ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

Share

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

ನಮ್ಮೂರು ಒಂದು ಮುನ್ನೂರು ಮನೆಗಳಿದ್ದ ಊರಾಗಿತ್ತು. ಅಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಇತ್ತು, ಪ್ರಾಣಿಗಳ ಆಸ್ಪತ್ರೆ ಇತ್ತು, ಸರ್ಕಾರಿ ಶಾಲೆ ಹತ್ತನೇ ತರಗತಿವರೆಗೆ ಇತ್ತು. ಮತ್ತು ಮಂದಿರ ಮಸೀದಿ ಇದ್ದವು. ಈ ಊರೊಂದು ಅದ್ಭುತವಾಗಿತ್ತು. ಯಾವುದೇ ಜಗಳವಿಲ್ಲ , ಗಲಾಟೆಯಿರಲಿಲ್ಲ. ಇವೆಲ್ಲದರೊಂದಿಗೆ ಒಂದು ಟೆಂಟ್ ಸಹ ಇತ್ತು. ನಾ ಮೊದಲೇ ಒಮ್ಮೆ ನಿಮಗೆ ಹೇಳಿದ್ದೆ. ಟೆಂಟ್ ಗೇಟ್ ಕೀಪರ್ ಖಾದರ್ ತಾತ ಅಂತ. ಆ ಟೆಂಟ್ ಕೆಲವು ವರ್ಷಗಳ ನಂತರ ಮುಚ್ಚಲ್ಪಟ್ಟಿತು. ನಂತರ ಇನ್ನೊಂದು ಟೆಂಟ್ ಕೋಟೆಯಲ್ಲಿ ತೆರೆಯಲಾಯಿತು. ಕೋಟೆಯೆಂದರೆ ಮುಖ್ಯ ರಸ್ತೆಯ ಮೇಲಕ್ಕೆ ನಡೆದಂತೆ ದಾರಿ ಉಬ್ಬಿದಂತೆ ಮೇಲಕ್ಕೆ ಹೋಗುತ್ತಿತ್ತು. ಕೋಟೆಯೆಂದು ಯಾಕೆ ಕರೆಯುತ್ತಿದ್ದರೋ ಗೊತ್ತಿಲ್ಲ. ಕೋಟೆಯಲ್ಲಿ ತುಂಬಾ ಮನೆಗಳು ತಿಗಳರದೇ ಇದ್ದವು. ಅದಕ್ಕೂ ಮೇಲೆ ಹೋದರೆ ಬಯಲು ಇತ್ತು ಆ ಬಯಲಿನಲ್ಲಿ ಹೊಸ ಟೆಂಟ್ ತೆಗೆಯಲಾಗಿತ್ತು.


ಆ ಟೆಂಟ್ ಸ್ವಲ್ಪ ಮೊದಲಿದ್ದ ಟೆಂಟ್ ಗಿಂತಲೂ ನಾಜೂಕಿನಿಂದ ಮಾಡಿದ್ದರು. ಸಂಜೆ ಆರು ಗಂಟೆಗೆ ‘ನಮೋ ವೆಂಕಟೇಶಾ’ ಎಂಬ ಹಾಡು ಹಾಕಿದರೆ ಸಿನೇಮಾ ಇನ್ನು ಅರ್ಧ ತಾಸಿನಲ್ಲಿ ಶುರುವಾಗುತ್ತದೆ ಎಂಬ ಸೂಚನೆ ಅದು. ಅದರ ನಂತರ ಕೆಲವು ಕನ್ನಡದ ಹೊಸ ಹಾಡುಗಳನ್ನು ಹಾಕುತ್ತಿದ್ದರು. ನಂತರ ‘ಏಡು ಕೊಂಡಲವಾಡ ಎಕ್ಕಾಡುನ್ನಾವಯ್ಯಾ’ ಹಾಡು ಹಾಕಿದರೆ ಚಿತ್ರ ಶುರುವಾಗುವ ಮುನ್ನದ ಹಾಡು ಅದು ಎಂಬ ಸೂಚನೆ. ಊರಿಗೆಲ್ಲಾ ಕೇಳಿಸುತ್ತಿದ್ದ ಈ ಹಾಡುಗಳು ಒಂದೇ ಸಮಯಕ್ಕೆ ಎಲ್ಲರ ಮನಸ್ಸು ತಲುಪಿ ಖುಷಿ ಕೊಡುತ್ತಿದ್ದವು ಎಂದು ನಾನು ಭಾವಿಸುತ್ತೇನೆ.

 


ನನಗೆ ಹಾಡು ಹಾಡುವುದೆಂದರೆ ಚಿಕ್ಕಂದಿನಿಂದಲೇ ಬಂದ ಕಲೆ. ನಮ್ಮ ಅಮ್ಮ ಸ್ವಲ್ಪ ಸಂಗೀತ ಕಲಿತಿದ್ದರು. ನಮಗೆ ಹೇಳಿಕೊಡಲು ಅಮ್ಮನಿಗೆ ಆಗುತ್ತಿರಲಿಲ್ಲ. ಮನೆ ತುಂಬ ನಾವು ಮಕ್ಕಳು. ನಮ್ಮನ್ನು ಸುಧಾರಿಸುವುದೇ ಅಮ್ಮನಿಗೆ ಸಾಕಾಗುತ್ತಿತ್ತು. ಆದರೆ ಅಮ್ಮ ಕೆಲಸ ಮಾಡುವಾಗಲೆಲ್ಲಾ.. ರೇಡಿಯೋದಲ್ಲಿ ಹಾಡುಗಳು ಬಂದಾಗ ಅವುಗಳೊಡನೆ ಗುನುಗುತ್ತಿದ್ದರು. ನಮ್ಮ ಸೋದರ ಮಾವಂದಿರು ಸಹ ಸಂಗೀತ ಕಲಿತಿದ್ದ ಕಾರಣ ನಮ್ಮ ಮನೆಯಲ್ಲಿ ಹಾಡು ಎಲ್ಲರೂ ಹಾಡುತ್ತಿದ್ದೆವು. ನನಗೆ ಟೆಂಟ್ ಬಳಿ ಸಂಜೆ ಹಾಕುತ್ತಿದ್ದ ವಸಂತಗೀತ ಚಿತ್ರದ ಎಲ್ಲಾ ಹಾಡುಗಳು ತುಂಬಾ ಇಷ್ಟವಾದವು. ಹೊಸ ಹಾಡು ಕಲಿತು ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಕೃಷ್ಣಾ ಟೀಚರ್ ಮಕ್ಕಳಿಂದ ಹೇಳಿಸಿದಾಗ ‘ನಾನು ಶಾಲಾ ನನ್ನ ಸ್ನೇಹಿತರಿಗೆ ಯಾರಿಗೂ ಗೊತ್ತಿರದ ಹಾಡು ಹೇಳಿ ಗಮನ ಸೆಳೆಯ ಬೇಕೆಂಬ’ ಮನಸ್ಸು ನನ್ನದು. ವಸಂತಗೀತ ಹಾಡುಗಳನ್ನು ಟೆಂಟ್ ಹತ್ತಿರ ಹಾಕುವರಲ್ಲ ಎಂದು ಆರು ಗಂಟೆಗೆ ಓದಲು ಕುಳಿತುಕೊಳ್ಳುತ್ತಿದ್ದೆ. ‘ನಮೋ ವೆಂಕಟೇಶಾ’ ಮುಗಿದ ಕೂಡಲೇ ‘ ಆಟವೇನೋ ನೋಟವೇನೋ ನನಗೆ ಹೇಳಿದ ಮಾತೇನೋ’ ಎಂಬ ಹಾಡು ಬರುತ್ತಿತ್ತು. ನಾನು ನೋಟ್ ಪುಸ್ತಕ ಮತ್ತು ಪೆನ್ಸಿಲ್ (ಜಾರಿಸಿ ಗೀಚಲು) ನಲ್ಲಿ ಬರೆಯಲು ಶುರು ಮಾಡುತ್ತಿದ್ದೆ.


ಸಾಲಾಗಿ ನಾವು ಓದಲು ಕುಳಿತುಕೊಳ್ಳುತ್ತಿದ್ದೆವು. ನಾನೇ ಮೊದಲು ಕುಳಿತರೆ ‘ಅಪ್ಪಾಜಿ ಹೇಳುತ್ತಿದ್ದರು ‘ನೋಡು ಇವಳು ಮಾತ್ರ ಯಾರು ಹೇಳಲಿ ಬಿಡಲಿ.. ಓದಲು ಕುಳಿತು ತನ್ನ ಪಾಡಿಗೆ ತಾನು ಓದುತ್ತಾಳೆ. ಉಳಿದವರಿಗೆ ಹೇಳದೇ.. ಹೇಳಿಸಿಕೊಳ್ಳದೇ ಓದಲು ಕೂರಲು ಕಷ್ಟ’ ಎಂದು ಅಮ್ಮನಲ್ಲಿ ಹೇಳುತ್ತಾ ಅಣ್ಣಾ ಮತ್ತು ತಂಗಿಯರ ಕಡೆ ದುರುಗುಟ್ಟಿ ನೋಡುತ್ತಿದ್ದರು. ನಂತರ ಅವರೂ ಕೂತು ‘ಪಕ್ಕದಲ್ಲಿ ಓರೆಗಣ್ಣಿನಿಂದ ನನ್ನ ನೋಡಿ ಮೂತಿ ತಿರುಗಿಸುತ್ತಿದ್ದರು. ನಾನು ಒಳಗೊಳಗೇ ನಕ್ಕು ಸುಮ್ಮನಾಗುತ್ತಿದ್ದೆ.
ಒಂದು ದಿನ ನಾನು ‘ಟೆಂಟ್ ನ ಹಾಡುಗಳನ್ನು ಬರೆಯುವಾಗ ತಂಗಿಯರಿಬ್ಬರೂ ಮಾತನಾಡುತ್ತಿದ್ದರು. ನಾನು ‘ಇರೇ.. ಮಾತನಾಡಬೇಡ ಹಾಡು ಕೇಳಿಸೋದಿಲ್ಲಾ’ ಎಂದು ಕಿರುಚಿದೆ. ಇಬ್ಬರೂ ನನ್ನ ಮತ್ತು ಪುಸ್ತಕದ ಕಡೆ ನೋಡಿ ಅಣ್ಣನಿಗೆ ‘ಚಾಡಿ’ ಹೇಳಿದರು. ಪಾಠ ಓದದೆ ಬರೆಯದೆ ಹಾಡು ಬರೆದುಕೊಳ್ಳುತ್ತಿದ್ದ ವಿಷಯ ಪ್ರಮಾದವಾಗಿ ಇದೇ ಸಮಯ ಎಂದು ದೂರು ‘ಮೇಲ್ಮನೆಗೆ ಅಪ್ಪಾಜಿಯ ಬಳಿ’ ಹೋಯಿತು. ಅಪ್ಪಾಜಿ ಕಣ್ಣು ಜೋರಾಗಿ ಬಿಟ್ಟು ‘ ಹೌದಾ’ ಎಂದರು. ‘ಹು’ ಎಂದೆ. ನೋಟ್ ಪುಸ್ತಕ ತೆಗೆದುಕೊಂಡು ಅಷ್ಟೂ ದಿನ ಬರೆದುಕೊಂಡಿದ್ದ ಹಾಡುಗಳನ್ನು ‘ಪರ್ ಪರ್ ಪರ್ ’ ಎಂದು ಹರಿದು ಹಾಕಿದರು.

ನನಗೋ ‘ಮುಂಗಾರು ಮಳೆ’ಯ ಗಣೇಶ್ ಹೇಳುವ ಡೈಲಾಗ್ ನಂತೆ ‘ಹೃದಯದ ಮೇಲೆ ಯಾರೋ ಪರ ಪರ’ ಅಂತ ಗೀಚಿದಂತೆ ಆಗಿತ್ತು.. ಗುಟ್ಟು ರಟ್ಟಾದ ಕಾರಣ ಅಳು ಬಂದಿತ್ತು. ಅಲ್ಲಿಗೂ ಅಪ್ಪಾಜಿ ಬಿಟ್ಟಿಲ್ಲ. ಬೆನ್ನ ಮೇಲೆ ತಲೆ ಮೇಲೆ ಎರಡು ‘ಪೈಡ್ ಪೈಡ್’ ಎಂದು ಕೊಟ್ಟಿದ್ದರು. ಅಳುತ್ತಲೇ ಇದ್ದು , ಅಳುತ್ತಲೇ ಊಟ ಮಾಡಿ, ಅಳುತ್ತಲೇ ನಿದ್ರೆಗೆ ಜಾರಿದ್ದೆ.

 

Girl in a jacket
error: Content is protected !!