ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ
ವಾಡಿಕೆಯಂತೆ ಆ ವರ್ಷವೂ ದಸರೆಯ ಒಂದು ದಿನ ಮನೆಯಲ್ಲಿ ಶ್ರೀ ಶನಿಮಹಾತ್ಮನ ಪುರಾಣವನ್ನು ಓದುವ ವಾರ್ಷಿಕ ಮಹತ್ವದ ಧಾರ್ಮಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪುರಾಣಪಾರಾಯಣಕ್ಕೆ ಮುನ್ನ ಮನೆಯಲ್ಲಿ ಹಿರಿಯರೊಬ್ಬರು ಪಾವಗಡದ ಶನಿದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದೂ ಕೂಡ ನಾವು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದ ನೇಮ. ಅದರ ಪ್ರಕಾರವಾಗಿಯೇ ಕಳೆದ ವಾರದ ಹಿಂದೆಯಷ್ಟೇ ನನ್ನ ತಾತನವರು ಪಾವಗಡಕ್ಕೆ ಹೋಗಿ ಬಂದಿದ್ದರು.
ಸುಮಾರು ಎರಡು ತಾಸುಗಳ ಪುರಾಣಪಾರಾಯಣವಿತ್ತಾರೂ ಅದಕ್ಕಾಗಿ ಹತ್ತು ಹಲವು ಪೂರ್ವಭಾವಿ ಕೆಲಸಗಳನ್ನು ಮಾಡಬೇಕಿತ್ತು. ಮೊದಲನೆಯದಾಗಿ ಶನಿಮಹಾತ್ಮನ ಫೋಟೋವನ್ನ ಗೌಡ್ರ ಶಂಭಣ್ಣನವರ ಮನೆಯಿಂದ ತರಬೇಕಾಗಿದ್ದಿತು. ಶನಿಮಹಾತ್ಮನ ಫೋಟೋ ಮನೆಯಲ್ಲಿದ್ದರೆ ತುಂಬಾ ನಿಷ್ಠೆಯ ಪೂಜೆ ಪುನಸ್ಕಾರಗಳು, ನೇಮನಿಯಮಗಳು ತಪ್ಪದೇ ಆಗಬೇಕು ಇಲ್ಲದಿದ್ದರೆ ಶನಿದೇವರು ಕೋಪಿಸಿಕೊಳ್ಳುತ್ತಾನೆ ಎನ್ನುವ ನಂಬಿಕೆ ನಮ್ಮಲ್ಲಿ ಧೃಢವಾದ ಕಾರಣದಿಂದಾಗಿ ಮನೆಯಲ್ಲಿ ಶನಿಮಹಾತ್ಮನ ಫೋಟೋ ಇಡುತ್ತಿರಲಿಲ್ಲ. ಪುರಾಣ ಓದುವ ದಿನ ಫೋಟೋ ತಂದು ಮಾರನೇ ದಿನ ಬೆಳಿಗ್ಗೆ ಫೋಟೋವನ್ನು ಹಿಂತಿರುಗಿಸುತ್ತಿದ್ದದ್ದು ವಾಡಿಕೆ. ಎರಡನೇ ಮುಖ್ಯಕಾರ್ಯ ಎಂದರೆ ಪುರಾಣ ಓದುವವರನ್ನು ಹುಡುಕಿ ಕರೆದು ಬರುವುದು. ಪ್ರತೀ ವರ್ಷವೂ ನಮ್ಮ ಮನೆಗೆ ಪುರಾಣವಾಚನಕ್ಕೆ ನನ್ನ ಸಹಪಾಠಿಯಾದ ಯತಿರಾಜನ ತಂದೆಯವರೆ ಆದ ಕುರುಬರ ಲಿಂಗಪ್ಪ ಮೇಷ್ಟ್ರ ಶಿವಣ್ಣ ಅವರನ್ನೇ ಕರೆಯುವುದು ಪದ್ಧತಿ. ಅದರಂತೆ ನನ್ನ ಅವ್ವ ಹಿಂದಿನ ದಿನವೇ ಶಿವಣ್ಣ ಅವರನ್ನು ಪುರಾಣಪಠಣಕ್ಕಾಗಿ ಆಹ್ವಾನಿಸಿ ಬಂದಿದ್ದರು. ಇನ್ನು ನನ್ನ ಅಮ್ಮ ಪೂಜೆಗಾಗಿ ಬೇಕಾದ ನವಧಾನ್ಯಗಳ ಸಂಗ್ರಹಣೆಯನ್ನೂ ಮುಗಿಸಿದ್ದರು. ಇನ್ನುಳಿದಂತೆ ಪೂಜೆಗಾಗಿ ಬೇಕಾದ ಸಾಮಾಗ್ರಿಗಳಾದ ನವಧಾನ್ಯಗಳನ್ನು ಇಡಲು ಬೇಕಾದ ಎಲೆಯ ದೊನ್ನೆ, ಹೂವು, ಹಣ್ಣು, ತೆಂಗಿನಕಾಯಿ ಮೊದಲಾದ ಸಾಮಾಗ್ರಿಗಳನ್ನು ಮತ್ತು ಪುರಾಣದ ಮಧ್ಯೆ, ವಿಕ್ರಮಾದಿತ್ಯನ ಕೈಕಾಲುಗಳನ್ನು ಕತ್ತರಿಸಿದಾಗ ಪಾರಾಯಣಕ್ಕೆ ಕೊಡುವ ಅಲ್ಪವಿರಾಮದ ಸಮಯದಲ್ಲಿ ಉಪಹಾರದ ರೂಪದಲ್ಲಿ ಪುರಾಣ ಕೇಳಲು ಬಂದವರಿಗೆ ಕೊಡಮಾಡುವ ಮಂಡಕ್ಕಿ ಒಗ್ಗರಣೆ ಮತ್ತು ಕಡಲೆ ಉಸಲಿಗೆ ಬೇಕಾದ ಒಂದು ಮೂಟೆ ಮಂಡಕ್ಕಿ ಸಮೇತ ಇತರೆ ಅವಶ್ಯ ವಸ್ತುಗಳನ್ನು ನನ್ನ ತಾತ ಹೋದ ಸೋಮವಾರ ಚಿತ್ರದುರ್ಗದ ವಾರದಸಂತೆಯಿಂದ ಕೊಂಡುತಂದಿದ್ದರು. ಅಂತೂ ಪುರಾಣ ಪ್ರವಚನಕ್ಕೆ ಬೇಕಾದ ಸರ್ವಸಿದ್ಧತೆಗಳೂ ಮುಕ್ತಾಯದ ಹಂತ ತಲುಪಿದ್ದವು.
ಸಾಯಂಕಾಲ ಸುಮಾರು ಏಳು ಗಂಟೆಗೆ ಪ್ರಾರಂಭವಾಗುವ ಪುರಾಣಪಾರಾಯಣ ಮುಗಿಯುವ ವೇಳೆಗೆ ರಾತ್ರಿ ಒಂಬತ್ತನ್ನು ದಾಟುತ್ತಿತ್ತು. ಬಹಳ ಸರಳೀಕೃತವಾದ ಗದ್ಯರೂಪದ ಪುರಾಣಪಠಣಕ್ಕೆ “ಅರ್ಥಮಾಡಿಸುವವರು” ಬೇಕಾಗಿರಲಿಲ್ಲ. ಆದರೂ ಅರ್ಥಗಾರಿಕೆ ಇಲ್ಲದೇ ಹೋದಲ್ಲಿ ಪುರಾಣ ಕೇವಲ ಅರ್ಧಗಂಟೆಯಲ್ಲಿಯೇ ಮುಗಿದು ಹೋಗುತ್ತದೆ ಎನ್ನುವ ಕಾರಣದಿಂದ ಪಾರಾಯಣದ ಮಧ್ಯೆ ಅರ್ಥಗಾರಿಕೆಯೂ ನಡೆಯುತ್ತಿತ್ತು. ನಮ್ಮ ಮನೆಗೆ ಅರ್ಥಗಾರಿಕೆಗಾಗಿ ಕುಂಬಾರ ಏಕಾಂತಪ್ಪ ಅವರು ಬರುತ್ತಿದ್ದರು. ಶಿವಣ್ಣ ಅವರ ಪಾರಾಯಣ ಮತ್ತು ಏಕಾಂತಪ್ಪ ಅವರ ಅರ್ಥಗಾರಿಕೆ ಪ್ರತೀವರ್ಷವೂ ಕೇಳಿ ಕೇಳಿ ಕಂಠಸ್ಯವಾದಂತಿದ್ದ ಶನಿಮಹಾತ್ಮೆಯ ಪುರಾಣವನ್ನು ಮತ್ತೆ ಈ ವರ್ಷವೂ ಕೇಳಬೇಕು ಎನ್ನುವ ಆಸಕ್ತಿಯನ್ನು ಶ್ರವಣ ಮಾಡುವವರಲ್ಲಿ ಹುಟ್ಟಿಹಾಕುವಷ್ಟು ಶಕ್ತಿಶಾಲಿಯಾಗಿತ್ತು. ಪುರಾಣವನ್ನು ಓದಿದರೆ ಸಾಕೆ? ಪುರಾಣವನ್ನ ಕೇಳಿ ಕೃತಕೃತ್ಯರಾಗುವವರೂ ಬೇಕಲ್ಲ? ನಾವು ಮನೆಮಂದಿಯೆಲ್ಲಾ ಸೇರಿದರೆ ಹೆಚ್ಚೆಂದರೆ ಏಳೋ ಎಂಟೋ ಜನ ಇದ್ದೆವು, ಬಂಧುಬಳಗ ಇಲ್ಲದೆ ಪುರಾಣವಾಚನ ಕಳೆ ಕಟ್ಟುತ್ತಿರಲಿಲ್ಲ. ಹೀಗಾಗಿ ಒಂದು ವಾರ ಮೊದಲೇ ಮನೆಮನೆಗೆ ಹೋಗಿ ಊರಿನ ನೆಂಟರಿಷ್ಟರನ್ನು ಪುರಾಣ ಶ್ರವಣಕ್ಕಾಗಿ ಅವ್ವ ಕರೆದು ಬಂದಿದ್ದಳು.
ಸಂಜೆ ಸುಮಾರು ಏಳಕ್ಕೆ ಹತ್ತು ಹದಿನೈದು ನಿಮಿಷಗಳು ಬಾಕಿ ಇರುವಾಗಲೇ ಶಿವಣ್ಣ, ಏಕಾಂತಪ್ಪ ಮತ್ತು ಬಂಧು ಬಳಗದವರು ಒಬ್ಬೊಬ್ಬರಾಗಿ ಆಗಮಿಸತೊಡಗಿದರು. ಏಳರ ಹೊತ್ತಿಗೆ ಸುಮಾರು ನಾಲ್ವತ್ತು ಜನ ಸೇರಿದ್ದರಿಂದ ಪುರಾಣಪಾರಾಯಣವನ್ನ ಪ್ರಾರಂಭಿಸಲಿಕ್ಕೆ ತಾತ ಶಿವಣ್ಣನವರನ್ನ ಕೇಳಿಕೊಂಡರು. ಶಿವಣ್ಣನವರು “ಬರಬೇಕಾದವರೆಲ್ಲರೂ ಬಂದಿದ್ದಾರೆಯೇ?” ಎಂದು ಪ್ರಶ್ನಿಸಲಾಗಿ ಪೂಜೆಗೆಂದು ಕುಳಿತಿದ್ದ ನನ್ನ ಅಪ್ಪ ಒಮ್ಮೆ ಸುತ್ತಮುತ್ತ ನೋಡಿ “ಎಲ್ಲಿ ನೀಲಕಂಠಪ್ಪ ಬಂದ ಹಾಗಿಲ್ಲವಲ್ಲಾ” ಎಂದರು. ಅಲ್ಲಿಯೇ ಪಡಸಾಲೆಯ ಕಂಭಕ್ಕೆ ಒರಗಿ ಕುಳಿತ ನನ್ನ ಸೋದರಮಾವನವರಾದ ನೀಲಕಂಠಪ್ಪ ನನ್ನ ಅವ್ವನನ್ನು ಉದ್ದೇಶಿಸಿ “ನಾನು ಬಂದಿದ್ದೇನೆ ಅಕ್ಕಾ” ಎಂದರು. ಅದಕ್ಕೆ ನನ್ನ ಅವ್ವ “ಚಂದ್ರಣ್ಣ ಕೇಳಿದ್ದು ನಿನ್ನ ಕುರಿತು ಕೇಳಿದ್ದು ಅಲ್ಲ, ಕೆಲಸದ ನೀಲಕಂಠಪ್ಪ ಬಂದ ಹಾಗಿಲ್ಲವಲ್ಲಾ ಎಂದು ಕೇಳುತ್ತಿದ್ದಾನೆ” ಎಂದಳು. ಜಾಗೃತರಾದ ತಾತನೂ ಕುಳಿತ ಎಲ್ಲರ ಮೇಲೂ ಒಂದು ಕಣ್ಣು ಹಾಯಿಸಿ ಕೆಲಸದ ನೀಲಕಂಠಪ್ಪ ಬಂದಿಲ್ಲದಿರುವುದನ್ನು ಖಚಿತಪಡಿಸಿಕೊಂಡರು.
“ಯಾರು ನೀಲಕಂಠಪ್ಪನನ್ನು ಕರೆಯಲು ಹೋಗಿದ್ದರು?” ಎನ್ನುವ ಗುಸುಗುಸು ಮನೆಯವರಲ್ಲಿ ಪ್ರಾರಂಭವಾಯಿತು. ಸ್ವಲ್ಪ ಸಮಯದ ನಂತರ ನೀಲಕಂಠಪ್ಪನನ್ನು ಕರೆಯಲು ಮರೆತು ಹೋಗಿದ್ದೇವೆ ಎನ್ನುವ ಅಂಶ ನಿಧಾನವಾಗಿ ಮನೆಮಂದಿಯ ತಲೆಯಲ್ಲಿ ಮೊಳೆಯತೊಡಗಿತು. “ಅಯ್ಯೋ ಎಂತಹ ಕೆಲಸವಾಗಿ ಹೋಯಿತಲ್ಲಾ, ನೀಲಕಂಠಪ್ಪನನ್ನು ಕರೆಯಲೇ ಇಲ್ಲ” ಎಂದು ಅವಲತ್ತುಪಟ್ಟುಕೊಂಡ ಅಜ್ಜಿ “ಪ್ರಕಾಶ, ಹೋಗೋ, ಬೇಗ ಹೋಗಿ ಕೆಲಸದ ನೀಲಕಂಠಪ್ಪನನ್ನು ಕರೆದುಕೊಂಡು ಬಾ. ಅವ್ವ ಹೇಳಿದ್ದಾಳೆ, ಮನೆಯಲ್ಲಿ ಶನಿ ಪುರಾಣವನ್ನ ಓದುತ್ತಿದ್ದಾರೆ, ಜಲ್ದಿ ಬರಲಿಕ್ಕೆ ಹೇಳು” ಎಂದವಳು “ಇಲ್ಲ, ಇಲ್ಲ, ಆತನನ್ನು ನಿನ್ನ ಜೊತೆಯಲ್ಲಿಯೇ ಕರೆದುಕೊಂಡು ಬಾ” ಎನ್ನುವ ಫರ್ಮಾನನ್ನೂ ಹೊರಡಿಸಿದಳು. “ಹುಡುಗನನ್ನು ಕಳುಹಿಸಿದರೆ ಹೇಗೆ? ನೀಲಕಂಠಪ್ಪನನ್ನು ಕರೆಯುವುದಕ್ಕೆ ಯಾರಾದರೂ ದೊಡ್ಡವರು ಹೋಗಬಾರದೇ?” ಎನ್ನುವ ಏಕಾಂತಪ್ಪನ ಸಲಹೆಗೆ ನನ್ನ ಮತ್ತೋರ್ವ ಮಾವನಾದ ಓಂಕಾರಪ್ಪನ ಜೊತೆಗೂಡಿ ಕೆಲಸದವರ ನೀಲಕಂಠಪ್ಪನವರ ಮನೆ ಕಡೆ ದೌಡಾಯಿಸಿದೆವು.
ನಮ್ಮ ಮನೆಯಿಂದ ನೀಲಕಂಠಪ್ಪನವರ ಮನೆಗೆ ಕೇವಲ ಹತ್ತು ನಿಮಿಷಗಳ ದಾರಿ ಅಷ್ಟೆ. ಇರ್ದಳ್ಳಿ (ತಣ್ಣೀರು) ನಾಗಣ್ಣನವರ ಮನೆ ಮುಂದಿನಿಂದ ಹಾಯ್ದು ಶೆಟ್ಟರ ಸುಬ್ಬಣ್ಣನ ಅಂಗಡಿಯನ್ನು ಬಳಸಿಕೊಂಡು ಬುಕೀಟ್ಲ ಭೀಮಣ್ಣನವರ ಮನೆಯ ಮೊದಲೇ ಬರುವ ಎಡಭಾಗದ ತಿರುವನ್ನು ಹೊಕ್ಕು ಸ್ವಲ್ಪ ಮುಂದೆ ನಡೆದರೆ ಸಿಗುವ ಜೂಗಣ್ಣನವರ ತಿಪ್ಪಣ್ಣ ಮೇಷ್ಟ್ರ ಮನೆಯ ಎದುರೇ ನೀಲಕಂಠಪ್ಪನ ಮನೆ. ನಮ್ಮ ಕಡೆಯಲ್ಲಿ ಕ್ಷೌರಿಕ ವೃತ್ತಿಯವರನ್ನು ಕೆಲಸದವರು ಎಂದು ಕರೆಯುವುದು ರೂಢಿ. ಜೋರಾಗಿ ಹೆಜ್ಜೆ ಹಾಕುತ್ತಾ ನೀಲಕಂಠಪ್ಪನವರ ಮನೆ ತಲುಪಿದ ನಾವು ಬಾಗಿಲಲ್ಲಿ ನಿಂತಿದ್ದ ಅವರ ಮಗನನ್ನು “ಅಪ್ಪ ಇದ್ದಾನೆಯೇ?” ಎಂದು ಪ್ರಶ್ನಿಸಿದೆವು. ಆಗ ತಾನೇ ಜಳಕ ಮುಗಿಸಿ ಲಿಂಗಪೂಜೆಗೆ ಅಣಿಯಾಗುತ್ತಿದ್ದ ನೀಲಕಂಠಪ್ಪ ಹೊಸ್ತಿಲಲ್ಲಿ ನಿಂತು ಮಾತನಾಡುತ್ತಿದ್ದ ನಮ್ಮ ಧ್ವನಿಯನ್ನು ಆಲಿಸಿದವರಾಗಿ ಮಗನನ್ನು ಉದ್ದೇಶಿಸಿ “ಯಾರಪ್ಪಾ ಬಂದಿರುವುದು?” ಎಂದು ಕೇಳಿದರು. “ವಿರುಪಣ್ಣಗೌಡ್ರ ಓಂಕಾರಪ್ಪ ಬಂದಿದ್ದಾನೆ, ಗೇಟಿನ ಗೌರಮ್ಮನವರ ಮನೆಯಲ್ಲಿ ಪುರಾಣ ಓದುತ್ತಾರಂತೆ, ನಿನ್ನನ್ನು ಕರೆಯಲು ಬಂದಿದ್ದಾನೆ” ಎಂದ. “ಹೌದಾ, ಪುರಾಣ ಯಾವತ್ತು ಓದಿಸುತ್ತಾರೆಯಂತೆ?” ಎನ್ನುವ ನೀಲಕಂಠಪ್ಪನ ಪ್ರಶ್ನೆಗೆ “ಪುರಾಣ ಇವತ್ತೇ ಇದೆ, ಓದುವುದಕ್ಕೆ ಶುರುಮಾಡಬೇಕಿತ್ತು, ಅಷ್ಟರಲ್ಲಿ ನೀನು ಬಂದಿಲ್ಲದೆ ಇರುವುದರಿಂದ ನಿನ್ನನ್ನು ಕರೆಯಲಿಕ್ಕೆ ಬಂದಿದ್ದೇವೆ” ಎಂದು ಓಂಕಾರಪ್ಪ ಉತ್ತರಿಸಿದ. “ಹೌದೇ, ನನಗೆ ಗೊತ್ತೇ ಇರಲಿಲ್ಲ, ಯಾರಾದರೂ ಬಂದು ಕರೆದು ಹೋಗಿದ್ದರೇ?” ಎಂದು ಮಗನನ್ನು, ಇಬ್ಬರು ಹೆಣ್ಣುಮಕ್ಕಳನ್ನು ಮತ್ತು ಮಡದಿಯನ್ನು ನೀಲಕಂಠಪ್ಪ ವಿಚಾರಿಸಿದ. ಯಾರೂ ಕರೆಯಲಿಕ್ಕೆ ಬಂದಿಲ್ಲ ಎನ್ನುವುದು ಅರಿವಾದ ನಂತರ, “ಓಂಕಾರಪ್ಪ, ಯಾರೂ ಕರೆಯಲಿಕ್ಕೆ ಬಂದೇ ಇಲ್ಲವಲ್ಲ” ಎಂದವನೇ “ಪರವಾಗಿಲ್ಲ, ಒಂದೈದು ನಿಮಿಷ ನಿಲ್ಲು, ಲಿಂಗಪೂಜೆ ಮುಗಿಸಿ ಬಂದು ಬಿಡುತ್ತೇನೆ” ಎಂದವನು ನಮ್ಮನ್ನು ಹಜಾರದ ಈಚಲುಗರಿಯ ಚಾಪೆಯ ಮೇಲೆ ಕೂತುಕೊಳ್ಳುವಂತೆ ಹೇಳಿ ಪೂಜೆಮನೆಗೆ ತೆರಳಿದ.
ಐದು ನಿಮಿಷಗಳ ಒಳಗೇ ಪೂರ್ಣ ಸಜ್ಜಾಗಿ ಹೊರಬಂದ ನೀಲಕಂಠಪ್ಪ ನಮ್ಮ ಜೊತೆಗೆ ಆತುರಾತುರವಾಗಿ ಹೆಜ್ಜೆ ಹಾಕುತ್ತಾ ನಮ್ಮ ಮನೆಯ ಕಡೆಗೆ ನಡೆಯತೊಡಗಿದ. ನಾವು ಬರುವುದನ್ನೇ ಕಾಯುತ್ತಾ ಕುಳಿತಿದ್ದ ಮನೆಯಲ್ಲಿದ್ದ ಸಮಸ್ತ ಮಂದಿ ‘ನೀಲಕಂಠಪ್ಪ ಬಂದನಲ್ಲ’ ಎನ್ನುವ ನಿಟ್ಟುಸಿರುಬಿಟ್ಟರು. “ನೀಲಕಂಠಪ್ಪ, ತಪ್ಪಾಯ್ತು, ನಿನ್ನನ್ನು ಗಲಾಟೆಯಲ್ಲಿ ಕರೆಯುವುದನ್ನು ಮರೆತೇಬಿಟ್ಟಿದ್ದೆವು” ಎಂದು ನನ್ನ ಅವ್ವ ಸಮಜಾಯಿಷಿ ನೀಡಲು ಮುಂದಾದಳು. “ಪರವಾಗಿಲ್ಲ ಅಕ್ಕಾ, ಇಂತಹುದೆಲ್ಲಾ ಇದ್ದದ್ದೇ, ಅದರಲ್ಲಿ ತಪ್ಪಾಗುವಂತಹುದು ಏನಿದೆ?” ಎನ್ನುತ್ತಾ ಶಿವಣ್ಣ ಮತ್ತು ಏಕಾಂತಪ್ಪ ಅವರು ಕುಳಿತಿದ್ದ ಜಾಗದಿಂದ ಅವರ ಎದುರುಗಡೆ ಮೂರು ಅಡಿ ದೂರದಲ್ಲಿ ಎಲ್ಲರಿಗಿಂತ ಮುಂದೆ, ಗುಂಪಿಂದ ತುಸು ದೂರವಾಗಿಯೇ ಆಸೀನನಾದ ನೀಲಕಂಠಪ್ಪ. ನೀಲಕಂಠಪ್ಪನ ಕಡೆ ನೋಡಿ ಮುಗುಳ್ನಗೆ ಬೀರಿದ ಶಿವಣ್ಣ ತನ್ನ ಎಂದಿನ ಸುಶ್ರಾವ್ಯ ಕಂಠದಲ್ಲಿ ಪಾರಾಯಣಕ್ಕೆ ಮೊದಲಿಟ್ಟ.
ಪುರಾಣಪಾರಾಯಣದಲ್ಲಿ ಕೆಲಸದ ನೀಲಕಂಠಪ್ಪನಿಗೇನು ಕೆಲಸ? ಎಂದು ನಿಮ್ಮಲ್ಲಿ ಬಹಳಷ್ಟು ಜನಕ್ಕೆ ಆಶ್ಚರ್ಯವಾಗಿರಬೇಕು. ಖಂಡಿತ, ಪುರಾಣ ಉವಾಚದ ಮೊದಲು, ಮಧ್ಯೆ ಮತ್ತು ಅಂತ್ಯದಲ್ಲಿ ಕ್ಷೌರಿಕರು ಬೇಕಾದ ಯಾವ ಜರೂರಿ ಕಾರ್ಯವೂ ನಮ್ಮ ಕಡೆ ಇಲ್ಲ. ಆದರೆ ಕೆಲಸದ ನೀಲಕಂಠಪ್ಪನಿಗೆ ಪುರಾಣ ಪ್ರವಚನದ ಹೊತ್ತು ಮತ್ತೊಂದು ಆತನ ವೃತ್ತಿಗೆ ಸಂಬಂಧಿಸದ ಆದರೆ ಪ್ರವೃತ್ತಿಗೆ ಹತ್ತಿರವಾದ ಗಹನವಾದ ಕೆಲಸವೇ ಇತ್ತು. ಅದೆಂದರೆ, ಅರ್ಥಗಾರರು ಮಾಡುವ ಟೀಕೆ ಟಿಪ್ಪಣಿಗಳಿಗೆ “ಹೂಂ”ಗುಡುವ ಕೆಲಸ. ಜೋರಾಗಿ ತಲೆಯನ್ನು ಅಲ್ಲಾಡಿಸುತ್ತಾ ಅರ್ಥಗಾರರನ್ನು ಮತ್ತು ಪುರಾಣ ವಾಚಿಸುವರನ್ನು ತದೇಕಚಿತ್ತದಿಂದ ನೋಡುತ್ತಾ ಏಕಾಗ್ರತೆಯಿಂದ ಆಲಿಸುತ್ತಾ “ಹೂಂ” ಗುಡುವುದು ಒಂದು ವಿಶೇಷ ಕಲೆಯೇ ಸರಿ. ಈ ಕಲೆ ನೀಲಕಂಠಪ್ಪನಿಗೆ ‘ಕಲಸ್ಯ ಗಂಟಸ್ಯ’ ಎನ್ನುವಷ್ಟರ ಮಟ್ಟಿಗೆ ಕರತಲಾಮಲಕವಾಗಿತ್ತು. ಈ ಕಲೆಯಲ್ಲಿ ನೀಲಕಂಠಪ್ಪ ಎಷ್ಟು ಪಳಗಿದ್ದನು ಎಂದರೆ ಆತ ಮಾಡುತ್ತಿದ್ದ ಕ್ಷೌರಕಾರ್ಯದಲ್ಲಿ ಆತ ಹೆಚ್ಚು ಪರಿಣಿತಿ ಹೊಂದಿದವನೋ ಅಥವಾ ಪುರಾಣಪಾರಾಯಣದ “ಹೂಂ” ಗುಟ್ಟುವುದರಲ್ಲಿ ಹೆಚ್ಚು ಗಟ್ಟಿಗನೋ ಎನ್ನುವುದು ಅನೇಕ ಬಾರಿ ಊರ ದೊಡ್ಡವರ ಮಧ್ಯದ ಚರ್ಚೆಗೆ ಕಾರಣವಾಗಿದ್ದುಂಟು. ನೀಲಕಂಠಪ್ಪನ ಉಪಸ್ಥಿತಿ ಇಲ್ಲದಿದ್ದರೆ ಪುರಾಣ ಪಾರಾಯಣ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಂತೂ ಸತ್ಯ. ಅದು ಶನಿಪುರಾಣವೆ ಇರಲಿ, ದಸರೆಯ ದಿನಗಳಲ್ಲಿ ಹತ್ತುದಿನಗಳ ಪೂರ್ತಿ ನಡೆಯುವ ದೇವಿಪುರಾಣವೆ ಇರಲಿ ನೀಲಕಂಠಪ್ಪನ “ಹೂಂ” ಗುಟ್ಟುವಿಕೆಯ ಹೊರತು ಅಪೂರ್ಣ ಎಂದು ಎಲ್ಲರೂ ಭಾವಿಸಿದ್ದ ಕಾಲ ಘಟ್ಟವದು. ಪುರಾಣಕಥೆಗಳ ಪಾಕಗಳು ಏನೇ ಇದ್ದರೂ ಅವಕ್ಕೆ ನೀಲಕಂಠಪ್ಪನ “ಹೂಂ” ಗುಟ್ಟುವಿಕೆಯ ಒಗ್ಗರಣೆ ಇಲ್ಲದೆ ರುಚಿ ಕಟ್ಟುತ್ತಿರಲಿಲ್ಲ ಮತ್ತು ಸೇವನಾಯೋಗ್ಯವಲ್ಲ ಎನ್ನುವಂತಿತ್ತು. ನೀಲಕಂಠಪ್ಪ ನ ಹೂಂಗುಟ್ಟುವಿಕೆ, ಗಮಕಕಲೆ ಮತ್ತು ಅರ್ಥಗಾರಿಕೆಯಷ್ಟೇ ಪ್ರಮುಖವಾದ ಮೂರನೇ ಆಯಾಮವಾಗಿ ಕೇಳುಗರ ಗಮನ ಸೆಳೆದಿತ್ತು. ನೀಲಕಂಠಪ್ಪ ಇಲ್ಲದೇ ಇದ್ದರೆ ನಾವು ಪುರಾಣ ಓದುವುದಿಲ್ಲ ಎನ್ನುವ ಗಮಕಿಗಳು ಇದ್ದ ಹೊತ್ತು ನಾವು ಅರ್ಥಗಾರಿಕೆಯನ್ನ ನೀಲಕಂಠಪ್ಪನ ಅನುಪಸ್ಥಿತಿಯಲ್ಲಿ ಮಾಡೆವು ಎನ್ನುವಂತಹ ಮತ್ತೊಂದು ಗುಂಪೂ ಇದ್ದದ್ದು ಗಮನಾರ್ಹ. ನೀಲಕಂಠಪ್ಪ ಇಲ್ಲದೇ ಇದ್ದರೆ ಒಗ್ಗರಣೆ, ಉಸ್ಲಿಯ ಸೇವನೆ ನಂತರ ಉಳಿದ ಪುರಾಣ ಪ್ರವಚನಕ್ಕೆ ತಮ್ಮ ಗೊರಕೆ ಧ್ವನಿಗಳ ಹಿನ್ನೆಲೆ ವಾದನವನ್ನು ಧಾರಾಳವಾಗಿ ನೀಡುವ ಒಂದು ಶೋತೃಗಣ “ನೀಲಕಂಠಪ್ಪ ಇಲ್ಲ ನೋಡಿ, ನಿದ್ದೆ ತಡೆಯಲಾಗಲಿಲ್ಲ” ಎನ್ನುವಂತಹ ಸರ್ವರಿಗೂ ಒಪ್ಪಿಗೆಯಾಗುವ ಸಮಜಾಯಿಷಿ ನೀಡುತ್ತಿತ್ತು.
ಆ ಹೊತ್ತಿಗೆ ಸುಮಾರು ೪೫ ವರ್ಷ ಪ್ರಾಯದ ನೀಲಕಂಠಪ್ಪನಿಗೆ ಎದೆಯತ್ತರಕ್ಕೆ ಬೆಳೆದು ನಿಂತ ಮೂವರು ಮಕ್ಕಳಿದ್ದರು. ಸ್ವಲ್ಪ ದಪ್ಪ ಎಂದು ಹೇಳಬಹುದಾದ ಮೈಕಟ್ಟಿನ ನೀಲಕಂಠಪ್ಪ ಸದಾ ಶುಭ್ರ ಶ್ವೇತವರ್ಣಧಾರಿ. ಹಣೆಯ ಮೇಲೆ ಬೀಳುವಂತೆ ಇರುತ್ತಿದ್ದ ದಟ್ಟ ಕಪ್ಪು ಕೂದಲಿನ ರಾಶಿ, ಗೋಧಿ ವರ್ಣದ ಮೈಕಟ್ಟು, ಹಣೆಯ ಮೇಲೆ ದೂರದಿಂದಲೇ ಕಣ್ಣಿಗೆ ರಾಚುವಂತಿದ್ದ ವಿಭೂತಿಪಟ್ಟೆ ಇವು ನೀಲಕಂಠಪ್ಪನ ವ್ಯಕ್ತಿತ್ವದ ಬಗ್ಗೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿರುವ ಅಂಶಗಳು. ಸದಾ ಹಸನ್ಮುಖಿಯಾಗಿರುತ್ತಿದ್ದ ನೀಲಕಂಠಪ್ಪನ ಮಾತುಗಳೂ ಸಹಾ ತುಂಬಾ ಸಿಹಿಯಾದವು. ಎಂದೂ ಯಾರೊಡನೆಯೂ ಕಠಿಣವಾಗಿ ವರ್ತಿಸದ ನೀಲಕಂಠಪ್ಪ ಎಲ್ಲರನ್ನೂ “ಅಣ್ಣಾ, ಅಯ್ಯಾ, ಅಪ್ಪಾ” ಎಂದೇ ಕರೆಯುತ್ತಿದ್ದ.
(ಮುಂದುವರೆಯುವುದು)