ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು

Share

ಶೌಕತ್ ಆಲಿಯ ಮುಗ್ದಮನಸ್ಸಿನ ಸುತ್ತಲ ನೆನಪುಗಳು…

ಅದು ನಾನು ಆರನೇ ತರಗತಿಯಲ್ಲಿದ್ದಾಗಿನ ಸೆಪ್ಟೆಂಬರ್ ತಿಂಗಳ ಒಂದು ದಿನ ಅನ್ನಿಸುತ್ತದೆ, ನಮ್ಮ ಅಂದಿನ ವಿಜ್ಞಾನ ಪಿರಿಯಡ್ ಆ ದಿನದ ಕೊನೇ ಅವಧಿಯಾಗಿತ್ತು. ಪಿರಿಯಡ್ ಮುಗಿಯುದಕ್ಕೆ ಇನ್ನೇನು ಒಂದು ಹದಿನೈದು ನಿಮಿಷ ಬಾಕಿ ಎನ್ನುವಾಗಲೇ ಜವಾನ ತಮ್ಮಯ್ಯ ಒಂದು ಸಣ್ಣಗಾತ್ರದ ನೋಟ್ ಬುಕ್ ನೊಂದಿಗೆ ನಮ್ಮ ತರಗತಿಯ ಒಳಗೆ ಕಾಲಿಟ್ಟ. ತಮ್ಮಯ್ಯನ ನಿರೀಕ್ಷೆಯನ್ನು ನಾವು ದಿನದ ಮೊದಲನೇ ಪಿರಿಯಡ್ ನಿಂದಲೂ ಮಾಡುತ್ತಲೇ ಬಂದಿದ್ದೆವು. ಸಪೂರ ದೇಹದ, ಆರೋಗ್ಯಕರ ಕಂದು ದೇಹವರ್ಣದ, ಮೊಣಕಾಲಿನಿಂದ ತುಸುವೇ ಕೆಳಗೆ ಕಟ್ಟಿದಂತಹ ಬಿಳೀಧೋತಿ ಮತ್ತು ತುಂಬುತೋಳಿನ ಬಿಳೀ ಶರ್ಟ್ ಧರಿಸಿ ಭಕ್ತಪ್ಪ ಮಾಸ್ಟರ್ ಪಾಠ ಮಾಡುತ್ತಿದ್ದ ನಮ್ಮ ಕಕ್ಷೆಯನ್ನು ಪ್ರವೇಶಿಸಿದ ತಮ್ಮಯ್ಯನನ್ನು ನೋಡಿ ಬಾಲಕ ಬಾಲಕಿಯರಲ್ಲಿ ವಿದ್ಯುತ್ ಸಂಚಾರವಾಯಿತು. ಗಣೇಶನ ಹಬ್ಬದ ರಜೆಯ ನಿರೀಕ್ಷೆಯಲ್ಲಿ ಇಡೀ ದಿನ ಕಳೆದಿದ್ದು ಈಗ ಸಾರ್ಥಕವಾಯಿತು ಎನ್ನುವ ಧನ್ಯತಾಭಾವವೊಂದು ಮನಸ್ಸಿನಲ್ಲಿ ಮೂಡಿ ಮರೆಯಾಯಿತು. ತಮ್ಮಯ್ಯ ತಂದ ನೋಟ್ ಬುಕ್ ಗೆ ಸಹಿ ಹಾಕಿ ಆತನನ್ನು ಸಾಗುಹಾಕಿದ ಭಕ್ತಪ್ಪ ಮಾಸ್ಟರ್ ನಮ್ಮ ಕಡೆ ತಿರುಗಿ ಮತ್ತೆ ಮಳೆಚಕ್ರದ ತಮ್ಮ ಪಾಠದ ಸುತ್ತ ಸುತ್ತುವುದನ್ನು ಮುಂದುವರೆಸಿದ್ದುದನ್ನು ಕಂಡ ನಮಗೆ ತೀವ್ರಗತಿಯ ನಿರಾಸೆಯಾಯಿತು. ಎಂದಿನಂತೆ ಎಡಗೈಯಿಂದ ತಮ್ಮ ಪೊದೆಯಂತಹ ಮೀಸೆಯ ಒಂದೊಂದೇ ಕೂದಲನ್ನು ಕೀಳುತ್ತಾ ಮೋಡರಚನೆಯ ಬಗ್ಗೆ ಮೇಷ್ಟ್ರು ವಿವರಿಸುತ್ತಿದ್ದರೆ, ಆ ವೇಳೆಗಾಗಲೇ ಆಯಕಲ್ಲು ಮೂಲೆಯಲ್ಲಿ ದಟ್ಟವಾಗಿ ಕವಿದಿದ್ದ ಮೋಡಗಳು ‘ನಮ್ಮ ಶಾಲೆಯ ಒಟ್ಟಿಗೆ ಭಕ್ತಪ್ಪ ಮೇಷ್ಟ್ರನ್ನೂ ಕೊಚ್ಚಿಕೊಂಡು ಹೋಗುವಂತಹ ಮಳೆ ಕೊಡು ದೇವರೇ’ ಎಂದು ಪ್ರಾರ್ಥಿಸುವ ಸರದಿ ವಿದ್ಯಾರ್ಥಿಗಳಾದ ನಮ್ಮದಾಗಿತ್ತು.

 

ಹೇಳಿ, ಕೇಳಿ ಭಕ್ತಪ್ಪ ಮೇಷ್ಟ್ರು ಬಹಳ ಸ್ಟ್ರಿಕ್ಟ್ ಮೇಷ್ಟ್ರು ಎಂದೇ ವಿದ್ಯಾರ್ಥಿ ಸಮುದಾಯದಲ್ಲಿ ಜನಜನಿತರಾಗಿದ್ದವರು. ಅವರ ತರಗತಿಗಳಲ್ಲಿ ಜೋರಾಗಿ ಉಸಿರಾಡುವುದಕ್ಕೂ ಹೆದರುತ್ತಿದ್ದ ನಮಗೆ ಹಬ್ಬದ ರಜಾದ ಬಗ್ಗೆ ಅವರನ್ನು ಕೇಳುವ ಧೈರ್ಯವಾದರೂ ಎಲ್ಲಿಂದ ಬಂದೀತು? ಹೊರಗೆ ಮಳೆ ಇನ್ನೂ ಶುರುವಾಗಿಲ್ಲದಿದ್ದರೂ ತಮ್ಮ ಪಾಠದಲ್ಲಿ ಮಳೆಯನ್ನು ಸುರಿಸಿ ಮಳೆಚಕ್ರದ ವೃತ್ತಾಂತವನ್ನು ಪೂರ್ಣಗೊಳಿಸಿದ ಮೇಷ್ಟ್ರು ತಟ್ಟನೆ ಅದೇನನ್ನೋ ನೆನಸಿಕೊಂಡವರಂತೆ “ನಾಳೆ ಮತ್ತು ನಾಡಿದ್ದು ಗೌರಿ ಮತ್ತು ಗಣೇಶ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಘೋಷಿಸಲಾಗಿದೆ” ಎನ್ನುವ ಕರ್ಣಾನಂದವಾದ ಉದ್ಘೋಷವನ್ನು ಹೆಚ್ಚೂ ಕಡಿಮೆ ಕರುಣಾಜನಕ ಸ್ಥಿತಿಯನ್ನು ತಲುಪಿದ್ದ ತರಗತಿಯ ವಿದ್ಯಾರ್ಥಿಗಳನ್ನು ಕುರಿತು ನುಡಿಯಲು ಮಕ್ಕಳಲ್ಲಿ ನವಚೇತನವೊಂದರ ಸಂಚಾರವಾಯಿತು. ಇದು ಭಕ್ತಪ್ಪ ಮೇಷ್ಟ್ರ ಕ್ಲಾಸು ಎನ್ನುವುದನ್ನೂ ಮರೆತು ‘ಹೋಯ್’ ಎನ್ನುವ ಅಪ್ರಜ್ಞಾಪೂರ್ವಕವಾದ ಉದ್ಗಾರ ವಿದ್ಯಾರ್ಥಿಗಳ ಬಾಯಲ್ಲಿ ಬರಲು ಅದ್ಯಾವ ಕಾರಣದಿಂದಾಗಿಯೋ ಸಿಟ್ಟನ್ನು ಮುಖದ ಮೇಲೆ ತಾರದ ಭಕ್ತಪ್ಪ ಮಾಸ್ಟರ್ ತಮ್ಮ ಮೀಸೆಯ ಭಾರವನ್ನು ಮತ್ತೊಂದು ಕೂದಲನ್ನು ಕಿತ್ತು ಎಸೆಯುವ ಮೂಲಕ ಸಾಧಿಸಿದರು. ತಮ್ಮಯ್ಯ ಬಾರಿಸುವ ಶಾಲೆಯ ಕಡೆಯ ಘಂಟಾನಿನಾದಕ್ಕೆ ಸರ್ವಸನ್ನದ್ಧತೆಯೊಂದಿಗೆ ಕಿವಿಗಳನ್ನು ನೆಟ್ಟಗಾಗಿಸಿ ಕುಳಿತ ಬಾಲಕ ಬಾಲಕಿಯರು ತಮ್ಮಯ್ಯನ ಗಂಟೆಯ ಸದ್ದಿಗೆ ಅಣೆಕಟ್ಟಿನ ಬಾಗಿಲನ್ನು ತೆರೆದೊಡನೆ ಧುಮ್ಮಿಕ್ಕುವ ಜಲಧಾರೆಯಂತೆ ಹೆಗಲಿಗೆ ಹಾಕಿದ ತಮ್ಮ ಕೈಚೀಲಗಳನ್ನು ಪರಸ್ಪರರಿಗೆ ಬಡಿದುಕೊಳ್ಳುತ್ತಾ ಬಾಗಿಲಿಗೆ ಅಡ್ಡವಾಗಿ ನಿಂತ ಮೇಷ್ಟ್ರನ್ನ ತಳ್ಳುತ್ತಲೇ ಹೊರನುಗ್ಗಿದ್ದು ಭಕ್ತಪ್ಪ ಮೇಷ್ಟ್ರ ಮತ್ತೊಂದು ಮೀಸೆಯ ಕೇಶಹರಣದ ಮೂಲಕಾರಣವಾಯಿತೇ ಎಂದು ಹಿಂದಿರುಗಿ ನೋಡುವ ವ್ಯವಧಾನವಿಲ್ಲದ ನಾನು ಆ ಹೊತ್ತಿಗಾಗಲೇ ಸ್ಕೂಲಿನ ಮೆಟ್ಟಲುಗಳನ್ನು ಜಿಗಿದು ಟಾರ್ ರಸ್ತೆಯ ಮೇಲಿದ್ದ ಗೆಳೆಯ ಹನುಮಂತಪ್ಪನನ್ನು ಸೇರುವ ಕಾತುರದಿಂದ ನನ್ನ ಮಟ್ಟಿಗೆ ತುಸುಕಷ್ಟವೇ ಆದ ಮೆಟ್ಟಿಲುಗಳ ಉಲ್ಲಂಘನವನ್ನ ಮಾಡುವ ತಯಾರಿಯಲ್ಲಿದ್ದೆ.

 

ಓಡುತ್ತಲೇ ಕಲ್ಲಪ್ಪ ದೇವಸ್ಥಾನದ ಮುಂದೆ ಬಂದವನಿಗೆ ಅಲ್ಲಿ ಈ ಮೊದಲೇ ಗುಂಪಾಗಿ ನಿಂತ ನಮ್ಮ ಸೀನಿಯರ್ ವಿದ್ಯಾರ್ಥಿಗಳ ದರ್ಶನವಾಯಿತು. ಸುಮಾರು ಹತ್ತುಹದಿನೈದರ ಸಂಖ್ಯೆಯಲ್ಲಿದ್ದ ಹುಡುಗರ ಮಧ್ಯೆ ಖಾಕಿ ನಿಕ್ಕರ್ ಮತ್ತು ಬಿಳಿಶರ್ಟ್ ಧರಿಸಿ ನಿಂತ ಸ್ಫುರದ್ರೂಪಿ ಯುವಕನೊಬ್ಬ ಗೋಚರಿಸಿದ. ತನ್ನ ಸುತ್ತ ಆವರಿಸಿದ್ದ ಹುಡುಗರಿಗಿಂತ ಒಂದು ಗೇಣೆತ್ತರ ಉದ್ದವಾಗಿದ್ದ ಯುವಕನನ್ನು ದೂರದಿಂದಲೇ ಅನಾಯಾಸವಾಗಿ ನೋಡಬಹುದಿತ್ತು. ಈತನನ್ನು ಈ ಮೊದಲು ನಾನು ಊರಲ್ಲಿ ಎಲ್ಲೂ ಕಂಡಿರಲಿಲ್ಲವಾಗಿ ಬಾಲ್ಯಸಹಜ ಕುತೂಹಲ ಪೀಡಿತನಾಗಿ ಗುಂಪನ್ನು ಪ್ರಯಾಸದಿಂದ ಸೀಳಿ ಯುವಕನಿಗೆ ಒಂದು ಗಜದ ಅಂತರದಲ್ಲಿ ಮುಖಾಮುಖಿಯಾದೆ. ನಾನು ಹೋದ ವಾರ ಜಯವಾಣಿ ಟೂರಿಂಗ್ ಟಾಕೀಸ್ ನಲ್ಲಿ ನೋಡಿದ “ಎಡಕಲ್ಲು ಗುಡ್ಡದ ಮೇಲೆ” ಚಲನಚಿತ್ರದ ನಾಯಕನು ನಮ್ಮೂರಿಗೆ ಏಕೆ ಬಂದ? ಎನ್ನುವ ಸಂಶಯವನ್ನು ಒಂದರೆಘಳಿಗೆ ನನ್ನಲ್ಲಿ ಹುಟ್ಟು ಹಾಕಿದ ಯುವಕನ ಮುಖವನ್ನೇ ದಿಟ್ಟಿಸಿ ನೋಡತೊಡಗಿದೆ.

ಸುಮಾರು ಹದಿನಾರು ವರ್ಷಗಳ ಪ್ರಾಯದ ನವಯುವಕ ನಮ್ಮೂರಿನಲ್ಲಿ ಅಪರೂಪವೇ ಎಂದು ಹೇಳಬಹುದಾಗಿದ್ದಷ್ಟು ಕೆಂಪುಮಿಶ್ರಿತ ಬಿಳಿ ಬಣ್ಣದ ದೇಹವರ್ಣದಿಂದ ಕಂಗೊಳಿಸುತ್ತಿದ್ದ. ಕಡುಕಪ್ಪು, ತುಸು ಗುಂಗರುಗುಂಗರಾದ, ನೀಟಾಗಿ ಬೈತಲೆ ಬರುವಂತೆ ಎಣ್ಣೆ ಹಾಕಿ ಬಾಚಿದ ಒಪ್ಪವಾಗಿರಿಸಿದ್ದ ತಲೆಗೂದಲು, ಉದ್ದ ಗಿಣಿಮೂಗು, ಮುಳುಗುತ್ತಿದ್ದ ಸೂರ್ಯನನ್ನು ಅಣಕಿಸುವಂತೆ ಪ್ರಜ್ವಲವಾಗಿ ಬೆಳಗುತ್ತಿದ್ದ ದೀಪದಂತಹ ಜೋಡಿ ಕಣ್ಣುಗಳು, ಶುಭ್ರ ಶ್ವೇತವರ್ಣದ ಮೋಟು ತೋಳಿನ ಇನ್ ಶರ್ಟ್ ಮಾಡಿದ ದೊಗಳೆ ಅಂಗಿ, ಮೊಣಕಾಲನ್ನು ಮುಟ್ಟುವ ಹಾಗಿದ್ದ ಜೋಳುಜೋಳಾದ ದೊಗಳೆ ಖಾಕಿಚಡ್ಡಿ, ತಾನಿಲ್ಲದಿದ್ದರೆ ಚೆಡ್ಡಿ ನಿನ್ನ ಸೊಂಟದ ಮೇಲೆ ನಿಲ್ಲರಾರದು ಎನ್ನುವ ಬಿಂಕದಲ್ಲಿ ಆತನ ಕಟಿಗೆ ಚಡ್ಡಿಯನ್ನು ಬಿಗಿದಿಟ್ಟಿದ್ದ ನಾಲ್ಕು ಬೊಟ್ಟುಗಳ ಅಗಲವಿದ್ದ ಚರ್ಮದ ಕಡುಕಪ್ಪು ಬೆಲ್ಟ್, ಕಾಲಿಗೆ ಹಾಕಿದ್ದ ನೀಲಿ ಕಲರ್ ನ ಕ್ಯಾನ್ವಾಸ್ ಶೂಸ್ ಇವುಗಳನ್ನು ನೋಡಿದ ನನಗೆ ಯಾವುದೋ ಚಲನಚಿತ್ರ ತಂಡವೊಂದು ಚಿತ್ರೀಕರಣಕ್ಕಾಗಿ ನಮ್ಮೂರಿಗೆ ಬಂದಿದೆ ಎನಿಸಿತು. ಜೋರಾಗಿ ನಗುತ್ತಲೇ ಥಳಾಸದ ತಿಪ್ಪೇಶಿಯ ಜೊತೆ ಮಾತನಾಡುತ್ತಿದ್ದ ಯುವಕನ ಮೈಮೇಲೆ ನನ್ನನ್ನು ನನ್ನ ಹಿಂದೆ ನಿಂತಿದ್ದ ಹುಡುಗರ ಪೈಕಿ ಕೆಲವರು ತಳ್ಳಲು ನಾನು ಆಯತಪ್ಪಿ ಯುವಕನ ಮೇಲೆ ಬಿದ್ದೆ. ತನ್ನ ಮೈಮೇಲೆ ಹಲ್ಲಿ ಬಿದ್ದಂತೆ ಹೌಹಾರಿದ ಯುವಕ ಅನಿತರಲ್ಲಿಯೇ ನೆಲಕ್ಕೆ ಬೀಳಲಿದ್ದ ನನ್ನನ್ನು ಸಂಭಾಳಿಸಿ ಹಿಡಿದ. ಅಷ್ಟು ಹೊತ್ತಿಗೆ ಯುವಕನ ಬೆಲ್ಟ್ ಕೀಳಲು ಮಂಡಪ್ಪನವರ ನಾಗ ಮುಂದಾಗಿದ್ದ. ಕುರುಬರ ಪರಮೇಶಿ ಯುವಕನ ತಲೆಯನ್ನು ಮೊಟುಕುವ ಸಲುವಾದ ತನ್ನ ತಯಾರಿಯ ಅಂತಿಮ ಚರಣದಲ್ಲಿದ್ದ. ಇದನ್ನೆಲ್ಲವನ್ನೂ ನೋಡಿದ ನಾನು ಒಂದು ಕ್ಷಣ ದಿಗ್ಮೂಢನಾದೆ. ತನ್ನ ಮೇಲೆ ಆಗುತ್ತಿದ್ದ ವಿವಿಧ ರೀತಿಯ ಹಲ್ಲೆಗಳಿಂದ ಬಚಾವ್ ಆಗಲು ಯುವಕ ಭಾರೀ ಕಸರತ್ತನ್ನೇ ನಡೆಸಿದ್ದರೂ ಆತನ ಮುಖದ ಮೇಲಿನ ಮಂದಹಾಸ ಮಾತ್ರ ಒಂದಿನಿತೂ ಮಾಸಿರಲಿಲ್ಲ. ಹೀಗೆಯೇ ನಾಲ್ಕೈದು ನಿಮಿಷಗಳ ಕಾಲ ಯುವಕನಿಗೆ ತರಹತರಹದ ಕೀಟಲೆಗಳನ್ನ ಕೊಟ್ಟ ಗುಂಪಿನ ಕಪಿಚೇಷ್ಟೆಗಳಿಗೆ ಪೂರ್ಣವಿರಾಮ ಬಿದ್ದಿದ್ದು ತನ್ನ ಮನೆಗೆ ಹೋಗುತ್ತಿದ್ದ ಗಣೇಕಲ್ ಶಿವಶಂಕರಿಯ ಆಗಮನದಿಂದ. ಹುಡುಗರನ್ನು ಗದರಿಸಿ ಚದುರಿಸಿದ ಶಿವಶಂಕರಿ ಯುವಕನನ್ನು ಕುರಿತು ತನ್ನ ಮನೆಗೆ ಹಿಂತಿರುಗುವಂತೆ ನಯವಾಗಿ ಪ್ರಾರ್ಥಸಿದ. ಶಿವಶಂಕರಿ ಒತ್ತಾಯಕ್ಕೆ ಸೂಕ್ತರೀತಿಯಲ್ಲಿ ಸ್ಪಂದಿಸದ ಯುವಕ “ಮನೆ, ಮನೆ” ಎಂದಷ್ಟೇ ತೊದಲಲು ಶಕ್ತನಾದ.

ಯುವಕನ ತೊದಲುವಿಕೆ ಮತ್ತು ಸ್ಪಷ್ಟವಾಗಿ ಮಾತನಾಡಲು ಆತ ಪಡುತ್ತಿದ್ದ ಕಷ್ಟವನ್ನು ಕಂಡವನು ‘ಅಣ್ಣಾ, ನಿನ್ನ ಹೆಸರೇನು?’ ಎಂದು ಯುವಕನನ್ನು ಪ್ರಶ್ನಿಸಿದೆ. ಎದುರಿಗೆ ನಿಂತು ನಾನು ಪ್ರಶ್ನೆ ಮಾಡುವ ಹೊತ್ತೂ ಅತ್ತಿತ್ತ ತನ್ನ ನೀಳವಾದ ಕತ್ತನ್ನು ಒಂಟೆಯಂತೆ ತಿರುಗಿಸಿ ತದನಂತರ ನನ್ನ ಕಡೆಗೆ ಕಣ್ಣುಗಳನ್ನು ಕೊಂಚ ಕಿರಿದು ಮಾಡಿಕೊಂಡು ನಸುನಗುತ್ತಲೆ ದೃಷ್ಟಿ ಬೀರಿದ ಯುವಕ ‘ಶೋಕತ್, ಶೋಕಟ್’ ಎನ್ನುವ ಅಸ್ಪಷ್ಟ ಧ್ವನಿಯನ್ನು ಹೊರಡಿಸಿದ. ಕೆಲವು ಕ್ಷಣ ಯುವಕ ಏನು ಹೇಳುತ್ತಿದ್ದಾನೆ ಎನ್ನುವುದನ್ನ ಅರಿಯಲಾಗದೆ ನಿಂತ ನನ್ನನ್ನು ‘ಶೌಕತ್ ಘರ್ ಜಾವೋ’ ಎನ್ನುವ ಗಡುಸು ದನಿಯೊಂದು ಎಚ್ಚರಿಸಿತು. ದನಿ ಬಂದ ಕಡೆಗೆ ತಿರುಗಿದವನಿಗೆ ಪೊಲೀಸ್ ದಫೇದಾರ್ ರುಸ್ತುಂ ಕಾಣಿಸಿದರು. “ಇಲ್ಲಿ ನಿಂತು ಏನು ಮಾಡುತ್ತಿದ್ದೀಯಾ? ಮನೆಗೆ ಹೋಗು, ಆಮ್ಮಿಜಾನ್ ನಿನ್ನ ಹಾದಿಯನ್ನು ಕಾಯುತ್ತಿರುತ್ತಾರೆ” ಎಂದು ಗರ್ಜಿಸಿ ಯುವಕನ ಉತ್ತರಕ್ಕೂ ಕಾಯದೆ ಇನ್ನೂ ಹತ್ತಾರರ ಸಂಖ್ಯೆಯಲ್ಲಿ ಜಮಾಯಿಸಿದ್ದ ನಮ್ಮ ಗುಂಪಿನ ಕಡೆ ಒಂದು ಸಿಟ್ಟು ಮಿಶ್ರಿತ ನೋಟವನ್ನು ಹರಿಸಿ ಪೊಲೀಸ್ ಠಾಣೆಯತ್ತ ರುಸ್ತುಂ ಸಾಹೇಬರು ದಾಪುಗಾಲು ಹಾಕತೊಡಗಿದರು. ಆವಾಗಲೇ ನನಗೆ ಅರಿವಾಗಿದ್ದು ಯುವಕನ ಹೆಸರು “ಶೌಕತ್” ಎಂದು. ಈ ಹೊತ್ತಿಗಾಗಲೇ ನೆತ್ತಿಯ ಮೇಲೆ ಬಂದಿದ್ದ ಕಪ್ಪುಮೋಡಗಳು ಹನಿ ಹಾಕುವುದಕ್ಕೆ ಮೊದಲಾಗಲು ಮಳೆಯಲ್ಲಿ ನೆನೆದರೆ ಅವ್ವನ ಕೈಯಲ್ಲಿ ಶೀತ ಸಮಾಪ್ತಿಯಾಗುವವರೆಗೂ ಮೂರೂ ಹೊತ್ತು ಉಗಿಸಿಕೊಳ್ಳಬೇಕಾಗುತ್ತದೆ ಎನ್ನುವ ಧಾವಂತದಲ್ಲಿ ಮನೆಯ ಕಡೆಗೆ ಬರ್ಕೀಸ್ ಆದೆ.

ಊರಲ್ಲಿ ನಮ್ಮ ಮನೆ ಇದ್ದದ್ದು ಬಸ್ ಸ್ಟಾಂಡ್ ನಲ್ಲಿ. ಬಸ್ ಸ್ಟಾಂಡ್ ಆ ಹೊತ್ತಿಗೆ ಊರಿನ ಸಕಲ ಚಟುವಟಿಕೆಗಳ ಕೇಂದ್ರತಾಣ. ಊರಿಗೆ ಬಂದವಳು ಹೇಗೆ ನೀರಿಗೆ ಬಾರದೇ ಇರುತ್ತಾಳೆಯೋ ಥೇಟ್ ಹಾಗೆಯೇ ಬಸ್ ಸ್ಟಾಂಡ್ ಕಡೆ ದಿನಕ್ಕೆ ಒಮ್ಮೆಯಾದರೂ ಸುಳಿಯದೇ ಇರುವ ಗಂಡು ಹೈಕುಳೇ ನಮ್ಮ ಊರಲ್ಲಿ ಇರಲಿಲ್ಲ ಅನ್ನಬಹುದು. ಕಾಲಹರಣ ಮಾಡುವುದಕ್ಕಾಗಿ ಊರಿನ ನಿರುದ್ಯೋಗಿ ಯುವಕರು ನಮ್ಮ ಮನೆಯ ಪಕ್ಕದಲ್ಲಿ ಇದ್ದ ಕಲ್ಲುಹಾಸಿನ ಕಟ್ಟೆಯ ಮೇಲೆ ಕುಳಿತು ಗಂಟೆಗಟ್ಟಲೆ ಕಾಡುಹರಟೆ ಮಾಡುತ್ತಿದ್ದರು. ಆಗಾಗ ಶೌಕತ್ ನನ್ನು ನಾನು ಈ ಗುಂಪಿನಲ್ಲಿ ಕಾಣಲಾರಂಭಿಸಿದೆ. ಊರಿನ ಪೊಲೀಸ್ ಠಾಣೆಗೆ ಮುಖ್ಯಪೇದೆಯಾಗಿ ಕೇವಲ ತಿಂಗಳ ಹಿಂದೆಯಷ್ಟೇ ನಾಯಕನಹಟ್ಟಿ ಪೊಲೀಸ್ ಸ್ಟೇಶನ್ ನಿಂದ ವರ್ಗಾವಣೆಯಾಗಿ ಬಂದ ರುಸ್ತುಂ ಸಾಹೇಬರ ಏಕೈಕ ಪುತ್ರರತ್ನ ಈ ಶೌಕತ್ ಆಲಿ ಎನ್ನುವ ವಿಷಯವನ್ನು ಆತನ ಮನೆಯ ಪಕ್ಕದಲ್ಲಿದ್ದ ನನ್ನ ಖಾಸಾ ಗೆಳೆಯ ಪಂದ್ರುಪಲ್ಲಿ ಕೃಷ್ಣಾರೆಡ್ಡಿಯ ಮುಖಾಂತರ ಅರಿತವನಾದೆ. ಅತ್ಯಂತ ಆರೋಗ್ಯಕರ, ಸ್ಫುರದ್ರೂಪಿ ಶೌಕತ್ ಆಲಿಯ ಶರೀರದಲ್ಲಿ ಅಷ್ಟೇ ಸುಂದರವಾದ ಬುದ್ದಿಯನ್ನು ಕೊಡುವುದರಲ್ಲಿ ದೇವರು ಎಡವಿದ್ದ ಎಂದು ನನಗೆ ಅರಿವಾಗಲು ಬಹಳ ಸಮಯಬೇಕಾಗಲಿಲ್ಲ. ದೇಹ ಹದಿನಾರರ ಅಂಚನ್ನು ದಾಟಿದ್ದರೂ ಶೌಕತ್ ನ ಬುದ್ದಿಮತ್ತೆ ಮಾತ್ರ ಮೂರ್ನಾಲ್ಕು ವರ್ಷದ ಮಗುವಿನದೇ ಆಗಿತ್ತು. ತನ್ನ ರೂಪದಿಂದ, ನಸುನಗೆಯಿಂದ, ತೊದಲು ಮಾತುಗಳಿಂದ ಊರ ಹುಡುಗರಿಗೆ, ಯುವಕರಿಗೆ ಶೌಕತ್ ಒಂದು ಆಟಿಕೆಯ ವಸ್ತುವಾಗಲಿಕ್ಕೆ ಬಹಳ ದಿನಗಳು ಬೇಕಾಗಲಿಲ್ಲ. ಶೌಕತ್ ಎಲ್ಲಿಯೇ ಹೋದರೂ ಹತ್ತಿಪ್ಪತ್ತರ ಸಂಖ್ಯೆಯ ಬಾಲಕರು ಆತನನ್ನು ಹಿಂಬಾಲಿಸುತ್ತಿದ್ದದ್ದು ನೋಡುಗರ ಮಟ್ಟಿಗೆ ಸಾಮಾನ್ಯ ವಿಷಯವೇ ಆಗಿಹೋಯಿತು. ಶುರುವಿನಲ್ಲಿ ಇದನ್ನು ನೋಡಿ ರುಸ್ತುಂ ಸಾಹೇಬರು ಮತ್ತು ಅವರ ಬೇಗಂಗೆ ತೀವ್ರತರನಾದ ಮುಜುಗರ ಉಂಟಾಗಿ ಶೌಕತ್ ನನ್ನು ಮನೆಯಿಂದ ಹೊರಗೆ ಕಾಲಿಡದಂತೆ ಪ್ರತಿಬಂಧ ಹೇರಿದ್ದರೂ ಶೌಕತ್ ಮನೆಗೇ ಬಂದು ಆತನನ್ನು ಹೊರಗೆ ಬರುವಂತೆ ಕರೆಯುತ್ತಿದ್ದ ಗೆಳೆಯರ ಬಳಗ ದಿನೇದಿನೇ ಹೆಚ್ಚಾದ ಕಾರಣ ಮತ್ತು ಊರಿನ ಹುಡುಗರಿಂದ ಶೌಕತ್ ಗೆ ಏನೂ ಅಪಾಯವಿಲ್ಲ ಎನ್ನುವುದನ್ನು ಮನಗಂಡ ನಂತರ ಆತನ ಮಾತಾಪಿತೃಗಳು ನಿಧಾನವಾಗಿ ಶೌಕತ್ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿ ಶೌಕತ್ ಊರ ಹುಡುಗರ ಜೊತೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತು.

ಬೆಳಿಗ್ಗೆ ಶೌಕತ್ ಕಂಡಾಗ “ಏನು ತಿಂಡಿ?” ಎಂದು ಆತನನ್ನು ಕೇವಲ ಚಿಣ್ಣರಷ್ಟೆ ಪ್ರಶ್ನಿಸದೆ ಕುವ್ವಾಟದ ಮೂಡಿನಲ್ಲಿ ಇರುತ್ತಿದ್ದ ಊರಯುವಕರೂ ಕೇಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. “ಇಪ್ಪಿಟ್ಟು, ಇಪ್ಪಿಟ್ಟು” ಎಂದು ಸದಾ ಕಾಲವೂ ಈ ಪ್ರಶ್ನೆಗೆ ತನ್ನ ಎರಡೂ ಕೈಗಳಿಂದ ದೊಗಳೆ ನಿಕ್ಕರ್ ಏರಿಸುತ್ತಾ ಒಂದೇ ರೀತಿಯಲ್ಲಿ ಉತ್ತರಿಸುತ್ತಿದ್ದ ಶೌಕತ್ ನ ಮುಗ್ದ ನುಡಿಗಳು ಸವಾಲು ಎಸೆದವರ ಮನಗಳನ್ನು ಗೆಲ್ಲುತ್ತಿದ್ದವು. ನಮ್ಮ ಊರಿಗೆ ಶೌಕತ್ ನ ಆಗಮನದ ಆರು ತಿಂಗಳ ಒಳಗೇ ಊರಿನ ಬಹುತೇಕ ಚಿಣ್ಣರಿಗೆ ಆತ ಬಿಡಲಾಗದ ಸ್ನೇಹಿತನ ರೂಪದಲ್ಲಿ ಕಾಡತೊಡಗಿದ. ಶೌಕತ್ ನ ಹಿಂದೆ ದಿನದ ಹತ್ತಾರು ಗಂಟೆಗಳ ಕಾಲ ಸುತ್ತುವ ಪೋರರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಸದಾ ತನ್ನ ದಂಡಿನೊಂದಿಗೇ ಪ್ರತ್ಯಕ್ಷವಾಗುತ್ತಿದ್ದ ಶೌಕತ್ ಊರಿನ ಎಲ್ಲಾ ಸುಖದುಃಖಗಳಲ್ಲಿಯೂ ತನ್ನ ತಂಡದೊಟ್ಟಿಗೆ ತಪ್ಪದೇ ಹಾಜರಾಗುತ್ತಿದ್ದ. ಅದು ಮದುವೆಯ ಸಮಾರಂಭವೇ ಇರಲಿ, ತಿಥಿಯೂಟವೆ ಇರಲಿ, ನಾಮಕರಣದಂತಹ ಮತ್ಯಾವುದೇ ಸಮಾರಂಭ ಇರಲಿ, ದೇವತಾಕಾರ್ಯಗಳೇ ಆಗಿರಲಿ ಶೌಕತ್ ಮತ್ತು ಆತನ ತಂಡದ ಹಾಜರಿ ಇದ್ದೇ ಇರುತ್ತದೆ ಎನ್ನುವ ಮಟ್ಟಿಗೆ ಆತ ಊರ ಜನರಲ್ಲಿ ಒಂದಾಗಿ ಬೆರೆತ.

ಊರ ಆಂಜನೇಯ ಜಾತ್ರೆಯ ತೇರಿನ ಮಿಣಿಹಗ್ಗಕ್ಕೆ ಕೈಹಾಕಿ ತೇರನ್ನು ಎಳೆದ ಶೌಕತ್ ತಂಡ ಕಲ್ಲಪ್ಪದೇವರ ತೇರನ್ನೂ ಅದೇ ಮಟ್ಟದ ಭಕ್ತಿಭಯದಿಂದ ಎಳೆದಿತ್ತು. ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರತೀ ಸೋಮವಾರ ನಡೆಯುವ ಊರ ಶೆಟ್ಟರ ಕುಟುಂಬಗಳ ‘ಗುಗ್ಗರಿಸೇವೆ’ಯಲ್ಲಿ ಶೌಕತ್ ಹಾಜರಿ ಎಷ್ಟು ಕಡ್ಡಾಯವಾಗಿತ್ತೋ ಅದೇ ರೀತಿಯಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ‘ಮಂಡಕ್ಕಿಸೇವೆ’ಯ ಸಮಯದಲ್ಲೂ ಕಾಣಸಿಗುತ್ತಿತ್ತು. ಕಲ್ಲಪ್ಪದೇವರಿಗೆ ಸೋಮವಾರ ನಡೆಯುವ ನಂದಿಧ್ವಜ ಸೇವೆಗೆ ಶೌಕತ್ ಮುಂದಾದಲ್ಲಿ ಪ್ರತೀ ಮಂಗಳವಾರ ಮಾರಮ್ಮನ ಪೂಜೆಯ ವೇಳೆ ದೇವಸ್ಥಾನದ ಡೋಲನ್ನು ಒಮ್ಮೆಯಾದರೂ ಹೊಡೆಯದೆ ಬಿಡುತ್ತಿರಲಿಲ್ಲ. ಕೇವಲ ಬೆರಳೆಣಿಕೆಯಷ್ಟಿದ್ದ ಊರ ಮುಸ್ಲಿಂಕುಟುಂಬಗಳ ಹಬ್ಬಗಳ ಆಚರಣೆಯಲ್ಲಿಯೂ ಶೌಕತ್ ಮೊದಲಿಗನಾಗಿರುತ್ತಿದ್ದ. ಮೈಗೆ ಹುಲಿ ಬಣ್ಣವನ್ನು ಹೊಡೆದುಕೊಂಡು ಪೀರ್ ಹಬ್ಬವನ್ನು ಆಚರಿಸುತ್ತಿದ್ದ ಶೌಕತ್ ಊರಲ್ಲಿ ಇದ್ದ ಒಂದೇ ಮಸೀದಿಯಲ್ಲಿ ಕೆಂಡ ತುಳಿಯುವ ಅವಕಾಶದಿಂದ ಎಂದೂ ವಂಚಿತನಾಗಿರಲಿಲ್ಲ. ಊರಿನ ಪಡ್ಡೆಹುಡುಗರು ಸೇರಿ ಕಾಮಣ್ಣನನ್ನು ಸುಡುವ ಹಬ್ಬದ ಆಚರಣೆಯಲ್ಲಿ ಶೌಕತ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದ. ಹೀಗೆ ಜಾತಿ,ಮತಬೇಧಗಳಿಲ್ಲದೆ ಊರ ಎಲ್ಲಾ ಸುಖದುಃಖಗಳ ಸಂದರ್ಭದಲ್ಲಿ ತಪ್ಪದೇ ಹಾಜರಾತಿ ನೀಡುತ್ತಿದ್ದ ಶೌಕತ್ ಬಹಳ ಬೇಗ ಊರಿನ ಒಂದು ಅವಿಭಾಜ್ಯ ಅಂಗವೇ ಆಗಿಹೋದ. ದಿನಂಪ್ರತಿ ನೀಟಾಗಿ ಡ್ರೆಸ್ ಮಾಡಿಕೊಂಡು ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಬೀಳುತ್ತಿದ್ದ ಶೌಕತ್ ಊರ ಹುಡುಗರ ಜೊತೆ ಊರ ಯಶಸ್ವಿ ಪರ್ಯಟನೆಯನ್ನು ಹಲವುಬಾರಿ ಪೂರ್ಣಗೊಳಿಸಿ ರಾತ್ರಿ ಎಂಟರ ವೇಳೆಗೆ ತನ್ನ ಗೂಡನ್ನು ಸೇರಿಕೊಳ್ಳುತ್ತಿದ್ದ. ಶೌಕತ್ ನ ವಿದ್ಯಾಭ್ಯಾಸದ ಬಗ್ಗೆ ತಲೆಕೆಡಿಸಿಕೊಂಡಂತೆ ತೋರದ ರುಸ್ತುಂ ದಂಪತಿಗಳು ಊರಹುಡುಗರ ಮಧ್ಯೆ ಖುಷಿ ಖುಷಿಯಿಂದ ಇರುತ್ತಿದ್ದ ಮಗನನ್ನು ನೋಡಿ ಅಲ್ಲಾಹುವಿಗೆ ನೂರು ಬಾರಿ ಕೃತಜ್ಞತೆ ಸಲ್ಲಿಸುತ್ತಿದ್ದರು.

ನನಗರಿವಿಲ್ಲದೆ ನಾನೂ ಶೌಕತ್ ನ ಅನುಯಾಯಿಗಳಲ್ಲಿ ಒಬ್ಬನಾಗಿ ಪರಿವರ್ತನೆಯಾಗಿದ್ದೆ. ರಜಾದಿನಗಳಲ್ಲಿ ಬೆಳಿಗ್ಗೆ ಒಂಬತ್ತರ ಸುಮಾರಿಗೆ ಶೌಕತ್ ತಂಡವನ್ನು ಸೇರಿಕೊಂಡವನು ಮನೆಗೆ ಹಿಂತಿರುಗುತ್ತಿದ್ದದ್ದು ಸಂಜೆ ಆರರ ನಂತರವೇ. ಶೌಕತ್ ತಂಡದಲ್ಲಿ ನನ್ನ ಬಹುತೇಕ ಗೆಳೆಯರು ಅಂದರೆ ಚಿದಾನಂದ, ಜಕಣಾಚಾರಿ, ನಾಗರಾಜ, ರುದ್ರಮುನಿ, ಧನಂಜಯ, ತಿಪ್ಪೇಸ್ವಾಮಿ, ಸತ್ಯಾನಂದ ಮುಂತಾದವರು ಶಾಮೀಲಾಗಿದ್ದುದರಿಂದ ಸಹಜವಾಗಿಯೇ ನಾನೂ ಶೌಕತ್ ಒಟ್ಟಿಗೇ ನನ್ನ ಬಹುತೇಕ ವಾರಾಂತ್ಯದ ಮತ್ತು ಬೇಸಗೆ, ಚಳಿಗಾಲದ ರಜಾದಿನಗಳನ್ನು ಕಳೆಯಲಿಕ್ಕೆ ಮೊದಲು ಮಾಡಿದೆ. ಸಾಮೀಲಿನ ನಮ್ಮ ಮಾಮೂಲು ಅಡ್ಡೆಯನ್ನು ನಾವು ಮರೆತೇಬಿಟ್ಟಿದ್ದೆವು. ಬೆಳಿಗ್ಗೆ ಮನೆಗಳಲ್ಲಿ ಊಟ ಮಾಡಿ ಊರು ಸುತ್ತಲು ಹೊರಟರೆ ಮಧ್ಯಾಹ್ನದ ವೇಳೆಗೆ ಅದ್ಯಾವ ಮಾಯೆಯಿಂದಲೋ ಊರ ಯಾರ ಮನೆಯಲ್ಲಿಯಾದರೂ ಅನ್ನಪೂರ್ಣೇಶ್ವರಿ ಪ್ರತ್ಯಕ್ಷಳಾಗಿ ಒಂದಿಷ್ಟು ಕವಳವನ್ನು ಅನುಗ್ರಹಿಸುತ್ತಿದ್ದಳು. ಹೊಟ್ಟೆಯ ಚೀಲವನ್ನು ತುಂಬಿಸಿಕೊಂಡ ಶೌಕತ್ ತಂಡ ಮತ್ತೆ ತನ್ನ ದಿಗ್ವಿಜಯದ ಊರ ಪರ್ಯಟನೆಯಲ್ಲಿ ತೊಡಗಿಸಿಕೊಳ್ಳುತಿತ್ತು.

ನಮ್ಮ ಊರಿಗೆ ರುಸ್ತುಂ ಸಾಹೇಬರು ಬಂದು ವರ್ಷ ಒಪ್ಪತ್ತು ಕಳೆಯುವುದರ ಒಳಗಾಗಿ ಅವರಿಗೆ ಹೊಸದುರ್ಗದ ಜಾನಕಲ್ಲು ಎನ್ನುವ ಊರಿಗೆ ಇನ್ಸ್ಪೆಕ್ಟರ್ ಬಡ್ತಿಯ ಮೇಲೆ ವರ್ಗಾವಣೆಯಾಯಿತು. ಈ ಹೊತ್ತಿಗಾಗಲೇ ತಮ್ಮ ಒಳ್ಳೆಯ ನಡತೆ ಮತ್ತು ಸ್ವಭಾವದಿಂದ ಊರ ಜನರ ಮನಸ್ಸನ್ನು ಗೆಲ್ಲುವಲ್ಲಿ ರುಸ್ತುಂ ಸಾಹೇಬರು ಸಫಲರಾಗಿದ್ದರು. ಪ್ರಾಯಶಃ ಊರ ಎಲ್ಲಾ ವರ್ಗದ ಜನರ ಜೊತೆ ಹಮ್ಮುಬಿಮ್ಮುಗಳಿಲ್ಲದೆ, ತೋರುಗಾಣಿಕೆ ಇಲ್ಲದೆ ಬೆರೆಯುತ್ತಿದ್ದ ರುಸ್ತುಂ ಗುಣ ಅವರ ಮಗ ಶೌಕತ್ ಗೆ ಬಳುವಳಿಯಾಗಿ ಬಂದಿರಬೇಕು ಎನ್ನಿಸುತ್ತದೆ. ರುಸ್ತುಂ ವರ್ಗಾವಣೆಯಿಂದ ಬಹುತೇಕ ಊರಜನ ನೊಂದಿದ್ದರೆ ಹುಡುಗರಾದ ನಮಗೆ ಶೌಕತ್ ನಮ್ಮಿಂದ ದೂರವಾಗುವ ವಿಷಯ ಬೇರೆಯದೇ ತೆರನಾದ ನೋವನ್ನು ಉಂಟುಮಾಡಿತ್ತು. ಈ ವೇಳೆಗಾಗಲೇ ಶೌಕತ್ ನನ್ನ ವಾರಿಗೆಯ ಹಲವು ಮಕ್ಕಳಿಗೆ ಹಿರಿಯಣ್ಣನಾಗಿ ಹೋಗಿದ್ದ. ತಂದೆ ಧಾರಾಳವಾಗಿ ಕೊಡುತ್ತಿದ್ದ ಹಣವನ್ನು ಸ್ನೇಹಿತರಾದ ನಮ್ಮ ಮೇಲೆ ಖರ್ಚುಮಾಡಿ ಖುಷಿಪಡುತ್ತಿದ್ದ ಮಗುವಿನ ಮನಸ್ಸಿನ ಶೌಕತ್ ಗೆ ಹಣದ ಮೌಲ್ಯ ತಿಳಿಯುತ್ತಿರಲಿಲ್ಲ. ತಂದೆ ಕೊಟ್ಟ ಹಣವನ್ನು ಜೇಬಿನಿಂದ ತೆಗೆದು ನಮ್ಮಲ್ಲಿ ಯಾರಿಗಾದರೂ ಕೊಟ್ಟರೆ ಶೌಕತ್ ಕೆಲಸ ಮುಗಿದ ಹಾಗೆ. ದಿನವೆಲ್ಲಾ ಶೌಕತ್ ಹಣದಲ್ಲಿ ಮೋಜುಮಸ್ತಿ ಮಾಡಿದ ನಂತರ ಶೌಕತ್ ನಮ್ಮನ್ನು ಎಂದಿಗೂ ಕೊಟ್ಟ ಹಣಕ್ಕೆ ಲೆಕ್ಕ ಕೇಳಿದ್ದಿಲ್ಲ. ವ್ಯವಹಾರಜ್ಞಾನ ಶೂನ್ಯತೆಯಿಂದ ಬಳಲುತ್ತಿದ್ದ ಶೌಕತ್ ನಮ್ಮನ್ನು ಲೆಕ್ಕ ಕೇಳುವ ಗೋಜಿಗೆ ಹೋಗುವುದು ಹಾಗಿರಲಿ ಉಳಿದ ಹಣವನ್ನು ಆತನ ಜೇಬಿಗೆ ನಾವೇ ಒತ್ತಾಯಪೂರ್ವಕವಾಗಿ ಹಾಕಿದ ಪಕ್ಷದಲ್ಲಿ ಆ ಹಣವನ್ನು ದಾರಿಯಲ್ಲಿ ಹೋಗುವ ಯಾರಿಗಾದರೂ ಕೊಟ್ಟುಬಿಡುತ್ತಿದ್ದ. ಇಂತಹ ಮುಗ್ದತೆಯ ಪರಮಮೂರ್ತಿ ಶೌಕತ್ ನಮ್ಮಿಂದ ದೂರವಾಗುತ್ತಾನೆ ಎನ್ನುವುದು ನಮಗೆ ಊಹಾತೀತ ವಿಷಯವಾಗಿ ಕಾಡತೊಡಗಿತ್ತು.

ಕೊನೆಗೂ ಮಳೆಗಾಲದ ಆ ಒಂದು ದಿನ ಭೋರ್ಗರೆಯುತ್ತಾ ಸುರಿಯುತ್ತಿದ್ದ ಮಳೆಯ ನಡುವೆ ಶೌಕತ್ ನಮಗೆ ಟಾಟಾ ಹೇಳುತ್ತಲೇ ಪೊಲೀಸ್ ವಾಹನದಲ್ಲಿ ಜಾನಕಲ್ಲು ರಸ್ತೆಗೆ ಜಾರಿದ್ದ. ಆ ಹೊತ್ತು ಸುರಿಯುತ್ತಿದ್ದ ಮಳೆಯ ಮಧ್ಯೆಯೂ ನೂರಕ್ಕೂ ಮೀರಿದಂತೆ ಸೇರಿದ್ದ ಊರಮಕ್ಕಳಿಗೆ, ಯುವಕರಿಗೆ ಒಂದೊಂದು ಕ್ಯಾಡ್ ಬರೀಸ್ ಚಾಕಲೇಟ್ ಹಂಚಿ ವಿದಾಯದ ಕೊನೆಯ ಕಾಣಿಕೆಯನ್ನು ನೀಡಿ ಮರೆಯಾದ ಶೌಕತ್ ತನ್ನ ಮುದ್ದು, ಮುಗ್ದ ಮುಖವನ್ನಷ್ಟೆ ನಮ್ಮ ಜ್ಞಾಪಕಾರ್ಥ ಬಿಟ್ಟುಹೋಗಿದ್ದು. ಭೌತಿಕವಾಗಿ ಶೌಕತ್ ನಮ್ಮಿಂದ ಮರೆಯಾಗಿದ್ದನೇ ಹೊರತಾಗಿ ಆತನನ್ನು ನೆನೆಯದ ಒಂದೇ ಒಂದು ದಿನವೂ ತದನಂತರದ ದಿನಮಾನದಲ್ಲಿ ಸ್ನೇಹಿತರಾದ ನಮ್ಮ ಪಾಲಿನದಾಗಿರಲಿಲ್ಲ.

ಶೌಕತ್ ಊರು ಬಿಟ್ಟು ಐದು ತಿಂಗಳುಗಳು ಕಳೆದಿರಬೇಕು ಎನ್ನಿಸುತ್ತದೆ, ಆ ದಿನ ಸಾಯಂಕಾಲ ನಾವು ಮಹಂತಾಚಾರಿ ಸಾಮೀಲಿನ ನಮ್ಮ ಮಾಮೂಲು ಅಡ್ಡೆಯಲ್ಲಿ ಆಟ ಆಡಿಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ಸರಿಯಾಗಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಲೋಕೇಶ್ ನಮ್ಮನ್ನು ಹುಡುಕಿಕೊಂಡು ನಾವಿದ್ದಲ್ಲಿಗೆ ಬಂದ. “ನೀವೆಲ್ಲರೂ ನಾಳೆ ಬೆಳಿಗ್ಗೆ ಏಳು ಗಂಟೆಗೇ ದುರ್ಗಕ್ಕೆ ಹೊರಡಬೇಕು” ಎಂದು ಸುಮಾರು ಹದಿನೈದು ಪೋರರಿದ್ದ ನಮ್ಮ ತಂಡ ಕುರಿತು ಫರ್ಮಾನು ಹೊರಡಿಸಿದ. ಪೊಲೀಸರೆಂದರೆ ಚಡ್ಡಿಯಲ್ಲಿಯೇ ಉಚ್ಚೆ ಹೊಯ್ದುಕೊಳ್ಳುವ ಸ್ವಭಾವದವರಾದ ನಾವು ಪೋಲಿಸಪ್ಪನ ಮಾತಿನಿಂದ ಗರಬಡಿದಂತೆ ನಿಂತುಬಿಟ್ಟೆವು. “ನಾಳೆ ಬೆಳಿಗ್ಗೆ ಏಳು ಗಂಟೆಗೆ ಪೊಲೀಸ್ ವ್ಯಾನ್ ಬಸ್ ಸ್ಟಾಂಡ್ ಗೆ ಬರುತ್ತದೆ, ನೀವೆಲ್ಲರೂ ತಯಾರಾಗಿ ಬಸ್ ಸ್ಟಾಂಡ್ ಗೆ ಬನ್ನಿ. ಮಧ್ಯಾಹ್ನ ಒಂದರ ಒಳಗೆ ನಿಮ್ಮನ್ನು ದುರ್ಗದಿಂದ ವಾಪಾಸ್ ಕರೆತರಲಾಗುವುದು” ಎನ್ನುವ ಪೇದೆ ಲೋಕೇಶಪ್ಪನ ಮಾತಿಗೆ ನಮ್ಮಲ್ಲಿಯ ಧೈರ್ಯವಂತ ಹುಡುಗ ಬಡಗಿ ನಾಗರಾಜ ಅಸಮ್ಮತಿ ಸೂಚಿಸಿದ. “ಮನೆಯಲ್ಲಿ ಹೇಳದೆ ಕೇಳದೆ ನಿಮ್ಮ ಜೊತೆ ದುರ್ಗಕ್ಕೆ ಹೇಗೆ ಬರಲಾಗುತ್ತದೆ?” ಎನ್ನುವ ಅವನ ಮಾತಿಗೆ ಉತ್ತರವಾಗಿ ಪೋಲೀಸಪ್ಪ “ನಾನು ಖುದ್ದಾಗಿ ಇಂದು ರಾತ್ರಿ ನಿಮ್ಮೆಲ್ಲರ ಮನೆಗಳಿಗೆ ಬಂದು ನಿಮ್ಮ ತಂದೆತಾಯಿಗಳ ಜೊತೆ ಮಾತನಾಡುತ್ತೇನೆ. ಯಾವುದಕ್ಕೂ ನೀವು ತಯಾರಾಗಿರಿ” ಎನ್ನುವ ಮುನ್ಸೂಚನೆ ಕೊಟ್ಟು ನಾವಿದ್ದ ಜಾಗದಿಂದ ಆತುರಾತುರವಾಗಿ ನಿರ್ಗಮಿಸಿಬಿಟ್ಟ. ಸ್ನೇಹಿತರಾದ ನಾವು ದುರ್ಗಕ್ಕೆ ಹೋಗುವ ನಾಳೆಯ ಕುರಿತು ಒಂದು ಕಡೆ ಆನಂದದ ಅನುಭವ ಹೊಂದುತ್ತಿದ್ದರೆ ಮತ್ತೊಂದೆಡೆ ಪೊಲೀಸ್ ವ್ಯಾನ್ ನಲ್ಲಿ ಪೊಲೀಸರ ಜೊತೆ ದುರ್ಗಕ್ಕೆ ಯಾವ ಕಾರಣಕ್ಕಾಗಿ ಹೋಗಬೇಕೋ ಎನ್ನುವ ಆತಂಕದಲ್ಲಿ ಆಟವನ್ನು ಅಲ್ಲಿಗೇ ಮುಗಿಸಿ ಮನೆಗಳಿಗೆ ಹಿಂದಿರುಗಿದೆವು. ನಾನು ರಾತ್ರಿ ನಮ್ಮ ಮನೆಗೆ ಬರಲಿರುವ ಪೊಲೀಸ್ ಲೋಕೇಶಪ್ಪನ ಆಗಮನಾಭಿಲಾಷಿಯಾಗಿ ಅವನ ದಾರಿ ಕಾಯುತ್ತಾ ಕುಳಿತೆ.

ರಾತ್ರಿ ಒಂಬತ್ತರ ವೇಳೆಗೆ ನಮ್ಮ ಮನೆಗೆ ಪೊಲೀಸ್ ಪೇದೆ ಲೋಕೇಶ್ ಆಗಮನಿಸಿದ. ಆ ವೇಳೆಗಾಗಲೇ ಮನೆಯ ಗಂಡಸರೆಲ್ಲಾ ಊಟ ಮಾಡಿ ಕುಳಿತಿದ್ದೆವು. ನಾನು ಈಗಾಗಲೇ ಮನೆಯವರಿಗೆ ಸೂಕ್ಷ್ಮವಾಗಿ ಸಂಜೆ ನಡೆದ ಎಲ್ಲಾ ವಿಷಯವನ್ನೂ ತಿಳಿಸಿದ್ದ ಕಾರಣ ಹೊತ್ತಲ್ಲದ ಹೊತ್ತಿನಲ್ಲಿ ಪೊಲೀಸ್ ಪೇದೆ ಬಂದಿದ್ದು ಮನೆಯ ಯಾರ ಹುಬ್ಬನ್ನೂ ಏರಿಸಲಿಲ್ಲ. ಮೊದಲನೇ ಹಾಲಿನ ಮುಖ್ಯದ್ವಾರದ ಬಲಭಾಗದ ಪಕ್ಕಕ್ಕೆ ಇದ್ದ ಸ್ಟೀಲ್ ಕುರ್ಚಿಯಲ್ಲಿ ಅಸೀನನಾದ ಪೋಲೀಸಪ್ಪ ವಿಷಯ ಪ್ರಸ್ತಾವನೆಗೆ ಮೊದಲಿಟ್ಟ. ಮೊನ್ನೆ ರುಸ್ತುಂ ಸಾಹೇಬರು ಕೆಲಸ ಮಾಡುತ್ತಿದ್ದ ಜಾನಕಲ್ಲಿನ ಸ್ಟೇಶನ್ ಎದುರಿಗೇ ಒಂದು ಭಯಾನಕ ಅಪಘಾತವಾಗಿ ಹೋಗಿತ್ತು. ತಂದೆಯನ್ನು ಕಾಣಲು ಶೌಕತ್ ಠಾಣೆಯ ಎದುರಿನ ಮುಖ್ಯ ರಸ್ತೆಯನ್ನು ದಾಟಿ ಬರುತ್ತಿದ್ದಾಗ ರಸ್ತೆಯ ಎಡಬದಿಯಿಂದ ವೇಗವಾಗಿ ಬಂದ ಖಾಸಗಿ ಪ್ರಯಾಣಿಕರ ಬಸ್ಸೊಂದು ಅವನಿಗೆ ಡಿಕ್ಕಿ ಹೊಡೆದಿದೆ, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಬದಿಯ ದೊಡ್ಡಗಾತ್ರದ ಮರದ ಬಡ್ಡೆಗೆ ಎಸೆಯಲ್ಪಟ್ಟ ಶೌಕತ್ ತಲೆಗೆ ಗಂಭೀರಸ್ವರೂಪದ ಗಾಯಗಳಾಗಿವೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ದುರ್ಗದ ಜಿಲ್ಲಾ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿ ಜಿಲ್ಲಾ ಸರ್ಜನ್ ಡಾಕ್ಟರ್ ಹೊನ್ನೂರೆಡ್ಡಿ ಅವರಿಂದ ಚಿಕಿತ್ಸೆ ಪಡೆಯುತ್ತಿರುವ ಶೌಕತ್ ಪ್ರಜ್ಞೆ ನಿನ್ನೆ ಮಧ್ಯಾಹ್ನವಷ್ಟೆ ಮರಳಿದೆ. ಎಚ್ಚರಗೊಂಡ ತಕ್ಷಣವೇ ಶೌಕತ್ ತುರುವನೂರಿನ ತನ್ನ ಸ್ನೇಹಿತರನ್ನು ನೆನಸಿಕೊಂಡು ಅಮ್ಮಿಗೆ ಹುಡುಗರನ್ನು ಆದಷ್ಟು ಶೀಘ್ರವಾಗಿ ಕರೆಸಬೇಕೆಂದು ಆಗ್ರಹಪಡಿಸಿದ್ದಾನೆ. ಮಗನ ಆಸೆಯನ್ನು ತಳ್ಳಿ ಹಾಕಲಾಗದ ರುಸ್ತುಂ ಸಾಹೇಬರು ಜಿಲ್ಲಾ ಪೊಲೀಸ್ ಅಧಿಕಾರಿ ಜೀಜಾ ಹರಿಸಿಂಗ್ ಅವರ ಪರವಾನಗಿ ಪಡೆದು ತುರುವನೂರು ಪೊಲೀಸ್ ಸ್ಟೇಷನ್ ಗೆ ಸುದ್ದಿ ರವಾನಿಸಿದ್ದಾರೆ. ಇದರ ಅಂಗವಾಗಿಯೇ ಪೇದೆ ಲೋಕೇಶ್ ಶೌಕತ್ ನ ತುರುವನೂರಿನ ಅಷ್ಟೂ ಗೆಳೆಯರನ್ನು ಅವರವರು ಇರಬಹುದಾದ ಸ್ಥಳಗಳಿಗೆ, ಮನೆಗಳಿಗೆ ತೆರಳಿ ಹುಡುಗರನ್ನು ಅರ್ಧದಿನದ ಮಟ್ಟಿಗೆ ದುರ್ಗಕ್ಕೆ ಕಳುಹಿಸಬೇಕಾಗಿ ಪೋಷಕರ ಮನವೊಲಿಸುತ್ತಿದ್ದಾರೆ. ತಾನೇ ಖುದ್ದಾಗಿ ಮಕ್ಕಳನ್ನು ಪೊಲೀಸ್ ವ್ಯಾನ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಶೌಕತ್ ಭೇಟಿಯ ನಂತರ ಊರಿಗೆ ಸುರಕ್ಷಿತವಾಗಿ ಮರಳಿ ತರುವ ಭರವಸೆ ನೀಡಿದ ಪರಿಣಾಮವಾಗಿ ಎಲ್ಲಾ ಪೋಷಕರೂ ತಮ್ಮ ಮಕ್ಕಳನ್ನು ಲೋಕೇಶ್ ಒಟ್ಟಿಗೆ ದುರ್ಗಕ್ಕೆ ಕಳುಹಿಸುವುದಕ್ಕೆ ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದರು. ನನ್ನ ಅವ್ವನ ಬಗ್ಗೆ ತಿಳಿದಿದ್ದ ಲೋಕೇಶ್ ಕೊನೆಯದಾಗಿ ನಮ್ಮ ಮನೆಗೆ ಭೇಟಿಕೊಟ್ಟು ಆರೆಮನಸ್ಸಿನ ಒಪ್ಪಿಗೆಯನ್ನು ಅವ್ವನಿಂದ ಪಡೆದೇಬಿಡುವಲ್ಲಿ ಸಫಲನಾದ.

ಮಾರನೇ ದಿನ ಬೆಳಿಗ್ಗೆ ಏಳಕ್ಕೆ ಸರಿಯಾಗಿ ಬಸ್ ಸ್ಟಾಂಡ್ ಗೆ ದುರ್ಗದಿಂದ ಬಂದು ನಿಂತಿದ್ದ ಪೊಲೀಸ್ ವ್ಯಾನ್ ಹತ್ತಿ ದುರ್ಗದ ಜಿಲ್ಲಾಸ್ಪತ್ರೆ ತಲುಪಿ ಐಸಿಯುವಿನಲ್ಲಿದ್ದ ಶೌಕತ್ ನನ್ನು ಗ್ಲಾಸಿನ ಕಿಂಡಿಯಲ್ಲಷ್ಟೇ ನೋಡಿ ಮಧ್ಯಾಹ್ನ ಒಂದರ ವೇಳೆಗೆ ಊರು ಸೇರಿದೆವು. ನಮ್ಮ ಭೇಟಿ ಅಂದುಕೊಂಡಷ್ಟು ಸಫಲವಾಗಲಿಲ್ಲ. ನಾವು ಭೇಟಿಕೊಟ್ಟ ದಿನ ಬೆಳಿಗ್ಗೆ ಸುಮಾರು ಎಂಟರ ವೇಳೆಗೇ ಶೌಕತ್ ಮತ್ತೊಮ್ಮೆ ಕೋಮಾಗೆ ಜಾರಿದ್ದ. ಪ್ರಜ್ಞೆ ಕಳೆದುಕೊಳ್ಳುವ ಸ್ವಲ್ಪ ಸಮಯದ ಮೊದಲು ಶೌಕತ್ ತಾಯಿ “ಇನ್ನೇನು ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನ್ನ ತುರುವನೂರಿನ ಸ್ನೇಹಿತರು ಬರುತ್ತಾರೆ” ಎಂದು ಹೇಳಿದ ಮಾತಿಗೆ ಅತ್ಯಂತ ಖುಷಿಯಿಂದ ತನ್ನ ಟ್ರೇಡ್ ಮಾರ್ಕಿನ “ಕಿಹಿ ಕಿಹಿ” ಗುಗ್ಗಳು ನಗೆಯೊಂದಿಗೆ ಪ್ರತಿಕ್ರಿಯಿಸಿದ ಮಗನನ್ನು ಕಂಡ ತಾಯಿ ಮಗ ಇನ್ನೇನು ಅಪಾಯದಿಂದ ಪಾರಾಗುತ್ತಾನೆ ಎನ್ನುವ ಭರವಸೆಯಲ್ಲಿ ಅಲ್ಲಾಹುವಿಗೆ ಸಾವಿರ ಶುಕ್ರಿಯಾಗಳನ್ನ ಸಲ್ಲಿಸಿದ್ದರು.

ಶೌಕತ್ ನನ್ನು ಎಚ್ಚರದ ಸ್ಥಿತಿಯಲ್ಲಿ ನೋಡಲಾಗದಕ್ಕೆ ನಮ್ಮ ಗುಂಪಿನ ಎಲ್ಲಾ ಹುಡುಗರಿಗೂ ಅತೀವ ದುಃಖ ಉಂಟಾಯಿತು. ತನ್ನ ಮಾತಿಗೆ ಬೆಲೆ ಕೊಟ್ಟು ದುರ್ಗಕ್ಕೆ ಬಂದು ರುಸ್ತುಂ ಸಾಹೇಬರ ಮಗನನ್ನು ನೋಡಿದ ಹುಡುಗರ ಬಗ್ಗೆ ಅತಿ ಹೆಮ್ಮೆ ತಳೆದವನಾದ ಲೋಕೇಶ್ ಆಸ್ಪತ್ರೆಗೆ ಸಮೀಪವಾಗಿಯೆ ಇದ್ದ ವಿಜಯಕೆಫೆಯಲ್ಲಿ ಖಾಲಿದೋಸೆ ಕೊಡಿಸುವ ಪ್ರಸ್ತಾವವನ್ನು ಮುಂದಿಟ್ಟನಾದರೂ ಹುಡುಗರ ಕಡೆಯಿಂದ ಅದಕ್ಕೆ ನೀರಸವಾದ ಪ್ರತಿಕ್ರಿಯೆ ಬಂದಿತ್ತು. ಬೇರೆ ಸಮಯದಲ್ಲಿ ಆಗಿದ್ದರೆ ಈ ಮಾತನ್ನು ಕೇಳಿ ಕುಣಿದು ಕುಪ್ಪಳಿಸಬೇಕಾಗಿದ್ದ ಗೆಳೆಯರ ವೃಂದಕ್ಕೆ ಶೌಕತ್ ಸ್ಥಿತಿ ನೋಡಿ ಬಹಳ ದೊಡ್ಡ ಶಾಕ್ ಆಗಿತ್ತು.

ಮುಂದಿನ ಸುಮಾರು ಒಂದು ವಾರದ ಕಾಲ ಪ್ರತೀ ದಿನ ಸಂಜೆ ಶೌಕತ್ ಹೆಚ್ಚಾಗಿ ಭೇಟಿ ನೀಡುತ್ತಿದ್ದ, ಊರ ಹೊರಗಿನ, ಮಿಡಲ್ ಸ್ಕೂಲ್ ಸಮೀಪದ ಬಯಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶೌಕತ್ ಗೆಳೆಯರೆಲ್ಲರೂ ಸೇರಿ ಹಣ್ಣುಕಾಯಿಯನ್ನು ಕೊಟ್ಟು ವಿಶೇಷಪೂಜೆ, ಮಂಗಳಾರತಿ ಮಾಡಿಸಿ ಶೌಕತ್ ಶೀಘ್ರವಾಗಿ ಗುಣಮುಖವಾಗಲಿ ಎಂದು ಬೇಡಿಕೊಳ್ಳುತ್ತಿದ್ದೆವು. ಶಾಲೆಗೆ ಹೋಗುವಾಗ ಒಮ್ಮೆ, ಬರುವಾಗ ಮತ್ತೊಮ್ಮೆ ದಾರಿಯಲ್ಲಿ ಸಿಗುವ ಪೊಲೀಸ್ ಠಾಣೆಗೆ ಹೋಗಿ ಲೋಕೇಶ್ ನನ್ನು ಕಂಡು ಶೌಕತ್ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆವು. ಶೌಕತ್ ಆರೋಗ್ಯದಲ್ಲಿ ಅಂತಹಾ ಹೆಚ್ಚಿನ ಸುಧಾರಣೆ ಕಾಣದೇ ಆತ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ನಮಗೆ ಬಹಳ ದೊಡ್ಡ ಆತಂಕವನ್ನು ಉಂಟುಮಾಡಿತ್ತು.

ನಾವು ದುರ್ಗಕ್ಕೆ ಹೋಗಿ ಬಂದ ಹತ್ತನೇ ದಿನ ಬೆಳಿಗ್ಗೆ ಎಂದಿನಂತೆ ಪೊಲೀಸ್ ಸ್ಟೇಷನ್ ಗೆ ಹೋಗಿ ಶೌಕತ್ ನ ಆರೋಗ್ಯದ ಬಗ್ಗೆ ವಿಚಾರಿಸಿದ ನಾವು ನಾಲ್ಕಾರು ಗೆಳೆಯರಿಗೆ ದೊಡ್ಡಮಟ್ಟದ ಅಶುಭವಾರ್ತೆಯೊಂದು ಹೊಂಚುಹಾಕಿ ಕಾಯುತ್ತಿತ್ತು. ಹಿಂದಿನ ರಾತ್ರಿ ಹನ್ನೊಂದರ ಸುಮಾರಿಗೆ ಶೌಕತ್ ಗೆ ಮರಳಿ ಪ್ರಜ್ಞೆ ಬಂದು ತುರುವನೂರಿನ ತನ್ನ ಸ್ನೇಹಿತರನ್ನು ಕುರಿತು ತೀವ್ರಗತಿಯಲ್ಲಿ ಹಲುಬಲು ಶುರುವಿಟ್ಟುಕೊಂಡಿದ್ದನಂತೆ. ಸ್ನೇಹಿತರಿಗಾಗಿ ದೊಡ್ಡಮಟ್ಟದ ಹಠ ಮಾಡಿದ ಶೌಕತ್ ಮುಂದಿನ ಅರ್ಧಗಂಟೆಯೊಳಗೆ ಮತ್ತೆ ಪ್ರಜ್ಞೆ ಕಳೆದುಕೊಂಡು ರಾತ್ರಿ ಒಂದರ ವೇಳೆಗೆ ಅಲ್ಲಾಹುವಿನ ಪಾದಗಳನ್ನು ಸೇರಿದ ವಿಷಯ ತಿಳಿದು ಕಾಲ ಕೆಳಗಿನ ಭೂಮಿಯೇ ಕುಸಿದ ಹಾಗಾಯಿತು. ಈ ಕರುಣಾಜನಕ ವಿಷಯ ತಿಳಿದ ನಾವು ಸ್ನೇಹಿತರು ಅಪ್ರಯತ್ನಪೂರ್ವಕವಾಗಿ ಶಾಲೆಗೆ ಹೋಗಬೇಕಾದ ದಾರಿಯನ್ನು ತ್ಯಜಿಸಿ ಸ್ಟೇಷನ್ ಪಕ್ಕದಲ್ಲಿಯೇ ಇರುವ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಶೌಕತ್ ಆತ್ಮಕ್ಕೆ ಚಿರಶಾಂತಿ ಕೋರಿ ನಮ್ಮ ನಮ್ಮ ಮನೆಗಳ ಹಾದಿಯನ್ನು ತುಳಿದೆವು. ಶೌಕತ್ ಆಲಿ ಒಂದಿಗೆ ನೂರಾರು ಸಲ ನಡೆದಿದ್ದ ಊರ ರಸ್ತೆಗಳಲ್ಲಿ ತಲೆ ಎತ್ತಿ ನಡೆಯುವ ಧೈರ್ಯ ಮುಂದಿನ ಹಲವು ತಿಂಗಳುಗಳ ಕಾಲ ಯಾಕೋ ಯಾವ ಶೌಕತ್ ಹುಡುಗರ ಮನದಲ್ಲೂ ಮೂಡಲೇ ಇಲ್ಲ.

 

Girl in a jacket
error: Content is protected !!