ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು

Share

ಸ್ವಾತಂತ್ರ್ಯ ಬಂದ ಬಳಿಕ ಸತತ ಐವತ್ತು ವರ್ಷ ಕೇಂದ್ರ ಮತ್ತು ರಾಜ್ಯಗಳನ್ನಾಳಿದ ಕಾಂಗ್ರೆಸ್ಸು ಈಗ ಶೋಚನೀಯ ಹಂತಕ್ಕೆ ಬಂದಿದೆ. ಏಐಸಿಸಿ ಹೊಂದಿರುವ ಅಗಾಧ ಸಂಪತ್ತಿನ ಒಡೆತನವನ್ನು ಬಿಟ್ಟುಕೊಡುವುದಕ್ಕೆ ಸೋನಿಯಾ ಅಂಡ್ ಚಿಲ್ಡೃನ್ಸ್ ಸಿದ್ಧವಿಲ್ಲ. ಪ್ರಧಾನಿ ಪಟ್ಟವನ್ನಾದರೂ “ತ್ಯಾಗ” ಮಾಡಬಹುದು ಆದರೆ ಏಐಸಿಸಿ ಅಧ್ಯಕ್ಷ ಸ್ಥಾನವನ್ನಲ್ಲ ಎಂದು ಕೂತಿರುವ ಸೋನಿಯಾ, ಧೃತರಾಷ್ಟ್ರ ಪ್ರೇಮದ ಅಮಲಿನಲ್ಲಿ ಕರುಡಾಗಿದ್ದಾರೆ.

ಸೋನಿಯಾಗೆ ಧೃತರಾಷ್ಟ್ರ ಪ್ರೇಮದ ಕುರುಡು

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು, ಸಂವಿಧಾನದ ಆಶಯದಂತೆ ಎಲ್ಲರನ್ನೂ ಒಳಗೊಂಡ ಭಾರತ ವಿಕಾಸವಾಗಬೇಕು. “ಸರ್ವ ಜನಾಂಗದ ಶಾಂತಿಯ ತೋಟ”ದ ಮಾದರಿಯಲ್ಲಿ ಜನತಂತ್ರ ಗಟ್ಟಿಯಾಗುವುದಕ್ಕೆ ಬಲಿಷ್ಟವಾದ ವಿರೋಧ ಪಕ್ಷ ಅಗತ್ಯ. ಸದ್ಯದ ಈ ಕೊರತೆಯನ್ನು ತುಂಬುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ ಅದರ ದುರ್ಬಲ ಅಸಮರ್ಥ ನಾಯಕತ್ವ ಆ ಪಕ್ಷಕ್ಕೆ ಗ್ರಹಣದಂತೆ ಆವರಿಸಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಮೂವರೂ ಪಕ್ಷವನ್ನು ಮುನ್ನಡೆಸುವಲ್ಲಿ ವಿಫಲರಾಗಿರುವುದು ಚುನಾವಣೆಯಿಂದ ಚುನಾವಣೆಗೆ ಸಾಬೀತಾಗಿದೆ. ಮೂವರೂ ಪಕ್ಷದ ನಾಯಕತ್ವದಿಂದ ದೂರ ಉಳಿದು ಜನತಂತ್ರದ ರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ.
ಕೊಲ್ಕತ್ತಾದಿಂದ ಪ್ರಕಟವಾಗುವ “ಸ್ಟೇಟ್ಸ್‌ಮನ್” ಇಂಗ್ಲಿಷ್ ದೈನಿಕದಲ್ಲಿ ಪ್ರಕಟವಾದ ಅವರ ಲೇಖನ ಪ್ರಸ್ತುತದ ನಾಯಕತ್ವ ಕಾಂಗ್ರೆಸ್ ಪಕ್ಷವನ್ನು ಬೇರು ಸಹಿತ ನಾಶ ಮಾಡುತ್ತಿರುವ ಪರಿಯನ್ನು ವಿಶ್ಲೇಷಿಸುತ್ತದೆ. ಲೇಖನ ಹೊಮ್ಮಿಸುವ ಖಾರ ಸಂಚಲನ ಮೂಡಿಸುತ್ತಿದ್ದಂತೆ ರಾಜಕೀಯ ವಿಶ್ಲೇಷಕ ಕರಣ್ ಥಾಪರ್ ಗುಹಾರನ್ನು “ವೈರ್” ಟಿವಿಗೆ ಸಂದರ್ಶಿಸುತ್ತಾರೆ. ಗುಹಾ ಬಳಸಿದ ವಾಕ್ಯಗಳ ವಿಚಾರದಲ್ಲಿ ಕೆದಕುವ ಪ್ರಶ್ನೆಗಳನ್ನು ಹಾಕುತ್ತಾರೆ. ತಾವು ಆ ಲೇಖನವನ್ನು ಆಳವಾದ ಯೋಚನೆ ಬಳಿಕ ಬರೆದಿದ್ದು ಪ್ರಕಟವಾದ ಪ್ರತಿ ಶಬ್ದವೂ ತಮ್ಮ ಯೋಚನೆಯ ಫಲಶ್ರ್ರುತಿಯೇ ಆಗಿದೆ ಎಂದು ಗುಹಾ ದೃಢೀಕರಿಸುತ್ತಾರೆ.


ಎನ್‌ಡಿಎ/ಬಿಜೆಪಿ ೨೦೧೪ರ ಲೋಕಸಭಾ ಚುನಾವಣೆ ಗೆದ್ದು ನರೇಂದ್ರ ಮೋದಿ ಪಟ್ಟಕ್ಕೆ ಬಂದಾರಭ್ಯದಿಂದ ಆ ಒಕ್ಕೂಟದ ಆಡಳಿತ ವೈಖರಿಯನ್ನು ಸೂಕ್ಷ್ಮದರ್ಶಕವಿಟ್ಟು ನೋಡುತ್ತಿರುವ ದೇಶದ ಕೆಲವು ಪ್ರಜ್ಞಾವಂತರಲ್ಲಿ ಗುಹಾ ಒಬ್ಬರು. ಐದು ದಶಕಕ್ಕೂ ಹೆಚ್ಚು ಕಾಲ ಕೇಂದ್ರವನ್ನೂ ಬಹುತೇಕ ರಾಜ್ಯಗಳನ್ನೂ ಆಳಿದ ಕಾಂಗ್ರೆಸ್ಸು ಜನತಂತ್ರದ ಕಾವಲುಗಾರನಾಗಿ ಹೊಣೆ ನಿರ್ವಹಿಸುವ ಕೆಲಸವನ್ನು ಮರೆತಂತೆ ವರ್ತಿಸುತ್ತಿರುವುದು ಗುಹಾರ ಕೋಪಕ್ಕೆ ಅಸಲಿ ಕಾರಣ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಖಂಡ ರಾಜ್ಯ ವಿಧಾನ ಸಭೆಗಳಿಗೆ ಇತ್ತೀಚೆಗೆ ನಡೆದ ಚುನಾವಣಾ ಪರಾಭವವೂ ಸೇರಿದಂತೆ ೨೦೧೪ರಿಂದ ಸತತ ಎಂಬಂತೆ ಕಾಂಗ್ರೆಸ್ ಸೋಲುತ್ತಿರುವ ರೀತಿ ಮತ್ತು ಅದಕ್ಕೆ ಕಾರಣವಾಗಿರುವ ದುರ್ಬಲ ನಾಯಕತ್ವ ಅವರನ್ನು ಕೆರಳಿಸಿ “ಕುರ್ಚಿ ಬಿಟ್ಟು ತೊಲಗಿ” ಎಂದು ಸೋನಿಯಾ ಮತ್ತು ಅವರಿಬ್ಬರು ಮಕ್ಕಳ ಬಗ್ಗೆ ಹೇಳುವಂತೆ ಮಾಡಿರಲು ಸಾಕು.
ಪ್ರತಿ ಚುನಾವಣೆಯನ್ನು ಸೋತಾಗಲೂ ಸೋಲಿಗೆ ಕಾರಣ ಹುಡುಕುವ ಕೆಲಸವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಕರಾಳ ತುರ್ತು ಪರಿಸ್ಥಿತಿ ಕಾಯ್ದೆಯನ್ನು ಹಿಂತೆಗೆದುಕೊಂಡ ತರುವಾಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಅವರ ನೇತೃತ್ವದ ಪಕ್ಷವನ್ನು ಮತದಾರರು ಗುಡಿಸಿ ಕಸದ ಬುಟ್ಟಿಗೆ ಹಾಕಿದ್ದರು. ಆ ನಂತರದಲ್ಲಿ ಅಂಥದೇ ಘನಘೋರ ಸೋಲನ್ನು ಆ ಪಕ್ಷ ಕಂಡಿದ್ದು ೨೦೧೪ರಲ್ಲಿ. ಸೋತ ಇಂದಿರಾ ಗಾಂಧಿ ಮುಲುಗುತ್ತ ಮೂಲೆ ಹಿಡಿದು ಕೂರಲಿಲ್ಲ. ದೇಶವನ್ನು ಸುತ್ತಿದರು. “ನಾವು ಸೋತಿದ್ದೇವೆ ನಿಜ, ಆದರೆ ಸತ್ತಿಲ್ಲ” ಎನ್ನುವುದನ್ನು ದೇಶವಾಸಿಗಳಿಗೆ ಮನವರಿಕೆ ಮಾಡಿಕೊಟ್ಟರು. ಜೊತೆಗೆ ದೇವರಾಜ ಅರಸುರಂಥ ದೈತ್ಯ ನಾಯಕರು ಪಕ್ಷದಲ್ಲಿದ್ದರು. ಅರಸು ಕಾರಣವಾಗಿ ಇಂದಿರಾ ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ಮಾತ್ರವಲ್ಲ, ಕಳೆದುಕೊಂಡಿದ್ದ ಅಧಿಕಾರವನ್ನು ಎರಡೇ ವರ್ಷದಲ್ಲಿ ಪುನಃ ಕೈವಶಪಡಿಸಿಕೊಂಡರು.


ಈಗ ಇಂದಿರಾ ಗಾಂಧಿಯೂ ಇಲ್ಲ, ಅರಸು ಕೂಡಾ ಇಲ್ಲ. ಕಾಂಗ್ರೆಸ್ ಕೊರಳಲ್ಲಿ ಸೋಲಿನ ಸರಮಾಲೆ ತೂಗುತ್ತಿದೆ. ಚುನಾವಣಾ ಜಯಕ್ಕೆ ಕಾರಣ ಇರುವಂತೆ ಸೋಲಿಗೂ ಕಾರಣ ಇರುತ್ತದೆ. ಬಿಜೆಪಿ ಗೆದ್ದ ಕಾರಣ ಕಾಂಗ್ರೆಸ್ ಸೋತು ಹೋಯಿತು ಎನ್ನುವುದರಲ್ಲಿ ಅರ್ಥವಿಲ್ಲ. ಮೋದಿ ಗೆದ್ದರು ಆ ಕಾರಣವಾಗಿ ಸೋನಿಯಾ ಸೋಲಬೇಕಾಯಿತು; ಹಾಗಿಲ್ಲವಾದರೆ ಕಾಂಗ್ರೆಸ್ ಸೋಲುತ್ತಿರಲಿಲ್ಲ ಎನ್ನುವಂಥ ಹೊಗಳು ಭಟರು ಸೋನಿಯಾ ಸುತ್ತ ಸೇರಿಕೊಂಡಿದ್ದಾರೆ. “ಸೋಲಿಗೆ ನೀವಲ್ಲ ಕಾರಣ, ಈ ದೇಶದ ಜನ” ಎನ್ನುತ್ತ ನೀವಿಲ್ಲದೆ ಪಕ್ಷವೇ ಇಲ್ಲ ಎಂಬಂಥ ಭ್ರಮಾಲೋಕವನ್ನು ಸೃಷ್ಟಿಸಿದ್ದಾರೆ. ಇಂಥ ಭ್ರಮೆಯನ್ನು ಸೃಷ್ಟಿಸುವ ಜನರು ಎಲ್ಲೆಡೆಯೂ ಎಲ್ಲಾ ಕಾಲದಲ್ಲೂ ಇರುತ್ತಾರೆ. ವಿಪರ್ಯಾಸವೆಂದರೆ ಸೋನಿಯಾ ಅಂಡ್ ಚಿಲ್ಡ್ರನ್ಸ್ ಕಂಪೆನಿ ಮನುಷ್ಯ ನಿರ್ಮಿತ ಭ್ರಮೆಯನ್ನು ನಂಬಿದೆಯಲ್ಲ ಎನ್ನುವುದು. ೨೦೧೪ರಲ್ಲಿ, ೨೦೧೯ರಲ್ಲಿ ಲೋಕಸಭಾ ಚುನಾವಣಾ ಪರಾಭವಕ್ಕೆ ಕಾರಣ ಕಂಡುಹಿಡಿಯಲು ಏಐಸಿಸಿ ರಚಿಸಿದ್ದ ಸತ್ಯ ಶೋಧಕ ಸಮಿತಿ ತನ್ನ ವರದಿಯನ್ನು ಒಪ್ಪಿಸಿದೆ. ಈ ನಡುವಿನ ಅವಧಿಯಲ್ಲಿ ನಡೆದ ಬೇರೆಬೇರೆ ಮಹತ್ವದ ಚುನಾವಣಾ ಸೋಲಿಗೆ ಕಾರಣವನ್ನೂ ಆಯಾ ಸಂದರ್ಭಕ್ಕೆ ರಚನೆಯಾದ ಸಮಿತಿಗಳು ವಿಶ್ಲೇಷಿಸಿವೆ. ಅಂಥ ವರದಿಗಳಲ್ಲಿ ಒಂದರ ವಿಚಾರದಲ್ಲೂ ಋಐಸಿಸಿ ಅಧ್ಯಕ್ಷರು ತೀರ್ಮಾನ ತೆಗೆದುಕೊಂಡಿಲ್ಲ. ೨೦೧೪ರಲ್ಲಿ ಸ್ವತಃ ಸೋನಿಯಾ ಏಐಸಿಸಿ ಅಧ್ಯಕ್ಷರಾಗಿದ್ದರು. ೨೦೧೯ರಲ್ಲಿ ರಾಹುಲ್ ಗಾಂಧಿ ಏಐಸಿಸಿ ಅಧ್ಯಕ್ಷರಾಗಿದ್ದರು. ಮೊನ್ನೆ ಮೊನ್ನೆ ನಡೆದ ಪಂಚ ರಾಜ್ಯ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಏಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು ಸೋನಿಯಾ ಗಾಂದಿಯವರೇ. ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದುಕೊಂಡು ತಾವೇ ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡವರು ಪ್ರಿಯಾಂಕಾ ಗಾಂಧಿ. ಈ ಮೂವರನ್ನೊಳಗೊಂಡ ನಾಯಕತ್ವ, ವರದಿಯನ್ನು ಮುಚ್ಚಿಡುವುದಕ್ಕೆ ಏನು ಕಾರಣವಿರಬಹುದು…? ಅದೆಂಥ ಸತ್ಯವನ್ನು ವರದಿ ತನ್ನ ಗರ್ಭದಲ್ಲಿ ಬಸ್ಸಿಟ್ಟುಕೊಂಡಿರಬಹುದು…? (ಅಂದಹಾಗೆ ಪಂಚರಾಜ್ಯ ವಿಧಾನಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ಸಮಿತಿ ಇನ್ನೂ ನೇಮಕವಾಗಿಲ್ಲ, ಇಂದಲ್ಲ ನಾಳೆ ಅಂಥ ಸಮಿತಿ ಅಸ್ತಿತ್ವಕ್ಕೆ ಬರಬಹುದೆಂಬ ವಿಚಾರದಲ್ಲಿ ಭರವಸೆಯೂ ಇಲ್ಲ).


ಚುನಾವಣೆಯನ್ನು ಗೆದ್ದರೆ ನಾಯಕರ ಕಿರೀಟಕ್ಕೆ ಮತ್ತೊಂದು ಪುಕ್ಕ ಸೇರಿಸುವ, ಸೋತರೆ ಸ್ಥಳೀಯ ನಾಯಕರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ ಎಲ್ಲ ಪಕ್ಷಗಳಲ್ಲೂ ಇದೆ. ಕಾಂಗ್ರೆಸ್‌ನಲ್ಲಿ ಈ ಪ್ರವೃತ್ತಿ ಇತರ ಪಕ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಅದಕ್ಕೆ ಇರುವ ಕಾರಣವೆಂದರೆ ಹೈಕಮಾಂಡ್ ಎಂದೂ ತಪ್ಪು ಮಾಡುವುದಿಲ್ಲ ಎಂಬ ಅಲಿಖಿತ ನಿಯಮ. ಪಕ್ಷದಲ್ಲಿರುವ ದೊಡ್ಡ ದೊಡ್ಡ ನಾಯಕರಿಂದ ಶುರುಗೊಂಡು ನಾಲ್ಕಾಣೆ ಸದಸ್ಯತ್ವ ಹೊಂದಿರುವ ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೂ ಈ ನಿಯಮಕ್ಕೆ ಸದಾಕಾಲಕ್ಕೂ ಬದ್ಧರಾಗಿರಬೇಕು ಎನ್ನುವುದು ಮತ್ತೊಂದು ಅಲಿಖಿತ ನಿಯಮ. ಈ ನಿಯಮವನ್ನು ಇತ್ತೀಚಿನ ವರ್ಷಗಳಲ್ಲಿ ಹಲವರು ಪ್ರಶ್ನಿಸಲಾರಂಭಿಸಿ ತಥಾತಥಿತ ಹೈಕಮಾಂಡ್‌ನ ತಲೆ ಬಿಸಿಗೆ ಕಾರಣವಾಗಿದ್ದಾರೆ. ಇತ್ತೀಚಿನ ಬಂಡಾಯವನ್ನು “ಗ್ರೂಪ್-೨೩” ಎಂದು ಹೆಸರಿಸಲಾಗಿದೆ. ಪಕ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಬೇಕು; ಒಂದು ಕಟುಂಬದ ಖಾಸಗಿ ಆಸ್ತಿಯಾಗಿ ಕಾಂಗ್ರೆಸ್ ಇರಕೂಡದು; ಪಕ್ಷದ ಕಾರ್ಯಕ್ರಮಗಳು ಪಾರದರ್ಶಕವಾಗಿರಬೇಕು; ಪಕ್ಷದ ಸಂಘಟನೆಗೆ ಬೇರೆಬೇರೆ ಹಾಗೂ ನಿರಂತರ ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ “ಜನರೊಂದಿಗೆ ನಾವಿದ್ದೇವೆ” ಎಂಬ ಸಂದೇಶ ರವಾನೆಯಾಗಬೇಕು ಎಂದು “ಜಿ-೨೩” ಸದಸ್ಯರು ಹೇಳಿದರೆ ಅದನ್ನು ನಾಯಕತ್ವ ಬದಲಾವಣೆಗೆ ಬಂದಿರುವ ಒತ್ತಾಯ ಎಂದು ಭಯಗೊಂಡಿರುವ ಸೋನಿಯಾ ಪರಿವಾರ ಪ್ರಶ್ನೆ ಕೇಳುವವರೆಲ್ಲರ ಬಾಯಿ ಮುಚ್ಚಿಸುವ ಮಾರ್ಗೋಪಾಯಗಳ ಹುಡುಕಾಟದಲ್ಲಿದೆ.


ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ತನ್ನ ಅವಧಿ ಇನ್ನೂ ಆರು ತಿಂಗಳು ಇರುವಾಗಲೆ ೨೦೦೪ರಲ್ಲಿ ಚುನಾವಣೆಯನ್ನು ಮೈಮೇಲೆ ಎಳೆದುಕೊಂಡು ಸೋತು ಹೋಯಿತು. ಆಗ ಅಧಿಕಾರಕ್ಕೆ ಬಂದುದು ಕಾಂಗ್ರೆಸ್/ಯುಪಿಎ. ೨೦೦೯ರಲ್ಲೂ ಜನ ಮತ್ತೆ ಆ ಒಕ್ಕೂಟಕ್ಕೇ ಆಶೀರ್ವದಿಸಿದರು. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದಲ್ಲಿ ಕುಳ್ಳಿರಿಸುವ ಮೂಲಕ ಸೋನಿಯಾ ತಮ್ಮನ್ನು ತಾವೇ “ತ್ಯಾಗಿ” ಎಂದು ಬಿಂಬಿಸಿಕೊಂಡರು. ಇಂದಿರಾ ಹತ್ಯೆ ಘಟಿಸಿದಾಗ ಅಂದಿದ್ದ ರಾಷ್ಟ್ರಪತಿ ಜೈಲ್‌ಸಿಂಗ್, ಸಮಯ ವ್ಯರ್ಥಮಾಡದೆ ರಾಜೀವ್ ಗಾಂಧಿಯವರಿಗೆ ಪ್ರಧಾನಿ ಪಟ್ಟಕಟ್ಟಿದರು. ಆ ಸಂದರ್ಭದಲ್ಲಿ ಪಕ್ಷದ ಅನೇಕ ಹಿರಿಯ ತಲೆಗಳು ಬಯಸಿದ್ದು ಪ್ರಣವ್‌ಕುಮಾರ್ ಮುಖರ್ಜಿ ಪ್ರಧಾನಿಯಾಗಬೇಕೆಂದು. ಜೈಲ್ ಸಿಂಗ್‌ರಿಗೆ ಮಾತ್ರವೇ ಮುಖರ್ಜಿ ಬೇಡವಾಗಿತ್ತು. ವ್ಯಕ್ತಿಗತ ವೈಮನಸ್ಯ ಕಾರಣವಿರಬೇಕು. ಮುಂದೆ ೨೦೦೪ರಲ್ಲಿ ಕೂಡಾ ಪ್ರಣವ್ ಹೆಸರು ತೇಳಿತ್ತು. ಆದರೆ ಸೋನಿಯಾ ಮತ್ತು ಅವರನ್ನು ಸುತ್ತುವರಿದಿದ್ದ (ದುಷ್ಟ?) ಕೂಟಕ್ಕೆ ಆ ಹೆಸರು ಬೇಡವಾಗಿತ್ತು. ಹಾಗಂತ ಮನಮೋಹನ್‌ಸಿಂಗ್ ಆಯ್ಕೆಯಲ್ಲಿ ತಪ್ಪಿರಲಿಲ್ಲ. ದಕ್ಷ, ಸಮರ್ಥ, ಪ್ರಾಮಾಣಿಕ, ರಾಜಕಾರಣದಲ್ಲಿ ಅಪರೂಪವಾಗಿರುವ ಕೈಬಾಯಿ ಶುದ್ಧದ ಮನುಷ್ಯ ಅವರು. ಅವರಿಗೆ ಪ್ರಧಾನಿ ಪಟ್ಟ ಬಂದಂತೆ ಅದನ್ನು ನಿರ್ವಹಿಸುವ ಸ್ವಾತಂತ್ರ್ಯ ಬರಲಿಲ್ಲ. ಹತ್ತು ವರ್ಷದ ಯುಪಿಎ ಆಡಳಿತಾವಧಿಯಲ್ಲಿ ಎಲ್ಲ ತೀರ್ಮಾನವಾಗುತ್ತಿದ್ದುದು ಸೋನಿಯಾ ಮನೆಯಲ್ಲಿ. ಅದನ್ನು ಹೊರಜಗತ್ತಿಗೆ ತಿಳಿಸುವುದಷ್ಟೆ ಸಂಪುಟದ ಕೆಲಸವಾಗಿತ್ತು. ೨೦೧೪ರಲ್ಲಿ ಮೋದಿ ಹವಾದಲ್ಲಿ ತರಗೆಲೆ ರೀತಿಯಲ್ಲಿ ಯುಪಿಎ ಸರ್ಕಾರ ಕೊಚ್ಚಿ ಹೋಯಿತು. ಕಾಂಗ್ರೆಸ್ ದೂಳೀಪಟವಾಯಿತು.
ಈ ಸಂದರ್ಭದಲ್ಲಿ ಸೋನಿಯಾರಿಗೆ ತಮ್ಮ ಅತ್ತೆಯ ಛಲ ನೆನಪಿಗೆ ಬರಬೇಕಿತ್ತು. ದೇಶಾದ್ಯಂತ ಪ್ರವಾಸ ಮಾಡಿ “ನಾವು ಸೋತಿದ್ದೇವೆ, ನಿಜ ಆದರೆ ಸತ್ತಿಲ್ಲ” ಎಂದು ಜನಕ್ಕೆ ಹೇಳಬೇಕಿತ್ತು. ಅನಾರೋಗ್ಯದ ನೆಪದಲ್ಲಿ ಸೋನಿಯಾ ಮನೆಯಲ್ಲೇ ಉಳಿದರು. ತಮ್ಮದು ಹುಡುಗಾಟಿಕೆ ಹಂತ ಮೀರಿದ ವಯಸ್ಸು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ರಾಹುಲ್ ಸೋತರು. ಧೃತರಾಷ್ಟ್ರ ಪ್ರೇಮ ಎನ್ನುವುದೊಂದು ಮಹಾಭಾರತದಲ್ಲಿದೆ. ತನ್ನ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂಬ ಧೃತರಾಷ್ಟ್ರನ ನಿಲುವು ಮುಂದಿನ ಅನಾಹುತಕ್ಕೆ ಹೇಗೆಲ್ಲ ಕಾರಣ ಆಯಿತು ಎನ್ನುವುದನ್ನು ಹೇಳುತ್ತದೆ ಅದು. ಸೋನಿಯಾರದು ತಮ್ಮ ಇಬ್ಬರೂ ಮಕ್ಕಳ ವಿಚಾರದಲ್ಲಿ ಇದೇ ಬಗೆಯ ಪ್ರೇಮ. ರಾಮಚಂದ್ರ ಗುಹಾ ಮಾತ್ರವೇ ಅಲ್ಲ ಹಿರಿಯ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ಕೂಡಾ ಈ ಪ್ರವೃತ್ತಿಯನ್ನು ಖಂಡಿಸುತ್ತಾರೆ. ಕಳೆದ ಭಾನುವಾರ “ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್” ಪತ್ರಿಕೆಯ ತಮ್ಮ “ಪಾಯಿಂಟ್ ಆಫ್ ವ್ಯೂ” ಅಂಕಣದಲ್ಲಿ ಜಾರ್ಜ್ ಬರೆದಿರುವುದನ್ನು ಓದಿದರೆ ಕಾಂಗ್ರೆಸ್ ನಾಯಕತ್ವ ತುಳಿಯುತ್ತಿರುವ ದಿವಾಳಿದಾರಿಯ ಪ್ರಪಾತ ಎಷ್ಟೆನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಎಂದರೆ ಸೋನಿಯಾ ಅಥವಾ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ವಡ್ರಾ ಒಡೆತನದ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಲ್ಲ ಎನ್ನುವುದು ಜಾರ್ಜ್ ಅಭಿಮತ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಶಶಿ ತರೂರ್, ಕಪಿಲ್ ಸಿಬಲ್, ಮನೀಶ್ ತಿವಾರಿ, ಗುಲಾಂ ನಬಿ ಆಜಾದ್, ಭೂಪಿಂದರ್ ಸಿಂಗ್ ಹುಡಾ ಮುಂತಾದವರನ್ನು ನಾಯಕತ್ವದ ವಿರೋಧಿಗಳು ಎಂಬ ರೀತಿಯಲ್ಲಿ ವ್ಯವಸ್ಥಿತವಾಗಿ ಬಿಂಬಿಸುವ ಒಂದು ಪಟಾಲಮ್ಮು ಏಐಸಿಸಿಯಲ್ಲಿ ಸಕ್ರಿಯವಾಗಿರುವುದನ್ನು ಗಮನಿಸಬೇಕು. ಸೋನಿಯಾ ಕಂಪೆನಿ ವಿರುದ್ಧ ಪಿಸುಮಾತಿನ ವಿರೋಧ ಕೇಳಿಬಂದರೂ ಬಗ್ಗುಬಡಿದು ಬಾಯಿ ಮುಚ್ಚಿಸುವ ಕೆಲಸ ಈ ಪಟಾಲಮ್ಮಿನದು.


ತಮಿಳುನಾಡಿನಲ್ಲಿ ೫೫ ವರ್ಷದ ಹಿಂದೆ; ಪಶ್ಚಿಮ ಬಂಗಾಳಾದಲ್ಲಿ ೪೫ ವರ್ಷದ ಹಿಂದೆ; ಉತ್ತರ ಪ್ರದೇಶ, ಬಿಹಾರದಲ್ಲಿ ಮೂರು ದಶಕ ಹಿಂದೆ; ಒಡಿಶಾ, ಗುಜರಾತದಲ್ಲಿ ೨೫ ವರ್ಷದ ಹಿಂದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಲೆಟರ್ ಹೆಡ್ ಪಕ್ಷದ ಮಟ್ಟಕ್ಕೆ ಬಂದು ನಿಂತಿರುವುದಕ್ಕೆ ಕಾರಣ ಇರಲೇಬೇಕು. ಯಾಕಾಗಿ ಜನಕ್ಕೆ ಕಾಂಗ್ರೆಸ್ ಬೇಡವಾಗಿದೆ ಎನ್ನುವುದಕ್ಕೆ ಉತ್ತರ ಹುಡುಕುವ ಕೆಲಸವನ್ನು ಸೋನಿಯಾ ಪಟಾಲಮ್ಮು ಇನ್ನಾದರೂ ಮಾಡಬೇಕು. ಬಿಜೆಪಿಯ ಕೋಮುವಾದಿ ರಾಜಕೀಯ ಕಾಂಗ್ರೆಸ್ಸನ್ನು ಮೂಲೆಗುಂಪು ಮಾಡುತ್ತಿದೆ ಎಂಬ ವಾದವಿದೆ, ವಾದಕ್ಕಾಗಿ ಅದನ್ನು ಒಪ್ಪೋಣ. ಕೋಮು ರಾಜಕೀಯ ಕೆಲಸಕ್ಕೆ ಬಾರದ ತಮಿಳುನಾಡಿನಲ್ಲಿ, ಪಶ್ಚಿಮ ಬಂಗಾಳಾದಲ್ಲಿ, ಆಂಧ್ರಪ್ರದೇಶ, ತೆಲಂಗಾಣಾದಲ್ಲಿ, ಒಡಿಶಾದಲ್ಲಿ, ಬಿಹಾರದಲ್ಲಿ ಜನ ಯಾಕೆ ಕಾಂಗ್ರೆಸ್‌ನ ಕೈ ಹಿಡಿಯುತ್ತಿಲ್ಲ…? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಯತ್ನಕ್ಕೆ ಸೋನಿಯಾ ಗಾಂಧಿ ಮುಂದಾದರೆ ಪಕ್ಷಕ್ಕೆ ಭವಿಷ್ಯದಲ್ಲಿ ಒಳಿತಾಗಬಹುದೋ ಏನೋ!?

 

Girl in a jacket
error: Content is protected !!