ಮ ಪರಿಶ್ರಮ ಮತ್ತು ಕುಶಾಗ್ರ ಬುದ್ದಿಯಿಂದಾಗಿ ನಿರ್ಯಾತ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿದ್ದರು. ಭಾರತ್ ವಿಜಯ್ ಮಿಲ್ಸ್ ಇರುವುದು ಗುಜರಾತಿನ ಅಹ್ಮದಾಬಾದ್ ನಿಂದ ರಸ್ತೆ ಮೂಲಕ ಬಸ್ಸಿನಲ್ಲಿ ಹೋದರೆ ಸುಮಾರು ಒಂದು ಗಂಟೆ ದೂರವಿರುವ ಕಲೋಲ ಎನ್ನುವ ಒಂದು ಸಣ್ಣ ಊರಿನಲ್ಲಿ. ನಿರ್ಯಾತ ಗುಣಮಟ್ಟದ ಹತ್ತಿ ಬಟ್ಟೆಗಳಿಗೆ ಪ್ರಸಿದ್ದಿಯಾದ ಈ ಕಾರ್ಖಾನೆಯಲ್ಲಿ ನೀರಿನ ಟ್ಯಾಂಕ್ ಗಳನ್ನು ಜಪಾನಿ ತಂತ್ರಜ್ಞಾನದಲ್ಲಿ ತಯಾರಿಸುವ ಹೊಸ ಘಟಕ ವೊಂದು ಕಾರ್ಯಾರಂಭ ಮಾಡಿತ್ತು. ಆ ಕಾಲಕ್ಕೆ ನೀರಿನ ಟ್ಯಾಂಕ್ ಗಳಲ್ಲಿ ಬಹಳ ದೊಡ್ಡ ಆವಿಷ್ಕಾರ ವೆಂದೇ ಇದು ಗುರುತಿಸಲ್ಪಟ್ಟಿತ್ತು. ಸಿಂಟೆಕ್ಸ್ ನೀರಿನ ಟ್ಯಾಂಕ್ ಗಳೆಂದೇ ದೇಶ ಮತ್ತು ಹೊರದೇಶಗಳಲ್ಲಿ ಪ್ರಖ್ಯಾತವಾದ ಸಿಂಟೆಕ್ಸ್ ಟ್ಯಾಂಕಿನ ಉಗಮ ದಿನಗಳವು. ಆನೆರಾವ್ ಅವರ ಹೆಗಲಿಗೇ ಸಿಂಟೆಕ್ಸ್ ಟ್ಯಾಂಕಿನ ನಿರ್ಯಾತವನ್ನೂ ಹೊರಿಸಲಾಗಿ ಅನೆರಾವ್ ಅತ್ಯಂತ ಬ್ಯುಸಿಯಾಗಿದ್ದ ದಿನಗಳು ಅವು.
ಅನೆರಾವ್ ಸೋದರ ನಿತಿನ್ ಅನೆರಾ ವ್ ನನ್ನ ಸಹೋದ್ಯೋಗಿ. ಬರೋಡೆಯ ನಮ್ಮ ಆಫೀಸಿನ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಭಾರತ್ ವಿಜಯ್ ಮಿಲ್ಸ್ ನಲ್ಲಿ ಈಗಾಗಲೇ ನಮ್ಮ ಕಂಪನಿಯ ಆಂತರಿಕ ಸಂಪರ್ಕ ವ್ಯವಸ್ಥೆ ಅಂದರೆ ಇಂಟರ್ಕಾಮ್ ಕೆಲಸ ಮಾಡುತ್ತಿತ್ತು. ಆ ಸಂಬಂಧದಲ್ಲಿ ನಾನು ಹಿಂದೊಮ್ಮೆ ಮಿಲ್ಸ್ ಗೆ ಭೇಟಿ ಕೊಟ್ಟಿದ್ದೆ. ಹೊಸದಾಗಿ ಪ್ರಾರಂಭಗೊಂಡಿರುವ ಟ್ಯಾಂಕಿನ ಉತ್ಪಾದನಾ ಘಟಕಕ್ಕೂ ಇಂಟರ್ಕಾಮ್ ಅವಶ್ಯಕತೆ ಇರುವುದರಿಂದ ನಮ್ಮನ್ನು ಸ್ಥಳ ಪರಿಶೀಲನೆಗೆ ಭಾರತ್ ವಿಜಯ್ ಮಿಲ್ಸ್ ನ ಖರೀದಿ ವಿಭಾಗದ ಮುಖ್ಯಸ್ಥರಾದ ವೇಲುಚಾಮಿ ಆಹ್ವಾನಿಸಿದ್ದರು.
ಆ ದಿನಗಳಲ್ಲಿ ಇಂಟರ್ಕಾಮ್ ವ್ಯವಸ್ಥೆಗಳಲ್ಲಿ ನಮ್ಮ ಕಂಪನಿಯ ಏಕ ಸ್ವಾಮ್ಯವಿತ್ತು. ಹಾಗಾಗಿ ಅನೇಕ ಗ್ರಾಹಕರು ಪೂರ್ತಿ ಹಣ ಪಾವತಿ ಮಾಡಿ ತಿಂಗಳುಗಟ್ಟಳೆ ನಮ್ಮ ಇಂಟರ್ಕಾಮ್ ವ್ಯವಸ್ಥೆಗಾಗಿ ಎದುರು ನೋಡುತ್ತಿದ್ದರು. ಆದರೆ ಭರಾಟೆಯಿಂದ ಉತ್ಪಾದನೆಯನ್ನು ಆರಂಭಿಸಿ ಉತ್ತಮ ಮಾರುಕಟ್ಟೆ ಪ್ರತಿಕ್ರಿಯೆಯನ್ನ ಪಡೆಯತೊಡಗಿದ ಸಿಂಟೆಕ್ಸ್ ಟ್ಯಾಂಕ್ ಕಾರ್ಖಾನೆಗೆ ಇಂಟರ್ಕಾಮ್ ಅಗತ್ಯ ಹೆಚ್ಚಾಗಿ ಇದ್ದುದರ ಕಾರಣವಾಗಿ ಅಣ್ಣ ಅನೆರಾವ್ ತಮ್ಮನಾದ ನಿತಿನ್ಗೆ ಹೇಳಿಸಿ ನನ್ನನ್ನು ಅಹ್ಮದಾಬಾದ್ ನಿಂದ ತುರ್ತಾಗಿ ಮಿಲ್ಸ್ ಗೆ ಬಂದು ಬೇಟಿ ಮಾಡಲು ವಿನಂತಿಸಿಕೊಂಡಿದ್ದರು. ಅದರ ಪರಿಣಾಮವಾಗಿ ನಿತಿನ್ ನನಗೆ ವಿಷಯ ತಿಳಿಸಿದ ಮರುವಾರವೇ ನಾನು ಭಾರತ್ ವಿಜಯ್ ಮಿಲ್ಸ್ ಗೆ ಭೇಟಿಕೊಟ್ಟೆ.
ಅನೆರಾವ್ ನಮ್ಮ ಕಡೆಯಿಂದ ತಮ್ಮ ಆಹ್ವಾನಕ್ಕೆ ಸಿಕ್ಕ ತ್ವರಿತ ಪ್ರತಿಕ್ರಿಯೆಯಿಂದ ಸಹಜವಾಗಿಯೇ ಉಲ್ಲಸಿತರಾಗಿದ್ದರು. ಉಭಯ ಕುಶಲೋಪರಿಯ ನಂತರ ನಮ್ಮ ಶೀಘ್ರ ಭೇಟಿಯ ಬಗ್ಗೆ ಸಂತೋಷ ವ್ಯಕಪಡಿಸಿದ ಅನೆರಾವ್ ನಮ್ಮನ್ನು ವೇಲುಚಾಮಿಯೊಟ್ಟಿಗೆ ಭೇಟಿ ಮಾಡಿಸುವುದಾಗಿ ಹೇಳಿದರು.ಬೇಸಗೆ ದಿನಗಳಾಗಿದ್ದುದರಿಂದ ಗುಜರಾತಿನ ಅಂದಿನ ಜನಪ್ರಿಯ ಮಾಝ ತಂಪಿನ ಪಾನೀಯವನ್ನ ನಾವು ಸೇವಿಸದೇ ಇರುವ ಸಾಧ್ಯತೆಗಳೇ ಇರಲಿಲ್ಲ. ತಂಪುಪಾನೀಯದಿಂದ ತುಂಬಿದ ತಂಪು ಹೊಟ್ಟೆಗಳೊಂದಿಗೆ ನಮ್ಮನ್ನು ನೆಲ ಮಹಡಿಯಲ್ಲಿದ್ದ ವೇಲುಚಾಮಿ ಅವರ ಕೋಣೆಗೆ ಕರೆದೊಯ್ದು ಪರಸ್ಪರ ಪರಿಚಯ ಮಾಡಿಸಿದ ಅನೆರಾವ್ ತದನಂತರ ತಮ್ಮ ಸ್ಥಾನಕ್ಕೆ ತೆರಳಿದರು.
ವೇಲುಚಾಮಿಯವರ ವಯಸ್ಸು ಸುಮಾರು ನಲ್ವತ್ತೈದು ಆಗಿರಬಹುದೆಂದು ತೋರುತ್ತದೆ. ತಮಿಳುನಾಡಿನ ಕುಂಭಕೋಣ ಜಿಲ್ಲೆಯವರಾದ ಚಾಮಿ ಅವರ ಮಾತು ಅತ್ಯಂತ ಮೃದು. ಮೆಲ್ಲಗೆ, ನಿಧಾನವಾಗಿ ಮಾತನಾಡುತ್ತಾ ಹೋಗುತ್ತಿದ್ದ ವೇಲುಚಾಮಿಯವರ ಮಾತು ದೊಡ್ಡದಾದ ಮೇಜಿನ ಇನ್ನೊಂದು ತುದಿಯಲ್ಲಿ ಕುಳಿತ ನಮಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲವಾಗಿ ಕುರ್ಚಿಯಿಂದ ಅರ್ಧ ಮುಂದೆ ಬಗ್ಗಿ ಅವರ ಮಾತನ್ನು ಕೇಳಿಸಿಕೊಳ್ಳಲು ಪ್ರಯತ್ನಿಸತೊಡಗಿದೆವು.
ನನ್ನನ್ನು ವೇಲುಚಾಮಿ ತಮಿಳರವನೆಂದೆ ಭಾವಿಸಿ ತಮಿಳಿನ “ವಣಕ್ಕಂ” ಮೂಲಕವೇ ನನಗೆ ನಮಸ್ತೆಗಳನ್ನ ಹೇಳಿದರು. ನಾನು ಕನ್ನಡಿಗ ಎಂದು ಹೇಳಿದ ನಂತರ ಇಂಗ್ಲೀಷ್ ಭಾಷೆಗೆ ನಮ್ಮ ಸಂಭಾಷಣೆ ತಿರುಗಿತ್ತಾದರೂ ವೇಲು ಅವರ ಇಂಗ್ಲೀಷ್ ಭಾಷೆಯಲ್ಲಿ ತಮಿಳು ತನ್ನ ಪ್ರಭಾವವನ್ನು ಉದಾಸೀನ ಮಾಡದ ಮಟ್ಟದಲ್ಲಿ ಅಚ್ಚುಹೊಯ್ದಿತ್ತು. ಚಾಮಿ ತಮ್ಮ ಇಂಟರ್ಕಾಮ್ ಅವಶ್ಯಕತೆಯನ್ನು ವಿವರವಾಗಿ ಹೇಳಿ ನಂತರ ನಾವು ಸಿಸ್ಟಂ ಸ್ಥಾಪಿಸಬೇಕಾದ ಜಾಗದ ಸರ್ವೆಯನ್ನೂ ಮಾಡಿಸಿದರು. ಅವರ ಅವಶ್ಯಕತೆ ಸುಮಾರು ಐವತ್ತು ಲೈನ್ ಗಳಾಗಿತ್ತು. ಸರ್ವೆ ಮುಗಿಸಿದ ನಮ್ಮನ್ನು ಮತ್ತೆ ತಮ್ಮ ಕೋಣೆಗೆ ಕರೆದೊಯ್ದ ವೇಲುಚಾಮಿ ಬಿಡದಂತೆ ಮತ್ತೊಮ್ಮೆ ಮಾಝಾದ ಸೇವನೆಯನ್ನು ಮಾಡಿಸಿ ಬೀಳ್ಕೊಟ್ಟರು. ಇನ್ನೂ ಅವರ ಕೋಣೆಯ ಬಾಗಿಲನ್ನು ದಾಟದವನನ್ನು ಕರೆದು ಕೆಳಗಡೆ ಇರುವ ಮಿಲ್ಸ್ ನ ವಿಶೇಷ ರಿಟೇಲ್ ಮಳಿಗೆಗೆ ಹೋಗುವಂತೆ ತಾಕೀತು ಮಾಡಿದ್ದಲ್ಲದೆ ತಮ್ಮ ಬಳಿಯಿದ್ದ ಕಾರ್ಖಾನೆ ಸಿಬ್ಬಂದಿಯ ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟ್ ವೋಚರ್ ಕೂಡ ನೀಡಿದರು. ಈ ವೋಚರ್ ಐದು ನೂರು ಬೆಲೆ ಬಾಳುವ ಬಟ್ಟೆಗಳನ್ನು ಖರೀದಿ ಮಾಡಲಿಕ್ಕೆ ಸೂಕ್ತವಾಗಿತ್ತು. ಇದರಿಂದಾಗಿ ನಮಗೆ ನೂರು ರೂಪಾಯಿಗಳ ಉಳಿತಾಯವಾಗುತ್ತಿತ್ತು. ಅಂದಿನ ದಿನಗಳಲ್ಲಿ ಇದು ಸಾಕಷ್ಟು ದೊಡ್ಡ ಮೊತ್ತವೇ. ನಾನು ಮತ್ತು ವೇಲುಚಾಮಿ ಕುಡಿದ ಕಾವೇರಿ ನೀರು ಎಲ್ಲಿಯೋ ನಮ್ಮಿಬ್ಬರನ್ನೂ ಮೊದಲ ಭೇಟಿಯಲ್ಲಿಯೇ ಬಂಧಿಸಿತ್ತು. ನನ್ನ ಸಹೋದ್ಯೋಗಿಯಾದ ಖತ್ರಿ ಹೇಳಿದ ಹಾಗೆ ನಾನು “ಮದರಾಸಿ” ಎನ್ನುವ ಭಾವನೆಯೂ ವೇಲುಚಾಮಿಯವರ ಮನಸ್ಸಿನಲ್ಲಿ ನನ್ನ ಬಗ್ಗೆ ಮೂಡಿದಂತಹ ಮೃದುಧೋರಣೆಗೆ ಕಾರಣವಾಗಿದ್ದೀತು.
ನಾನು ಮಾರನೇ ದಿನ ನನ್ನ ಕೋಟೇಷನ್ ನನ್ನು ವೇಲುಚಾಮಿಯವರಿಗೆ ಕಳುಹಿಸಿಕೊಟ್ಟೆ. ಅಲ್ಲಿಂದ ಮೂರು ದಿನಗಳ ನಂತರ ವೇಲುಚಾಮಿ ಫೋನಿನ ಮುಖಾಂತರ ನನ್ನನ್ನು ಸಂಪರ್ಕಿಸಿ ನಾನು ಕೊಟ್ಟ ಕೊಟೇಷನ್ ನಲ್ಲಿ ಏನಾದರೂ ಡಿಸ್ಕೌಂಟ್ ಸಾಧ್ಯವೇ? ಎಂದು ಪ್ರಶ್ನಿಸಿದರು. ಅಳೆದೂ ತೂಗಿ ನಾನು ಐದು ಸಾವಿರ ರೂಪಾಯಿಗಳ ಡಿಸ್ಕೌಂಟ್ ಕೊಟ್ಟೆ. ಅದರಿಂದ ತೃಪ್ತಿ ಹೊಂದಿದವರಂತೆ ಕಂಡ ಚಾಮಿ ಮುಂದಿನ ಸೋಮವಾರ ಕಲೋಲಕ್ಕೆ ಬಂದು ಆರ್ಡರ್ ತೆಗೆದುಕೊಂಡು ಹೋಗಿ ಬೇಗನೇ ಕೆಲಸ ಪ್ರಾರಂಭಿಸಬೇಕೆಂದು ವಿನಂತಿಸಿದರು.
ಮುಂದಿನ ಸೋಮವಾರ ಹನ್ನೊಂದು ಘಂಟೆಗೆ ನಾನು ವೇಲುಚಾಮಿಯವರ ಮೇಜಿನ ಮುಂದೆ ಕುಳಿತಿದ್ದೆ. ನನ್ನ ಜೊತೆ ಆ ಹೊತ್ತು ಸಹೋದ್ಯೋಗಿ ಸಂಜಯ್ ತಿವಾರಿ ಇದ್ದರು. ಸುಮಾರು ಎಂಟು ಲಕ್ಷಗಳ ಆರ್ಡರ್ ಅದು. ಕೆಲಸವನ್ನ ಬೇಗನೇ ಪ್ರಾರಂಭಿಸಬೇಕು ಎನ್ನುವ ಉಮೀದಿನೊಂದಿಗೆ ಕಂಟ್ರಾಕ್ಟರ್ ಬುದ್ದೂ ಲಾಲ್ ಅವರನ್ನೂ ಕರೆದುಕೊಂಡು ಬಂದಿದ್ದೆ. ಆರ್ಡರ್ ಮತ್ತು ಅಡ್ವಾನ್ಸ್ ಹಣಕ್ಕೆ ಚೆಕ್ ಕೊಟ್ಟ ವೇಲುಚಾಮಿ ಮತ್ತೊಮ್ಮೆ ಕೆಲಸವನ್ನು ಶೀಘ್ರವಾಗಿ ಮುಗಿಸಬೇಕೆಂದು ಕೇಳಿಕೊಂಡರು. ಸ್ಥಳದ ಸರ್ವೆ ಮಾಡಲು ಬುದ್ದು ಲಾಲ್ ನೊಂದಿಗೆ ಸಂಜಯ್ ಹೊರಡಲು ನಾನು ಮತ್ತು ಚಾಮಿ ಇಬ್ಬರೇ ಕೋಣೆಯಲ್ಲಿ ಉಳಿದೆವು.
ಅದೂ ಇದೂ ಮಾತನಾಡುತ್ತಾ ನಮ್ಮ ಮಾತುಕತೆ ದೈವತ್ವದ ಕಡೆಗೆ ತಿರುಗಿತು. ವೇಲುವಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೆಂಡತಿ ಮತ್ತು ಮಕ್ಕಳನ್ನು ಊರಿನಲ್ಲಿಯೇ ತನ್ನ ತಂದೆ ತಾಯಿಗಳ ಒಟ್ಟಿಗೆ ಬಿಟ್ಟಿರುವ ವೇಲು ಭಾರತ್ ವಿಜಯ್ ಮಿಲ್ಸ್ ನ ಹಳೆಯ ಉದ್ಯೋಗಿಗಳಲ್ಲಿ ಒಬ್ಬರು. ಅತಿಯಾದ ದೈವಭಕ್ತ. ಅತ್ಯಂತ ನಿಯತ್ತಿನ ಮನುಷ್ಯನೆಂದೇ ಚಾಮಿಯ ಖ್ಯಾತಿ ಸಹೋದ್ಯೋಗಿಗಳಲ್ಲಿ ಹರಡಿತ್ತು. ವರ್ಷವೊಂದಕ್ಕೆ ನೂರಾರು ಕೋಟಿಗಳ ಖರೀದಿಯನ್ನ ಕಂಪನಿಯ ಪರವಾಗಿ ಮಾಡುತ್ತಿದ್ದ ವೇಲುವಿನ ಮೇಲೆ ಇಲ್ಲಿಯವರೆಗೆ ಒಂದೇ ಒಂದು ನಯಾಪೈಸೆಯ ಅವ್ಯವಹಾರದ ಆಪಾದನೆ ಕೂಡ ಬಂದಿಲ್ಲವೆಂದರೆ ವೇಲುವಿನ ಪ್ರಾಮಾಣಿಕತೆಯ ಅರಿವಾದೀತು. ದೈವತ್ವ ಅಂದಿಗೂ ಮತ್ತು ಇಂದಿಗೂ ನನ್ನ ನೆಚ್ಚಿನ ವಿಷಯವಾದ್ದರಿಂದ ಸಹಜವಾಗಿಯೇ ವೇಲುಚಾಮಿಯ ಮಾತುಗಳು ನನ್ನ ಉತ್ಸಾಹವನ್ನು ಹೆಚ್ಚಿಸಿದವು.
ತಮ್ಮ ಎಂದಿನ ಸಣ್ಣ ಧ್ವನಿಗಿಂತಹ ಕಿರಿದಾದ ಧ್ವನಿಯಲ್ಲಿ ಮಾತಿಗೆ ತೊಡಗಿದ ವೇಲು ಅವರ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಅನುವಾಗುವಂತೆ ಅವರ ಪಕ್ಕಕ್ಕೇ ನನ್ನ ಕುರ್ಚಿಯನ್ನು ವರ್ಗಾಯಿಸಿಕೊಂಡವನು ಕೋಣೆಯ ಬಾಗಿಲನ್ನೂ ವೇಲು ಅವರ ಸನ್ನೆಯ ಮೇರೆಗೆ ಮುಚ್ಚಿ ಅವರ ಮಾತುಗಳನ್ನು ತದೇಕ ಚಿತ್ತನಾಗಿ ಕೇಳಲು ಮೊದಲು ಮಾಡಿದೆ.
ವೇಲುಚಾಮಿ ಹೇಳ ಹೊರಟಿದ್ದು ಸುಮಾರು ಐದಾರು ವರ್ಷಗಳ ಹಿಂದಿನ ಕಥೆ. ಆ ಹೊತ್ತು ಅಂಬಾಮಾತೆಯ ದರ್ಶನವನ್ನು ಮುಗಿಸಿದ ವೇಲು ಅವರು ಅಹ್ಮದಾಬಾದ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದು ಮುಸ್ಸಂಜೆಯ ಸಮಯ ಮತ್ತು ಸುರಿಯುತ್ತಿದ್ದ ತುಂತರು ಮಳೆಯಿಂದಾಗಿ ರಸ್ತೆಯ ದೃಶ್ಯ ಮಸುಕಾಗಿ ತೋರುತ್ತಿತ್ತು. ಬೇಗನೇ ಅಹ್ಮದಾಬಾದ್ ಸೇರಬೇಕೆನ್ನುವ ತವಕದಲ್ಲಿ ಡ್ರೈವರ್ ಸೋನಿ ವೇಗವಾಗಿ ಕಾರನ್ನು ಚಲಿಸುತ್ತಿದ್ದ. ಇನ್ನೇನು ಪಾಲಂಪುರ್ ನಗರ ವ್ಯಾಪ್ತಿಗೆ ಕಾರು ತಲುಪಿರಬೇಕು ಅನ್ನಿಸುತ್ತದೆ, ರಾಜ್ಯ ಹೆದ್ದಾರಿಯ ಮೇಲೆ ಚಲಿಸುತ್ತಿದ್ದ ಕಾರಿಗೆ ಅಡ್ಡದಾರಿಯಿಂದ ಬಂದ ಹದಿನೈದು ಟನ್ ಗಳ ಟ್ರಕ್ಕೊಂದು ರಭಸವಾಗಿ ಮುನ್ನುಗ್ಗಿ ಇನ್ನೇನು ಡಿಕ್ಕಿ ಹೊಡೆಯಲಿತ್ತು, ಹೆದ್ದಾರಿಗೆ ಸೇರುವಾಗ ತನ್ನ ವೇಗವನ್ನು ನಿಯಂತ್ರಿಸಲಾಗದ ಟ್ರಕ್ ತಮ್ಮನ್ನು ಮುಗಿಸಿಯೇಬಿಟ್ಟಿತು ಎಂದು ವೇಲು ಅಂದುಕೊಂಡು ವಿಪರೀತ ಭಯಭೀತರಾಗಿ ಕಣ್ಮುಚ್ಚಿದರು.
ಇಷ್ಟೇ ಅವರಿಗೆ ತಿಳಿದಿದ್ದು. ವೇಲುಚಾಮಿಗೆ ಎಚ್ಚರ ಬಂದಿದ್ದು ಅರ್ಧಗಂಟೆಯ ನಂತರವೇ. ಜ್ಞಾನ ಬಂದವರು ಮೊದಲು ತಮ್ಮ ಮೈ ಕೈ ಮುಟ್ಟಿ ನೋಡಿಕೊಂಡರು, ಪಕ್ಕದಲ್ಲಿದ್ದ ಡ್ರೈವರ್ ಅನ್ನೂ ಒಮ್ಮೆ ನೋಡಿದರು, ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು. ಇಬ್ಬರ ಮೇಲೂ ಗಾಯಗಳು ಹೋಗಲಿ ಒಂದು ಕೂದಲೂ ಕೊಂಕಿದ ಲಕ್ಷಣಗಳಿರಲಿಲ್ಲ. ಆ ವೇಳೆಗೆ ಡ್ರೈವರ್ ಕೂಡಾ ನಿಧಾನವಾಗಿ ಕಣ್ಣುಬಿಟ್ಟನು. ಚಾಮಿಯವರಂತೆಯೇ ಡ್ರೈವರ್ ಕೂಡ ನಡೆದ ಘಟನೆಯಿಂದ ಅತ್ಯಂತ ವಿಚಲಿತನಾಗಿದ್ದ, ಕಣ್ಣು ಮಿಟುಕಿಸಿ ತೆಗೆಯುವುದರ ಒಳಗೆ ಏನಾಯಿತೆಂದು ಅವನ ಗಮನಕ್ಕೂ ಬಂದಿರಲಿಲ್ಲ.
ಇಷ್ಟು ಹೊತ್ತಿಗಾಗಲೇ ಸ್ವಲ್ಪ ಸಾವರಿಸಿಕೊಂಡ ವೇಲು ಚಾಮಿ ಘಟನೆಯ ಸ್ವಲ್ಪ ಮೊದಲು ಗೋಚರಿಸಿದ ಒಂದು ದೃಶ್ಯದ ಬಗ್ಗೆ ಅತಿ ಗೊಂದಲಕ್ಕೀಡಾದವರಂತೆ ಕಂಡರು. ಇನ್ನೇನು ಟ್ರಕ್ ತಮ್ಮ ಕಾರನ್ನು ಡಿಚ್ಚಿ ಕೊಟ್ಟು ನುಚ್ಚುಗುಚ್ಚಾಗಿಸುತ್ತದೆ ಎಂದು ಭಾವಿಸಿದ ಚಾಮಿಯವರ ಕಣ್ಣಿನ ಮುಂದೆ ಒಂದು ವಿಶ್ವರೂಪದ ಹಸ್ತವೊಂದು ಬಂದು ತಮ್ಮ ಕಾರನ್ನು ಘಟನೆಯ ಸ್ಥಳದಿಂದ ಸುಮಾರು ನೂರು ಮೀಟರ್ ಗಳಿಗೂ ಹೆಚ್ಚಾದ ದೂರದಲ್ಲಿ ಮಗು ಗೊಂಬೆಯನ್ನು ಎತ್ತಿ ಇರಿಸಿದ ಹಾಗೆ ಇಟ್ಟ ದೃಶ್ಯ ಹಾದು ಹೋಯಿತು. ಸಿನಿಮೀಯ ಘಟನೆಯನ್ನು ಮೀರಿಸುವಂತೆ ನಡೆದ ಈ ಘಟನೆಯನ್ನು ಡ್ರೈವರ್ ಕೂಡ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಇದೆಲ್ಲವೂ ದೈವದ ಕೈವಾಡವೇ ಎಂದು ಬಲವಾಗಿ ನಂಬಿದ ಚಾಮಿ ಕಾಲಕ್ರಮೇಣ ಘಟನೆಯನ್ನು ಮರೆತು ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಂಡರು.
ಈ ಘಟನೆಯ ಕೆಲ ವರ್ಷಗಳ ಬಳಿಕ ತಮ್ಮ ತಂದೆಯವರನ್ನು ಹೃದಯಾಘಾತದಿಂದ ಕಳೆದುಕೊಂಡ ವೇಲು ಎರಡು ವರ್ಷಗಳ ಕಾಲ ಭಾರತ್ ವಿಜಯ್ ಮಿಲ್ಸ್ ನ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಹಳ್ಳಿಗೆ ಮರಳಿದರು. ತಂದೆಯ ಅನುಪಸ್ಥಿತಿಯಲ್ಲಿ ವೇಲುಚಾಮಿಗೆ ಊರಿನಲ್ಲಿ ಎರಡು ವರ್ಷ ದುಡಿದರೂ ಸಾಕಾಗದಷ್ಟು ಕೆಲಸ ಕಾರ್ಯಗಳಿದ್ದವು. ಚಾಮಿ ಅವರ ರಾಜೀನಾಮೆಯನ್ನು ಒಲ್ಲದ ಮನಸ್ಸಿನಿಂದ ಸ್ವೀಕರಿಸಿದ ಕಂಪನಿಯ ಸಿಇಒ, ಕಂಪನಿಯ ದ್ವಾರ ನಿಮಗಾಗಿ ಸದಾ ತೆರೆದಿರುವುದಾಗಿಯೂ ಮತ್ತು ತಾವು ಬೇಕೆಂದಾಗ ಮತ್ತೆ ಮರಳಿ ಬಂದು ತಮ್ಮ ಸ್ಥಾನ ಗ್ರಹಣ ಮಾಡಬಹುದೆಂದು ನುಡಿದಾಗ ವೇಲು ಅವರ ಗಂಟಲು ಉಬ್ಬಿಬಂದಿತ್ತು.
ಈ ಎರಡು ವರ್ಷಗಳಲ್ಲಿ ಮತ್ತೊಮ್ಮೆ ವೇಲು ಅವರಿಗೆ ಒಂದು ನಂಬಲಸದಳವಾದ ಘಟನೆ ಎದುರಾಯಿತು. ಮಧ್ಯಾನ್ಹದ ಬೇಸಗೆಯ ಒಂದು ದಿನ ವಿಶ್ರಾಂತಿಗಾಗಿ ತಮ್ಮ ಜಮೀನಿನಲ್ಲಿ ಇದ್ದ ಅತಿ ಹಳೆಯ ಮತ್ತು ವಿಶಾಲವಾದ ಮರದ ನೆರಳಿನಲ್ಲಿ ವೇಲು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಬಲವಾಗಿ ಬೀಸತೊಡಗಿದ ಗಾಳಿಯ ವೇಗಕ್ಕೆ ಮರ ಒಂದು ಕಡೆಗೆ ನಿಧಾನವಾಗಿ ಬಾಗುವುದಕ್ಕೆ ಮೊದಲಾಯಿತು. ಇಲ್ಲಿಂದ ಎದ್ದು ಓಡಬೇಕು ಎಂದು ವೇಲು ಎಣಿಸುವಾಗಲೇ ಸಾಕಷ್ಟು ಬಾಗಿದ ಮರ ಇನ್ನೇನು ಚಾಮಿಯನ್ನ ತನ್ನ ತೆಕ್ಕೆ ಯಲ್ಲಿ ತೆಗೆದುಕೊಳ್ಳುವುದಿತ್ತು, ವೇಲು ತಮ್ಮ ಕತೆ ಇನ್ನು ಮುಗಿದ ಹಾಗೆಯೇ ಎಂದು ಕಣ್ಮುಚ್ಚಿದರು. ಅತ್ಯಾಶ್ಚರ್ಯವೊಂದು ಕಾದಿತ್ತು, ಬಾಗಿದ ಮರ ಹಾಗೆಯೇ ಬೇರುಗಳ ಸಮೇತ ವಾಲಿದ ಸ್ಥಿತಿಯಲ್ಲಿಯೇ ನಿಂತಿತ್ತು. ಕೆಲ ನಿಮಿಷಗಳ ನಂತರ ಕಣ್ಣು ಬಿಟ್ಟು ನೋಡಿದ ವೇಲು ಅವರ ಕಣ್ಣುಗಳಿಗೆ ಹಿಂದೊಮ್ಮೆ ಕಂಡ ವಿಶ್ವರೂಪದ ಹಸ್ತ ಗೋಚರಿಸಿತು. ಕೆಳಗೆ ಬೀಳಲಿರುವ ಮರವನ್ನು ಬಳಸಿ ಹಿಡಿದ ಹಸ್ತ ವೇಲುವಿನ ರಕ್ಷಣೆ ಮಾಡಿತ್ತು. ಸ್ವಲ್ಪ ಸಾವರಿಸಿಕೊಂಡ ವೇಲು ತಡಬಡಿಸುತ್ತಾ ಮರದ ಬುಡದಿಂದ ಹೊರ ಓಡಿದ್ದಕ್ಕೂ ವೃಕ್ಷ ಅಗಾಧ ಶಬ್ದದೊಂದಿಗೆ ನೆಲಕ್ಕೆ ಉರುಳಿದ್ದಕ್ಕೂ ಸಮಯ ತಾಳೆಯಾಗಿತ್ತು.
ಮೇಲಿನ ಘಟನಾವಳಿಗಳನ್ನು ಹೇಳುತ್ತಾ ವೇಲುಚಾಮಿ ಒಂದು ರೀತಿಯ ಸಮ್ಮೋಹನ ಅವಸ್ಥೆಗೆ ತೆರಳಿದ ಭಾವನೆ ನನಗಾಯಿತು. ಕೆಲ ನಿಮಿಷಗಳ ಸಹಿಸಲಸಾಧ್ಯ ಮೌನ ಮುರಿದ ವೇಲು, “ನೀವಿದನ್ನು ನಂಬುತ್ತೀರಾ?” ಎಂದು ನನ್ನನ್ನು ಪ್ರಶ್ನಿಸಿದರು. ನನಗೆ ಇಂತಹ ಅನುಭವಗಳು ವೈಯಕ್ತಿಕ ಮಟ್ಟದಲ್ಲಿ ಆಗದೇ ಇದ್ದರೂ ಇಂತಹ ಘಟನೆಗಳ ಸಾಧ್ಯತೆಗಳನ್ನ ತಳ್ಳಿ ಹಾಕಲು ಆಗದು ಎಂದೆ.ಅಲ್ಲಿಂದ ಮುಂದೆ ನನ್ನ ಮತ್ತು ಚಾಮಿಯ ನಡುವೆ ಒಂದು ಮಧುರವಾದ ಅಲೌಕಿಕ ಸಂಬಂಧ ಏರ್ಪಟ್ಟಿತು. ಈ ಸಂಬಂಧ ವ್ಯಾವಹಾರಿಕ ಪರಧಿಯಿಂದ ದೂರವಾಗಿದ್ದು. ಚಾಮಿಯವರು ಅಹಮದಾಬಾದ್ ಗೆ ಕೆಲಸ ನಿಮಿತ್ತ ಬಂದಾಗಲೆಲ್ಲಾ ನನಗೆ ಫೋನಾಯಿಸುತ್ತಿದ್ದರು ಮತ್ತು ಸಾಧ್ಯವಾದಾಗಲೆಲ್ಲಾ ನಮ್ಮ ಭೇಟಿ ನಡೆಯುತ್ತಲೇ ಇತ್ತು. ಚಾಮಿಯವರ ಅಲೌಕಿಕ ಅನುಭವಗಳಿಗೆ ನಾನು ಮೌನ ಮಿಶ್ರಿತ ಕಿವಿಗಳಾಗಿದ್ದು ಇದಕ್ಕೆ ಮುಖ್ಯ ಕಾರಣವೆನಿಸುತ್ತದೆ.
ನಮ್ಮ ಪರಿಚಯದ ನಂತರ ಗಾಢವಾಗಿದ್ದ ನಮ್ಮ ಸಂಬಂಧ ತದ ನಂತರದ ದಿನಗಳಲ್ಲಿ ತುಸು ಕಡಿಮೆಯಾದಂತೆ ಅನ್ನಿಸಿದರೂ ನಮ್ಮಿಬ್ಬರ ಮಧ್ಯೆ ಹದಿನೈದು ದಿನಗಳಿಗೆ ಒಮ್ಮೆಯಾದರೂ ಫೋನಿನಲ್ಲಿ ಮಾತುಕತೆ ನಡೆಯುತ್ತಿತ್ತು.
ಹೀಗೇ ದಿನಗಳು ಸಾಗುತ್ತಾ ಇರುವಾಗ, ಒಂದು ದಿನ ನಾನು ಆಫೀಸ್ ನಲ್ಲಿ ಇರುವ ವೇಳೆ ವೇಲು ಅವರ ಸಹೋದ್ಯೋಗಿ ಉಷಾಭಟ್ ರಿಂದ ಒಂದು ಫೋನ್ ಕರೆ ನನಗೆ ಬಂದಿತು. “ಸರ್, ನಿನ್ನೆ ವೇಲು ಅವರು ಆಫೀಸ್ ಮೆಟ್ಟಿಲು ಇಳಿಯುವಾಗ ಆಯತಪ್ಪಿ ಬಿದ್ದು ತಲೆಗೆ ಗಾಯವಾಗಿದೆ. ಗಂಭೀರವಾದ ಗಾಯಗಳಾಗಿಲ್ಲ, ಸರ್ ನಿಮಗೆ ವಿಷಯ ತಿಳಿಸಿ ಎಂದು ಹೇಳಿದ್ದಾರೆ” ಎಂದರು ಮತ್ತು ವೇಲು ಅವರನ್ನು ಅಹಮದಾಬಾದ್ ನ ವಿ. ಎಸ್. ಆಸ್ಪತ್ರೆಗೆ ಸೇರಿಸಿದ್ದಾರೆ ಎಂದರು. ವಿ. ಎಸ್. ಆಸ್ಪತ್ರೆ ಆಶ್ರಮ ರಸ್ತೆಯಲ್ಲಿಯೇ ಇದ್ದು ನಮ್ಮ ಆಫೀಸ್ ಗೆ ಕೂಗಳತೆ ದೂರದಲ್ಲಿಯೇ ಇದೆ. ತಡಬಡಿಸಿ ಎದ್ದ ನಾನು ಆಸ್ಪತ್ರೆಗೆ ದೌಡಾಯಿಸಿದೆ.
ಚಾಮಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಭರ್ತಿ ಮಾಡಿ ಇಪ್ಪತ್ತನಾಲ್ಕು ಘಂಟೆಗಳ ಕಾಲವಾದ ನಂತರವೇ ಅವರ ಸ್ಥಿತಿಯ ಬಗ್ಗೆ ಹೇಳುತ್ತೇವೆ ಎಂದು ಡಾಕ್ಟರ್ ಶೆರಾಫ್ ನುಡಿಯಲಾಗಿ ಎರಡು ದಿನಗಳ ನಂತರ ಮತ್ತೆ ಆಸ್ಪತ್ರೆಗೆ ಬರೋಣ ಎಂದುಕೊಂಡು ಆಫೀಸ್ ಗೆ ಮರಳಿದೆ.
ಎರಡು ದಿನಗಳ ನಂತರ ಆಸ್ಪತ್ರೆಗೆ ಬೇಟಿ ಕೊಟ್ಟವನಿಗೆ ಸಾಮಾನ್ಯವಾರ್ಡ್ ನಲ್ಲಿ ವೇಲು ಅವರು ಭರ್ತಿಮಾಡಿದ ಸುದ್ದಿ ದೊರೆಯಿತು. ಅವರ ವಾರ್ಡ್ ಗೆ ಹೋದ ನನ್ನನ್ನು ಅವರ ಪಕ್ಕದಲ್ಲಿಯೇ ನಿಂತಿದ್ದ ಮಿಲ್ಸ್ ನ ತಾಂತ್ರಿಕ ವಿಭಾಗದ ತ್ರಿವೇದಿಯವರು ಗುರುತಿಸಿ ಮಲಗಿದ್ದ ವೇಲು ಅವರನ್ನು ಮೆದುವಾಗಿ ತಟ್ಟಿ ಎಬ್ಬಿಸಿದರು. ನನ್ನನ್ನು ನೋಡಿ ವೇಲು ಅವರ ಕಣ್ಣುಗಳಲ್ಲಿ ಮಿಂಚು ಹೊಳೆದಂತಾಯಿತು. ಮತ್ತದೇ ತಮ್ಮ ಎಂದಿನ ಸಣ್ಣ ಧ್ವನಿಯಲ್ಲಿ ತಮಗಾದ ಈ ಸಲದ ಅನುಭವದ ಬಗ್ಗೆ ಮಾತನಾಡತೊಡಗಿದರು. ಎಂದಿಗಿಂತ ಹೆಚ್ಚು ಕೃಷವಾದ ಧ್ವನಿಯಲ್ಲಿ ವೇಲುಚಾಮಿ ಆಡಿದ ಯಾವ ಮಾತುಗಳೂ ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ. ಪಕ್ಕದಲ್ಲಿಯೇ ತ್ರಿವೇದಿಯವರು ನಿಂತಿದ್ದುದರಿಂದ ಘಟನೆಯ ಬಗ್ಗೆ ಹೆಚ್ಚು ವಿವರಗಳನ್ನು ಕೇಳಲಿಕ್ಕೆ ಹೋಗಲಿಲ್ಲ. ಮುಂದೆ ಎಂದಾದರೂ ಒಂದು ದಿನ ವೇಲು ಅವರ ಬಾಯಿಯಲ್ಲಿ ಈ ಘಟನೆಯ ವಿವರ ಪಡೆಯುತ್ತೇನೆ ಎಂದುಕೊಂಡು ಅವರಿಗೆ ಶೀಘ್ರ ಗುಣಮುಖರಾಗಲು ಹಾರೈಸಿ ಆಸ್ಪತ್ರೆಯಿಂದ ಹೊರಬಂದೆ.