ಹಾಡೆಂಬ ಕಲಾರಾಧನೆಯ ಬೆಂಬತ್ತಿ…
ಆಗಿನ್ನೂ ಮನೆ ಮನೆ ಅಂಗಳಗಳಲ್ಲೇ ಜರುಗುತಿದ್ದ ಮದುವೆಗಳು.ಹಂದರದ ಕಂಬ ನೆಡುವ,ತೆಂಗಿನಗರಿಗಳನ್ನ ಹುಡುಕಿ ತರುವ,ಎಲ್ಲರೂ ಸೇರಿ ಮಾವಿನ ತೋರಣ ಕಟ್ಟುವ, ದೊಡ್ಡ ದೊಡ್ಡ ಹಂಡೆಗಳು,ಡ್ರಮ್ಮಗಳಿಗೆ ಊರಾಚೆಯ ಎರಡು ಮೂರು ಕಿಲೋಮೀಟರ್ ಗಳಿಂದ ಸರತಿ ಪ್ರಕಾರವಾಗಿ ಓಣಿಯ ಹರೆಯದವರೆಲ್ಲಾ ಸೇರಿ ನೀರು ಹೊತ್ತು ತರುವ,ಹೆಣ್ಣು ಮಕ್ಕಳು ಕೋಣೆ ತುಂಬಾ ಮನೆಗೊಂದು ಆಳಿನಂತೆ ಬಂದು ಕಲ ಕಲ ಮಾಡುತ್ತಾ ಅಡುಗೆಗೆ ತಯಾರಿ ನಡೆಸುತ್ತಿರುವಾಗಲೇ ಬಣಗಾರ ಕೆಂಚಪ್ಪನೋ,ಸಂಗದ ಮನೆ ಹೇಮಣ್ಣನೋ ಬಂದು ” ನಗು ನಗುತಾ ನಲೀ ನಲೀ ಏನೇ ಆಗಲಿ..”,” ಮುತ್ತಿನಂಥ ಮಾತೊಂದು ಗೊತ್ತೇನಮ್ಮ ನಿನಗೆ ಗೊತ್ತೇನಮ್ಮಾ,,” ಅಂತ ಹಾಡು ಹಾಕುತ್ತಲೇ ಓಣಿಯ ಮಕ್ಕಳು ಓ… ಎಂದು ಓಡಿ ಬರುವ ಸಂಭ್ರಮ,ಮನೆ ಮನೆಯ ಕಟ್ಟೆಗೆ ಬಂದು ನಾದಕ್ಕೆ ಕಿವಿ ಹೊಂದಿಸಿಕೊಳ್ಳುವ ಆ ಸಂದೇಶ ಬೀರುವ ಗಳಿಗೆಗಳು ಎಷ್ಟೊಂದು ಚಂದ! ಹಾಡುಗಳ ಜೊತೆ ಜೊತೆಗೇ ಸಂಪತ್ತಿಗೆ ಸವಾಲ್,ಬಬ್ರುವಾಹನ,ಸನಾದಿ ಅಪ್ಪಣ್ಣ,ಭಕ್ತ ಸಿರಿಯಾಳ,ಗುರು ರಾಜು ನಾಯ್ಡು ಅವರ ಹರಿ ಕಥೆಗಳು.ಮನೆಯವರ ಸಂತೋಷದಲ್ಲಿ ಓಣಿಯವರ ಸಂತೋಷವನ್ನೂ ಒಂದು ಮಾಡುತಿದ್ದ ಆ ಸೊಗಸು ಅವರ್ಣನೀಯ!.
” ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು”,”ಒಂದೇ ಒಂದು ಆಸೆಯು ನಿನ್ನ ನಾ ನೋಡಲು..”,ಹೇ..ನನಗಾಗಿಯೇ ನಿನ್ನಂದವೂ..ನಿನಗಾಗಿಯೇ ಈ ಜನ್ಮವೂ….”,ಆಸೆ ಹೇಳುವಾಸೆ ಹೇಳಲಾರೆ ..ತಾಳಲಾರೆ”,” ಹಾವಿನ ದ್ವೇಷ ಹನ್ನೆರಡು ವರುಷ”,”ತೇರ ಏರಿ ಅಂಬರದಾಗೆ ನೇಸರ ನಗುತಾನೆ”,”ಝಾಡಿಸಿ ಒದಿ ಅವನನು ಥೂ ಎಂದು ಉಗಿ…,,”,ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ,ಗಂಗಮ್ಮಾ ನನ್ನ ಎದೆಯಲಿ ಢವ ಢವ ಕೇಳಮ್ಮಾ,,ಈ ಗುಲಾಬಿ ಹೂವು ನಿನಗಾಗಿ,ಆಕಾಶದಿಂದ ಧರೆಗಿಳಿದ ರಂಭೇ..ಎಷ್ಟೊಂದು ಮೆಲೊಡಿ ಮತ್ತು ಜನಪ್ರಿಯ ಹಾಡುಗಳು ಆ ಮದುವೆ ಸಂಭ್ರವನ್ನ ಇಮ್ಮಡಿಸುತ್ತಿದ್ದವು.
ಮುರು ದಿನಗಳ ಆ ಮದುವೆಗಳಲ್ಲಿ ಸೊಸೆಯಂದಿರು ಮಾವಂದಿರ ಹರಿಷಿಣಗಳ ಸಂಭ್ರಮ,ಮನೆ ಮನೆಗೆ ಹೋಗುವ ಕೋರೂಟ,ಗಂಗೆಗೆ ಹೋಗುವ,ಸುರಿಗಿ ಸುತ್ತುವ,ಮಾಂಗಲ್ಯ ಧಾರಣೆಗಳ ತನಕ ಮುಂದೆ ಮುಂದೆ ಹೊರಟ ಸನಾಯಿ/ ಬ್ಯಾಂಡ್ ಗಳವರ ಸಿನಿಮಾ ಹಾಡುಗಳಲ್ಲಿ ಎಷ್ಟೊಂದು ವೈವಿಧ್ಯಗಳಿದ್ದವು.ಮೆರವಣಿಗೆಗಳಂತೂ ಕಿರಿಯರನ್ನೇ ಗುರಿಯಾಗಿಸಿಕೊಂಡು ಅವರಿಗಾಗಿ ದಶಕ ದಶಕಗಳ ಕನ್ನಡ, ತೆಲುಗು,ಹಿಂದಿ ಹಾಡುಗಳ ಹೆಜ್ಜೆ ಹೆಜ್ಜೆಗಳಿಗೂ ಸುರಿವ ಧೋ ಮಳೆಯಂತೆ ಸುರಿವಾಗ.ನಿಂತ ನಿಂತಲ್ಲೇ ದೊಡ್ಡ ಗುಂಪು..ಸಿಳ್ಳೆ ಕ್ಯಾಕೆ,ಸಿಕ್ಕ ಸಿಕ್ಕವರ ಮಜಬೂತು ದೇಶೀ ಸ್ಟೆಪ್ ಗಳು! ಈ ನಡುವೆ ಬಂಡಿಯ ಎತ್ತುಗಳು ಎಲ್ಲಿ ಬೆದರುವವೋ ಎಂದು ಆಕಡೆ ಈ ಕಡೆ ಮುಗುದಾಣ ಹಿಡಿದವರು.ನೃತ್ಯಕ್ಕೆ ಮೇಳಕ್ಕೆ ಬೆವರಿಳಿಸುತ್ತಿದ್ದರು.ಬಂಡಿಯಲ್ಲಿ ಮಕ್ಕಳೊಂದಿಗೆ ಕುಳಿತ ಜೋಡಿಗಳಂತೂ ದಸರ ಅಂಬಾರಿಯಲ್ಲಿ ಕುಳಿತವರಂತೆಯೇ ಘನ ಗಂಬೀರ ವದನರಾಗಿರುತ್ತಿದ್ದರು. ಮೆರವಣಿಗೆಯ ಆರಂಭ ಮನೆಯವರ ಕೈಯಲ್ಲಿದ್ದರೆ ಮುಕ್ತಾಯ ಮಾತ್ರ ಓಣಿಯವರ ಉತ್ಸಾಹದ ಮೇಲೆಯೇ ನಿಂತಿರುತಿತ್ತು.ಮೆರವಣಿಗೆಯಲ್ಲಿ ಮದು ಮಕ್ಕಳಂತೆಯೇ ಮುಖ್ಯವೆನಿಸುವವರು ಸದಾ ಅಪ್ ಡೇಟ್ ಆಗಿ ಕುಣಿವ ಹುಡುಗರ ಹುಚ್ಚೆಬ್ಬಿಸುವ ಹಾಡು ನಡಿಸುವವರೇ!.
ಸಿನಿಮಾ ಹಾಡುಗಳು ಮದುವೆಯ ಜೋಡಿಗಳನ್ನ ಬೆಸೆಯುವಂತೆಯೇ ದೇವರ ಭಕ್ತರನ್ನೂ ಸೇರಿಸುವ ವಿಭಿನ್ನ ದಾರಿಗಳು.ಹಳ್ಳಿಗಳಲ್ಲಿ ದೇವರ ಆಚರಣೆಗೆ ಮಡಿ ಮೈಲಿಗೆಗಳಿದ್ದರೆ ಸಿನಿಮಾ ಹಾಡುಗಳಿಗೆ ಅಂತಹ ಮಡಿ ಮೈಲಿಗೆಗಳಿಲ್ಲ. ಗುಡಿಗಳಲ್ಲಿ ಕಾರ್ತೀಕಕ್ಕೆ, ಜಾತ್ರೆಗೆ ಮಿಡಿವ ಹಾಡುಗಳ ಮುಕ್ತತೆಗಳು ಅಚ್ಚರಿ ಹುಟ್ಟಿಸುತ್ತವೆ.
ಹಳೆಯ ಮುದುಕಿಯಂತೆ ಮೂಲೆಯಲ್ಲಿದ್ದ ಚಳ್ಳಿ ಮರದ ದುರುಗಮ್ಮನಿಗೆ ಜಾತ್ರೆಯಾಗಿ ಎಷ್ಟು ವರುಷವಾಯಿತೋ ನೆನಪೇ ಇಲ್ಲ.ಆದರೆ ಕಾರ್ತಿಕಕ್ಕೆ ಮಾತ್ರ ಜನ ವಾರದಿಂದಲೇ ಸುಣ್ಣ ಬಣ್ಣಗಳಲ್ಲಿ ಗುಡಿಯ ಮುಖತೊಳೆಯುತ್ತಾರೆ.
ತೋರಣ ,ಹೂಹಾರಗಳ ಉಡುಗೆ ತೊಡಿಸುತ್ತಾರೆ,ದೀಪಗಳ ಒಡವೆ ಹಚ್ಚುತ್ತಾರೆ.ಸಂಜೆಯಾಗುತ್ತಲೆ ಆಯಮ್ಮನೇ ನಾಚುವಂತೆ ” ಸುತ್ತಮುತ್ತಲೂ ಸಂಜೆಗತ್ತಲೂ ಇಲ್ಲೇ ಬಂತು ಸ್ವರ್ಗಾ..ಎಲ್ಲಾ ತೇಲಾಡುವ”ಒಳಗೆ ಸೇರಿದರೆ ಗುಂಡು,ರಸಿಕಾ.. ರಸಿಕಾ…ಪೋನು ಇಲ್ಲ ಮೆಸೇಜು ಇಲ್ಲ,ಸೀರೆಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರು” ಅಂತ ಹಾಡುಗಳನ್ನ ಹಾಕುತ್ತಾರೆ.
ಇನ್ನ ಬಂಸದೇವರ ಗುಡಿಯಲ್ಲಿ ಭಕ್ತರು ಎಡೆತರುವ ವೇಳೆಯಾಗುತ್ತಲೇ ಇಂದಿಗೂ ” ಖರಾಬು,ಬಾಸು ಖರಾಬು,” ಟಗರು ಬಂತು ಟಗರು,”,ಅಲ್ಲಾಡ್ಸ ಅಲ್ಲಾಡ್ಸ”,” ಕಣ್ಣು ಹೊಡಿಯಾಕ ಕಲತಾನಿ” ಹಾಡುಗಳ ಸ್ವಾಗತ ನೀಡುತ್ತಾರೆ.
ಹಳ್ಳಿಯ ಪೂಜಾರಿಗಳಿಗೂ ಸಿನಿಮಾ ಹಾಡಿನ ವಿಚಾರದಲ್ಲಿ ಖಂಡಿತ ಮಡಿವಂತಿಕೆಗಳಿಲ್ಲ.ಅವರಿಗೆ ಜನ ಸೇರಬೇಕು.ಮಕ್ಕಳು ಮರಿಗಳು ಅಂಗಳದ ತುಂಬಾ ಕುಣಿದಾಡಬೇಕು.ಇಲ್ಲಿನ ಗುಡಿಗಳೂ ರೈತರಂತೆಯೇ ವಾರಕ್ಕೊಮ್ಮೆ ,ಮೈತೊಳೆಯುತ್ತವೆ. ಹಬ್ಬಬಕ್ಕೊಮ್ಮೆ ,ಕಾರ್ತಿಕಕ್ಕೊಮ್ಮೆ ಹೊಸ ಮಡಿ ಉಡುತ್ತವೆ.ಜನರೂ ವಾರಕ್ಕೊಮ್ಮೆ ಅಂಗಳಕ್ಕೆ ಬಂದು ಸಣು ಮಾಡಿ “ಯಪ್ಪಾ ಬೇಸದಿಯಾ” ಅಂತ ಪೂಜಾರಪ್ಪನನ್ನ ವಿಚಾರಿಸಿಕೊಳ್ಳುವುದನ್ನ ಬಿಟ್ಟರೆ; ಗುಡಿಗೆ ಎಣ್ಣೆ,ಹೂವು,ಹಣ್ಣು ಎಡೆಗಳು ಹರಿದು ಬರುವುದು ವಾರ-ಇಲ್ಲದಿದ್ದರೆ ಅಮವಾಸೆ ಹುಣ್ಣಿಮಿಗೆ ಮಾತ್ರ.ದೊಡ್ಡೂರಿನ ಜನರ ವರ್ಗ ತಾರತಮ್ಯಗಳಂತಯೇ ಹಳ್ಳಿಯಲ್ಲೂ ಕೆಲವು ಗುಡಿಗಳಿಗೆ ಬೇಬಸ್ಟಿಗಳಿವೆ!.
ಗತಿ ಇಲ್ಲದ ಇವಕ್ಕೆ ಜಾತ್ರೆಗಳಲ್ಲಿ ಮಾತ್ರ ಅಲಂಕಾರ ವಿದ್ಯುತ್ ದೀಪಗಳ ಝಗಮಗ .ಉಳಿದ ದಿನಗಳಲ್ಲಿ ಅನಾಥರಂತೆಯೇ ಗಾಳಿ ಮಳೆಗಳಿಗೆ ಮೈಯ್ಯೊಡ್ಡಿಕೊಂಡಿರುತ್ತವೆ.ಪೂಜೆಗೆ ಕಾಡು ಹೂ ಬಳಸುವ ಈ ದೇವರುಗಳಿಗೆ ಭಕ್ತಿಗೀತೆಗಳ ಗುಚ್ಚವೆಲ್ಲಿಯದು? ಸಿನಿಮಾ ಹಾಡುಗಳೇ ಈ ದೇವರಿಗೆ ಜನ ಸೇರಿಸುವ ರಹದಾರಿ!.
ಕಾಲದಿಂದ ಕಾಲಕ್ಕೆ ನಾಡಿನಲ್ಲೆಲ್ಲಾ ಭಕ್ತಿ ಹಾಡುಗಳ ಪರಿಮಳದ ಬಣ್ಣ ಬಣ್ಣಗಳ ಹಾಡು ಹಲಗೆಗಳನ್ನ ಸರ್ಕಾರಗಳ ಗೂಟದ ಕಾರಿನ ಬೆಳ್ಳನೆ ಅಂಗಿಯ ಲೀಡರುಗಳಂತೆ ಭಿನ್ನ ಭಿನ್ನ ದೈವಗಳೇ ಪಡೆಯುತ್ತಾ ಬಂದಿವೆ.ಮಂಜುನಾಥ,ಆಂಜಿನೇಯ,ರಾಘವೇಂದ್ರ, ಅಯ್ಯಪ್ಪ ನ ನಂತರವೇ ಅಲ್ಲಲ್ಲಿ ಮಹಿಳಾ ಮುಂಚೋಣಿ ಲೀಡರ್ ಗಳಂತೆ ಚಾಮುಂಡಿ,ಅನ್ನಪೂರ್ಣೆ,ಯಲ್ಲಮ್ಮ ,ಮಾರಿಕಾಂಬ ಮೊದಲಾದ ದೊಡ್ಡ ದೊಡ್ಡ ಮಹಿಳಾ ಲೀಡರ್ ಗಳೂ ಕಂಡಿದ್ದಾರೆ. ದೇವರಿಗೆ ಮೀಸಲಾಗುವ ಭಕ್ತಿಗೀತೆಗಳಲ್ಲಿ ಕೆಲವು ಕಡೆ ಸಿನಿಮಾ ಹಿಟ್ ಹಾಡುಗಳ ನೆರಳೂ ಅಡಗಿಕೊಂಡಿವೆ.ಆಯಾ ವರ್ಷದ ಸೂಪರ್ ಹಿಟ್ ಸಾಂಗ್ ಗಳನ್ನ ಭಕ್ತಿಗೀತೆಗಳನ್ನಾಗಿ,ಭಜನೆ ಪದಗಳನ್ನಾಗಿ,ಸುಪ್ರಭಾತದ ಹಾಡುಗಳನ್ನಾಗಿ ಹೆಣೆದು ಜಾತ್ರೆಗಳಲ್ಲಿ ಹಣ ಮಾಡಿಕೊಳ್ಳುವ ಕಂಪನಿಗಳೂ ಇಲ್ಲದಿಲ್ಲ.ಕೆಲವೊಮ್ಮೆ ಸೂಪರ್ ಹಿಟ್ ಹಾಡುಗಳ ವಿಶಿಷ್ಟ ನೋಡಿ ಇವನ್ನ ಬರೆದವ ಬಡವನಾಗಿಯೇ ಉಳಿದರೆ ಹಾಡುವವರು ಸಿರಿವಂತರಾಗಿದ್ದಾರೆ.
ಸಿನಿಮಾ ಹಾಡುಗಳು ಹೊಸ ಹೊಸ ಜೋಡಿಗಳನ್ನ ಬೆಸೆಯುವಂತೆಯೇ,ಎಲ್ಲೆಲ್ಲೋ ಇದ್ದ ಭಕ್ತರನ್ನ ಕಲೆಸುವಂತೆಯೇ ಬಿಕ್ಷುಕರ, ಅನಾಥರ ,ಕುರುಡರ ಹೊಟ್ಟೆ ತುಂಬಿಸುತ್ತಿವೆ. ಮೊನ್ನೆ ಮೊನ್ನೆ ಜೀ ಕನ್ನಡದ ಹಾಡಿನ ಮೂಲಕ ಮಧುಗಿರಿಯ ಕುರುಡು ಸೋದರಿಯರು ಸೂರು ಪಡಕೊಂಡದ್ದು ಹಾಡಿನಿಂದಲೇ..
ಗಣೇಶ ಉತ್ಸವಗಳಲ್ಲಂತೂ ಆರ್ಕೆಸ್ಟ್ರಾಗಳದ್ದೇ ದೊಡ್ಡ ಸದ್ದು.ಅಲ್ಲೂ ಭಕ್ತಿಯ ಹಾಡು ಆರಂಭದ ಅರ್ಪಣೆ ಮಾತ!್ರ ಉಳಿದಂತೆ ಗಣಪನೇ ಬೆಚ್ಚಿ ಬೀಳುವಂತೆ ಅಲ್ಲಿ ಮೆರೆಯುವುದೇ ಟಾಪ್ ಹಿಟ್ ಹಾಡುಗಳು.ಜನಕ್ಕೂ ಅಲ್ಲಿ ಭಕ್ತಿ ಕಾಣಲ್ಲ. ಬದಲಿಗೆ ಮೆಚ್ಚಿ ಹೀರೋಗಳ ಹಾಡು ಬಂದರೆ ಸಾಕು ಸಿಳ್ಳೆ,ಕೇಕೆ,ಕೆಲವೆಡೆ ಪೋಲೀಸರಿಗಂತೂ ಸಾಕು ಸಾಕು ಅನಿಸುವಷ್ಟು ಈ ಉರವಣಿಗೆ ನಡೆಯುತ್ತದೆ. ನಡುವೆ ಸುಳಿವ ಮಿಮಿಕ್ರಿಗಳಂತೂ ಗಣೇಶನನ್ನೇ ಹಿಂದಿಕ್ಕುವಂತೆ ” ಇದು ಆರ್ಮುಗಂ ಕೋಟೆ ಕಣೋ..”,ಅಣ್ತಮ್ಮಾ ನಾನ್ ಬರೋವರ್ಗು ಬೇರೆಯವರ ಹವಾ ನಾ ಬಂದಮೇಲೆ ನಂದೇ ಹವಾ” ” ದಮ್ ಬೇಕಲೇ..” ತರದ ಡೈಲಾಗ್ ಗಳು ಬಹುತೇಕ ನಗರಗಳದ್ದು ಎಂಬುದೂ ಗಮನಾರ್ಹ.
ಸಿನಿಮಾ ಹಾಡುಗಳು ಹಳ್ಳಿಯಲ್ಲಿ ನಡೆವ ಸಾಮಾಜಿಕ ನಾಟಕಗಳನ್ನಂತೂ ಸಂಪೂರ್ಣ ಆವರಿಸಿಕೊಂಡಿವೆ. ನಾಟಕಗಳ ವಿಲನ್ ಗಳು ಹಾಡಿಗೆಂದೇ ಬಲ್ಪಿನ ಜರ್ಕಿನ್,ಬಣ್ಣಗಳ ಮಫಲರ್,ಒಳ್ಳೊಳ್ಳೆಯ ಕನ್ನಡಕಗಳನ್ನ ಸಿರಿವಂತರ ಮನೆಗಳಿಗೆ ಹೋಗಿ ಕಾಡಿ ಬೇಡಿ ಒದಗಿಸಿಕೊಳ್ಳುತ್ತಾರೆ.ಕಾಮಿಡಿಯವರೂ ಕಡಿಮೆಯಲ್ಲ ಅವರಿಗೂ ಹಾರ್ಮೋನಿಯಂ ಮಾಸ್ತರ್ ಹಿಟ್ ಸಾಂಗ್ಸಗಳನ್ನ ಮೀಸಲಿರಿಸುತ್ತಾನೆ.ವಿಪರ್ಯಾಸವೆಂದರೆ ಹೀರೋ ಮಾತ್ರ ಅದೇ ಹಳೇ ಅಂಗಿ ಲುಂಗಿಯೋ,ಪ್ಯಾಂಟು,ಶರ್ಟಗಳಲ್ಲಿಯೋ ಕರುಣೆಯನ್ನ ಉಕ್ಕಿಸುವಂತಿರುತ್ತಾನೆ.ಆರಂಭಕ್ಕೆ ಮಾತ್ರ ಸೊಗಸಾದ ಸಿನಿಮಾ ಗೀತೆ ಪಡೆದ ಹೀರೋಯಿನ್ ಆನಂತರ ಬರೀ ಕಣ್ಣೀರಿಗೇ ಮೀಸಲಾಗುತ್ತಾಳೆ.ಸಿನಿಮಾ ಹಾಡುಗಳ ಪ್ರಭಾವ ಬಯಲಾಟಗಳನ್ನೂ ಬಿಟ್ಟಿಲ್ಲ.ಅದು ಮಹಾಭಾರತ ನಾಟಕ ಅಭಿಮನ್ಯು ಉತ್ತರೆ ಪೇಟೆಗೆ ಹೊರಟಿದ್ದಾರೆ ಆಗ ” ಜಟಕಾ ಕುದುರೆ ಹತ್ತಿ ಪೇಟೆಗೋಗುಮಾ..” ಎಂಬ ಹಾಡು ನುಗ್ಗಿ ಬಿಡುತ್ತದೆ.ಕಂಪನಿ ನಾಟಕಗಳಂತೂ ತಮ್ಮ ಕಥಾವಸ್ತು ಕೈಕೊಡುತ್ತಿದ್ದೆ, ಗಲ್ಲಾ ಪೆಟ್ಟಿಗೆ ತುಂಬಿಸುತ್ತಿಲ್ಲ! ಎನಿಸುತ್ತಲೇ ಮಧ್ಯದೊಳಗೆ ಅದು ಅನಾವಶ್ಯಕ ವೆನಿಸಿದರೂ ಸಾಮಾನ್ಯ ಜನರಿಗಾಗಿಯೇ ” ಕುಮಾರಿ ಆಶಾ ಅವರ ನೃತ್ಯ ನೋಡಲು ಮರೆಯದಿರಿ ಎಂದು ತಿಜೋರಿಗಾಗಿಯೇ “ಚೋಲಿಕೆ ಪೀಚೆ ಕ್ಯಾ ಹೈ “,”ನಾಗಿನ್ ನಾಗಿನ್”,”ಎಕ್ ದೋ ತೀನ್” ಹಾಡುಗಳನ್ನ ಮೀಸಲಿರಿಸುತ್ತಾರೆ.
ಸಿನಿಮಾ ಹಾಡುಗಳು ರೇಡಿಯೋವನ್ನ,ಟೇಪ್ ರಿಕಾರ್ಡರ್ ಗಳನ್ನ ಆವಸಿದಂತೆಯೇ ಮೊಬೈಲ್ ಗಳನ್ನ ಹೊಕ್ಕು ಹಕ್ಕು ತಮ್ಮ ಸ್ಥಾಪಿಸಿಕೊಂಡಿವೆ.ಶಾಲಾ ಹುಡುಗನಿರಲಿ,ಸುಣ್ಣ ಹೊಡೆವವನಿರಲಿ, ಎಮ್ಮೆ ಕಾಯುವವನಿರಲಿ,ಕಛೇರಿಯ ನೌಕರಿಯಲ್ಲಿರಲಿ ಮೊಬೈಲಗಳಲ್ಲಿ ಗುನುಗುವುದು ಮಾತ್ರ ಸಿನಿಮಾ ಹಾಡುಗಳೇ.ಮೊಬೈಲ್ ಎಂತದ್ದೇ ಇರಲಿ ಅದರ ಬಳಕೆ ಮಾತ್ರ ಬಹುತೇಕ ಎರಡೇ ಸಂಗತಿಗೆ ಒಂದು ಹಾಡು ಇನ್ನೊಂದು ಕ್ಯಾಮಾರಾ..
ಸಿನಿಮಾ ಹಾಡುಗಳ ದುರಂತವೆಂದರೆ ಟಿ.ವಿ. ರಿಯಾಲಿಟಿ ಷೋಗಳಲ್ಲಿ ಹಳ್ಳಿಗರಿಂದಲೇ ಡ್ರಾಮಾ ಮಾಡಿಸುತ್ತವೆ.ಅವರ ತೀರ ಸರಳ ಸಂಗತಿಗಳನ್ನೂ ಅತಿ ಎನ್ನಿಸುವಂತೆ ವಿಜೃಂಭಿಸುತ್ತಾರೆ.ಅಲ್ಲಿ ಪ್ರತಿಭೆಗಿಂತಲೂ ಟಿ.ಆರ್.ಪಿ.ಯೇ ಪ್ರಧಾನ!.ಟಿ.ವಿ.ಷೋಗಳಿಗೆ ಹಾಡು ಮತ್ತು ಹಾಡು ನೀಡುವ ಸಹಜ ಸಂತೋಷಕ್ಕಿಂತಲೂ ಹಾಡುವವರ ಬದುಕಿನ ಅನುಕಂಪ ಬೇಕು,ಕಣ್ಣೀರು ಬೇಕು,ಇವರಿಗೆ ತಮ್ಮ ಟಿ.ಆರ್.ಪಿ.ಗಾಗಿ ಹಾಡಲು ಬರುವವರನ್ನೇ ಕೆಲವೇಳೆ ಅನಗತ್ಯ ಜೋಕರ್ ಗಳನ್ನಾಗಿ ಮಾಡಿ ನಿಲ್ಲಿಸುವ ಉಮೇದು.ತೀರ್ಪುಗಾರರು ” ಪ್ರೇಕ್ಷಕರ ಓಟಿನ ಮೇಲೆಯೇ ಅಂತಿಮ ಸ್ಪರ್ಧಿಗಳ ಗೆಲುವು”.ಎನ್ನುವ ಕುರುಡುತನಗಳ ನಿರ್ಧಾರಗಳು ವಿಚಿತ್ರವೆನಿಸದಿರವು.ಕೆಲವೊಮ್ಮೆ ಗೆದ್ದವರಿಗಿಂತಲೂ ಸೋತವರೇ ದೊಡ್ಡ ದೊಡ್ಡ ಹಾಡುಗಾರರಾಗಿಯೂ,ಗೆದ್ದವರು ಮತ್ತೆ ಮತ್ತೆ ವಿದೂಷಕರಂತೆಯೇ ಮುಂದುವರೆಯುತ್ತಿರುವುದು ವಿಪರ್ಯಾಸ.ಇಲ್ಲಿ ಆಯ್ಕೆ ‘ಪಾರದರ್ಶಕ’ ವೆಂಬುದಾಗಲೀ ‘ಪ್ರತಿಭೆಗೇ ಅಂತಿಮ ಗೆಲುವು’ ಎಂಬುದಾಗಲೀ ಸಂಪೂರ್ಣ ಸತ್ಯವೂ ಅಲ್ಲ!
ಹಾಡು ಮತ್ತು ಹಾಡು ನೀಡುವ ಸಂತೋಷ ಎಂಬುದಕ್ಕಿಂತ ಟಿವಿಗಳಿಗೆ ಹಾಡಿನ ಮೂಲಕವೂ ಬಂಡವಾಳ ಮಾಡಿಕೊಳ್ಳುವ, ತಾನು ಬೆಳೆಯುವ ಪ್ರಮುಖ ಉದ್ದೇಶಗಳಾಗಿರುತ್ತವೆ ಇವರ ‘ಕಲಾರಾಧನೆ’ಗೂ ಕಲೆಯೇ ಗೊತ್ತಿರದ ಜನರ ಹಾಡಿನ ಎಷ್ಟೊಂದು ಅಂತರ ಅಲ್ಲವೇ?