ಸನ್ನತಿ ಎಂಬ ಪ್ರಾಚೀನ ಬೌದ್ಧ ಕೇಂದ್ರವೂ
ಸನ್ನತಿ ಎಂಬ ಸ್ಥಳವು ಜಗತ್ತಿಗೆ ಮೊಟ್ಟಮೊದಲು ಪರಿಚಿತವಾದದ್ದು ಕಪಟರಾಳ ಕೃಷ್ಣರಾವ್ ಅವರಿಂದ. ಇದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿದ್ದು, ಯಾದಗಿರಿಯಿಂದ ೫೦ಕಿ.ಮೀ. ದೂರದಲ್ಲಿದೆ. ಭೌಗೋಳಿಕವಾಗಿ ಸನ್ನತಿ ಪರಿಸರವು ಮನಮೋಹಕ ಮತ್ತು ರಮ್ಯರಮಣೀಯ ಎಡೆ. ಹಾವಿನೋಪಾದಿಯಲ್ಲಿ ಹರಿಯುವ ಭೀಮಾ ನದಿಯು ಇಲ್ಲಿ ಅರ್ಧಚಂದ್ರಾಕಾರವಾದ ಪರಿಸರವನ್ನು ಸೃಷ್ಟಿಸಿದೆ. ನದಿಯ ಎಡದಂಡೆಯ ಈ ಅರ್ಧಚಂದ್ರಾಕೃತಿಯ ಭೂಭಾಗವೇ ಸನ್ನತಿ. ಸ್ವಾಭಾವಿಕವಾಗಿಯೇ ರಕ್ಷಣಾ ಕೋಟೆಯಂತಿರುವ ಭೀಮಾ ನದಿಯು ಪ್ರಾಚೀನ ಕಾಲದಿಂದಲೂ ಇಲ್ಲಿ ಮಾನವ ಸಮಾಜ, ಸಂಸ್ಕೃತಿ ವಿಕಸನಗೊಳ್ಳಲು ಆಶ್ರಯ ನೀಡಿದೆ. ಇಲ್ಲಿನ ಚರಿತ್ರೆಯು ಶಿಲಾಯುಗ ಕಾಲದಿಂದಲೇ ಆರಂಭವಾಗುತ್ತದೆ. ಸನ್ನತಿಯು ಅಜ್ಞಾತವಾಗಿದ್ದ ಕರ್ನಾಟಕದ ಅತ್ಯಂತ ಅಪರೂಪ ಮತ್ತು ಮಹತ್ವಪೂರ್ಣದ ಪ್ರಾಚೀನ ಬೌದ್ಧ ನೆಲೆ.
ಅನೇಕ ಬೌದ್ಧ ಅವಶೇಷಗಳ ಜೊತೆಗೆ ಮೌರ್ಯ ಚಕ್ರವರ್ತಿ ಅಶೋಕನ ವಿಭಿನ್ನ ಮಾದರಿಯ ಶಿಲಾಶಾಸನ ಇಲ್ಲಿ ದೊರೆತದ್ದು ಗಮನಾರ್ಹ ಸಂಗತಿ. ಅದೂ ಶಾಸನ ದೊರೆತದ್ದು ದೇಗುಲವೊಂದರ ಜೀರ್ಣೋದ್ಧಾರದಿಂದ. ಶಿಲಾಶಾಸನವೊಂದು ಯಾವುದೋ ಕಾಲದಲ್ಲಿ ದೇಗುಲದ ಮೂರ್ತಿಯ ಪೀಠವನ್ನಾಗಿ ಬಳಸಿಕೊಂಡದ್ದು ನಮ್ಮ ಜನರ ಉಪೇಕ್ಷೆಯಲ್ಲದೆ ಮತ್ತೇನು? ದೇವಿಯ ದೇಗುಲದ ಪೀಠವನ್ನು ಎತ್ತಿ ಮುಗುಚಿದಾಗ ಅಲ್ಲಿ ಕಂಡದ್ದು ಸನ್ನತಿಯ ಬರವಣಿಗೆ ಚರಿತ್ರೆಯೇ ಬಯಲಾಯಿತೆನ್ನಬೇಕು. ಅದೂ ಪ್ರಾಚೀನ ಭಾರತದ ಭಾಷೆ ಮತ್ತು ಲಿಪಿಗಳಾದ ಪ್ರಾಕೃತ ಮತ್ತು ಬ್ರಾಹ್ಮಿಯ ಶಿಲಾಶಾಸನದಿಂದ. ಅದುವರೆಗೆ ಕರ್ನಾಟಕದಲ್ಲಿ ಅನೇಕ ಶಿಲಾಶಾಸನಗಳು ಕಂಡುಬಂದಿದ್ದವು.
ಅವೆಲ್ಲವೂ ಬೃಹತ್ ಬಂಡೆಗಲ್ಲುಗಳ ಮೇಲಿನವೇ ಆಗಿದ್ದವು. ಆದರೆ ಸನ್ನತಿಯ ಶಾಸನದ ವಿಶೇಷತೆಯೆಂದರೆ ಅತ್ಯಂತ ಅಪರೂಪವಾಗಿ ಕೊರೆದ ಚಪ್ಪಡಿ ಕಲ್ಲಿನ ಮೇಲಿನ ಶಾಸನ. ಇಲ್ಲಿರುವ ಚಂದ್ರಲಾ ಪರಮೇಶ್ವರಿ ದೇವಾಲಯ ಮತ್ತು ದೇವತೆ ಬೌದ್ಧ ದೇವತೆಯೇ. ಇಲ್ಲಿರುವ ರಣಮಂಡಲ, ಕಣಗನಹಾಳ ಮೊದಲಾದ ಸ್ಥಳಗಳು ಬೌದ್ಧಧರ್ಮದ ಅವಶೇಷಗಳ ಆಗರಗಳೇ ಆಗಿವೆ. ಸನ್ನತಿ ಕರ್ನಾಟಕದ ಅಪರೂಪದ ಬೌದ್ಧ ಸ್ತೂಪವಿರುವ ಸ್ಥಳ. ಇಲ್ಲಿ ಆಶೋಕನ ಶಿಲಾಶಾಸನವಲ್ಲದೆ ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯ ೨೭೦ಕ್ಕೂ ಹೆಚ್ಚು ಕಲ್ಬರಹಗಳು ದೊರೆತಿರುವುದು ವಿಶೇಷ. ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೩ನೆಯ ಶತಮಾನದವರೆಗಿನ ಅವಶೇಷಗಳನ್ನು ಇಲ್ಲಿ ಕಾಣಬಹುದು. ಕನಗನಹಾಳದಲ್ಲಿ ಕಂಡುಬಂದ ಸ್ತೂಪವು ಅನೇಕ ಉಬ್ಬುಶಿಲ್ಪಗಳುಳ್ಳ ಪಟ್ಟಿಕೆಗಳನ್ನು ಒಳಗೊಂಡಿದೆ. ಕನಗನಹಳ್ಳಿಯ ಸ್ತೂಪದಲ್ಲಿ ಧರ್ಮಚಕ್ರ, ಬುದ್ಧನ ಪ್ರಥಮೋಪದೇಶ, ಬೋಧಿವೃಕ್ಷ, ನಾಗಮುಚಲಿಂದ, ಬುದ್ದನ ಜಾತಕ ಕಥೆಗಳು, ಬೌದ್ಧ ಧರ್ಮದ ಅನೇಕ ಸಂಕೇತಗಳುಳ್ಳ ಶಿಲ್ಪಗಳು ಕಂಡುಬಂದಿವೆ. ಅದರಲ್ಲೂ ಅಶೋಕನ ಸುಂದರ ಭಾವಶಿಲ್ಪಗಳು ಅವನ ಗೌರವಾರ್ಥ ನಿರ್ಮಿಸಿದ ಮಹತ್ವದ ಶಿಲ್ಪದಾಖಲೆಗಳಾಗಿವೆ.
ಸ್ತೂಪವನ್ನು ವಿಸ್ತರಿಸಿ, ಶಿಲ್ಪಪಟ್ಟಿಕೆಗಳಿಂದ ಅಲಂಕರಿಸಿ ಮಹಾಸ್ತೂಪವನ್ನಾಗಿ ಮಾಡಿದ ಶ್ರೇಯ ಶಾತವಾಹನರದ್ದಾಗಿದೆ. ಇವುಗಳಲ್ಲಿ ಅಶೋಕ ಮತ್ತು ಅವನ ಪರಿವಾರವನ್ನು ಹಾಗೂ ರಾಯ ಅಸೋಕ ಎಂದು ಅವನ ಹೆಸರನ್ನು ನಮೂದಿಸಿರುವ ವಿಶಿಷ್ಟ ಶಿಲ್ಪಪಟ್ಟಿಕೆಗಳು ಇರುವುದು ಸನ್ನತಿಯಲ್ಲಿ ಎಂಬುದನ್ನು ಗಮನಿಸಬೇಕು. ಇದು ಭಾರತದಲ್ಲೇ ಅತ್ಯಂತ ಅಪರೂಪದ ಉಬ್ಬುಶಿಲ್ಪವಾಗಿದೆ. ಈಗಾಗಲೇ ತಿಳಿದಿರುವಂತೆ ಕರ್ನಾಟಕವು ಮೌರ್ಯ ಅಶೋಕನ ಚರಿತ್ರೆಗೆ ಅನೇಕ ಪ್ರಥಮಗಳನ್ನು ನೀಡಿದೆ. ೧೯೧೫ರಲ್ಲಿ ಬೀಡನ್ ಎಂಬ ಬ್ರಿಟೀಷ್ ಅಧಿಕಾರಿ ಕಂಡುಹಿಡಿದ ಮಸ್ಕಿ ಶಾಸನವು ದೇವನಾಂಪ್ರಿಯ ಪ್ರಿಯದರ್ಶಿ ಎಂದು ಉಲ್ಲೇಖಿಸಿದ ಇತರೆ ಶಾಸನಗಳ ಜಿಜ್ಞಾಸೆಗೆ ಅಶೋಕನೇ ಎಂಬ ಉತ್ತರ ನೀಡಿದ್ದಿತು. ಇದನ್ನು ಸಮರ್ಥಿಸುವಂತೆ ಬಳ್ಳಾರಿ ಜಿಲ್ಲೆಯ ಉದೇಗೊಳಂ ಮತ್ತು ನಿಟ್ಟೂರು ಶಾಸನಗಳೂ ನೆರವಾದದ್ದು ಇತಿಹಾಸ. ಅಂತೆಯೇ ಅಶೋಕನ ದೈಹಿಕ ಚಹರೆ, ಅವನ ಪರಿವಾರ, ಅಂದಿನ ಉಡುಗೆತೊಡುಗೆಗಳುಳ್ಳ ಜೀವಗಾತ್ರದ ಉಬ್ಬುಶಿಲ್ಪಗಳನ್ನು ನೀಡಿದ ಹಿರಿಮೆ ಸನ್ನತಿಯದ್ದೇ ಆಗಿದೆ. ಈ ಮಹಾಸ್ತೂಪಕ್ಕೆ ಬಂಧುಶ್ರೇಣಿ ಸಂಘದ ನಟಿಕ ಗೋವಿಂದದಾಸಿ, ನಟಿಕ ಆರ್ಯದಾಸಿ ಎಂಬ ಮಹಿಳೆಯರು ಧನಸಹಾಯ ಮಾಡಿದ್ದರೆಂಬುದು ಇಲ್ಲಿನ ಶಾಸನಗಳಿಂದ ತಿಳಿಯುತ್ತದೆ. ಇದು ಅಂದು ಮಹಿಳೆಗೆ ನೀಡಿದ್ದ ಪ್ರಾತಿನಿದ್ಯದ ಸಂಕೇತವೂ ಆಗಿದೆ. ಎರಡನೇ ಬುದ್ದನೆಂದೇ ಕರೆಯುವ ನಾಗಾರ್ಜುನ ಮತ್ತು ಚೀನಾ ಪ್ರವಾಸಿ ಹೂಯೆನ್ ತ್ಸಾಂಗ್ ಈ ಕೇಂದ್ರಕ್ಕೆ ಭೇಟಿ ನೀಡಿದ್ದರೆಂದೂ ಹೇಳಲಾಗುತ್ತದೆ.
ಭೀಮಾ ನದಿ ಸ್ವಾಭಾವಿಕ ಕೋಟೆಯಂತಿದ್ದು, ಇದನ್ನು ಅನುಸರಿಸಿ ಕಟ್ಟಲಾದ ಇಟ್ಟಿಗೆಯ ಕೋಟೆಯು ಕರ್ನಾಟಕದ ಪ್ರಾಚೀನ ಕೋಟೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ನದಿಯ ಭೂಭಾಗವನ್ನು ಆಧರಿಸಿ ಹೊರ ಮತ್ತು ಒಳಕೋಟೆಗಳನ್ನು ಅಂದಿನವರು ನಿರ್ಮಿಸಿರುವುದು ವಿಶೇಷ. ಇದನ್ನು ಸ್ಥಳೀಯರು ಸೇತುರಾಜನಕಟ್ಟೆಯೆಂದೇ ಕರೆಯುತ್ತಿದ್ದು, ವಿದ್ವಾಂಸರು ಶಾತವಾಹನರ ಕಟ್ಟೆಯೇ ಸೇತುರಾಜನ ಕಟ್ಟೆಯೆಂದು ಅರ್ಥೈಸಿದ್ದಾರೆ.
ಮೌರ್ಯ ಕಾಲವಲ್ಲದೆ ಶಾತವಾಹನ ಕಾಲದ ಬಹುದೊಡ್ಡ ವ್ಯಾಪಾರ, ವಾಣಿಜ್ಯ ಕೇಂದ್ರ ಈ ಸನ್ನತಿ. ಸನ್ನತಿಯನ್ನು ಷ. ಶೆಟ್ಟರ್ ‘ಸಣ್ಣತಿ ಎಂದೂ ಅರ್ಥೈಸಿದ್ದಾರೆ. ಇಲ್ಲಿನ ಶಿಲ್ಪ, ಶಾಸನ, ಸ್ಮಾರಕ ಅವಶೇಷಗಳ ಹಿನ್ನೆಲೆಯಲ್ಲಿ ಸನ್ನತಿಯು ಬೌದ್ಧ ಧರ್ಮದ ಪ್ರಮುಖ ಧಾರ್ಮಿಕ ಕೇಂದ್ರವೂ, ಶೈಕ್ಷಣಿಕ ಚಟುವಟಿಕೆಗಳ ಜಾಗೃತ ತಾಣವೂ ಆಗಿದ್ದುದು ಸ್ಪಷ್ಟವಾಗುತ್ತದೆ. ಸನ್ನತಿ ಕರ್ನಾಟಕದ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾದ ಪ್ರಾಚೀನ ನಗರ. ಸನ್ನತಿಯ ಸುತ್ತಲೂ ಕಟ್ಟಲಾದ ಇಟ್ಟಿಗೆಯ ಕೋಟೆ, ಧಾನ್ಯಗಳನ್ನು ಸಂಗ್ರಹಿಸುತ್ತಿದ್ದ ವ್ಯಾಪಾರ ಕೋಠಿ, ಅರಮನೆ ಮತ್ತು ಆಡಳಿತ ಕಟ್ಟಡ, ಸ್ತೂಪ, ವಿಹಾರ, ವಸತಿ ಸಮುಚ್ಚಯ ಮತ್ತಿತರ ಕಟ್ಟಡಗಳು ಅಂದಿನ ನಗರೀಕರಣದ ಪ್ರಮುಖ ಲಕ್ಷಣಗಳಾಗಿವೆ.
ಸನ್ನತಿಯಲ್ಲಿ ದೊರೆತ ವಿಸ್ತಾರವಾದ ಸರಕುಕೋಠಿ, ಸೀಸ, ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳು ಅಂದು ವ್ಯಾಪಾರ ಕೇಂದ್ರವಾಗಿತ್ತೆಂದು ಸಾರುತ್ತದೆ. ರಣಮಂಡಲವೆಂದು ಕರೆಯುವ ಸುಮಾರು ೮೦ ಎಕರೆ ಪ್ರದೇಶವು ಅಂದಿನ ರಾಜವಾಡೆ ಪ್ರದೇಶವಾಗಿತ್ತೆಂಬುದು ಗಮನಾರ್ಹ. ಅಲ್ಲದೆ ತಾಮ್ರ ತಯಾರಿಕಾ ಕುಲುಮೆ, ಅರಮನೆ ಗೋಡೆ, ವಿವಿಧ ಬೆಲೆಬಾಳುವ ಮಣಿಗಳು, ಪದಕಗಳೂ ಉತ್ಖನನದಲ್ಲಿ ಕಂಡುಬಂದಿರುವುದು ಸನ್ನತಿಯ ಹಿರಿಮೆಯನ್ನು ಸಾರಿವೆ.
ಬ್ರಹ್ಮಗಿರಿಯ ಶಾಸನದಲ್ಲಿ ಉಲ್ಲೇಖವಾಗಿರುವ ಸುವರ್ಣಗಿರಿಯು ಅಶೋಕನ ದಕ್ಷಿಣ ಭಾರತದ ಪ್ರಮುಖ ಆಡಳಿತ ಕೇಂದ್ರವಾಗಿದ್ದು, ಅಲ್ಲಿ ಮಹಾಮಾತ್ರರ ಆಳ್ವಿಕೆಯದ್ದುದನ್ನು ಸಾರಿದೆ. ಅದರನ್ವಯ ಕರ್ನಾಟಕದಲ್ಲಿ ಕಂಡುಬಂದ ಅಶೋಕನ ನೆಲೆಗಳಲ್ಲಿ ನಗರ ಸ್ವರೂಪವನ್ನು ಹೊಂದಿದ ಅಂದಿನ ಮಹಾನಗರ ಸನ್ನತಿಯೇ ಆಗಿದ್ದು, ಇದೇ ಅಂದಿನ ಸುವರ್ಣಗಿರಿ ಆಗಿತ್ತೆಂದು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಸನ್ನತಿಯಲ್ಲಿರುವ ಚಂದ್ರಲಾಪರಮೇಶ್ವರಿ ದೇವಿಯು ಬೌದ್ಧ ತಾರಾದೇವಿಯೇ ಆಗಿದ್ದಳೆಂಬುದನ್ನೂ ಗುರುತಿಸುತ್ತಾರೆ. ಕರ್ನಾಟಕದ ಸಣ್ಣತಿಯು ಪ್ರಾಕೃತ ಭಾಷಾ ಮತ್ತು ಸಾಂಸ್ಕೃತಿಕ ಜಗದ್ವಲಯದ ಪ್ರಸಿದ್ಧ ಕೇಂದ್ರವೇ ಆಗಿತ್ತೆಂಬುದು ಪ್ರೊ.ಷ. ಶಟ್ಟರ್ ಅವರ ಅಭಿಮತ. ಕರ್ನಾಟಕದಲ್ಲಿ ಬೌದ್ಧ ಧರ್ಮದ ನೆಲೆಗಳು ಹೆಚ್ಚು ದೊರೆಯುವುದು ಭೀಮಾ ನದಿ ದಂಡೆಯಲ್ಲಿಯೇ. ಅವುಗಳಲ್ಲಿ ಕನಗನಹಳಿಯಲ್ಲದೆ ಆನೆಗುತ್ತಿ ದಿಬ್ಬ, ಬೆನಗುತ್ತಿ ದಿಬ್ಬ, ಕೈತಾಳ ದಿಬ್ಬ, ಹುರಸಗುಂಡಗಿ ದಿಬ್ಬಗಳು ಪ್ರಾಚೀನ ಬೌದ್ಧ ಸ್ತೂಪಗಳೆಂದು ಗುರುತಿಸಲಾಗಿದೆ. ದಕ್ಷಿಣ ಭಾರತದಲ್ಲಿ ಸನ್ನತಿಯನ್ನು ಹೊರತುಪಡಿಸಿದರೆ ಉಳಿದೆಡೆಗಳಲ್ಲಿ ಸಿಗುವ ಶಾಸನಗಳು ಲಘುಶಾಸನಗಳೇ ಆಗಿದ್ದು, ೧೩ನೇ ಶಿಲಾಶಾಸನವನ್ನು ಹಾಕಿಸಿದ್ದುದೂ ಸನ್ನತಿ ಆಡಳಿತ ಕೇಂದ್ರವೆಂಬುದನ್ನು ಸಮರ್ಥಿಸುತ್ತದೆ.
ಒಟ್ಟಿನಲ್ಲಿ ಸನ್ನತಿಯು ಪ್ರಾಚೀನ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದುದಲ್ಲದೆ ಪ್ರಸಿದ್ಧ ವಿದ್ಯಾಕೇಂದ್ರವಾಗಿ ಕರ್ನಾಟಕದ ಮಟ್ಟಿಗೆ ಅಪರೂಪದ ಬೌದ್ಧ ಎಡೆಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಕರ್ನಾಟಕದ ಅಪರೂಪದ ಈ ಬೌದ್ಧ ನೆಲೆಯನ್ನು ೧೯೯೪ರಿಂದಲೂ ಉತ್ಖನನ ಕಾರ್ಯ ನಡೆಯುತ್ತಿದ್ದು, ಇಲ್ಲಿ ಕಂಡುಬಂದಿರುವ ಸ್ಮಾರಮ ಮತ್ತು ಶಿಲ್ಪಾವಶೇಷಗಳನ್ನು ವ್ಯವಸ್ಥಿತವಾಗಿ ಪುನರ್‌ಜೋಡಿಸಿ, ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.