ಚಿದಂಬರ ಜೋಶಿ,ಚಿಕಾಗೂ.
ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ. ಅವರು ಶಿಕ್ಷಣ ಮತ್ತು ಅದರ ವ್ಯವಸ್ಥೆ ಕುರಿತು ಬರೆದಿದ್ದಾರೆ
ಶಿಕ್ಷಣ ರಾಷ್ಟ್ರೀಯ ಹಿತದೃಷ್ಟಿಯಲ್ಲಿರಬೇಕು
ಪ್ರಿಯ ಓದುಗರೇ,
ಇದು ಪ್ರಶ್ನೋತ್ತರ ಲೇಖನ. ಇದುವರೆಗೂ ನಾನು ಬರೆದ ೫ ಅಂಕಣಗಳ ಮೇಲೆ ಬಂದಂತಹ ಪ್ರತಿಕ್ರಿಯೆಗಳನ್ನಾಧರಿಸಿ ಬರೆದ ಲೇಖನ.
ಹಿಂದಿನ ೫ ಕಂತುಗಳಿಗೆ ಈ ಸಂಪರ್ಕ ಕೊಂಡಿಗಳನ್ನು ಬಳಸಿ
ಈಗ ಮುಂದುವರೆಸೋಣ.
ಮೊತ್ತ ಮೊದಲು, ನನ್ನೆಲ್ಲ ಕಂತುಗಳನ್ನು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು. ಮತ್ತು, ಆಯ್ದ ಕೆಲವು ಪ್ರತಿಕ್ರಿಯೆಗಳು, ಶಿಕ್ಷಣಕ್ಕೆ ಸಂಬಂಧಿಸಿದ್ದರಿಂದ, ಮುಂದಿನ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಅವುಗಳಿಗೆ ಉತ್ತರ ಕೊಡುವ ಒಂದು ಹೊಣೆ ನನ್ನದು, ಅದು ಪ್ರಸ್ತುತ ಹಾಗೂ ಸಮಯೋಚಿತ ಎಂದು ನನ್ನ ಭಾವನೆ. ಬಂದ ಪ್ರಶ್ನೆಗಳು ಹಾಗೂ ಪ್ರತಿಕ್ರಿಯೆಗಳು ಕೂಡ ಪ್ರಸ್ತುತ, ಸೂಕ್ತ ಹಾಗೂ ನಾನು ಆಯ್ದುಕೊಂಡ ವಸ್ತು ವಿಷಯಕ್ಕೆ ಪೂರಕ ಹಾಗೂ ಸಹಾಯಕ. ಈ ಕಾರಣದಿಂದ ೬ ನೇ ಕಂತಿಗೆ ಮುಂದಿನ ವಾರದವರೆಗೆ ಕಾಯಬೇಕಾಗಬಹುದು.
ಈಗ ಮೊದಲನೇ ಪ್ರಶ್ನೆ. ಯಾವ ರೀತಿಯ ವಸ್ತು ವಿಷಯಗಳನ್ನು ಎಲ್ಲರಿಗೂ ಕಲಿಸಬೇಕು?
೨ ನೇ ಪ್ರಶ್ನೆ, ಗುಣಗಳಿಗೆ ಅನುಗುಣವಾಗಿ ಕಲ್ಸಿದ ಮಾತ್ರಕ್ಕೆ ಹೊಣೆಗಾರಿಕೆ ಬರುವುದೇ?
೩ ನೇ ಪ್ರಶ್ನೆ. ಸ್ಪರ್ಧಾತ್ಮಕ ಭಾವನೆ ಬೇಕೇ? ಅದು ಅಸೂಯೆಗೆ ದಾರಿ ಮಾಡಿಕೊಡುವದಿಲ್ಲವೇ?
ಹೀಗೆ ಇನ್ನೂ ಹಲವಾರು ಪ್ರಶ್ನೆಗಳು ಬಂದಿವೆ. ಅವುಗಳನ್ನು ಉತ್ತರಿಸುವ ಪ್ರಯತ್ನ ಇಲ್ಲಿ ಮಾಡಿರುವೆ. ಮುಂಬರುವ ಲೇಖನಗಳಲ್ಲಿ ಕೂಡ, ಸಂದರ್ಭಕ್ಕೆ ತಕ್ಕಂತೆ, ಆಯಾ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಮಾಡುವೆ.
ಈಗ ಮೊದಲನೇ ಪ್ರಶ್ನೆ – ಯಾವ ರೀತಿಯ ವಸ್ತು ವಿಷಯಗಳನ್ನು ಎಲ್ಲರಿಗೂ ಕಲಿಸಬೇಕು?
ಇದಕ್ಕೆ ಹಲವಾರು ಉತ್ತರಗಳಿವೆ. ಯಾವ ಉತ್ತರಗಳು ಸರಿ ಅಥವಾ ತಪ್ಪು ಎಂದು ಹುಡುಕುವದಕ್ಕಿಂತ ಉಪಯುಕ್ತವಾದ ವಿಧಾನ ಎಂದರೆ ಈ ಕೆಳಗಿನ ಪ್ರಶ್ನೆಗಳಿಗೆ ಮೊದಲು ಉತ್ತರಿಸುವುದು – ಏತಕ್ಕೆ ಕಲಿಯಬೇಕು? ಕಲಿಯುವ ಮೂಲ ಉದ್ದೇಶ್ಯ ಏನು? ಯಾವ ಪ್ರಯೋಜನಕ್ಕೆ ಕಲಿಯಬೇಕು? ಅಲ್ಲವೇ? ಹಾಗಾದಲ್ಲಿ ಇವುಗಳಿಗೆ ಉತ್ತರಿಸೋಣ ಬನ್ನಿ. . ನಮ್ಮ ಮೂಲ ಉದ್ದೇಶ್ಯ ಬದುಕುವುದು. ಬರೀ ಬದುಕುವದಲ್ಲ, ಉತ್ತಮವಾಗಿ, ಉಪಯುಕ್ತವಾಗಿ ಬದುಕುವುದು. ರಾಷ್ಟ್ರಕ್ಕೋಸ್ಕರ ಬದುಕುವುದು. ಅದರಲ್ಲೇ ನಮ್ಮ ಇರುವುಕೆಯ ಸಾರ್ಥಕ್ಯ ಕಂಡುಕೊಳ್ಳುವುದು. ನಾನು ಅನ್ನುವ ಭಾವ ನಾವು ಅನ್ನುವದ್ರಲ್ಲಿ ಪರಿವರ್ತನೆಯಾಗಿ, ರಾಷ್ಟ್ರಭಾವದಲ್ಲಿ ಐಕ್ಯವಾಗುವುದು. ಐಹಿಕ ಹಾಗೂ ಪಾರಮಾರ್ಥಿಕ ಉದ್ದೇಶ್ಯಗಳನ್ನು ಪೂರ್ತಿಗೊಳಿಸುವುದು. ಶಾಂತಿ, ಸಮೃದ್ಧಿಗಳ ಸರಿಯಾದ, ಪೂರ್ಣವಾದ ಅನುಭವ ಪಡೆಯುವುದು. ಏನಂತೀರಿ? ಉದ್ಯೋಗದ ಮೂಲ ಉದ್ದೇಶ್ಯ ಕೂಡ ಇದೇ ಆಗಿರಬೇಕು. ರಾಷ್ಟ್ರಕ್ಕೋಸ್ಕರ ಮಾಡಲು, ಬಹಳಷ್ಟು ಕೆಲಸಗಳಿವೆ. ಎಷ್ಟು ಮಾಡಿದರೂ ಮುಗಿಯದಷ್ಟು. ಮಾಡುತ್ತಲೇ ಇರುವಷ್ಟು.
ನಮ್ಮ ಇಡೀ ಜೀವನವನ್ನು ವೈಯುಕ್ತಿಕ ಹಾಗೂ ಸಾಮೂಹಿಕ ಎಂದು ಎರಡು ಭಾಗಗಳಲ್ಲಿ ನೋಡೋಣ. ವೈಯುಕ್ತಿಕ ಜೀವನದಲ್ಲಿ, ಆಂತರಿಕ ವಿಷಯಗಳು, ಅಂದರೆ, ಮಾನಸಿಕ ಆರೋಗ್ಯ, ಮನೋವಿಕಾಸ , ಮಾನಸಿಕ ಸಮತೋಲನ, ಮಾನಸಿಕ ಕ್ಷಮತೆ, ವೈಚಾರಿಕ ಶಕ್ತಿ, ವೈಚಾರಿಕ ಪ್ರಬುದ್ಧತೆ, ಇಚ್ಚಾ ಶಕ್ತಿ, ಧಾರಣಾ ಶಕ್ತಿ ಅಂದರೆ ಧೈರ್ಯ, ಈಜು, ಪರ್ವಾತಾರೋಹಣ, ಮರ ಹತ್ತುವುದು, ದುರಸ್ತಿ, ಜೋಡಿಸಿ ಸೃಷ್ಟಿಸುವುದು, ಸಮಸ್ಯೆ ನಿವಾರಣೆ, ಹೀಗೆ ಹತ್ತು ಹಲವಾರು ವಿಷಯಗಳು. ಇನ್ನು ಬಾಹ್ಯ ವಿಷಯಗಳೆಂದರೆ, ದೇಹದ ಆರೋಗ್ಯ, ದೇಹದ ನೈರ್ಮಲ್ಯ, ದೈಹಿಕ ಶಕ್ತಿ, ದೈಹಿಕ ತ್ರಾಣ, ಹೀಗೆ ಹಲವಾರು ವಿಷಯಗಳು. ಈ ಬಾಹ್ಯ ಹಾಗೂ ಆಂತರಿಕ ವಿಷಯಗಳು, ತಿನ್ನುವ ಆಹಾರದ ಮೇಲೆ ಅವಲಂಬಿಸಿವೆ. ಅಲ್ಲವೇ? ನಾವ್ಯಾಕೆ ಇವುಗಳನ್ನೇ ಆಧಾರವಾಗಿಟ್ಟುಕೊಂಡು ಕಲಿಸಬಾರದು? ಉದಾಹರಣೆಗೆ, ಆಧ್ಯಾತ್ಮ (ಜಾತಿ ಮತಗಳಲ್ಲ), ಧ್ಯಾನ, ಯೋಗ, ಕುಸ್ತಿ, ವ್ಯಾಯಾಮ, ಆರೋಗ್ಯಕರ ಸ್ವಯಂಪಾಕ, ಸ್ವಚ್ಛತೆ, ವಿಶ್ರಾಂತಿ, ದೇಶದ ಸಂವಿಧಾನ, ಸ್ವಯಂರಕ್ಷಣೆ, ಬರವಣಿಗೆ, ಓದುವುದು, ಸಂಗೀತ, ಆಟಗಳು, ಭಾಷೆಗಳು, ನಟನೆ, ನೃತ್ಯ, ಅಲಂಕಾರ, ಕ್ರಮ ಬದ್ಧತೆ, ಹಾಗೂ ಶಿಸ್ತು, ಹಣಕಾಸಿನ ವ್ಯವಹಾರ, ಸೇವೆ ಹೀಗೆ ಹಲವಾರು ಜೀವನಕ್ಕೆ ಅತ್ಯಾವಶ್ಯವಾದ ಕುಶಲತೆಗಳನ್ನು, ಕಲಿಯಬೇಕು. ನಂತರ ವಿಶೇಷ ಕುಶಲತೆಗಳು ಅದೂ ಮೂಲಗುಣಗಳಿಗೆ ತಕ್ಕಂತೆ ಮಾತ್ರ.
ಇನ್ನೂ ಸಾಮೂಹಿಕ ಜೀವನ ಎಂದರೆ, ಪರಸ್ಪರ ಬೆರೆಯುವಿಕೆ, ವಿಚಾರ ವಿನಿಮಯ, ಸಹಕಾರ, ಸ್ವೀಕಾರ ಮನೋಭಾವ, ಸಹಿಷ್ಣುತೆ, ಗೌರವ, ಅತಿಥಿ ಸತ್ಕಾರ, ವಿಶ್ವಾಸ, ಸಮನ್ವಯ, ಮುಂದಾಳತ್ವ, ಅನುಕರಿಸುವುದು, ಸೇವೆ, ಪಾಕಶಾಸ್ತ್ರ, ಸಂಪ್ರದಾಯ, ದೇಶಾಭಿಮಾನ, ಪರಿಸರಾಭಿಮಾನ, ಪರಿಸರ ಸ್ವಚ್ಛತೆ, ಕ್ರಮಬದ್ಧತೆ ಹಾಗೂ ಸಾಮೂಹಿಕ ಶಿಸ್ತು, ಗಡಿ ರಕ್ಷಣೆ, ಆರಕ್ಷಣೆ, ಅನೇಕ ವ್ಯವಹಾರಗಳು – ಉದಾಹರಣೆಗೆ, ವಿಕ್ರಯ/ಮಾರಾಟ, ಖರೀದಿ, ಸಮಯ ಹಾಗೂ ಕಾರ್ಯ ನಿರ್ವಹಣೆ, ಸರಬರಾಜು, ಹಣಕಾಸು ಮತ್ತು ಸ್ಥಳ ನಿರ್ವಹಣೆ, ಅಪರಾಧ, ಗೂಢಚಾರಿಕೆ, ಅನ್ವೇಷಣೆ, ಕಾಯ್ದೆ, ಕಾನೂನು, ನಿಯಮಗಳು, ತಂಡ ಕೆಲಸ, ಬೆಂಬಲಿಸುವುದು, ಪ್ರಥಮ ಚಿಕಿತ್ಸೆ, ಪ್ರವಾಸ, ಪ್ರಯಾಣ, ಆಟ ಪಾಠ, ಆರೈಕೆ, ಹಿರಿಯರ ಆರೋಗ್ಯ ಹಾಗೂ ಕಾಳಜಿ, ಗುಡಿ ಕೈಗಾರಿಕೆ, ಹೀಗೆ ಜೀವನದ ಗುಣಮಟ್ಟದ ಅಭಿವೃದ್ಧಿಗೆ ಸಂಬಂದಿಸಿದ ಎಲ್ಲಾ ವಿಷಯಗಳು.
ಇವುಗಳಷ್ಟೇ ಅಲ್ಲದೆ, ಕೃಷಿ, ಅರಣ್ಯ ಸಂಪತ್ತು, ಜಲ, ನೀರಾವರಿ, ವಾಯು ಮತ್ತು ವಾಯು ಸಂಪತ್ತು ಪ್ರಾಕೃತಿಕ ಸಂಪತ್ತಿನ ಬಗೆಗೆ ಹೆಚ್ಚೆಚ್ಚು ಕಲಿಸಬೇಕು. ಮೇಲೆ ಹೇಳಿದ ಎಲ್ಲಾ ವಿಷಯಗಳ ಜೊತೆಗೆ ಇವುಗಳನ್ನು ಕಡ್ಡಾಯವಾಗಿ ಕಲಿಸಬೇಕು ಆದರೆ ಕೇವಲ ಸೈದ್ಧಾಂತಿಕವಾಗಲ್ಲ, ಪ್ರಾಯೋಗಿಕವಾಗಿ ಕಲಿಸಬೇಕು.
ಬೇರೆಯವರ, ಬೇರೆ ಕೆಲಸಗಳ ಬಗ್ಗೆ ಗೌಣವಾಗಿ ಕಾಣದೆ ಗೌರವಿಸುವ ಮನೋಭಾವ ಮೂಡುವತ್ತ ಈ ಹೆಜ್ಜೆ. ರಾಷ್ಟ್ರ ಮನೋಭಾವ ಮೂಡುವತ್ತ ಮೊದಲ ಹೆಜ್ಜೆ. ಕೇವಲ ಆಗಸ್ಟ್ ೧೫, ನವೆಂಬರ್ ೧, ಜನವರಿ ೨೬ ರಂದು ದಿನ ಇಡೀ ರಾಷ್ಟ್ರಗೀತೆಗಳನ್ನು ಎಡಬಿಡದೆ ಹಾಡಿಸಿ, ಕೇಳಿಸಿ, ಕೇವಲ ಕೆಲವೇ ಕೆಲವು ನಾಯಕರ ಫೋಟೋಗಳಿಗೆ ಹೂವಿನ ಹಾರ ಹಾಕಿಸುವದರಿಂದ ರಾಷ್ಟ್ರ ಮನೋಭಾವನೆ ಜಾಗೃತವಾದೀತೇ? ಅದು ಭ್ರಮೆ ಅಷ್ಟೇ.
ಇದು ನನ್ನ ವಸ್ತು ಎಂದಾಗ ಬರುವ ಕಾಳಜಿ, ಆಸಕ್ತಿ ಇನ್ನೊಬ್ಬರದು ಅಂದಾಕ್ಷಣ ಹೊರಟು ಹೋಗುತ್ತದೆ. ಕಳ್ಳನನ್ನು ಬಿಟ್ಟು ಎನ್ನಿ. ಅಂತಹ ಒಂದು ಆಸಕ್ತಿ ಬೆಳೆಸಲು, ಎಲ್ಲರೂ ಪ್ರತಿಹೆಜ್ಜೆಯಲ್ಲೂ ನನ್ನ ರಾಷ್ಟ್ರಕ್ಕೆ, ನನ್ನ ರಾಷ್ಟ್ರದ್ದು, ಈ ರಾಷ್ಟ್ರ, ರಾಷ್ಟ್ರದ ಸಂಪತ್ತು ನಮ್ಮೆಲ್ಲರಿಗೂ ಸಮನಾಗಿ ಸೇರಿದ್ದು, ಇದನ್ನು ಗೌರವಿಸುವ, ಉಳಿಸುವ, ಬೆಳೆಸುವ ಜವಾಬ್ದಾರಿ ಪ್ರತಿ ವ್ಯಕ್ತಿಯದ್ದು ಎಂಬುವ ಮನೋಭಾವ, ಪ್ರವೃತ್ತಿ ಬರುವ ಶಿಕ್ಷಣ, ತೊಡಗಿಸಿಕೊಂಡು ಬರುವ ಅನುಭವ ಕೊಡುವ ಶಿಕ್ಷಣ ಕೊಡಬೇಕು. ಕೊಡಲೇಬೇಕು.
ಇನ್ನು ಇನ್ನೊಂದು ಮಹತ್ತರ ವಿಷಯಕ್ಕೆ ಬರೋಣ. ನನ್ನ ಪ್ರಕಾರ ಉತ್ತೀರ್ಣ ಹಾಗು ಅನುತ್ತೀರ್ಣ ಎಂಬ ಮಾಪದಂಡಗಳನ್ನು, ಅಳತೆಪಟ್ಟೆಯನ್ನು ಎತ್ತಿ ಕಸದ ಬುಟ್ಟಿಯಲ್ಲಿ ಹಾಕಬೇಕು. ಯಾರ ದೃಷ್ಟಿಯಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣ? ಈ ರೀತಿಯ ಮಾಪದಂಡ ಅದೆಷ್ಟು ಮಕ್ಕಳ ಜೀವನ ನಾಶ ಮಾಡಿದೆ. ಬೆಳೆಯುವ ಮೊದಲೇ ನಾನು ಅನರ್ಹ ಎಂಬ ಹಣೆಪಟ್ಟಿ ಕಟ್ಟಿಕೊಂಡು, ಜೀವನ ಮಾಡೋದು ಹೇಗೆ? ಧೈರ್ಯಗುಂದಿ, ಆತ್ಮಹತ್ಯೆ ಮಾಡಿಕೊಳ್ಳೋ ಮಟ್ಟಿಗೆ ಹತಾಶಗೊಳ್ಳುತ್ತಾರೆ. ಇಲ್ಲವೇ ಸ್ವಂತ ಕುಟುಂಬದವರಿಂದ ಹಿಡಿದು, ಎಲ್ಲರಿಂದಲೂ, ಕೆಲಸಕ್ಕೆ ಬಾರದವರು, ಪೆದ್ದು ಅಥವಾ ಧಡ್ಡ ಶಿಖಾಮಣಿ ಎನ್ನುವ ಬಿರಿದುಗಳ ಸರಮಾಲೆಗಳ ಲಭ್ಯ. ಕೈಲಾಗದವರು ಅನುಪಯುಕ್ತ ಎಂಬ ಪಟ್ಟ. ಇದು ಎಷ್ಟು ಸರಿ? ನನ್ನ ಪ್ರಕಾರ ಗೊತ್ತಿಲ್ಲದ ಹಾಗೆಯೇ ದೇಶಕ್ಕೇ, ರಾಷ್ಟ್ರದ ಸಂಪತ್ತಿಗೇ ಮೂಗೇಟು. ದೇಶದ ಚಾಲನೆಗೆ, ಕೇವಲ ಬೆರೆಳೆಣಿಕೆಯಷ್ಟೇ ಜನರ ಬುದ್ಧಿ ಶಕ್ತಿ ಸಾಕಾ? ಇಡೀ ದೇಶದ ಚುಕ್ಕಾಣಿ ಇವತ್ತು ಕೇವಲ ಕೆಲವೇ ಸಾವಿರ ಜನರ ಕೈಯಲ್ಲಿ ಇದೆ. ಉಳಿದವರೆಲ್ಲ ತಮ್ಮದೇ ಆದ ಪ್ರಪಂಚದಲ್ಲಿ, ಮುಳುಗಿ ಹೋಗಿದ್ದಾರೆ. ರಾಷ್ಟ್ರ ಮನೋಭಾವ ಎಲ್ಲಿಂದ ಬರಬೇಕು? ಐದು ವರ್ಷೋಕ್ಕೊಮ್ಮೆ ಚುನಾವಣೆಯಲ್ಲಿ ಮತ ಪ್ರದರ್ಶನ ಮಾಡಿಬಿಟ್ಟರೆ ಕಳೆಯಿತಾ ಜವಾಬ್ದಾರಿ?
ನನ್ನ ನಿಜ ಜೀವನದ ಅನುಭವದಲ್ಲಿ, ಸಾವಿರಾರು ಜನಗಳ ಸಂದರ್ಶನ ಮಾಡಿ ಕೆಲಸ ಕೊಟ್ಟಿದ್ದೀನಿ. ಇದರಲ್ಲಿ ಶೇಕಡಾ ೯೯ ಜನ, ಮೊದಲಿಗೆ ಕೆಲಸ ಗೊತ್ತಿರದಿದ್ರೂ, ಕ್ರಮೇಣ, ಸ್ವಲ್ಪೇ ಸಮಯದಲ್ಲಿ ಕಲೆತು ಯಶಸ್ವಿ ಆಗಿದ್ದಾರೆ. ಇದು ಸತ್ಯ. ಈ ಜನಗಳಲ್ಲಿ ನಾನು ನೋಡಿದ್ದು ಏನಾದರೂ ಮಾಡಬೇಕು, ಮಾಡಿ ತೋರಿಸಬೇಕು, ಯಶಶ್ವಿಯಾಗಬೇಕು ಅನ್ನುವ ಛಲ, ಮನೋಭಾವ, ಆಸಕ್ತಿ.
ಹೀಗಾಗಿ, ಈ ಹಿನ್ನೆಲೆಯಲ್ಲಿ, ಉತ್ತೀರ್ಣ/ಅನುತ್ತೀರ್ಣ ಬದಲಿಗೆ ತರಬೇತಿ ಪೂರ್ಣವಾಯಿತೋ ಇಲ್ಲವೋ, ಜೀವನದ ಜವಾಬ್ದಾರಿಗಳನ್ನು ಹೊರಲು ಸಿದ್ಧವೋ ಎಂದು ಗುರುತಿಸುವ ಪದ್ಧತಿ ಜಾರಿಗೆ ತರಬೇಕು. ಅನುತ್ತೀರ್ಣ, ಅನರ್ಹ ಅನ್ನೋ ಪದಗಳನ್ನಾಗಲಿ, ಆ ಅರ್ಥ ಬರೋ ಬೇರೆ ಯಾವುದೇ ಪದ ಬಳಕೆ ಆಗಕೂಡದು.. ಎಲ್ಲರೂ ಒಂದಿಲ್ಲ ಒಂದು ಕ್ಷೇತ್ರದಲ್ಲಿ, ಚೆನ್ನಾಗಿ ಇದ್ದೆ ಇರ್ತಾರೆ. ಇದೆ ಕಾರಣಕ್ಕೆ ನಾನು, ಮೂರು ಮೂಲಗುಣಗಳ ಆಧಾರದ ಮೇಲೆ ಶಿಕ್ಷಣ ವ್ಯವಸ್ಥೆ ಆಗಬೇಕು ಎಂದಿದ್ದು. ವ್ಯಕ್ತಿಯ ಉಪಯುಕ್ತತೆ ಕಂಡು ಹಿಡಿಯದೇ ಕಾರ್ಖಾನೆ ಮಾದರಿಯಲ್ಲಿ, ಎಲ್ಲರನ್ನೂ ಒಂದೇ ಮಾದರಿಯಲ್ಲಿ ಶಿಕ್ಷಿಸುವ ಪರಿ, ಒಂದೇ ಮಾಪದಂಡದಿಂದ ಅಳೆಯುವ ರೀತಿ, ಪ್ರತಿ ವ್ಯಕ್ತಿಯ ಸಾಮರ್ಥ್ಯ, ಕುಶಲತೆ, ಸೃಜನಶೀಲತೆಗಳನ್ನು ಹೊರತರದ ಶಿಕ್ಷಣ ನಿಜವಾಗಲೂ ಶಿಕ್ಷಣವೇ? ಅಲ್ಲವೇ ಅಲ್ಲ. ಬದಲಿಗೆ, ಶಿಕ್ಷಣ ಎನ್ನುವ ಪದಕ್ಕೆ ತದ್ವಿರುದ್ಧ, ಅಪವಾದ.
ಇನ್ನು, ಸಾಮೂಹಿಕ ಪರೀಕ್ಷೆಯನ್ನು ನಿರ್ನಾಮ ಮಾಡಬೇಕು. ಇದು ಯಾರಿಗೆ ಅನುಕೂಲ? ಪ್ರತಿವ್ಯಕ್ತಿ ಅವನು ಸಿದ್ಧನಾಗುವದಕ್ಕೆ, ಬೇಕಾದಷ್ಟು ಸಮಯ ತೆಗೆದುಕೊಳ್ಳಲಿ. ಒತ್ತಡ ಯಾಕೆ? ಬೇಗ ಮುಗಿಸಲು ಆಕರ್ಷಕ ಪ್ರತಿಫಲದ ಬಹುಮಾನ ಕೊಡಿ. ಸೋಮಾರಿತನಕ್ಕೂ ಕೂಡ ಅದರದೇ ಆದ ಪ್ರತಿಫಲ ಇರಲಿ. ಈ ಪ್ರತಿಫಲಗಳು ಕೂಡ ರಾಷ್ಟ್ರದ ಹಿತ ದೃಷ್ಟಿಯಲ್ಲೇ ಇರಬೇಕು. ಉದ್ದೇಶ್ಯ ದಂಡಿಸುವದಲ್ಲ. ವ್ಯಕ್ತಿಗೆ, ಜವಾಬ್ದಾರಿಯ ಅರಿವು ಮೂಡಿಸುವುದಾಗಿರಬೇಕು. ಸ್ವಾಭಿಮಾನಕ್ಕೆ, ಸ್ವಾತಂತ್ರಕ್ಕೆ ಧಕ್ಕೆ ಆಗಕೂಡದು.
ಈಗ ೨ ನೇ ಪ್ರಶ್ನೆ, ಗುಣಗಳಿಗೆ ಅನುಗುಣವಾಗಿ ಕಲಿಸಿದ ಮಾತ್ರಕ್ಕೆ ಹೊಣೆಗಾರಿಕೆ ಬರುವುದೇ?
ಇದಕ್ಕೆ ಉತ್ತರ ನಿಮಗೂ ಗೊತ್ತು. ಖಂಡಿತ ಬರೋದಿಲ್ಲ. ಅದಕ್ಕೆಂದೇ, ಕಲಿಸುವುದು “ಓದು ಒಕ್ಕಾಲು, ಬುದ್ಧಿ ಮುಕ್ಕಾಲು” ಎಂಬ ಅನುಭವದ ನುಡಿಯ ಮೇಲೆ ಆಧರಿಸಿರಬೇಕು. ಕೇವಲ ಸಿದ್ಧಾಂತಗಳನ್ನು ಕಲಿಸಬಾರದು. ಮುಕ್ಕಾಲು ಪಾಲು ಕಲಿಕೆ ನಿಜ ಅನುಭವ ಕೊಡುವುದರಿಂದಾಗಬೇಕು. ಓದು ಮುಗಿಸಿದೆ ಎಂದರೆ, ಸೇವೆ ಮಾಡಲು ಸಿದ್ಧ ಎಂದೇ ಅರ್ಥ ಬರುವ ಹಾಗಿರಬೇಕು. ಆಗ ಈ ಅರ್ಥಹೀನ ಸಂದರ್ಶನಗಳ ಅವಶ್ಯಕತೆಯೇ ಇರುವದಿಲ್ಲ. ಉದಾಹರಣೆಗಳಿಗೆ, ಹೂಜಿ, ಗಡಿಗೆ ಹೇಗಿರುತ್ತದೆ, ಹೇಗೆ ಮಾಡುತ್ತಾರೆ ಎಂದು ಚಿತ್ರದಲ್ಲಿ, ದೃಶ್ಯಗಳಲ್ಲಿ ತೋರಿಸುವ ಬದಲು, ಕೈಯಾರೆ ಮಾಡುವ ಅವಕಾಶ ಕೊಡಬೇಕು. ಅಂಗಿ, ಪಂಚೆ ಅಂಗಡಿಗಲ್ಲಿ ನೋಡಿರುತ್ತಾರೆಯೇ ಹೊರತು, ಅದು ಹೇಗೆ ಬರುತ್ತದೆ ಎಂಬ ಸುಳಿವು ಕೂಡ ಇರುವದಿಲ್ಲ. ಹತ್ತಿಯಿಂದ ಬಟ್ಟೆ, ರೇಷ್ಮೆ ಹುಳುಗಳಿಂದ ರೇಷ್ಮೆ ಬಟ್ಟೆ ಎಂಬ ಅರಿವು ಇತ್ತೀಚಿನ ಜನಾಂಗಕ್ಕೆ ಗೊತ್ತೇ ಇಲ್ಲ. ಮೊಸರು ಕೊಂಡುಕೊಳ್ಳುವುದು ಗೊತ್ತಿರುತ್ತದೆಯೇ ಹೊರತು ಹೇಗೆ ಮನೆಯಲ್ಲೇ ಮಾಡಬಹುದು ಎಂಬ ಅನುಭವ ಇಲ್ಲವೇ ಇಲ್ಲ. ಮಸಾಲೆ ದೋಸೆ, ರೆಸ್ಟೋರೆಂಟ್ ಗೆ ಹೋದ್ರೆ ಸಿಗತ್ತೆ ಅಥವಾ ಸುರಿಯಲು ಸಿದ್ಧವಾದ ಹಿಟ್ಟನ್ನು ಕೊಂಡು ತಂದು ತಿನ್ನಬಹುದು ಎನ್ನುವುದು ಗೊತ್ತೇ ಹೊರತು, ಆ ಹಿಟ್ಟನ್ನು ಹೇಗೆ ತಯಾರಿಸುವುದು ಎಂದು ಎಷ್ಟು ಜನಕ್ಕೆ ಗೊತ್ತು?
ಸನಾತನ ಪದ್ಧತಿಗಳಲ್ಲಿದ್ದ ಗುರುಕುಲಗಳ ಮಾದರಿಯಲ್ಲಿ, ಕೆಲವಷ್ಟು ಕಾಲ ಸ್ವಂತ ತಂದೆ ತಾಯಿಯರಿಂದ ಕಡ್ಡಾಯವಾಗಿ, ದೂರ ಇದ್ದು ಕಲಿಯಬೇಕು. ನಂತರ ಒಂದಷ್ಟು ಕಾಲ ದೇಶಾಟನೆ ಮಾಡಬೇಕು.
ಹೇಗೆ ನೀರಿಗೆ ಬೀಳದೆ ಈಜು ಕಲಿಯಲಾಗುವದಿಲ್ಲವೋ ಹಾಗೆಯೇ ಕೇವಲ ಓದುವದರಿಂದಾಗಲಿ, ದೃಶ್ಯಗಳನ್ನು ನೋಡುವುದರಿಂದಾಗಲಿ, ಅನುಭವ, ಜವಾಬ್ದಾರಿ ಬಾರದು. ಹೊಲದಲ್ಲಿ, ಕೆಲಸ ಮಾಡಬೇಕು. ಮನೆ ಕಟ್ಟಬೇಕು. ಅಡುಗೆ ಮಾಡಬೇಕು. ಆಗಲೇ ಕಲಿಯುವುದು ಒಂದು ಉಲ್ಲಾಸಕರ, ಆನಂದಕರ ಅನುಭವವಾಗುವುದೇ ಹೊರತು, ಅನವಶ್ಯಕ ಒತ್ತಡ ತರುವ ಹೊರೆ ಎನ್ನಿಸುವದಿಲ್ಲ. ಗುಣಮಟ್ಟ ಅಂದರೆ ನಿಜವಾಗಲೂ ಏನು, ಹೇಗೆ ಅದನ್ನು ಜೀವನದ ಪ್ರತಿರಂಗದಲ್ಲಿ ಅಳವಡಿಸುವುದು ಎಂಬ ಅನುಭವ, ಶಿಕ್ಷಣದ ಪ್ರತಿ ಹಂತದಲ್ಲೂ ದೊರಕಬೇಕು. ಹವಾ ನಿಯಂತ್ರಿತ ಕೋಣೆಗಳಲ್ಲಿ, ಅಥವಾ ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ಕಲಿಸುವ ಕ್ರಮದ ಉಚ್ಛಾಟನೆಯಾಗಬೇಕು. ನೆನಪಿರಲಿ, ಇವೆಲ್ಲವೂ ರಾಷ್ಟ್ರಹಿತ, ರಾಷ್ಟ್ರದ ಅಭಿವೃದ್ಧಿ, ರಾಷ್ಟ್ರ ಮನೋಭಾವ ಬೆಳೆಸೋ ಉದ್ದೇಶ್ಯದಿಂದಲೇ ಇರಬೇಕು. ಆಗಲೇ, ಹೊಣೆಗಾರಿಕೆ ಅಂದರೆ ಏನೆಂದು ಅನುಭವ ಪಡೆಯುವುದು.
ಈಗ ೩ ನೇ ಪ್ರಶ್ನೆ. ಸ್ಪರ್ಧಾತ್ಮಕ ಭಾವನೆ ಬೇಕೇ? ಅದು ಅಸೂಯೆಗೆ ದಾರಿ ಮಾಡಿಕೊಡುವದಿಲ್ಲವೇ?
ಇದಕ್ಕೆ ಉತ್ತರ ಬಹಳ ಸರಳ. ಅದು ನಿಮಗೂ ಗೊತ್ತು. ಈಗ ಎತ್ತನ್ನು, ಕುದುರೆಗೆ ಹೋಲಿಸುವುದು ಸರಿಯೇ? ಎತ್ತು, ಕುದುರೆಯಷ್ಟು ಜೋರಾಗಿ ಓಡದೇ ಇರಬಹುದು. ಆದರೆ ಅದಕ್ಕೆ ಅದರದೇ ಆದ ಅಸ್ತಿತ್ವ, ಮಹತ್ವ ಇದೆ. ಹಾಗೆಯೇ, ರೈಲುಬಂಡಿ ವಿಮಾನದ ಹಾಗೆ ಎತ್ತರ ಹಾಗೂ ವೇಗವಾಗಿ ಹಾರಬೇಕು ಎಂದು ಬಯಸುವುದು ಸರಿಯೇ?
ಹಾಗೆಯೇ, ಅಸಹಜವಾದ, ಅನಗತ್ಯವಾದ ಪೈಪೋಟಿ ಅನಾರೋಗ್ಯಕರ, ಅನವಶ್ಯಕ ಮತ್ತು ಹಾನಿಕಾರಿ. ಹಾಗಾದರೆ ಅಭಿವೃದ್ಧಿ ಹೊಂದುವುದು ಹೇಗೆ ಎನ್ನುತ್ತೀರಾ? ಉತ್ತರ ತೀರಾ ಸರಳ. ಉದಾಹರಣೆಗೆ ನನ್ನ ಕ್ರಿಕೆಟ್ ಅಕ್ಯಾಡೆಮಿಯಲ್ಲಿ ನನ್ನ ವಿದ್ಯಾರ್ಥಿಗಳಿಗೆ ಈ ಪಾಠವನ್ನು ಹೇಳಿ ಕೊಡುತ್ತಿದ್ದೆ. ನಾನೂ ಸಚಿನ್ ಆಗ್ತೀನಿ, ದ್ರಾವಿಡ್ ಆಗ್ತೀನಿ ಎನ್ನುವ ಹಂಬಲ, ಲಕ್ಷ್ಯ ಬೇಡ. ನೀವು ನೀವಾಗೇ ಇರಿ. ಇವತ್ತು ೧ ರನ್ ಮಾಡಿ ಔಟ್ ಆದರೆ, ಮುಂದಿನ ಬಾರಿ ೫ ಮಾಡುವ ಲಕ್ಷ್ಯ ಹೊಂದಿ. ಅದರ ಮುಂದಿನ ಬಾರಿ, ೧೦, ೨೦, ೨೫, ೫೦ ಹೀಗೆ ನಮ್ಮನ್ನೇ ನಾವು ಉತ್ತಮಗೊಳಿಸುವಂಥ ಪ್ರಯತ್ನ ಸತತವಾಗಿ, ನಿರಂತರವಾಗಿ ಜೀವನದುದ್ದಕ್ಕೂ ನಡೆಯಬೇಕು. ತಂಡಕ್ಕೆ ಅವಶ್ಯಕತೆ ಇರುವ ಕೆಲಸವನ್ನೇ ಮಾಡಬೇಕು ಎನ್ನುವ ಹಾಗೆ ತಯಾರಿ ಇರಬೇಕು ಎನ್ನುವ ಪಾಠ ನಾನು ಕಲಿಸುತ್ತಿದ್ದೆ. ಇದರಿಂದ, ಅನವಶ್ಯಕವಾದ ಅನಾರೋಗ್ಯಕರ ಶ್ರೇಷ್ಠತಾಮನೋಭಾವ ಅಥವಾ ಕೀಳರಿಮೆಯ ಮನೋಭಾವ ಬೆಳೆಯುವದಿಲ್ಲ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾನೂ ಒಬ್ಬ ತಂಡದ ಉಪಯುಕ್ತ ಸದಸ್ಯ ಎನ್ನುವ ಮನೋಭಾವ ಬಂದಾಗ, ಆಟದಲ್ಲಿನ ಆಸಕ್ತಿ, ಮನೋರಂಜನೆ ಎಲ್ಲವೂ ಇಮ್ಮಡಿಯಾಗುತ್ತವೆ. ಇದು ಜೀವನದ ಎಲ್ಲಾ ರಂಗಗಳಿಗೂ ಅನ್ವಯವಾಗುವ ಪಾಠ ಹಾಗೂ ಮಾದರಿ. ಹೀಗಾಗಿ, ಮೊದಲ ಶ್ರೇಣಿ, ೨ನೆ ಶ್ರೇಣಿ ಎಂದೆಣಿಸುವ ಪದ್ಧತಿಯನ್ನು ಕಿತ್ತೆಸೆಯಬೇಕು. ಹಾಗೆಯೇ ನಮ್ಮ ವ್ಯವಸ್ಥೆ ಗುಣಗಳಿಗೆ ತಕ್ಕ ಶಿಕ್ಷಣ ಕೊಟ್ಟಲ್ಲಿ, ಈ ಸ್ಪರ್ಧಾ ಮನೋಭಾವದ ಅಗತ್ಯವೇ ಇರುವದಿಲ್ಲ. ಬಂಗಾರ ವಜ್ರವಾಗುವದಿಲ್ಲ ಹಾಗೆ ಆಗುವ ಅವಶ್ಯಕತೆಯೇ ಇಲ್ಲ ಹಾಗೆಯೇ ಕಲ್ಲು ಕೆತ್ತದೆ ಮೂರ್ತಿಯಾಗುವದಿಲ್ಲ. ಈ ಕೆತ್ತುವ ಕೆಲಸ ರಾಷ್ಟ್ರದ ಹಿತ ದೃಷ್ಟಿಯಿಂದಾಗಬೇಕು. ಆಗಲೇ ನಾವೆಲ್ಲಾ ಉಪಯುಕ್ತ ಮೂರ್ತಿಗಳಾಗುವುದು. ರಾಷ್ಟ್ರಕ್ಕೆ ಹೊರೆಯಾಗದೆ, ಉಪಯೋಗವಾಗುವುದು.
ನೀವೇನಂತೀರಿ?
ನಿಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ನನ್ನೊಡನೆ ಹಂಚಿಕೊಳ್ಳಲು ನನ್ನ ಈ email ನ್ನು ಬಳಸಿ – AnswerGuy001@gmail.com