ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು?
ಗುರುಗಳಾದ ಶ್ರೀ ವೀರಭದ್ರಸ್ವಾಮಿಯವರು ಸಿದ್ಧನ ಮನೆಯಲ್ಲಿ ವಾಸವಾಗಿದ್ದು ಪ್ರತಿ ದಿನ ವೇದಾಂತ ಪ್ರವಚನ ಮಾಡುತ್ತಿದ್ದರು. ಸಿದ್ಧನು, ತಾಯಿ ದೇವಮಲ್ಲಮ್ಮನ ತೊಡೆಯ ಮೇಲೆ ಕುಳಿತು ಪ್ರವಚನ ಕೇಳುತ್ತಿದ್ದನು. ಒಂದು ದಿನ ಗುರುಗಳು ಪ್ರವಚನ ಮಾಡುತ್ತಾ ಹೀಗೆ ಹೇಳಿದರು:
ಒಂದು ಕಾಲದಲ್ಲಿ ಪೃಥ್ವಿಯು ಸಾಗರದಲ್ಲಿ ಕರಗಿ ಹೋಗುವುದು. ಮೇರು ಪರ್ವತವಾದರೂ ಬಿದ್ದು ಹೋಗುವುದು. ಪಂಚಭೂತಗಳು ನಾಶಹೊಂದುವವು. ಸ್ವರ್ಗಾದಿ ಸಮಸ್ತ ಲೋಕಗಳು ಸಹ ಪ್ರಳಯಾಗ್ನಿಯಲ್ಲಿ ಸುಟ್ಟು ಹೋಗುವವು. ಆ ಸಮಯದಲ್ಲಿ ದೇಹವೇ ತಾನೆಂದು, ಇಲ್ಲಿ ಸುಖವನ್ನು ಭೋಗಿಸುವೆನೆಂದು ಎನ್ನುವಂಥ ಭ್ರಾಂತ ಮನುಷ್ಯನ ಸ್ಥಿತಿ ಏನೆಂದು ಹೇಳಲಿ? “ಎಂದು. ಪ್ರವಚನ ಕೇಳುವ ಹಿರಿಯ ಕಿರಿಯ ಜನರೆಲ್ಲ ಹೌದೆಂಬಂತೆ ತಲೆ ಅಲ್ಲಾಡಿಸುತ್ತಿದ್ದರು. ಆದರೆ ಸಿದ್ಧನು ತಲೆ ಅಲ್ಲಾಡಿಸಲಿಲ್ಲ. ಬದಲಾಗಿ, ಗುರುಗಳಿಗೆ ಕೂಡಲೇ ಪ್ರಶ್ನೆ ಕೇಳಿದ:” ” ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು?” ಎಂದು. ಸ್ವಾಮಿಯವರು ಒಂದು ಕ್ಷಣ ತಬ್ಬಿಬ್ಬಾದರು. “ಆತ್ಮಾನುಭವಿಯಾದ ಯೋಗ್ಯ ಗುರುವಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು” ಎಂದು ಉತ್ತರಿಸಿದರು. ಹಾಗಾದರೆ ಏನಿರಬಹುದು ಸಿದ್ಧನ ಈ ಪ್ರಶ್ನೆಯ ಹಿಂದಿನ ಮರ್ಮ? ಈ ಪ್ರಶ್ನೆಯಿಂದ ಗುರುಗಳು ತಬ್ಬಿಬ್ಬಾಗಲು ಕಾರಣವಾದರೂ ಏನಿರಬಹುದು? ಎಂಬುದನ್ನು ತಿಳಿಯಲು ಪ್ರಯತ್ನಿಸೋಣ!
ಸಾಂಖ್ಯರು,ತಾರ್ಕಿಕರು, ಮೀಮಾಂಸಕರು, ವೇದಾಂತಿಗಳು ಮೊದಲಾದ ಶಾಸ್ತ್ರಕಾರರು ಒಪ್ಪಿದಂತೆ, ಆಕಾಶ ವಾಯು ಅಗ್ನಿ ಜಲ ಪೃಥ್ವಿ ಎಂಬ ಈ ಐದು, ಜಗದ ಆಗು-ಹೋಗುಗಳಿಗೆ ಆಧಾರ. ಈ ಐದರ ಸಮ್ಮಿಶ್ರಣದಿಂದಲೇ ಜೀವಸಂಕುಲದ ಸೃಷ್ಟಿ. ಇವುಗಳನ್ನು ಪಂಚಭೂತಗಳು ಎನ್ನಲಾಗಿದೆ. ಇವುಗಳ ಉತ್ಪತ್ತಿಯನ್ನು ಉಪನಿಷತ್ ಹೀಗೆ ವಿವರಿಸುತ್ತದೆ:
ತಸ್ಮಾದ್ವಾ ಏತಸ್ಮಾದ್ವಾ ಆತ್ಮನಃ ಆಕಾಶಃ ಸಂಭೂತಃ|
ಆಕಾಶಾದ್ವಾಯುಃ, ವಾಯೋರಗ್ನಿಃ, ಅಗ್ನೇರಾಪಃ|
ಅದ್ಭ್ಯಃ ಪೃಥಿವೀ, ಪೃಥಿವ್ಯಾ ಓಷಧಯಃ|
ಓಷಧೀಭ್ಯೋನ್ನಮ್, ಅನ್ನಾತ್ಪುರುಷಃ||[ತೈತ್ತಿರೀಯೋಪನಿಷತ್-೨-೧-೨]
ಸಚ್ಚಿದಾನಂದ ನಿತ್ಯ ಪರಿಪೂರ್ಣನಾದ, ನಾಮ ರೂಪ ರಹಿತನಾದ,ಪರಮಾತ್ಮನಿಂದ ಆಕಾಶ ಹುಟ್ಟಿತು. ಆಕಾಶದಿಂದ ವಾಯು ಹುಟ್ಟಿತು.ವಾಯುವಿನಿಂದ ಅಗ್ನಿ ಹುಟ್ಟಿತು.ಅಗ್ನಿಯಿಂದ ಜಲ ಹುಟ್ಟಿತು. ಜಲದಿಂದ ಪೃಥ್ವಿ ಹುಟ್ಟಿತು. ಪೃಥ್ವಿಯಿಂದ ಸಸ್ಯ, ಸಸ್ಯದಿಂದ ಆಹಾರ,ಅಹಾರದಿಂದ ಪುರುಷ(ಮಾನವ) ಹುಟ್ಟಿದನು.
ವಾಯು ತನ್ನ ತಾಯಿಯಾದ ಆಕಾಶದಲ್ಲಿ ಸಂಚರಿಸುವುದರಿಂದಲೇ ವಾಯುವಿಗೆ ಮಾತರಿಶ್ವಾ ಎನ್ನಲಾಗಿದೆ.ಆಕಾಶವಿಲ್ಲದೇ ವಾಯು ಸಂಚರಿಸದು. ಕಿಟಕಿ ಬಾಗಿಲುಗಳ ಮೂಲಕ ಸಂಚರಿಸುವ ವಾಯುವು, ಗೋಡೆಯನ್ನು ಭೇದಿಸಿ ಸಂಚರಿಸಲಾರದು. ಆಕಾಶವಿಲ್ಲದೇ ವಾಯುವಿಲ್ಲ. ಆದರೆ ವಾಯುವಿಲ್ಲದೆಯೂ ಆಕಾಶವುಂಟು! ಭೂಮಿಯ ಆಳಕ್ಕೆ ತೋಡಿ ಮುಚ್ಚಿದ ಧವಸ ಧಾನ್ಯಗಳ ಗುಂಡಿ ಹಗೆ ನಿರ್ವಾತವಾಗುವುದುಂಟು. ಅಂತೆಯೇ ಆಕಾಶವು ವಾಯುವಿಗಿಂತ ವ್ಯಾಪಕ! ಜೋರಾಗಿ ಗಾಳಿ ಬೀಸುವುದರಿಂದ ಮರ-ಮರ ಉಜ್ಜಿ ಬೆಂಕಿ ಹೊತ್ತುವುದು! ಗಾಳಿ ಇಲ್ಲದ ಜಾಗದಲ್ಲಿ ಬೆಂಕಿ ಹುಟ್ಟದು, ಉರಿಯದು! ಉರಿಯುವ ಚಿಮಣಿಯೊಂದರ ಮೇಲೆ ಪಾತ್ರೆಯೊಂದನ್ನು ಬೋರಲಾಗಿ ಮುಚ್ಚಿ ನೋಡಿ! ದೀಪ ಆರುವುದು! ದೀಪ-ಬೆಂಕಿ ಇಲ್ಲದ ಗಾಳಿಯುಂಟು! ಗಾಳಿ ಇಲ್ಲದೇ ದೀಪವಿಲ್ಲ! ಅಂತೆಯೇ ಗಾಳಿ ಬೆಂಕಿಗಿಂತ ವ್ಯಾಪಕ, ಬೆಂಕಿಯ ಜನಕ. ಬೆಂಕಿ ಕಟ್ಟಿಗೆಯನ್ನು ಸುಡುವಾಗ ನೀರನೊರೆ ಆಚೆಗೆ ಒಸರುವುದು! ಭಯಂಕರ ಬಿಸಿಲು ತಾಪದ ಬಳಿಕ ಮಳೆ ಸುರಿಯುವುದು. ಬೇಸಿಗೆಯ ನಂತರ ಬರುವುದೇ ಮಳೆಗಾಲ! ಬಿಸಿಗೆ ಆವಿಯಾಗಿ ನೀರು ಒಸರುವುದು. ಕಾಯುವ ನೀರಿನ ಪಾತ್ರೆಯ ಮೇಲಿನ ಮುಚ್ಚಳವನ್ನು ಎತ್ತಿ ನೋಡಿ ! ನೀರಿಲ್ಲದೆಯೂ ಬೆಂಕಿ ಉರಿಯುವುದು! ಕಟ್ಟಿಗೆ ಸುಟ್ಟು ನೀರೆಲ್ಲಾ ಒಸರಿ ಮಾಯಾವಾದ ಬಳಿಕವೂ ಉಳಿಯುವ ಬೆಂಕಿಯ ಕೆಂಡ ಧಗ ಧಗಿಸಿ ಉರಿಯುವುದು,ಸುಡುವುದು. ಆದರೆ ಬೆಂಕಿ ಇಲ್ಲದೇ ನೀರು ಇರದು! ನೀರಿನಲ್ಲಿ ಉಷ್ಟಾಂಶ ಅತಿ ಹೆಚ್ಚಿದರೆ, ಆವಿಯಾಗಿ ಮತ್ತೆ ನೀರಾಗುವುದು. ಆದರೆ ನೀರಿನಲ್ಲಿನ ಉಷ್ಟಾಂಶ ಅತಿ ಕಡಿಮೆಯಾದರೆ, ನೀರು ಘನವಾಗಿ ಮಂಜುಗಡ್ಡೆಯಾಗುವುದು, ಹೊರತು ನೀರಾಗಿ ಉಳಿಯದು! ಅಂತೆಯೇ ಬೆಂಕಿ ನೀರಿಗಿಂತ ವ್ಯಾಪಕ. ನೀರಿನಿಂದ ಪೃಥ್ವಿ ಹುಟ್ಟುವುದು. ಕರಗಿದ ದ್ರವರೂಪದ ಕಬ್ಬಿಣದ ಲೋಹಕ್ಕೆ ತಂಪು ತಾಗಲು, ದ್ರವರೂಪದ ಲೋಹವು, ಬೇಕೆಂದ ಆಕಾರದಲ್ಲಿ ಘನವಾಗುವುದು. ನೀರು ತುಪ್ಪ ಎಣ್ಣೆ ಮೊದಲಾದವುಗಳು, ತಂಪಿಗೆ ಘನವಾಗುವುದನ್ನು, ನೀರು ಉಪ್ಪಾಗುವುದನ್ನು ಕಾಣುತ್ತೇವೆ.
ಭೂಮಿ ಬೀಜ ಗೊಬ್ಬರಗಳಿಗೆ ನೀರೆರೆಯಲು, ಬೆಳೆಯುವ ಗಿಡ ಮರ ಹಣ್ಣು ಕಾಯಿ ಧವಸ-ಧಾನ್ಯ ಘನ ಘನ! ಅಂತೆಯೇ ಪ್ರಥ್ವಿಗಿಂತ ನೀರು ವ್ಯಾಪಕ! ಮೂರು ಪಟ್ಟು ನೀರು. ಪೃಥ್ವಿ ಒಂದು ಪಟ್ಟು ಮಾತ್ರ! ಪೃಥ್ವಿ ಇಲ್ಲದೆಯೂ ನೀರುಂಟು. ಭೂಮಿಯ ಮೇಲ್ಭಾಗದ ವಾತಾವರಣದಲ್ಲಿಯೂ ನೀರುಂಟು! ಅದನ್ನು ಇಬ್ಬನಿಯಿಂದ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ವಾತಾವರಣದಲ್ಲಿನ ಜಲವನ್ನು ಶುದ್ಧಜಲವನ್ನಾಗಿ ಮಾರ್ಪಡಿಸುವ ವೈಜ್ಞಾನಿಕ ವಿಧಾನವೂ ಇದೆ ! ಆದರೆ, ನೀರಿಲ್ಲದೇ ಪೃಥ್ವಿ ಇಲ್ಲ.ಭೂಮಿಯನ್ನು ಅಗೆದರೆ ನೀರು ಸಿಗುವುದು. ಕಲ್ಲು ಕಟ್ಟಿಗೆ ವಸ್ತ್ರ ಮೊದಲಾದ ಪೃಥ್ವಿಪ್ರಧಾನ ವಸ್ತುಗಳಲ್ಲಿ ನೀರಿನ ಅಂಶವು ಬತ್ತಿಹೋದರೆ ಮುಗಿಯಿತು, ಎಲ್ಲಾ ಪುಡಿ ಪುಡಿ! ಅವುಗಳ ಅಸ್ತಿತ್ವ ನುಚ್ಚು ನೂರು! ಭೂಮಿಯಿಂದ ಸಸ್ಯಾದಿಗಳ ಉತ್ಪತ್ತಿ. ಸಸ್ಯಾದಿಗಳಿಂದ ಆಹಾರ, ಆಹಾರದಿಂದ ಜೀವಿಗಳ ಉತ್ಪತ್ತಿ. ಇದು ಪ್ರತ್ಯಕ್ಷ ಗೋಚರ.
ಇನ್ನು ಸಾಂಖ್ಯ ಶಾಸ್ತ್ರದ ಪ್ರಕಾರ ೨೫ ತತ್ತ್ವಗಳಿಂದ ಕೂಡಿದ್ದು ಈ ಜಗತ್ತು. ಈ ಜಗದ ಸೃಷ್ಟಿಯ ಕ್ರಮವನ್ನು ಅವರು ಹೀಗೆ ವಿವರಿಸುತ್ತಾರೆ;
ಪ್ರಕೃತೇರ್ಮಹಾನ್ ಮಹತೋಹಂಕಾರಃ
ಅಹಂಕಾರಾತ್ ಪಂಚತನ್ಮಾತ್ರಾಣ್ಯುಭಯಮಿಂದ್ರಿಯಂ ಮನಃ|
ತನ್ಮಾತ್ರೇಭ್ಯಃ ಸ್ಥೂಲಭೂತಾನಿ ಪುರುಷ ಇತಿ
ಪಂಚವಿಂಶತಿರ್ಗಣಃ||[ಸಾಂಖ್ಯಸೂತ್ರ-೧-೨೬]
ಪ್ರಕೃತಿಯಿಂದ ಮಹತ್, ಮಹತ್ತಿನಿಂದ ಅಹಂಕಾರ, ಅಹಂಕಾರದಿಂದ ಶಬ್ದ ಸ್ಪರ್ಶ ರೂಪ ರಸ ಗಂಧ ಎಂಬ ಐದು ತನ್ಮಾತ್ರೆಗಳು,ಪಂಚ ತನ್ಮಾತ್ರೆಗಳಿಂದ ಮನಸ್ಸು ಮತ್ತು ಕಿವಿ ಚರ್ಮ ನಾಲಿಗೆ ಕಣ್ಣು ಮೂಗು ಎಂಬ ಪಂಚ ಜ್ಞಾನೇಂದ್ರಿಯಗಳು, ಮಾತು ಕೈ ಕಾಲು ಗುದ ಗುಹ್ಯ ಎಂಬ ಪಂಚ ಕರ್ಮೇಂದ್ರಿಯಗಳು ಹಾಗೂ ಆಕಾಶ , ವಾಯು,ಅಗ್ನಿ, ಜಲ, ಪೃಥ್ವಿ ಎಂಬ ಐದು ಭೂತಗಳು ಹುಟ್ಟುತ್ತವೆ. ಇಪ್ಪತ್ತೈದನೇ ತತ್ತ್ವವೇ ಪುರುಷ. ಈ ಪೈಕಿ ಪ್ರಕೃತಿಯು ಸತ್ತ್ವ, ರಜಸ್, ತಮಸ್ ಎಂಬ ಮೂರು ಗುಣಗಳ ಸಮ್ಮಿಶ್ರಣಾತ್ಮಕ ಸಾಮ್ಯಾವಸ್ಥೆಯಾಗಿದೆ. ಆದ್ದರಿಂದಲೇ ಇದನ್ನು ಸತ್ತ್ವರಜಸ್ತಮಸಾಂ ಸಾಮ್ಯಾವಸ್ಥಾ ಪ್ರಕೃತಿಃ ಎಂದು ವಿವರಿಸಲಾಗಿದೆ. ಪ್ರಕರೋತಿ ಇತಿ ಪ್ರಕೃತಿಃ = ಮಹತ್ ಮೊದಲಾದ ಇತರೆಲ್ಲಾ ತತ್ತ್ವಗಳನ್ನು ಚೆನ್ನಾಗಿ ಸೃಜಿಸುವುದರಿಂದ ಇದನ್ನು ಪ್ರಕೃತಿ ಎನ್ನಲಾಗಿದೆ.
ಈ ಪ್ರಕೃತಿಯೇ ಎಲ್ಲ ಸೃಷ್ಟಿಗೆ ಮೂಲ. ಆದರೆ ಇದನ್ನು ಯಾವುದೂ ಸೃಜಿಸಲಾರದು. ಆದ್ದರಿಂದ ಇದನ್ನು ಮೂಲ ಪ್ರಕೃತಿ, ಅವಿಕೃತಿ ಎನ್ನಲಾಗಿದೆ. ಇನ್ನು ಮಹತ್ ಅಹಂಕಾರ ಮತ್ತು ಪಂಚ ತನ್ಮಾತ್ರೆಗಳು ಹಿಂದೆ ಹಿಂದಿನ ತತ್ತ್ವಗಳಿಂದ ಹುಟ್ಟುವವಾದ್ದರಿಂದ ವಿಕೃತಿಗಳೆನಿಸಿವೆ. ಹಾಗೆಯೇ ಮುಂದೆ ಮುಂದಿನ ತತ್ತ್ವಗಳನ್ನು ಹುಟ್ಟಿಸುವುದರಿಂದ ಅವುಗಳಿಗೆ ಇವು ಪ್ರಕೃತಿಗಳೆನಿಸಿವೆ. ಹೀಗೆ ಮಹತ್ಮೊದಲಾದ ಏಳು ತತ್ತ್ವಗಳು ಪ್ರಕೃತಿ-ವಿಕೃತಿಗಳೆನಿಸಿವೆ. ಇನ್ನು ಮನಸ್ಸು, ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು ಹಾಗೂ ಪಂಚಭೂತಗಳು ಹೀಗೆ ಹದಿನಾರು ತತ್ತ್ವಗಳು ಕೇವಲ ವಿಕೃತಿಗಳೆನಿಸಿವೆ. ಏಕೆಂದರೆ ಇವುಗಳಿಂದ ಇನ್ನಾವ ತತ್ತ್ವವೂ ಹುಟ್ಟುವುದಿಲ್ಲ.ಇಪ್ಪತ್ತೈದನೆಯದಾದ ಪುರುಷತತ್ತ್ವವು ಪ್ರಕೃತಿಯೂ ಅಲ್ಲ,ವಿಕೃತಿಯೂ ಅಲ್ಲ. ಅದು ನಿರ್ಲಿಪ್ತ. ಇದನ್ನು ಈಶ್ವರಕೃಷ್ಣನು ತನ್ನ ಸಾಂಖ್ಯಕಾರಿಕೆಯಲ್ಲಿ ಹೀಗೆ ಹೇಳಿದ್ದಾನೆ;
ಮೂಲಪ್ರಕೃತಿರವಿಕೃತಿಃ ಮಹದಾದ್ಯಾಃ ಪ್ರಕೃತಿವಿಕೃತಯಃ ಸಪ್ತ|
ಷೋಡಶಕಸ್ತು ವಿಕಾರೋ ನ ಪ್ರಕೃತಿರ್ನ ವಿಕೃತಿಃ ಪುರುಷಃ|| (೩)
ಮೂಲ ಪ್ರಕೃತಿಯು ಅವಿಕಾರಿ. ಮಹತ್, ಅಹಂಕಾರ, ಶಬ್ದ, ಸ್ಪರ್ಶ, ರೂಪ,ರಸ, ಗಂಧ ಎಂಬ ಏಳು ತತ್ತ್ವಗಳು ಪ್ರಕೃತಿ ಮೊದಲಾದವುಗಳ ವಿಕಾರಿಗಳು, ಮುಂದಿನವುಗಳಿಗೆ ಪ್ರಕೃತಿಗಳೂ ಆಗಿವೆ. ಮನಸ್ಸು, ಪಂಚ ಜ್ಞಾನೇಂದ್ರಿಯಗಳು , ಪಂಚಕಮೇಂದ್ರಿಯಗಳು, ಪಂಚಭೂತಗಳು ಎಂಬ ಹದಿನಾರು ತತ್ತ್ವಗಳು ಕೇವಲ ವಿಕಾರಿಗಳು. ಪುರುಷನು ಪ್ರಕೃತಿಯೂ ಅಲ್ಲ, ವಿಕಾರಿಯೂ ಅಲ್ಲ, ಎಂದು.ದ ಸೃಷ್ಟಿಯ ಕ್ರಮದ ವಿಷಯದಲ್ಲಿ, ವಿವಿಧ ಶಾಸ್ತ್ರಗಳಲ್ಲಿ ಕೆಲವು ಅಭಿಪ್ರಾಯಭೇದಗಳನ್ನು ಕಾಣುತ್ತೇವೆ. ಇದು ಹಿಂದು ಧರ್ಮಕ್ಕೆ ಮಾತ್ರ ಸೀಮಿತವಾದುದಲ್ಲ. ಇತರ ಧರ್ಮಗಳಲ್ಲಿಯೂ, ಇಂಥ ಅಭಿಪ್ರಾಯಭೇದವನ್ನು ಕಾಣಬಹುದಾಗಿದೆ. ವ್ಯಕ್ತಿ ವ್ಯಕ್ತಿಗಳಲ್ಲಿನ ಜ್ಞಾನದ ಸ್ತರ ಒಂದೇ ತೆರನಾಗಿ ಇಲ್ಲದಿರುವುದೇ ಇದಕ್ಕೆ ಕಾರಣ. ಪ್ರಯೋಗಾಲಯಗಳನ್ನು ಬಲಸುವ ಮೂಲಕ ಸಂಶೋಧಿಸಿ,ವಿಶ್ಲೇಷಿಸಿ,ಸಾಕ್ಷಾತ್ಕರಿಸಿಕೊಂಡು, ಇದು ಹೀಗೆಯೇ ಎಂದು ಕರಾರುವಕ್ಕಾಗಿ ಹೇಳುವ, ಸಾಬೀತುಪಡಿಸುವ ಇಂದಿನ ಆಧುನಿಕ ವೈಜ್ಞಾನಿಕ ಕ್ಷೇತ್ರದಲ್ಲಿಯೇ ನಾವು ವಿಭಿನ್ನ ಸಿದ್ಧಾಂತಗಳನ್ನು ಕಾಣುತ್ತೇವೆ. ಮಂಗನಿಂದ ಮಾನವ ಎಂಬ ಡಾರ್ವಿನ್ ಸಿದ್ಧಾಂತ ಬಿದ್ದು ಹೋಗಲಿಲ್ಲವೇ? ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ, ಪ್ರಯೋಗಾಲಯಗಳಿಲ್ಲದೆಯೂ, ತಮ್ಮ ತಪೋಮಯ ಅಂತರ್ದೃಷ್ಟಿಯಿಂದ ಕಂಡುಕೊಂಡು ಮಂಡಿಸಿದ ನಮ್ಮ ಪೂರ್ವಜರ ಜ್ಞಾನಸಂಪತ್ತನ್ನು ನಾವು ಪ್ರಶಂಶಿಸಲೇಬೇಕು!
ಇನ್ನು ಆಕಾಶವೆಂದರೇನು? ಎಲ್ಲದಕ್ಕೂ ಅವಕಾಶವನ್ನು ನೀಡಿರುವ ಬಯಲೇ ಆಕಾಶ.ಆಕಾಶವು ಎಲ್ಲಿದೆ? ಎಂದು ಕೇಳಿದರೆ, ಬಹುತೇಕರು ಮೇಲಕ್ಕೆ ಕೈ ತೋರಿಸಿ ” ಅಲ್ಲಿದೆ” ಎನ್ನುವರು! ಅದು ನಿಜ,ಸುಳ್ಳಲ್ಲ. ಆದರೆ ಅದಷ್ಟೇ ಆಕಾಶವಲ್ಲ. ಕೈ ಇರುವ ಬಯಲೂ ಆಕಾಶ! ಮಲಗಿದ ಮಂಚದ ಕೆಳಗಿನ ಬಯಲು,ಮೂಗು ಬಾಯಿ ಕಿವಿಯೊಳಗಿನ ಬಯಲು, ಅಲ್ಲಿಲ್ಲಿ ತೋರುವ ಬಯಲೆಲ್ಲವೂ ಆಕಾಶವೇ! ಆರು ವಿಧ ಭಾರತೀಯ ದಾರ್ಶನಿಕರಲ್ಲಿ ಒಬ್ಬರೆನಿಸಿದ ನೈಯ್ಯಾಯಿಕರು ಆಕಾಶದ ಲಕ್ಷಣವನ್ನು ಹೀಗೆ ಹೇಳಿದ್ದಾರೆ:
” ಶಬ್ದಗುಣಕಮಾಕಾಶಂ| ತಚ್ಚೈಕಂ ವಿಭು ನಿತ್ಯಂಚ||
ಶಬ್ದ-ಧ್ವನಿ ತರಂಗಗಳನ್ನುಳ್ಳದ್ದು ಆಕಾಶ. ಅದು ಒಂದೇ. ಎಲ್ಲೆಡೆಯೂ ವ್ಯಾಪಿಸಿರುವುದು. ನಿತ್ಯವಾದದ್ದು. ” ಎಂದು.
ವಾಯುವು ಧ್ವನಿತರಂಗಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯಬಲ್ಲದು, ಆಕಾಶದ ಅವಕಾಶವಿದ್ದಲ್ಲಿ ಮಾತ್ರ. ಆಕಾಶವಿಲ್ಲದೆಡೆಗೆ ಧ್ವನಿತರಂಗ ಸಂಚರಿಸದು. ಇದು ವೈಜ್ಞಾನಿಕ ಸತ್ಯ.
ಜಗತ್ತು ನಶ್ವರವೆಂದು ಹೇಳುತ್ತೇವೆ. ಜಗತ್ತಿನಲ್ಲಿ ಆಕಾಶವೂ ಒಂದು. ಆದ್ದರಿಂದ ಆಕಾಶವೂ ನಶ್ವರ, ಎಂಬುದು ಸಾಮಾನ್ಯ ವಾದ. ಆದರೆ ಆಕಾಶ ಇತರದಂತಲ್ಲ. ಜಗತ್ತು ನಾಮ ರೂಪಾತ್ಮಕ. ಉದಾಹರಣೆಗೆ ಪುಸ್ತಕ. ಪುಸ್ತಕ ಎಂಬುದು ನಾಮ = ಹೆಸರು. ಅದಕ್ಕೊಂದು ಆಕಾರವಿದೆ. ಅದೇ ರೂಪ. ನಾಮ ರೂಪಾತ್ಮಕವಾದದ್ದು ನಶಿಸುತ್ತದೆ. ಪುಸ್ತಕವು ಒಮ್ಮೆನಾಶವಾಗುತ್ತದೆ. ಅದರಂತೆ ನಾಮರೂಪಾತ್ಮಕವಾದುದೆಲ್ಲವೂ ಒಮ್ಮೆ ನಶಿಸುತ್ತದೆ ಎಂಬುದನ್ನು ಒಪ್ಪಬಹುದಾಗಿದೆ. ಆಕಾಶ ಎಂಬ ಹೆಸರಿದೆ. ಆದರೆ ಅದಕ್ಕೊಂದು ರೂಪವಿಲ್ಲ. ರೂಪವಿಲ್ಲದ ಆಕಾಶವು ಎಲ್ಲೆಡೆಯಲ್ಲಿಯೂ ವ್ಯಾಪಿಸಿರುವುದರಿಂದಲೇ ಅದನ್ನು ವಿಭು ಎನ್ನಲಾಗಿದೆ. ಅದನ್ನು ಸುಡಲಾಗದು, ತೊಯ್ಯಿಸಲಾಗದು, ತುಂಡರಿಸಲಾಗದು,ತಳ್ಳಲಾಗದು, ಅಲ್ಲಾಡಿಸಲಾಗದು.ಇಂದಿದ್ದು ನಾಳೆ ಇಲ್ಲವಾಗುವುದಿಲ್ಲ, ಎಂದೆಂದಿಗೂ ಇರುತ್ತದೆ. ಆದ್ದರಿಂದಲೇ ಅದನ್ನು ನಿತ್ಯ ಎನ್ನಲಾಗಿದೆ. ಇಂಥ ನಿತ್ಯವಾದ ಆಕಾಶವನ್ನು ಅನಿತ್ಯ-ನಶ್ವರ-ಎನ್ನುವುದು ಹೇಗೆ? ಎಂಬುದು ಬಾಲಕ ಸಿದ್ಧನ ಪ್ರಶ್ನೆ.
ವೀರಭದ್ರಸ್ವಾಮಿಗಳು ಅನುಭವಿ ಕರು. ತಾರ್ಕಿಕವಾಗಿ, ಶಾಸ್ತ್ರೀಯಶೈಲಿಯಲ್ಲಿ ಉತ್ತರಿಸಲು ಹಿಂಜರಿದರು. ಆದ್ದರಿಂದಲೇ ಯೋಗ್ಯ ಗುರುಗಳಿಗೆ ಈ ಪ್ರಶ್ನೆಯನ್ನು ಕೇಳತಕ್ಕದ್ದು ಎಂದು ಉತ್ತರಿಸಿದರು. ಹೊರತು, ಮನಸ್ಸಿಗೆ ತೋಚಿದಂತೆ ಏನನ್ನೋ ಉಸುರಲಿಲ್ಲ. ನಿನಗೇನು ತಿಳಿಯುತ್ತದೆ? ಸುಮ್ಮನೇ ಕುಳಿತುಕೋ! ಎಂದು ಬಾಯಿಯನ್ನು ಮುಚ್ಚಿಸಲಿಲ್ಲ! ಹಾಗಾದರೆ ಆಕಾಶ ನಾಶವಾಗುವುದು, ಅನಿತ್ಯ-ನಶ್ವರವಾ ಗುವುದು ಹೇಗೆ? ಶಾಸ್ತ್ರ ಏನು ಹೇಳುವುದು? ಸ್ವಲ್ಪ ಚಿಂತಿಸೋಣ.
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ಹುಟ್ಟಿದ್ದಕ್ಕೆ ಸಾವು ಖಚಿತ, ಸತ್ತದ್ದಕ್ಕೆ ಹುಟ್ಟು ನಿಶ್ವಿತ, ಎನ್ನುತ್ತದೆ ಶ್ರೀ ಮದ್ಭಗವದ್ಗೀತೆ [೨-೨೭ ]. ಈ ಹಿಂದೆ ವಿವರಸಿದ ಪ್ರಕಾರ ಆಕಾಶವು ಹುಟ್ಟಿರುವುದರಿಂದ, ಭಗವದ್ಗೀತೆಯ ಈ ಸಾಮಾನ್ಯ ಸಿದ್ಧಾಂತದಂತೆ ಆಕಾಶವು ನಾಶವಾಗುತ್ತದೆ, ಎಂದು ಒಪ್ಪಬೇಕಾಗುತ್ತದೆ.
ಪ್ರಪಂಚೋ ಯದಿ ವಿದ್ಯೇತ,
ನಿವರ್ತೇತ ನ ಸಂಶಯಃ |
ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ ||
ಪ್ರಪಂಚವು ಇರುವುದಾದಲ್ಲಿ ನಿಶ್ಚಯವಾಗಿಯೂ ಅದು ಹಿಂದಿರುಗೀತು! ಆದರೆ ತೋರುವುದೆಲ್ಲವೂ ಮಾಯಾಸ್ವರೂಪ!ಇಲ್ಲದ್ದು ಇದ್ದಂತೆ ತೋರುತ್ತಿದೆ ಅಷ್ಟೇ. ವಾಸ್ತವಿಕವಾಗಿ,ಪಾರಮಾರ್ಥಿಕವಾಗಿ ಪರಮಾತ್ಮ ತತ್ತ್ವ ಒಂದೇ ಇರುವುದಾಗಿದೆ, ಎನ್ನುತ್ತದೆ ಮಾಂಡೂಕ್ಯೋಪನಿಷತ್ತಿನ ಗೌಡಪಾದಕಾರಿಕೆ[೧-೧೭]
ಇದನ್ನು ಮತ್ತೊಂದು ಕಾರಿಕೆ ಹೀಗೆ ಸಮರ್ಥಿಸುತ್ತದೆ:
ಯಥಾ ಸ್ವಪ್ನೇ ದ್ವಯಾಭಾಸಂ ಸ್ಪಂದತೇ ಮಾಯಯಾ ಮನಃ|
ತಥಾ ಜಾಗ್ರದ್ದ್ವಯಾಭಾಸಂ ಸ್ಪಂದತೇ ಮಾಯಯಾ ಮನಃ||
(ಗೌಡಪಾದ ಕಾರಿಕಾ ೨೯)
ಏನೂ ಇಲ್ಲದೆಯೂ ಸ್ವಪ್ನ = ಕನಸಿನಲ್ಲಿ ಏನೇನೋ ತೋರುವಂತೆ, ಎಚ್ಚರಿಕೆಯ ಈ ಜಗತ್ತೂ, ಏನೂ ಇಲ್ಲದೆಯೇ ಏನೇನೋ ಆಗಿ ತೋರುತ್ತಿದೆ.
ಮೇಲ್ಕಂಡ ಈ ಶಾಸ್ತ್ರ ಸಿದ್ಧಾಂತದಂತೆ ಆಕಾಶವು ನಶ್ವರ. ಇನ್ನು ಪ್ರಾಯೋಗಿಕವಾಗಿ ಹೇಳುವುದಾದಲ್ಲಿ, ಆಕಾಶವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದೆ ಎಂಬುದನ್ನು ಒಪ್ಪಲಾಗದು. ಘನವಸ್ತುವಿನ ಒಳಗೆ,ಭೂಮಿಯೊಳಗೆ ಆಕಾಶವಿಲ್ಲ! ಆದ್ದರಿಂದ ಆಕಾಶವು ಸರ್ವವ್ಯಾಪಿ ಅಲ್ಲ. ಇಲ್ಲಿಯವರೆಗೆ ಆಕಾಶ,ಇದರ ಆಚೆ ಕೆಳಗೆ ಆಕಾಶ ಇಲ್ಲ, ಮೊದಲಾದ ವ್ಯವಹಾರಗಳಿಂದ ಆಕಾಶದ ಆದಿ ಅಂತ್ಯಗಳು ಸಾಬೀತಾಗುವವು. ಘನವಸ್ತುವನ್ನು ಸ್ಥಾಪಿಸುವುದರಿಂದ ಆಕಾಶಕ್ಕೆ ಭಂಗ ಉಂಟಾಗುವುದು. ಅದನ್ನು ನಿವಾರಿಸುವುದರಿಂದ ಆಕಾಶದ ಅಸ್ತಿತ್ವ ಉಂಟಾಗುವುದು. ಮಣ್ಣಿನ ಬಿಂದಿಗೆಯಲ್ಲಿನ ಆಕಾಶ ಘಟಾಕಾಶ,ಮನೆಯಲ್ಲಿನ ಆಕಾಶ ಗೃಹಾಕಾಶ, ಮಠದಲ್ಲಿನ ಆಕಾಶ ಮಠಾಕಾಶ. ಘಟ-ಮಠ-ಗೃಹಗಳು ಧ್ವಂಸವಾದರೆ ಈ ಯಾವ ಆಕಾಶಗಳೂ ಇರುವುದಿಲ್ಲ. ಈ ರೀತಿಯಗಿ ಆಕಾಶ ನಶ್ವರ-ನಾಶವಾಗುವುದು. ಹೊರತು, ರೂಪಸಹಿತವಾದ ವಸ್ತುವಿನಂತೆ ಆಕಾಶವು ಪುಡಿ ಪುಡಿಯಾಗಿಯೋ, ಮತ್ತೊಂದು ಪ್ರಕಾರದಲ್ಲಿಯೋ, ನಾಶವಾಗುತ್ತದೆ, ಎಂದಲ್ಲ. ಹೀಗೆ ಪರಮಾತ್ಮನ ಸೃಷ್ಟಿಯಲ್ಲಿ ಈ ಪ್ರಪಂಚವೆಲ್ಲವೂ ನಶ್ವರವಾಗಿರುವುದರಿಂದ, ನಾವು ಹೆಚ್ಚು ವ್ಯಾಮೋಹಕ್ಕೆ ಒಳಗಾಗದೆಯೇ ನಿರ್ಲಿಪ್ತತೆಯಿಂದ ಬಾಳಬೇಕು. ಸದ್ಗುರು ಶ್ರೀ ಸಿದ್ಧಾರೂಢರ ಅನುಗ್ರಹದಿಂದ ನಿರ್ಲಿಪ್ತ ಬದುಕು ನಮ್ಮದಾಗಲಿ.