ಸಂಶೋಧನೆಗೆ ಹೀಗೊಂದು ಅವಕಾಶ
ರಾಷ್ಟ್ರೀಯ ಸೇವಾ ಯೋಜನೆ ಅಥವಾ ಎನ್.ಎಸ್.ಎಸ್. ಎಂಬುದು ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಿಕೆಯ ಅರಿವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಯೋಜನೆ. ಇದು ಕೊಠಡಿಗಳ ಮಧ್ಯೆ ಕಲಿಯುವ ವಿದ್ಯೆಯ ಜೊತೆಗೆ ಪರಿಸರ, ಆರೋಗ್ಯ, ಸೇವೆ ಮತ್ತು ಶ್ರಮಸಂಸ್ಕೃತಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯೋಗಶಾಲೆ. ಇಂತಹ ಶಿಬಿರವೊಂದರಲ್ಲಿ ಭಾಗವಹಿಸುವ ಅವಕಾಶವೂ ಪದವಿ ವಿದ್ಯಾಭ್ಯಾಸದ ಅವಧಿಯಲ್ಲಿ ನನ್ನದಾಗಿತ್ತು. ಅಲ್ಲಿ ಈ ಮೇಲಿನ ಚಟುವಟಿಕೆಗಳಲ್ಲಿ ತೊಡಗಿದ ಅನುಭವ ಅಪರಿಮಿತವಾದದ್ದು. ಅಂತೆಯೇ ಚಿತ್ರದುರ್ಗ ಬಾಲಕರ ಪದವಿಪೂರ್ವ ವಿದ್ಯಾಲಯವು ಎನ್.ಎಸ್.ಎಸ್. ಶಿಬಿರವನ್ನು ೨೦೦೭ರಲ್ಲಿ ಹದಿನೆಂಟು ಕಿ.ಮೀ. ದೂರದ ನೆರೇನಾಳು ಎಂಬಲ್ಲಿ ಏರ್ಪಡಿಸಿತ್ತು. ಈ ಶಿಬಿರದಲ್ಲಿ ಸ್ಥಳೀಯ ಇತಿಹಾಸ ಕುರಿತು ವಿದ್ಯಾರ್ಥಿಗಳು ಮತ್ತು ಊರಿನ ಜನರಿಗೆ ಉಪನ್ಯಾಸ ನೀಡುವುದಕ್ಕಾಗಿ ಗೆಳೆಯ ಡಾ.ಎಸ್. ತಿಪ್ಪೇಸ್ವಾಮಿ ಆಹ್ವಾನಿಸಿದ್ದರು. ಏನನ್ನು ಕುರಿತು ಹೇಳುವುದು ಎಂದು ಯೋಚಿಸಿ ಉಪನ್ಯಾಸದ ಮುನ್ನಾ ದಿನ ಗ್ರಾಮಕ್ಕೆ ಭೇಟಿನೀಡಿ ಅಲ್ಲಿನ ಎಲ್ಲ ಬಗೆಯ ಚಾರಿತ್ರಿಕ ಕುರುಹುಗಳನ್ನು ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ದಾಖಲಿಸುತ್ತಾ ಸ್ಥಳ ಪರಿಶೀಲನೆಯನ್ನು ಒಂದು ದಿನದ ಮಟ್ಟಿಗೆ ನಡೆಸಿದೆ. ಒಂದು ಸುಳಿವಂತೂ ಗ್ರಾಮದ ಹೆಸರಿನಲ್ಲೇ ಇತ್ತು. ಅದು ನೆರೇನಾಳು. ಊರಿನ ಹೆಸರಿನಲ್ಲಿದ್ದ ಉತ್ತರಪದವಾದ ‘ಹಾಳು’ ಎಂಬ ಪದವು ನನ್ನ ಗಮನ ಸೆಳೆದಿತ್ತು. ಇದು ಪ್ರಾಚೀನ ಗ್ರಾಮವೇ ಆಗಿರಬೇಕೆಂಬ ದೃಢಸಂಕಲ್ಪದಿಂದ ಹಿರಿಯರಿಂದ ಸ್ಥಳೀಯ ಮಾಹಿತಿಗಳನ್ನು ಪಡೆದೆ. ಅಲ್ಲದೆ ಅಲ್ಲಿನ ಪ್ರಾಚೀನ ಅವಶೇಷಗಳ ಮಾಹಿತಿಯನ್ನು ಪಡೆದು ಅವಶೇಷಗಳಿಗಾಗಿ ತಡಕಾಡಿದೆ. ಕೊನೆಗೆ ಗ್ರಾಮಕ್ಕೆ ಹೊಂದಿದ ಬೂದುಮಣ್ಣಿನ ಹೊಲಗಳಲ್ಲಿ ಮಡಕೆ-ಕುಡಿಕೆಗಳ ಅವಶೇಷಗಳು ದೊರೆತವು.
ಅಲ್ಲದೆ ಊರಿನ ಉತ್ತರಕ್ಕೆ ಹೊಲದಲ್ಲಿ ಮಡಕೆಗಳ ಚೂರುಗಳು ಇದ್ದುದನ್ನು ಕೇಳಿ ತಿಳಿದೆ. ಸಿಕ್ಕ ಅವಶೇಷಗಳನ್ನಾಧರಿಸಿ ಅಂದು ಸಂಜೆಯ ಉಪನ್ಯಾಸದಲ್ಲಿ ನೆರೇನಹಾಳಿನ ಸ್ಥಳೀಯ ಇತಿಹಾಸದ ಸಂಗತಿಗಳನ್ನು ಇತರೆ ಚಾರಿತ್ರಿಕ ವಿಷಯಗಳೊಂದಿಗೆ ಸಮೀಕರಿಸಿ, ಗ್ರಾಮದ ಪ್ರಾಚೀನತೆಯತ್ತ ಗಮನಸೆಳೆದೆ. ಎನ್.ಎಸ್.ಎಸ್. ಶಿಬಿರದ ಕಾರ್ಯಕ್ರಮ ಮತ್ತು ಉಪನ್ಯಾಸಗಳೆಂದರೆ ಶಿಬಿರಾರ್ಥಿಗಳಲ್ಲದೆ ಗ್ರಾಮದ ಸರ್ವಸದಸ್ಯರೂ ಪಾಲ್ಗೊಳ್ಳುವುದು ವಿಶೇಷ. ಶಿಬಿರದ ಚಟುವಟಿಕೆಗಳು ಅರಿವಿನ ಜೊತೆಗೆ ಜನರಿಗೆ ಮನರಂಜನೆಯ ಕಾರ್ಯಕ್ರಮಗಳೇ ಆಗಿದ್ದವು. ಗ್ರಾಮಸ್ಥರೆಲ್ಲರೂ ಸೇರಿದ ಶಿಬಿರದ ಕಾರ್ಯಕ್ರಮದಲ್ಲಿ ನೀಡಿದ ಇತಿಹಾಸಕ್ಕೆ ಸಂಬಂಧಿಸಿದ ನನ್ನ ಉಪನ್ಯಾಸದಲ್ಲಿ ಗ್ರಾಮದ ದೇಗುಲ, ಮೂರ್ತಿಶಿಲ್ಪ, ಶಾಸನ, ಶಿಲಾ ಸಮಾಧಿ, ಮಡಕೆಕುಡಿಕೆಗಳ ಕುರಿತು ಮಾತನಾಡಿದ್ದೆನು. ಅದನ್ನು ಕೇಳಿದ ಗ್ರಾಮಸ್ಥರು ಉಪನ್ಯಾಸ ಮುಗಿದಿದ್ದೇ ತಡ, ನನ್ನ ಬಳಿಗೆ ಬಂದು ನೆರೇನಹಾಳು ಗ್ರಾಮದ ಮೂಲೆಮೂಲೆಯಲ್ಲಿದ್ದ ಹೊಲ, ಬೆಟ್ಟಗುಡ್ಡ, ಹಳ್ಳಕೊಳ್ಳಗಳಲ್ಲಿ ತಾವು ನೋಡಿ, ಕೇಳಿದ ಚಾರಿತ್ರಿಕ ಕುರುಹು ಮತ್ತು ಸ್ಥಳವಿವರವುಳ್ಳ ಸ್ಥಳಪುರಾಣ, ಐತಿಹ್ಯಗಳ ಸುರಿಮಳೆಯನ್ನೇ ಸುರಿಸಿದರು. ಅಲ್ಲಿನ ಶಿಲ್ಪ, ದೇಗುಲ, ವೀರಗಲ್ಲು, ಮಾಸ್ತಿಗಲ್ಲುಗಳನ್ನು, ಹಾಳೂರಿನ ಅವಶೇಷಗಳನ್ನು, ಊರಿನ ಸರಹದ್ದಿನಲ್ಲಿರುವ ಲಿಂಗಮುದ್ರೆ, ವಾಮನಮುದ್ರೆಯುಳ್ಳ ಮೇರೆಗಲ್ಲುಗಳನ್ನು, ಹೊಲಗಳನ್ನು ಹೂಳುವಾಗ ದೊರೆತ ಮಡಕೆಕುಡಿಕೆಗಳ ವಿವರಗಳ ಸರಮಾಲೆಯನ್ನೇ ಉಣಬಡಿಸ ಹತ್ತಿದರು.
ಸಂಶೋಧಕನಿಗೆ ಕ್ಷೇತ್ರಕಾರ್ಯವೆಂಬುದು ಬಹುದೊಡ್ಡ ಸವಾಲಿನ ಸಂಗತಿ. ಸ್ಥಳವನ್ನು ಖುದ್ದಾಗಿ ಭೇಟಿನೀಡಿ ಪರಿಶೀಲಿಸಿ ಅಲ್ಲಿಂದ ಮಾಹಿತಿಯನ್ನು ಸಂಗ್ರಹಿಸುವುದು ಎಷ್ಟು ಕಷ್ಟವೆಂಬುದು ತಿಳಿದ ವಿಷಯವೇ. ಆದರೆ ಇಂತಹ ಎನ್.ಎಸ್.ಎಸ್. ಶಿಬಿರಗಳಲ್ಲಿ ಏರ್ಪಡಿಸಿದ ಉಪನ್ಯಾಸಗಳು ಸಂಶೋಧಕನಿಗೆ ಕೊಡುವ ಮಾಹಿತಿ ಅಪರಿಮಿತವಾದದ್ದೆನಿಸಿತು. ಕ್ಷೇತ್ರಕಾರ್ಯಕ್ಕೂ ಮುನ್ನ ಊರಿನ ಜನರೊಂದಿಗೆ ನಡೆಸುವ ಇಂತಹ ಸಂವಾದಗಳು ಗ್ರಾಮದ ಸಮಗ್ರ ಇತಿಹಾಸದ ಅನಾವರಣವೇ ಅದಂತಾಯಿತು. ಕ್ಷೇತ್ರಕಾರ್ಯಕ್ಕೂ ಮುನ್ನ ಕೈಗೊಳ್ಳುವ ಇಂತಹ ಉಪನ್ಯಾಸಗಳು ಮಾಹಿತಿ ಕ್ರೋಢೀಕರಣದ ಅತ್ಯಂತ ಸರಳ ಮತ್ತು ಅಧಿಕೃತ ಸಂಶೋಧನಾ ಮಾರ್ಗವೆನಿಸಿದ್ದು ಸಹಜವೇ. ಸ್ಥಳೀಯರು ಬೃಹತ್ ಶಿಲಾಯುಗದ ಸಮಾಧಿಗಳನ್ನು ಕರೆದ ಪರಿಭಾಷೆ ಆಶ್ಚರ್ಯವನ್ನು ಉಂಟುಮಾಡಿತು. ಅದುವರೆಗೆ ೨೫೦೦ ವರ್ಷಗಳಷ್ಟು ಹಿಂದಿನ ಬೃಹತ್ ಶಿಲಾಸಮಾಧಿಗಳನ್ನು ಪಾಂಡವರ ಮನೆ, ಮೋರೇರ ಮನೆ, ಕಲ್ಗೋರಿಗಳೆಂದು ಕರೆಯುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಓದುಬಾರದ ವ್ಯಕ್ತಿಯೊಬ್ಬ ಹಳ್ಳದ ದಂಡೆಯಲ್ಲಿ ‘ಕಲ್ಗುಚ್ಚಿಗಳಿವೆ’ ಎಂದು ಹೇಳಿದ್ದು ನನ್ನ ಆಸಕ್ತಿಯನ್ನು ಕೆರಳಿಸಿತು. ಕಲ್ಗುಚ್ಚಿ ಪದ ಕೇಳಿದ್ದ ನನಗೆ ಅವುಗಳನ್ನು ನೋಡುವ ತವಕ ಹೆಚ್ಚಾಯಿತು. ಬೆಳಗಾಗುವುದನ್ನೇ ಕಾಯುತ್ತಿದ್ದ ನನಗೆ ಶಿಬಿರದ ನಿರ್ದೇಶಕ ತಿಪ್ಪೇಸ್ವಾಮಿ ಮತ್ತು ಶಿಬಿರಾರ್ಥಿಗಳೊಂದಿಗೆ ಹೊರಟೆವು. ಮರಡಿಹಳ್ಳಿ ರಸ್ತೆಯಲ್ಲಿ ಹಳ್ಳದ ಬಲದಂಡೆಯ ಮೇಲೆ ಬಂಡೆಗಲ್ಲುಗಳ ಸಮೂಹವೇ ಗೋಚರಿಸಿತು. ಅದೂ ವೃತ್ತಾಕಾರದಲ್ಲಿ ಒಪ್ಪವಾಗಿ ಜೋಡಿಸಿಟ್ಟ ಸ್ಥಳೀಯವಾಗಿ ದೊರೆಯುವ ಬೃಹತ್ತಾದ ಕರಿಯ ಬಂಡೆಗಲ್ಲುಗಳು. ಎಲ್ಲೆಂದರಲ್ಲಿ ಹರಡಿದ್ದ ನೂರಾರು ಶಿಲಾಸಮಾಧಿಗಳಿವು. ಅವುಗಳಲ್ಲಿ ಕೆಲವು ಚಿಕ್ಕವೃತ್ತದವು, ಮತ್ತೆಕೆಲವು ದೊಡ್ಡ ವೃತ್ತದವುಗಳಾಗಿದ್ವು. ಆದರೆ ಅವುಗಳಲ್ಲಿ ಮೂರು ವೃತ್ತಾಕಾರದ ಸಮಾಧಿಗಳನ್ನು ತ್ರಿಕೋನಾಕಾರದಲ್ಲಿ ಒಂದಕ್ಕೊಂದು ಅಂಟಿದಂತೆ ಜೋಡಿಸಿಟ್ಟಿದ್ದುದು ವಿಶೇಷವೆನಿಸಿದೆ. ಇವು ಒಂದೇ ಕುಟುಂಬ ಸಮಾಧಿಗಳೇ ಇರಬೇಕು.
ಇವುಗಳನ್ನು ನೋಡಿ ದಾಖಲಿಸುತ್ತಿರುವ ಹೊತ್ತಿನಲ್ಲೇ ಜೊತೆಗಿದ್ದ ವ್ಯಕ್ತಿ ಇದೇ ರೀತಿಯ ಸಮಾಧಿಗಳು ಗುಡ್ಡದ ಬಳಿಯಿರುವುದನ್ನು ತಿಳಿಸಿದ. ಅಲ್ಲದೆ ಊರ ಉತ್ತರಕ್ಕಿರುವ ಹೊಲದಲ್ಲೂ ಬೇಸಾಯ ಮಾಡುವಾಗ ಇಂತಹ ಸಮಾಧಿ ಮತ್ತು ಮಡಕೆಕುಡಿಕೆಗಳು ಸಿಕ್ಕ ದೊಡ್ಡ ವರದಿಯನ್ನೇ ಒಬ್ಬೊಬ್ಬರು ಒಂದೊಂದು ರೀತಿ ಹೇಳಲೆತ್ನಿಸಿದರು. ಇದರಿಂದ ನೆರೇನಹಾಳು ಶಿಲಾಯುಗದ ಬಹುದೊಡ್ಡ ತಾಣವೇ ಇರಬೇಕೆಂದಿನಿಸಿದ್ದು ಆಶ್ಚರ್ಯವಲ್ಲ. ಕಾಕತಾಳೀಯವೆಂಬಂತೆ ತ್ರಿಕೋನಾಕಾರದಲ್ಲಿ ಜೋಡಿಸಿಟ್ಟ ಮೂರು ಸಮಾಧಿಗಳಂತೆ ಮೂರು ದಿಕ್ಕುಗಳಲ್ಲೂ ಸಮಾಧಿ ನೆಲೆಗಳಿರುವುದು ಗಮನಾರ್ಹ. ಈಜಿಫ್ಟಿನ ಪಿರಮಿಡುಗಳಂತೆ ಈ ಸಮಾಧಿಗಳು ನಮ್ಮ ಪ್ರಾಚೀನರ ಪಿರಮಿಡ್ಡುಗಳೇ ಆಗಿವೆ. ಊರಿನ ಮೂರು ದಿಕ್ಕುಗಳಲ್ಲೂ ಮೂರು ಶಿಲಾಸಮಾಧಿಗಳಿದ್ದ ಎಡೆಗಳನ್ನು ಜನರಿಂದ ಗುರುತಿಸಿ ಸ್ವತಃ ಕಣ್ತುಂಬಿ ನೋಡುವ ಮತ್ತು ಕೇಳು ಅವಕಾಶ ನಿಜಕ್ಕೂ ಆಹ್ಲಾದಕರ ಸಂಗತಿಯೇ ಆಗಿತ್ತು. ಆದರೆ ಈ ಮೂರು ಸಮಾಧಿ ನೆಲೆಗಳನ್ನು ಕಣ್ಣಾರ ಕಂಡ ನಮಗೆ ಮತ್ತೊಂದು ಪ್ರಶ್ನೆ ಎದುರಾಯಿತು. ಅದೆಂದರೆ ಗ್ರಾಮದಲ್ಲಿ ಕಂಡುಬಂದ ಮೂರು ನೆಲೆಗಳು ಸಮಾಧಿನೆಲೆಗಳೇ ಆಗಿವೆ. ಆದರೆ ಅವರ ವಾಸಿಸುತ್ತಿದ್ದ ಸ್ಥಳವೆಲ್ಲಿ ಎಂಬುದು. ಕೊನೆಗೆ ಜನರನ್ನು ವಿವಿಧ ರೀತಿಯ ಸೂಚನೆಗಳ ಮೂಲಕ ಅದರ ಮಾಹಿತಿಗಳನ್ನು ನೀಡಿದೆ. ಕೊನೆಗೆ ಈಗ ಇರುವ ಗ್ರಾಮವೇ ಪೂರ್ವಜರ ನೆಲೆ ಎಂಬ ತೀರ್ಮಾನಕ್ಕೆ ಬಂದೆವು. ಆದರೆ ಮೂರು ನೆಲೆಗಳು ಮೂರು ದಿಕ್ಕುಗಳಲ್ಲಿದ್ದು ಅವರೆಲ್ಲರೂ ಒಂದೆಡೆ ಸೇರಲು ಹೇಗೆ ಸಾಧ್ಯ ಎಂದು ಯೋಚಿಸುವಾಗಲೇ ಜೊತೆಯಲ್ಲಿದ್ದ ಹಿರಿಯ ವ್ಯಕ್ತಿ ಹಾಳೂರಿನ ಮತ್ತೊಂದು ನೆಲೆಯನ್ನು ಅನಾವರಣ ಮಾಡಿದ. ಅದೂ ಊರಿನಿಂದ ಎರಡು ಕಿ.ಮೀ. ದೂರದಲ್ಲಿ ಪಾಲವ್ವನಹಳ್ಳಿ ವ್ಯಾಪ್ತಿಗೆ ಸೇರಿದ ನೆಲೆಯಾಗಿತ್ತು. ಅಲ್ಲಿ ಶಿಲಾಯುಗದಿಂದ ಇತ್ತೀಚಿನವರೆಗೂ ಜನರು ಬಾಳಿಬದುಕಿದ್ದುದಕ್ಕೆ ಶಿಲಾಯುಗದ ಬೂದಿದಿಬ್ಬ, ಕಲ್ಲಿನ ಕೊಡಲಿ, ಮಡಕೆ-ಕುಡಿಕೆಗಳಿಂದ ಹಿಡಿದು ವೀರಗಲ್ಲು, ದೇವಾಲಯಗಳವರೆಗೆ ಎಲ್ಲ ಬಗೆಯ ಜನರ ವಾಸ್ತವ್ಯದ ಕುರುಹುಗಳಿದ್ದವು. ಆದರೆ ಇಂದು ಈ ನೆಲೆಯು ರಾಷ್ಟ್ರೀಯ ಹೆದ್ದಾರಿ ೪ಕ್ಕೆ ಬೇಕಾದ ಜಲ್ಲಿಕಲ್ಲಿನ ಕ್ವಾರಿಯಾಗಿ ಸಂಪೂರ್ಣ ಧ್ವಂಸಗೊಂಡದ್ದು ವಿಪರ್ಯಾಸ. ನೆಲೆಯ ಇಂದಿನ ಸ್ಥಿತಿ ನೋಡಿದರೆ ಪ್ರಾಚೀನ ಸಂಸ್ಕೃತಿಯೊಂದರ ಹೊಟ್ಟೆಯನ್ನೇ ಬಗೆದಂತಾಗಿದೆ. ಆಧುನಿಕ ಕಾಮಗಾರಿಗಳು ಇಂದು ಪ್ರಾಚೀನ ಕುರುಹುಗಳ ಮೇಲೆ ನಡೆಸುವ ಗಧಾಪ್ರಹಾರಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ.

MINOLTA DIGITAL CAMERA
ಒಟ್ಟಿನಲ್ಲಿ ಇತಿಹಾಸದ ಕೊಂಡಿಗಳನ್ನು ಸ್ಥಳೀಯ ಪರಿಭಾಷೆಯಲ್ಲಿ ಅರ್ಥಮಾಡಿಕೊಳ್ಳಲು, ಸ್ಥಳೀಯ ಚರಿತ್ರೆಯ ಅನಾವರಣಕ್ಕೆ, ಸ್ಥಳೀಯರಲ್ಲಿ ಇತಿಹಾಸದ ಅರಿವನ್ನು ಮೂಡಿಸುವಲ್ಲಿ ಅಲ್ಲದೆ ಭವಿಷ್ಯದ ಇತಿಹಾಸಕಾರರನ್ನು ರೂಪಿಸುವಲ್ಲಿ ಎನ್.ಎಸ್.ಎಸ್. ನಂತಹ ಶಿಬಿರಗಳು ಅಗತ್ಯವೆಂಬುದಂತೂ ಸತ್ಯ.