ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು…
ಕಾವ್ಯ ಜನಪ್ರಿಯ ಚರಿತ್ರೆಯಂತೆ ಸರಳ ರೇಖೆಯಲ್ಲಿ ಸಾಗುವುದಿಲ್ಲ.ಲೋಕಸಂವಾದಕ್ಕಿಂತಲೂ ಭಾವ ಸಂವಾದ ಬಯಸುವ ಕಾವ್ಯವು ಭಿನ್ನ ಆಯಾಮಗಳ ಸಂಕೀರ್ಣ ರೂಪ ಹೊತ್ತಿದೆ.ಕವಿ ದೃಷ್ಟಿಗೆ ವಿದ್ವತ್ತಿನ ಹಾಗೂ ಅನುಭವಗಳ ಹಿನ್ನೆಲೆ ಇದ್ದಷ್ಟೂ ಆತನ ಸೃಷ್ಟಿ ಶೀಲ ಜಗತ್ತು ಭಿನ್ನ ಭಿನ್ನವಾಗಿ ನಿರ್ಮಾಣವಾಗುತ್ತದೆ. ಕವಿ ತಾನು ಸೃಷ್ಟಿಸುವ ಕಾವ್ಯಗಳ ಮೂಲಕವೇ ತನ್ನ ಓದುಗರನ್ನೂ ಇತರರಿಗಿಂತ ಭಿನ್ನವಾಗಿಸಬಲ್ಲ. ಕವಿಯ ಕಾವ್ಯವನ್ನ ವಿಶಿಷ್ಟ ಪದರಚನೆ ಎಂದು ಕಾವ್ಯ ಮೀಮಾಂಸೆ ಗುರ್ತಿಸುತ್ತದೆ.
ಅಲಂಕಾರ ಎನ್ನುವ ಪದವು ಸೌಂದರ್ಯವನ್ನ ಸೂಚಿಸುವ ಶಬ್ದವಾಗಿರುವಂತೆಯೇ ಸೌಂದರ್ಯವನ್ನ ವಿಶಿಷ್ಟಗೊಳಿಸುವ ಪದದಂತೆಯೂ ಕಾಣುತ್ತದೆ.ಕವಿಗೆ ಸ್ಪಂದಿಸುವ ಸಹೃದಯ ಮೂಲತಹ ಅಲಂಕಾರ ಪ್ರಿಯ.ಈತನ ಸೌಂದರ್ಯ ಪ್ರಜ್ಞೆಯನ್ನ ಗಮನಿಸಿಯೇ ಕವಿ ತನ್ನ ಅಲಂಕಾರ ಚಾತುರ್ಯವನ್ನ ಮೆರೆಸುತ್ತಾ ಬಂದಿದ್ದಾನೆ.ಕವಿಯ ಕಾವ್ಯದ ವಿಷಯ ಒಂದೇ ಆದರೂ ಅದರ ನಿರೂಪಣಾ ವಿಧಾನಗಳು ಮಾತ್ರ ವಿಶಿಷ್ಟ ರೀತಿಯಾಗುತ್ತಾ ಬಂದಿವೆ.
ಕವಿ ಕಾವ್ಯದಂತೆಯೇ ಬಂಡವಾಳಶಾಹಿಯ ಲೋಕ ಮಾರುಕಟ್ಟೆಯು ಕೂಡಾ ತನ್ನ ಅಲಂಕಾರ ಸಾಮಾಗ್ರಿಗಳ ಕೋಟ್ಯಾಂತರ ವಹಿವಾಟನ್ನ ಅತ್ಯಂತ ನಾಜೂಕಾಗಿ ಸೌಂದರ್ಯ ಮೂಲದಿಂದಲೇ ನಿಭಾಯಿಸುತ್ತದೆ.ಮಾರುಕಟ್ಟೆ ದೇಹ ಮೂಲವಾದರೆ ಕಾವ್ಯ ಮನೋ ಮೂಲವಾದುದು.ದೇಹ ಮೂಲವು ಸಿಹಿಯಾದ ಸುಳ್ಳುಗಳ ಜಾಹಿರಾತುಗಳಿಂದ ತನ್ನ ವ್ಯಾಪಾರವನ್ನ ವಿಸ್ತರಿಸಿಕೊಂಡಿರೆ ಮನೋ ಮೂಲವಾದ ಕಾವ್ಯ ಅಲಂಕಾರಗಳ ಕಾಲ್ಪನಿಕ ವಾಸ್ತವಗಳಿಂದ ಓದುಗರೊಂದಿಗೆ ವ್ಯವಹರಿಸುತ್ತವೆ.
ಕಾವ್ಯವೊಂದು ಭಾಷೆಯ ಕಲಾತ್ಮಕವಾದ ರಚನೆಯೆಂಬುದನ್ನ ಮನಗಂಡಾಗ ಮಾತ್ರ ಅದಕ್ಕೆ ಅಲಂಕಾರದ ಅಗತ್ಯ ಕಾಣುತ್ತದೆ.ಕವಿಯ ಈ ಅಲಂಕಾರ ತಂತ್ರವನ್ನ ಅಲಂಕಾರಿಕರು ಉಕ್ತಿ ವೈಚಿತ್ರ್ಯವೆಂದು ಕರೆದಿದ್ದಾರೆ. ಕವಿಯ ಭಾಷೆಗೆ ಮಣ್ಣ ಹುಡಿಯಂತಹ ಲೋಕ ಮಾತುಗಳು ಬೆಸೆದು ಕೊಂಡಂತೆಯೇ ಸಂಕೀರ್ಣವಾದ ವರ್ಣನೀಯ ವಿಶಿಷ್ಟ ಪದಗಳೂ ಬೆಸೆದುಕೊಂಡಿವೆ.
ಕವಿಯ ಭಾಷೆ ಲೋಕದ ಅಂತರಂಗವನ್ನ ಉಡುಗೆಯಂತೆ ತೊಟ್ಟಿರುತ್ತದೆ.ಕವಿಯು ಕಾವ್ಯಾಲಂಕಾರವನ್ನ ವಸ್ತು ನಿರ್ವಹಣೆಗಾಗಿ ಬಳಸಿದಂತೆಯೇ ತಂತ್ರ ನಿರ್ವಹಣೆಗೂ ಬಳಸಿದ್ದಾನೆ.ಆತ ತನ್ನ ಕಾವ್ಯಗಳ ಚಿಕ್ಕ ಚಿಕ್ಕ ಘಟಕಗಳ ಭಾವಗಳನ್ನ ಉಪಮೆ,ರೂಪಕ,ಪ್ರತಿಮೆ ಸಂಕೇತಗಳೆಂದು ಆತ ವಿಸ್ತರಿಸಿಕೊಳ್ಳಬಲ್ಲ.ಈ ನೆಲೆಯಿಂದಾಗಿಯೇ ನಾವು ಕವಿಯ ಸಾಲನ್ನ ಅತ್ಯುತ್ತಮ ಶಬ್ದಗಳ ಅಭಿವ್ಯಕ್ತಿ ಎನ್ನುವುದು.
ಉದಾಹರಣೆಯೆಂಬಂತೆ ಆಧುನಿಕ ಕಾವ್ಯಪರಂಪರೆಯೊಳಗೆ ತಂದಿರುವ ಸೂರ್ಯನ ಕುರಿತಾದ ಚಿತ್ರವನ್ನ ನೋಡಿದರೆ ಸಾಕು ಅವು ಬೆಳಕಿನಂತೆಯೂ,ಬೆಂಕಿಯಂತೆಯೂ,ಸ್ಫೋಟಿಸ ಬಲ್ಲವು.ಕವಿಗಳ ಕಾವ್ಯಗಳಲ್ಲಿ ಸೂರ್ಯ ಕೆಟ್ಟದ್ದನ್ನ ನಾಶಮಾಡುವವನಂತೆಯೂ, ಒಳ್ಳೆಯ ತನ ಉಳಿಸುವ ಜೀವಪೋಷಕ ಸಂಸ್ಕೃತಿಯ ವಕ್ತಾರನಂತೆಯೂ ಕಾಣಬಲ್ಲ.
ಸೂರ್ಯನನ್ನ ಕರಿತಂತೆ ಪಂಪನಿಂದ ಹಿಡಿದು ಹೊಸಗನ್ನಡ ಕವಿಗಳ ತನಕವೂ ಭಿನ್ನ ಭಿನ್ನ ನೋಟಗಳನ್ನ ಕಲೆ ಹಾಕಬಹುದು.
ಸೂರ್ಯ,ಆದಿತ್ಯ,ರವಿ,ದಿನಕರ,ಭಾನು,ಅರ್ಕ,ಸವಿತಾ,ದಿವಾಕರ,ಮಿತ್ರ,ಭಾಸ್ಕರ,ನೇಸರ,ಅರುಣ,ಉದಯ,ತರಣಿ,ಮಿಹಿರ,ಪ್ರಭಾಕರ,ದ್ಯುಮಣಿ,ಚಿತ್ರಭಾನು,ಗ್ರಹಪತಿ ಎಂದೆಲ್ಲಾ ಕರೆಸಿಕೊಳ್ಳುವ ಸೂರ್ಯ ಹಿಂದೂ ದರ್ಮದಲ್ಲಿ ಕಣ್ಣಿನ ಅನುಭವಕ್ಕೆ ನಿಲುಕುವ ದೇವತೆಂತೆ ಕಾಣುತ್ತಾನೆ.ಹರಿ ಮತ್ತು ಹರ ಪ್ರಿಯರಿಬ್ಬರೂ ಈತನನ್ನ ಶಿವ ಮತ್ತು ವಿಷ್ಣು ರೂಪಗಳಲ್ಲಿ ಕಾಣುತ್ತಾರೆ.ಶಿವ ಭಕ್ತರು ಸೂರ್ಯ ಮಾರ್ತಾಂಡ ಎಂದರೆ ವಿಷ್ಣು ಭಕ್ತರು ಸೂರ್ಯ ನಾರಾಯಣ ಎನ್ನುತ್ತಾರೆ.ಸೂರ್ಯ ವಂಶಿ,ಮಿತ್ರ ವಂಶಿ ಎಂದು ಸೂರ್ಯನನ್ನ ಜೀವ ಉಳಿಸುವ ಮಿತ್ರ ರೂಪದಲ್ಲಿಯೂ ಆರಾಧಿಸುತ್ತಾರೆ.ಇಂತಹ ಆರಾಧಕರನ್ನ ಮೈತ್ರಕರು ಎನ್ನಲಾಗಿದೆ. ಪ್ರಪಂಚದಲ್ಲಿ ಮೊದಲ ದೇವತೆಯಂತೆ ಕಂಡಾತ. ಮೆಕ್ಸಿಕನ್ನರು ಆತನನ್ನ ಬಲಿಕೇಳುವ ದೇವನಂತೆ ಕಾಣುತ್ತಾರೆ. ನಮ್ಮವರು ಜೀವ ಪೊರೆವ ದೇವನಂತೆ ಕಾಣುತ್ತಾರೆ. ಆದಿಮಾನವರು ಪಿತೃಗಳ ಆತ್ಮ ಕಾಯುವ ದೇವರಂತೆ ಕಾಣುತ್ತಾರೆ.
ವಿಜ್ಞಾನ ಸೂರ್ಯನನ್ನ ನಕ್ಷತ್ರ ಎನ್ನುತ್ತದೆ.ಸುಮಾರು ೪.೬ ಬಿಲಿಯನ್ನ ವರ್ಷಗಳ ಹಿಂದೆ ಇದು ರೂಪಗೊಂಡಿತು ಎಂದು ವಿಜ್ಞಾನ ಹೇಳುತ್ತದೆ.ನಮ್ಮ ತಾರಾಗಣದಲ್ಲಿ ಎಂಭತೈದು ನಕ್ಷತ್ರಳಿಗೂ ಹೆಚ್ಚು ಸೂರ್ಯ ಪ್ರಕಾಶಮಾನವಾಗಿದೆ.ಭೂಮಿಗೆ ಸೂರ್ಯನ ಬೆಳಕೇ ಶಕ್ತಿ ಮೂಲ.ಸೂರ್ಯನ ಬೆಳಕು ಮಾನವರ ಚರ್ಮಕ್ಕೆ ನಂಜು ನಿವಾರಕವೂ ವಿಟಮಿನ್ ಡಿ ಉತ್ಪದನೆಗೂ ಅನುಕೂಲಕರ.ಸೂರ್ಯ ಜಗ ಬೆಳಗಿಸುವ ಶಕ್ತಿಯಂತೆಯೇ ಜಗ ಸುಡುವ ಶಕ್ತಿಯೂ ಹೌದು.
ಸೂರ್ಯ ಕ್ಷಿತಿಜದಿಂದ ಹುಟ್ಟುವಂತೆ ಕಂಡರೂ ವಾಸ್ತವವಾಗಿ ಭೂಮಿಯ ಚಲನೆಯು ಸೂರ್ಯ ಆ ರೀತಿ ಕಾಣುವಂತೆ ಮಾಡುತ್ತದೆ.ಪ್ರಾಚೀನ ಕಾಲದಲ್ಲಿ ವಿದ್ವಾಂಸರು ಭೂಮಿಯನ್ನೇ ಈ ಜಗತ್ತಿನ ಕೇಂದ್ರ ಎಂದು ಭಾವಿಸಿದ್ದರು.೧೫ ನೇ ಶತಮಾನದ ನಿಕೊಲಸ್ ಕೋಪರ್ನಿಕಸ್ ನ ಗಣಿತ ವ್ಯವಸ್ಥೆ,೧೭ ನೇ ಶತಮಾನದ ಗೆಲಿಲಿಯೋ ಮತ್ತು ಐಸಾಕ್ ನ್ಯೂಟನ್ ರ ಭೂಮಿ ಕುರಿತಾದ ಚಿಂತನೆಗಳು ಮೊದಲ ಕಲ್ಪನೆಯನ್ನೇ ಬುಡಮೇಲು ಗೊಳಿಸಿ ಸೂರ್ಯನ ಸುತ್ತಲೇ ಭೂಮಿ ಸುತ್ತುತ್ತದೆ ಎಂಬ ಸೂರ್ಯ ಕೇಂದ್ರಿತ ಚಿಂತನೆ ಮೊದಲಾಯಿತು.ಸೌರ ವ್ಯೂಹದ ಎಲ್ಲಾ ಗ್ರಹಗಳು ಸೂರ್ಯನ ಸುತ್ತಲೇ ಪ್ರದಕ್ಷಿಣೆ ಹಾಕುತ್ತವೆ.ಶಾಖ ಮತ್ತು ಬೆಳಕಿಗೆ ಸೂರ್ಯನೇ ಆಧಾರ ಎಂಬ ಸತ್ಯ ತಿಳಿಯಿತು.
ಸಾಹಿತ್ಯ ಸೃಷ್ಟಿಕ್ರಿಯೆಯಲ್ಲಿ ಹೊಸ ಹೊಸ ದರ್ಶನಾ ಶಕ್ತಿ ಹೊಂದಿದ್ದ ನವೋದಯ ಕವಿಗಳು ಸೂರ್ಯನನ್ನ ತಮ್ಮ ರಚನೆಯಲ್ಲೂ ವಿಶಿಷ್ಟವಾಗಿ ಕಂಡಿದ್ದಾರೆ. ಸ್ಪೂರ್ತಿ ಮತ್ತು ಆನಂದಗಳು ಕರೆದಲ್ಲಿ ಕಾವ್ಯವಿದೆ ಎಂದು ಭಾವಿಸಿದ ಬೇಂದ್ರೆಯವರು ಸೂರ್ಯನನ್ನ
ಮೂಡಲ ಮನೆಯಾ ಮುತ್ತಿನ ನೀರಿನ
ಎರಕವಾ ಹೊಯ್ದಾ
ನುಣ್ಣನೆರಕವಾ ಹೊಯ್ದಾ
ಬಾಗಿಲು ತೆರೆದೂ ಬೆಳಕೂ ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ ಜಗವೆಲ್ಲಾ ತೊಯ್ದಾ.
ಎನ್ನುತ್ತಾ ಭಾರತೀಯ ಗೃಹಿಣಿಯನ್ನ ಸೂರ್ಯನಲ್ಲಿ ಕಾಣುತ್ತಾರೆ. ಆಕೆಯ ಮಂಗಳ ಕಾರ್ಯವನ್ನ ಮನೆಯ ಅಂಗಳ ಗುಡಿಸಿ ನೀರೆರಚಿ, ರಂಗೋಲಿ ಹಾಕುವ ಕ್ರಿಯೆಯನ್ನ ಸೂರ್ಯೋದಯದಲ್ಲಿ ನೋಡುತ್ತಾರೆ.ಕುವೆಂಪು ಅವರಿಗೆ ಸೂರ್ಯೋದಯ ಲೌಕಿಕ ನಡೆಯಾಗಿ ಕಾಣದೆ ಸ್ವರ್ಗದ ಬಾಗಿಲಾಗಿ ಕಾಣುತ್ತದೆ. ಪು.ತಿ.ನ. ಅವರಿಗೆ ಪುರಾಣದ ವಸ್ತುವಾಗಿ ಕಾಣುತ್ತದೆ. ಹಿರಣ್ಯಾಕ್ಷನನ್ನ ಸೆದೆ ಬಡಿದು ಎದ್ದೇಳುವ ಶ್ರೀಹರಿಯಾಗಿ ಸೂರ್ಯ ಕಾಣುತ್ತಾನೆ. ಸೂರ್ಯ ಪಂಜೆ ಮಂಗೇಶರಾಯರಿಗೆ ದೇಶ ವಿಮೋಚನೆಗಾಗಿ ಬರುವ ಸ್ವತಂತ್ರ್ಯ ಹೋರಾಟಗಾರನಂತೆ ಕಾಣುತ್ತಾನೆ.
ಸ್ವತಂತ್ರ್ಯ ಬಂದ ನಂತರ ದೇಶ ಬದಲಾಗುತ್ತದೆ ದೇಶದ ವ್ಯವಸ್ಥೆ ಬದಲಾಗಿ ನಮ್ಮೆಲ್ಲರ ಬದುಕು ಬಂಗಾರವಾಗುತ್ತದೆ ಎಂದು ಕನಸು ಕಂಡಿದ್ದ ಅನೇಕರಿಗೆ ಕೆಲವೇ ವರ್ಷಗಳಲ್ಲಿ ಭ್ರಮನಿರಸನವಾಗತೊಡಗಿತು.ನಿರಾಸೆಯನ್ನ ಕಂಡ ನವ್ಯ ಕವಿಗಳು ಆನಂದ ಮೂಲದ ಸೂರ್ಯನನ್ನ ನೋವು ಸಂಕಟದ ರೂಪಕವಾಗಿ ರಕ್ಕಸ ಬೇಟೆಗಾರನ ರೂಪಕವಾಗಿ ಕಾಣತೊಡಗಿದರು.
“ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ,-
ಸುರುವಾಯ್ತಿಲ್ಲಿ ಚಲನೆ: -ಕಂಬಾರ
***
“ಕಿಲುಬಿಡಿದ ಹಳೆಯ ಕವಿಸಮಯಗಳ
ಥಳಥಳಿಸಿ ಹೊಳೆಯಲೆಂದುಜ್ಜಿ ಬೆಳಗಳು
ಹೊಳೆಯ ಕಡೆ ಹೊರಟಾಗ-
ಹಡೆದ ಹೂಮರಿಗಳ ಬಿಟ್ಟೋಡಲಾಗದಯೆ
ಲಂಟಾನ ಪೊದೆಯೊಳಗೆ ಪತರುಗುಟ್ಟುವ
ಬೆಳ್ಳಿ ಮೊಲವ
ನನ್ನ ಮನೆ ಧಾಂಡಿಗ ನಾಯಿ ಗಬಕ್ಕನೆ
ಕಚ್ಚಿ ಕಿತ್ತೆಳೆದೊಡನೆ ರಕ್ತ ಚಿಲ್ಲೆಂದಾಗ-
ನನ್ನೂರಿನಲಿ ಬೆಳಗಾಯಿತು.-ಆಲನಹಳ್ಳಿ ಕೃಷ್ಣ
ಇದೇ ಕಾಲದ ತೆಲುಗು ಕವಿಗಳು ನಿರಾಸೆಯನ್ನ ತಾತ್ವೀಕರಿಸದೇ ಸಮಾಜದ ಅಸಮಾನ ವ್ಯವಸ್ಥೆಗೆ ಶ್ರಮ ತಾರತಮ್ಯ ದೋಷವೇ ಕಾರಣವೆನ್ನುತ್ತ ಮನುಷ್ಯನ ಸ್ವಾರ್ಥ ವಿಶಾಲ ದೃಷ್ಟಿಯ ಕೊರತೆ,ಸಂಕುಚಿತತೆಗಳೇ ಅಸಮಾನತೆಗೆ ಕಾರಣವೆನ್ನುತ್ತಾ ಪ್ರತಿಭಟನೆಯ ಸ್ವಾಭಿಮಾನದ ಸೂರ್ಯನನ್ನ ಕಾವ್ಯದಲ್ಲಿ ನೆಲೆಗೊಳಿಸುತ್ತಾರೆ. ಕವಿಸೇನ ಮ್ಯಾನಿಪ್ಯಾಸ್ಟೋ ಬರೆದ ಗುಂಟೂರು ಶೇಷೇಂದ್ರ ಶರ್ಮರು ಸೂರ್ಯನನ್ನ ಪ್ರವಾಹದಂತೆ ಘರ್ಜಿಸುವ ಹೋರಾಟದ ರೂಪಕವಾಗಿ ನೋಡುತ್ತಾರೆ.
” ಸಮುದ್ರ ಯಾರ ಕಾಲ ಬಳಿಯೂ ಕುಳಿತು ಕೂಗದು
ತುಫಾನಿನ ಕೊರಳು ಯಾರ ಚಿತ್ತದಂತೆಯೂ ಬಂದೆರಗದು
ಪರ್ವತ ಯಾರಿಗೂ ನಡು ಬಾಗಿ ಸಲಾಂ ಎನ್ನದು”
ಎನ್ನುತ್ತಾ ಈ ಕವಿ ಉರಿವ ಸೂರ್ಯನೆಂದೇ ತಮ್ಮ ಆಧುನಿಕ ಮಹಾಭಾರತದಲ್ಲಿ ನಿಲ್ಲಿಸುತ್ತಾರೆ. ಕೈಗಾರಿಕೀಕರಣ,ಬಂಡವಾಳಶಾಹಿ ವ್ಯವಸ್ಥೆಯು ಲಕ್ಷಾಂತರ ದುಡಿವ ಕೈಗಳಿಗೆ ಬೆಲೆ ಸಿಗದಂತೆ ಮಾಡಿದವು. ಮಾರುಕಟ್ಟೆಯ ಉಸಿರು ಗಟ್ಟಿಸುವ ಕ್ರಿಯೆಗೆ ಇಲ್ಲಿನ ಗುಡಿ ಕೈಗಾರಿಕೆಗಳು ನಾಶವಾದವು.ಈ ಸ್ಥಿತಿಯನ್ನ ಬಂಡಯ ಕವಿತೆಗಳು ಕಟ್ಟಿಕೊಡುತ್ತವೆ.ಇಲ್ಲಿನ ಸೂರ್ಯ ಸೌಂದರ್ಯ ಉಪಾಸಕನಲ್ಲ,ನಿರಾಶಾವಾದಿಯೂ ಅಲ್ಲ.ಬದಲಿಗೆ ಸಾಮಾಜಿಕ ಹೊಣೆಗಾರಿಕೆ ಹೊತ್ತ ರೂಪಕದ ದ್ಯೋತಕ.
“ಹಗಲೆಲ್ಲಾ ತಿದಿಯೊತ್ತಿ ಯೊತ್ತಿ ದುಡಿದ ಸೂರ್ಯ ಸಂಜೆಯ ವೇಳೆಗೆ ಧಣಿದು ಹಾಗೇ ನೆಲಕ್ಕೆ ಕೈ ಯೂರಿ ರಕ್ತ ಕಕ್ಕುತ್ತ ಸತ್ತ.”
ಧಗ ಧಗ ಉರಿವ ಸೂರ್ಯ ಇಲ್ಲಿ ಸಾಯುವ ಶ್ರಮಿಕನಾಗುವನು.ಸೂರ್ಯನನ್ನ ಕುರಿತಂತೆ ವ್ಯದೇಹಿ ಅವರು ಹೆಣ್ಣನ್ನ ಹೀನ ಸ್ಥಿತಿಗೆ ತಂದವನ ನೆನೆಪಿನ ಪಾಠದಂತೆ ನೋಡುತ್ತಾರೆ.
ನೋಡು ಮಗೂ
ಅವ ಸೂರ್ಯ
ಹಗಲೆಲ್ಲ ಆ ಈ ಹುಡುಗಿಯರ
ಕರುಳು ಸವರಿ
ಕತ್ತಲಾಗಲು ವಿರಕ್ತ ವೇಷ ತೊಟ್ಟು
ಎತ್ತಲೋ ನಡೆಯುವಾತ.
ಎಂದು ಗಂಡಿನ ಸೋಗಲಾಡಿತನವನ್ನ ಸ್ವಾರ್ಥಸಾಧನೆಯನ್ನ ಬಯಲಿಗೆಳೆದು ಚಿತ್ರಿಸುತ್ತಾರೆ.
ದಲಿತ ವಿಮೋಚನೆಯ ಕವಿತೆಗಳು ಸೂರ್ಯನನ್ನ ಹೋರಾಟದ ನೇತಾರನಂತೆ ಕಂಡಿವೆ.ತತ್ವಕ್ಕೆ ಸೀಮಿತಗೊಳ್ಳದೇ ಹೋರಾಟದ ಅಸ್ತ್ರವಾದ ಸೂರ್ಯ ಮೆರವಣಿಗೆಯ ನಡುವೆ ಕಾಣುವ ಕೆಂಪು ಸೂರ್ಯ ನಾಗಿದ್ದಾನೆ.ಕನ್ನಡ ಕಾವ್ಯ ಪರಂಪರೆಯಲ್ಲಿ ಆನಂದ ಮೂಲವಾದ,ನೋವಿನ ಗ್ರಹಿಕೆಯಾದ,ಸೂರ್ಯ ಮೊದಲ ಬಾರಿಗೆ ಇಲ್ಲಿ ತೆಲುಗು ಕವಿತೆಗಳಂತೆಯೇ ಕ್ರಾಂತಿಯ ಸಂಕೇತವಾಗಿದ್ದಾನೆ.
ಗಗನ ಸಾಗರದಲ್ಲಿ ಮುಗಿಲ ದೋಣಿಯ ಸಾಲು
ಎಣಿಸಿದಷ್ಟು ಮಿಗುವ ಜನಸಂದಣಿ
ಕೆಂಪು ಸೂರ್ಯನು ಹುಟ್ಟಿ ಮೆರವಣಿಗೆ ಬರುವಾಗ
ಕಪ್ಪು ಕಾಡಿನ ಹಾಡು ಮೊಳಗುತಿತ್ತು.
ಸೂರ್ಯ ಸಿದ್ಧಲಿಂಗಯ್ಯನವರಿಗೆ ಕರಿಯರ ವಿಮೋಚನೆಗೈದ ಗಾಂಧೀಜಿಯ ನೆನಪೂ ನೀಡಬಲ್ಲ. ಆಪ್ರಿಕಾದ ರೈಲಿನಲಿ ಕರಿಯನೆಂದಬ್ಬರಿಸಿ, ನೆಲಕೆ ದೂಡುವ ಕೇಕೆ ಹಾಕಿದವರ, ಮೃಗಬಲವ ಮೆಟ್ಟಿದಿರಿ ದೇಶದಿಂದಟ್ಟದಿರಿ, ಬಿಳಿಯ ಸೂರ್ಯನ ನೀವು ಮುಳುಗಿಸಿದಿರಿ. ಎನ್ನುತ್ತಾರೆ.
ಸೂರ್ಯನನ್ನ ಕುರಿತು ಒಂದು ಸಂಕಲನವನ್ನೇ ಹೊರತಂದಿರುವ ಶಾ.ಬಾಲುರಾವ್ ಅವರು ಅಂತರಿಕ್ಷದ ತೊಟ್ಟಿಲ ಮಗುವಾಗಿ,ಮುತ್ತೈದೆ ಉಷೆಯ ಹಣೆಯ ಕುಂಕುಮ ಬೊಟ್ಟಾಗಿ,ಮಡಿಯುಟ್ಟ ಬ್ರಾಹ್ಮಣ,ಕಸ ಹೊಡೆವ ಜಾಡಮಾಲಿ,ಎಲ್ಲೆಂದರಲ್ಲಿ ಹುಡುಗಿಯರ ಬೆನ್ನಟ್ಟಿ ಇಣುಕುವ ತುಂಟ,ಬೇಸಿಗೆಯಲ್ಲಿ ಕಂಠ ಪೂರ್ತಿ ಕುಡಿದು ಮಳೆಗಲದಲ್ಲಿ ಕಕ್ಕುವ ಕುಡುಕ,ಪಶ್ಚಿಮದಲ್ಲಿ ಚಿತೆಗೆ ಬಿದ್ದ ಹೆಣ, ಎಂದೆಲ್ಲಾ ಚಿತ್ರಿಸುತ್ತಾರೆ.
ಕಾವ್ಯಗಳಲ್ಲಿ ಸೂರ್ಯನ ಅಲಂಕಾರದ ಮೆರವಣಿಗೆಗಳ ಅನೇಕ ಚಿತ್ರಗಳಿವೆ. ಆನಂದದ ನೆಲೆಯಿಂದ ನೋವಿನ ನೆಲೆಗೆ, ನೋವಿಂದ ಪ್ರತಿಭಟನೆಯ ನೆಲೆಯ ಕಡೆಗೆ ಹರಿದಿರುವುದನ್ನ ,ಭಾವ ಸಂವಾದದಿಂದ ಲೋಕಸಂವಾದತ್ತ ಹರಿದಿರುವುದನ್ನ ತಿಳಿಸುತ್ತವೆ.ರೂಪಕವೊಂದರ ಭಿನ್ನತೆಗಳ ಮೂಲಕ ಕವಿಗಳು ಕಾವ್ಯಗಳ ರೀತಿಗಳ ನಿರೂಪಣೆಯ ಅಂದವನ್ನೂ ಓದುಗ ದೊರೆಯ ಸ್ವೀಕರಣೆಯ ಆನಂದವನ್ನೂ ಏಕಕಾಲಕ್ಕೇ ಮಿಡಿಸಿದ್ದಾರೆ.