ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು!
ಎಳೆಯ ವಯಸ್ಸಿನಲ್ಲಿಯೇ “ಮನೆಯನ್ನು ತೊರೆದು ಗುರುಶೋಧನೆಗೆ ಹೊರಟಿರುವೆ” ಎಂಬ ಸಿದ್ಧನ ಮಾತನ್ನು ಕೇಳಿ ಮಿತ್ರರಾದ ಸೋಮ-ಭೀಮರು ವಿರೋಧಿಸಿದರು “ನಮ್ಮನ್ನು ಹೆತ್ತ ತಂದೆ ತಾಯಿಗಳೇ ನಮಗೆ ದೇವರು! ಅವರನ್ನು ಬಿಟ್ಟು ತೆರಳುವುದು ಸರಿಯಲ್ಲ. ಇದು ಮುಪ್ಪಾವಸ್ಥೆಯಲ್ಲಿ ಮಾಡಬೇಕಾದ ಕೆಲಸ”-ಎಂದರು. ಆಗ ಸಿದ್ಧನು ತನ್ನ ವಿಚಾರವನ್ನು ಹೀಗೆ ಮಂಡಿಸಿದ:
ನೀವು ಹೇಳುವುದು ಸರಿಯಾಗಿದೆ. ಇದನ್ನು ಹತ್ತಾರು ಸಾವಿರ ವರ್ಷಗಳ ಹಿಂದೆಯೇ ವೇದವೇ ಸಾರಿದೆ,
“ಮಾತೃದೇವೋ ಭವ,ಪಿತೃದೇವೋ ಭವ”
ತಾಯಿ ದೇವರೆಂದು ತಿಳಿದು ನಡೆದುಕೋ, ತಂದೆ ದೇವರೆಂದು ತಿಳಿದು ನಡೆದುಕೋ, ಎಂದಿದೆ ತೈತ್ತಿರೀಯೋಪನಿಷತ್ತಿನ ಶಿಷ್ಯಾನುಶಾಸನ. ಅದು ಅಲ್ಲಿಗೇ ನಿಂತಿಲ್ಲ, ಮುಂದುವರೆದು ” ಆಚಾರ್ಯದೇವೋ ಭವ” – ಆಚಾರ್ಯ=ಗುರು ದೇವರೆಂದು ತಿಳಿದು ನಡೆದುಕೋ -ಎಂದೂ ಹೇಳಿದೆ! ತಂದೆ,ತಾಯಿ, ಗುರು, ಮೂವರೂ ದೇವರೇ ಆಗಿದ್ದರೂ, ಕೆಲವೊಮ್ಮೆ ಒಬ್ಬರು ಮತ್ತೊಬ್ಬರ ಕರ್ತವ್ಯಗಳನ್ನು ಮಾಡಲಾಗದು! ಹೆತ್ತ ತಂದೆ ತಾಯಿಗಳು ತಾವು ಹುಟ್ಟಿಸಿದ ಮಗುವಿನ ಲಾಲನೆ ಪಾಲನೆಯ ರೀತಿಯಲ್ಲಿ, ಗುರುವಾದವನು ಮಗುವಿನ ಲಾಲನೆ ಪಾಲನೆ ಮಾಡದಿರಬಹುದು! ಆದರೆ ತಂದೆ ತಾಯಿಗಳಾದವರು, ಗುರುವಿನ ತೆರದಲಿ, ಮಗುವಿನ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬಿತ್ತಲಾರರು! ತಂದೆ ತಾಯಿಗಳಾದವರು, ಮಗುವಿನ ಮೇಲಿನ ವ್ಯಾಮೋಹದಿಂದಾಗಿ, ಮಗುವು ತಮ್ಮಿಂದ ದೂರವಾಗಿರುವುದನ್ನು ಇಷ್ಟಪಡಲಾರರು!
ಆದ್ದರಿಂದ ಅಧ್ಯಾತ್ಮ ವಿದ್ಯೆ ಏನಿದ್ದರೂ ಮುಪ್ಪಾವಸ್ಥೆಗೆ ಸರಿ ಎನ್ನುವರು! ಆದರಿದು ಮುಪ್ಪಾವಸ್ಥೆಯಲ್ಲಿ ಅಸಾಧ್ಯದ ಮಾತು. ಏಕೆಂದರೆ,ಬಾಲ್ಯದಲ್ಲಿಯೇ ನಾವು ಸ್ವಸ್ವರೂಪವನ್ನು ತಿಳಿಯುವ ಅಧ್ಯಾತ್ಮ ವಿದ್ಯೆಯ ಸಾಧನೆಯನ್ನು ಮಾಡದಿದ್ದಲ್ಲಿ, ಬಾಲ್ಯವು ಆಟೋಟಗಳಲ್ಲಿ ಕಳೆದು ಹೋಗುವುದು. ಮುಂದೆ ಯೌವನದಲ್ಲಿ ವಯಸ್ಸಹಜ ತಾರುಣ್ಯದ ಸರಸಸಲ್ಲಾಪಗಳಲ್ಲಿ ಕಾಲಕಳೆಯಲಾಗುವುದು. ಕಾಮ ಕ್ರೋಧಾದಿಗಳು ವಿವೇಕ ಕಣ್ಣುಗಳನ್ನು ಕುರುಡುಗೊಳಿಸುವವು. ಇದರಿಂದ ಸ್ವಸ್ವರೂಪ ಮರೆತು ಅಗಾಧ ದುಃಖವನ್ನು ಅನುಭವಿಸಬೇಕಾಗುತ್ತದೆ.ಅನಂತರದ ಮುಪ್ಪಿನಲ್ಲಿ ಇಂದ್ರಿಯಗಳು ಕ್ಷೀಣಿಸುವವು! ಕಣ್ಣು ಕಾಣದು! ಕಿವಿ ಕೇಳದು! ಕೈಕಾಲುಗಳು ಅದರುವವು! ಸಂಧು ಕೀಲುಗಳು ನೋಯುವವು! ದುಡಿಮೆ ಆದಾಯಗಳು ನಿಲ್ಲುವವು! ಆಗ ಆ ವ್ಯಕ್ತಿಯ ಬಾಳು, ಹಾಲು ಹಿಂಡುವುದನ್ನು ನಿಲ್ಲಿಸಿದ ಹಸುವಿನಂತಾಗುವುದು! ಹಸು ಹಾಲು ಕೊಡುವಂತಿದ್ದರೆ, ಹಿಂಡಿ-ತಿನಿಸುಗಳನ್ನು ಯಥೇಷ್ಟ ನೀಡಲಾಗುವುದು! ಹಿಂಡುವುದನ್ನು ನಿಲ್ಲಿಸಿತೆಂದರೆ, ತಿನ್ನಲಿಟ್ಟ ಹಿಂಡಿ-ತಿಂಡಿಯ ಬುಟ್ಟಿಯನ್ನು ಹಿಂದಕ್ಕೆ ಎಳೆದುಕೊಳ್ಳಲಾಗುವುದು! ವಯಸ್ಸಾಗುತ್ತಾ ದುಡಿಮೆ-ಆದಾಯಗಳು ನಿಲ್ಲುತ್ತಲೇ,ಬಂಧು ಬಾಂಧವರು ಹಿಂದಕ್ಕೆ ಸರಿಯುವರು! ದೇಹಬಲವಲ್ಲದೇ ಸತಿ-ಸುತಾದಿಗಳ ಬೆಂಬಲವೂ ಇಲ್ಲವಾಗುವುದು! ಯಾರೂ ಮಾತು ಕೇಳದಾಗುವರು! ಅಂತಿಮವಾಗಿ ಮೂಲೆಗುಂಪಾಗಿ ತಳಮಳ-ಕಳವಳಕ್ಕೊಳಗಾಗುವನು/ಳು! ಹೇಗಿದ್ದೆ! ಹೇಗಾದೆನಲ್ಲ! ಎಂಬ ಚಿಂತೆಗೊಳಗಾಗುವನು! ಬಾಲ್ಯ-ಯೌವನದ ಸಾಧನೆ- ವಿಷಯೋಪಭೋಗಗಳನ್ನು ಮೆಲುಕು ಹಾಕುತ್ತಾ, ಪ್ರಸ್ತುತದ ಅಸಹಾಯಕತೆಯನ್ನು ನೆನೆಯುತ್ತಾ ಗೋಳಿಡುವನು! ಹಗಲು ರಾತ್ರಿ ಚಿಂತೆಯೊಳಗೆ ಮುಳುಗುವನು! ಮನಸ್ಸು ಸದಾ ಚಿಂತೆಗೊಳಗಾಗುವುದು. ಇದಲ್ಲದೇ ಮರಣಭೀತಿಯು ನಿರಂತರ ಕಾಡುವುದು. ಸಹನೆ ಕಳೆದುಕೊಳ್ಳುವನು! ಸಿಡಿಮಿಡಿಗೊಳ್ಳುವನು! ಮನೆ ಮಂದಿಗೆಲ್ಲ ಬೇಸರ-ಬೇಡವಾಗುವನು! ಇಂಥ ವೃದ್ಧಾಪ್ಯದಲ್ಲಿ ಆಧ್ಯಾತ್ಮದ ಬಯಕೆ ಎಲ್ಲಿಂದ? ಇದನ್ನು ಮನಗಂಡೇ ಭಗವತ್ಪಾದ ಶಂಕರಾಚಾರ್ಯರು ಹೀಗೆ ಹೇಳಿದರು:
ಬಾಲಸ್ತಾವತ್ ಕ್ರೀಡಾಸಕ್ತಃ ತರುಣಸ್ತಾವತ್ ತರುಣೀರಕ್ತಃ|
ವೃದ್ಧಸ್ತಾವತ್ ಚಿಂತಾಸಕ್ತಃ
ಪರೇ ಬ್ರಹ್ಮಣಿ ಕೋಪಿ ನ ಸಕ್ತಃ|[ ಭಜಗೋವಿಂದಮ್].
ಹುಡುಗ-ಹುಡುಗಿ ಆಟದಲ್ಲಿ ತಲ್ಲೀನ! ಯುವಕ ಯುವತಿ ಸರಸದಲ್ಲಿ ಲೀನ! ಮುದುಕ-ಮುದುಕಿ ಚಿಂತಾನಿಮಗ್ನ! ಹೀಗಿರುಲು ಪರಬ್ರಹ್ಮದಲ್ಲಿ ಯಾರೂ ಮುಳುಗರು!
ಒಂದು ವೇಳೆ ಮುಪ್ಪಾವಸ್ಥೆಯಲ್ಲಿ ಇದ್ದಕ್ಕಿದ್ದಂತೆ ಅಧ್ಯಾತ್ಮದತ್ತ ಮುಖ ಮಾಡಿದರೂ ಅದು ಸರಿಯಾಗಿ ಫಲಿಸದು. ಪುಟ್ಟ ಕಥೆಯೊಂದು ಹೀಗಿದೆ:- ವೃದ್ಧನೊಬ್ಬ ವಿಪರೀತ ಮಾತನಾಡುತ್ತಿದ್ದ! ಮನೆಮಂದಿಗೆಲ್ಲ ಬೇಸರೆನಿಸಿದ್ದ! ರಾತ್ರಿ ಹತ್ತಿರದ ದೇವಾಲಯವೊಂದರಲ್ಲಿ ಗುರುಗಳಿಂದ ಅಧ್ಯಾತ್ಮ ಪ್ರವಚನ ನಡೆಯುತ್ತಿತ್ತು.
ಪ್ರವಚನ ಕೇಳಿ ಬಾ ಎಂದು ಮನೆಯವರು ವೃದ್ಧನನ್ನು ಹೋಗಿಸಿದರು! ಆತ ಅರೆ ಬರೆ ಮನಸ್ಸಿನಿಂದ ಕೋಲು ಊರುತ್ತಾ ದೇವಾಲಯದತ್ತ ಹೆಜ್ಜೆ ಹಾಕಿದ! ಪ್ರವಚನ ಶುರುವಾಗಿ ಬಹಳ ಹೊತ್ತು ಸಾಗಿತ್ತು. ದೇವಾಲಯದಲ್ಲಿ ಜನ ಭರ್ತಿಯಾಗಿದ್ದರು. ಅಲ್ಲಿ ಕುಳಿತುಕೊಳ್ಳಲು ಜಾಗವಿರಲಿಲ್ಲ. ದೇವಾಲಯದ ಹೊರಗೇ ಒಂದೆಡೆ ಕುಳಿತುಕೊಂಡ! ಸ್ವಲ್ಪ ಹೊತ್ತಿನಲ್ಲಿ ಗೋಡೆಗೆ ಒರಗಿ ನಿದ್ರೆಗೆ ಜಾರಿದ! ಬಾಯಿ ತೆರೆದಿತ್ತು! ಅಲ್ಲಿಗೆ ಬಂದ ನಾಯಿಯೊಂದು ಕಾಲನ್ನೆತ್ತಿ ತನ್ನ ತೀರ್ಥ ಬಿಟ್ಟಿತಂತೆ! ಆತ ಶಾಸ್ತ್ರ ಉಪ್ಪುಪ್ಪು ಎಂದುಕೊಂಡನಂತೆ! ಶಾಸ್ತ್ರ ಮುಗಿದ ಬಳಿಕ ಪ್ರಸಾದ ಹಂಚುವಾಗ ಈತನ ಬಾಯಿಗೂ ಸ್ವಲ್ಪ ಸಿಹಿ ಪ್ರಸಾದ ಹಾಕಿದರಂತೆ. ಆಗ ಆತ ಶಾಸ್ತ್ರ” ಸಿಹಿ ಸಿಹಿ” ಎಂದುಕೊಂಡನಂತೆ! ಎಲ್ಲ ಮುಗಿದಾದ ಬಳಿಕದ ಅಧ್ಯಾತ್ಮ ಸಾಧನೆಯ ದುರ್ಗತಿ ಇಂಥದ್ಧು! ಅದಕ್ಕೆಂದೇ ಬಸವಣ್ಣನವರು ಹೀಗೆ ಹೇಳಿದರು:-
ನೆರೆ ಕೆನ್ನೆಗೆ,ತೆರೆ ಗಲ್ಲಕೆ,ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ,ಬೆನ್ನು ಬಾಗಿ,ಅನ್ಯರಿಗೆ ಹಂಗಾಗದ ಮುನ್ನ,
ಕಾಲ ಮೇಲೆ ಕೈಯನೂರಿ, ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ,
ಪೂಜಿಸು ನಮ್ಮ ಕೂಡಲಸಂಗಮದೇವನ” – ಎಂದು.
ಆದ್ದರಿಂದ ಮುದಿ ವಯಸ್ಸಿನಲ್ಲಿ ಅಧ್ಯಾತ್ಮವು ಸಾಧ್ಯವಾಗುವುದಿಲ್ಲ. ಅತ್ಯಂತ ಪವಿತ್ರವಾದ ಬಾಲ್ಯಾವಸ್ಥೆಯಲ್ಲಿಯೇ ಆತ್ಮಜ್ಞಾನಿಯಾದ ಗುರುವನ್ನು ಶೋಧಿಸತಕ್ಕದ್ದು! ಅಂಥ ಗುರುವಿನ ಉಪದೇಶವನ್ನು ಪಡೆದುಕೊಂಡು ಜ್ಞಾನ ಸಂಪಾದನೆಯನ್ನು ಮಾಡತಕ್ಕದ್ದು -ಎಂದು.
ಬಾಲ ಸಿದ್ಧನ ಈ ಮಾತಿನ ಗಾಂಭೀರ್ಯತೆಯನ್ನು ನಾವಿಲ್ಲಿ ಮನಗಾಣಬೇಕು. ಬೆಳೆಯ ಸಿರಿ ಮೊಳಕೆಯಲ್ಲಿ. ಸಸಿಯನ್ನು ಮೊಳಕೆ ಇರುವಾಗಲೇ ನಾವು ಯಾವ ರೀತಿ ಬೆಳೆಸುತ್ತೇವೆಯೋ ಅದರಂತೆ ಅದು ಮುಂದೆ ಫಲಿಸುವುದು. ಕಟ್ಟಡದ ಅಡಿಪಾಯ ಭದ್ರವಾಗಿದ್ದರೆ ಅದರ ಮೇಲೆ ಎಂಥ ಭವ್ಯ ಕಟ್ಟಡವನ್ನೂ ನಿರ್ಮಿಸಬಹುದು! ಬಾಲ್ಯದಲ್ಲಿಯೇ ನಾವು ನೀಡುವ- ಪಡೆಯುವ ಸಂಸ್ಕಾರ-ವಿದ್ಯೆಗಳೇ ಇಡೀ ಬದುಕನ್ನು ರೂಪಿಸುತ್ತವೆ. ಆದ್ದರಿಂದ ಬಾಲ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ವಿದ್ಯಾರಂಭ-ಉಪನಯನ-ಲಿಂಗಧಾರಣೆ ಮೊದಲಾದ ಸಂಸ್ಕಾರಗಳನ್ನು ಮಾಡಬೇಕಾದುದು ಬಾಲ್ಯದಲ್ಲಿಯೇ. ಭಗವತ್ಪಾದ ಆದಿಶಂಕರಾಚಾರ್ಯರು ಎಂಟನೆಯ ವಯಸ್ಸಿನಲ್ಲಿಯೇ ನಾಲ್ಕು ವೇದಗಳ ಅಧ್ಯಯನವನ್ನು ಮುಗಿಸಿದ್ದರೆಂಬುದನ್ನು ನಾವಿಲ್ಲಿ ನೆನೆಯಬೇಕು. ನಿಷ್ಕಲ್ಮಶ ಪರಿಶುದ್ಧ ಮನಸ್ಸಿನ ಬಾಲ್ಯ ಅತ್ಯಂತ ಪವಿತ್ರ. ಬಾಲ್ಯದ ಮನಸ್ಸು ಹಸಿಗೋಡೆ ಇದ್ದಂತೆ! ಹೇಗೆ ಬೇಕಾದರೂ ತಿದ್ದಬಹುದು! ಒಣಗಿದ ಮೇಲಾಗದು! ಮೂಸದ ಪವಿತ್ರ ಹೂವನ್ನು ಗುರು-ದೇವರಿಗೆ ಅರ್ಪಿಸುವಂತೆ, ನಿಷ್ಕಲ್ಮಶ ಬಾಲ್ಯವನ್ನು, ಅಧ್ಯಾತ್ಮ-ಲೌಕಿಕ ವಿದ್ಯೆ, ಉತ್ತಮ ಸಂಸ್ಕಾರಗಳ ಕಲಿಕೆಗಾಗಿ ಗುರುವಿಗೆ ಒಪ್ಪಿಸಬೇಕು! ಅಧ್ಯಾತ್ಮ ವಿದ್ಯೆ ಕೇವಲ ಸಂನ್ಯಾಸಿಯನ್ನಾಗಿ ಮಾಡುವುದು, ಮಠ-ಮಾನ್ಯಗಳಲ್ಲಿದ್ದು ಸಂನ್ಯಾಸಿಯ ಸಹವಾಸ ಪಡೆದ ಮಗು ಮುಂದೆ ಸಂನ್ಯಾಸಿಯೇ ಆಗುವುದು – ಎಂದು ಭಾವಿಸಕೂಡದು. ಪೊಲೀಸರ ಮಕ್ಕಳೆಲ್ಲ ಪೊಲೀಸರೇ ಆಗುವರೇ? ಅಧ್ಯಾತ್ಮದ ಸಾರ ಅರಿತವನ ಬಾಳು ಬಂಗಾರ! ಅದು ” ಏಳು ಎದ್ದೇಳು!” ಎಂದು ಅಜ್ಞಾನದ ನಿದ್ರೆಯಿಂದ ಬಡಿದೆಬ್ಬಿಸುವುದು! ಸಾಧು ಸಂನ್ಯಾಸಿಗಳ ಸತ್ಸಂಗ ಅಹಂಕಾರವನ್ನು ಬಗ್ಗು ಬಡಿಯುವುದು! ಶಾಲಾ ಕಾಲೇಜುಗಳ ಅಧ್ಯಯನವನ್ನು ಬಾಲ್ಯದಲ್ಲಿಯೇ ಪ್ರಾರಂಭಿಸುವಂತೆ, ಪೂಜೆ-ಜಪ-ತಪ – ಧ್ಯಾನ ಸಾಧನೆಗಳನ್ನೂ ಬಾಲ್ಯದಲ್ಲಿಯೇ ಪ್ರಾರಂಭಿಸಬೇಕು. ಶ್ರೀ ರಾಮಕೃಷ್ಣ ಪರಮಹಂಸರು ನೀಡುವ ಈ ಉದಾಹರಣೆಯನ್ನು ನೋಡಿ: ಹಾಲನ್ನು ನೀರಿಗೆ ಹಾಕಿದರೆ ಅದು ತನ್ನತನವನ್ನು ಕಳೆದುಕೊಳ್ಳುವುದು, ನೀರಾಗುವುದು! ಅದನ್ನೇ ಸಂಸ್ಕರಿಸಿ ಬೆಣ್ಣೆ ಮಾಡಿ , ನೀರಿಗೆ ಹಾಕಿದರೆ ಅದು ತನ್ನತನವನ್ನು ಕಳೆದುಕೊಳ್ಳದು! ಬೆಣ್ಣೆ ಬೆಣ್ಣೆಯಾಗಿಯೇ ಉಳಿಯುವುದು! ಅಧ್ಯಾತ್ಮವನ್ನು ಸಾಧಿಸುತ್ತಾ ಜೊತೆ ಜೊತೆಗೆ ಸಂಸಾರವನ್ನು ನಡೆಸುವವರ ಆನಂದಮಯ ಜೀವನವನ್ನು ಪರಿಶೀಲಿಸಿ! ನೀವೂ ಹಾಗೆ ಬದುಕಿ ನೋಡಿ ಅದರ ಸೊಗಸ!
೧೮೪೨-೪೪ರ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಊಹಿಸಿ. ರಸ್ತೆ-ವಾಹನ-ಅಂಚೆ-ದೂರವಾಣಿ ಮೊದಲಾದ ಯಾವುದೇ ಸಂಪರ್ಕ ಮಾಧ್ಯಮಗಳು ಇಲ್ಲದ ಕಾಲವದು. ಸಮರ್ಥಗುರುವನ್ನು ಹುಡುಕಿಕೊಳ್ಳಲು ಮನೆಯನ್ನು ತೊರೆದು ಹೊರಡಬೇಕಿತ್ತು! ಮುಧೋಳವನ್ನು ತೊರೆದು ರನ್ನ ಗುರುವಿಗಾಗಿ ಬಂಕಾಪುರಕ್ಕೆ ಬರಲಿಲ್ಲವೇ? ಆದರೆ ಇಂದು ಸಾಮಾಜಿಕ ಪರಿಸ್ಥಿತಿ ಅತ್ಯಂತ ಸುಧಾರಿಸಿದೆ. ಗುರುಕುಲಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಸ್ತಿತ್ವದಲ್ಲಿವೆ. ಗುರುಶೋಧನೆಗೆ ಮನೆ ತೊರೆಯುವ ಅನಿವಾರ್ಯತೆ ಅಷ್ಟಿಲ್ಲದಿದ್ದರೂ, ಮನೆಯಲ್ಲಿನ ಸಲಿಗೆ-ವ್ಯಾಮೋಹಗಳು, ಮನೆಯವರಿಗೆ ಸರಿಯಾದ ವಿದ್ಯೆ-ತಿಳುವಳಿಕೆ – ಉತ್ತಮ ಸಂಸ್ಕಾರಗಳು ಇಲ್ಲದಿರುವುದು, ಮಗುವಿಗೆ ಉತ್ತಮ ಸಂಸ್ಕಾರಗಳನ್ನು ನೀಡುವಲ್ಲಿ ಬಹುತೇಕ ವಿಫಲವಾಗಿವೆ. ಆದ್ದರಿಂದ ಮಠ-ಆಶ್ರಮ-ಗುರುಕುಲಗಳಲ್ಲಿ ಮಕ್ಕಳನ್ನು ಇರಿಸಿ ಅವರಿಗೆ ಆದರ್ಶ ಸಂಸ್ಕಾರಗಳನ್ನು ನೀಡುವ ಅಗತ್ಯ-ಅನಿವಾರ್ಯತೆ ಇಂದಿಗೂ ಅತ್ಯಧಿಕವಾಗಿದೆ.