ಶಾಕುಂತಲಾ -ಎರಡು ಭಿನ್ನ ಧ್ವನಿಗಳ ಕಥೆಗಳು
ಯಾವುದೇ ಸಾಹಿತ್ಯ ಕೃತಿಯು ಕೇವಲ ಕಲಾಕೃತಿ ಮಾತ್ರವೇ ಆಗಿರುವುದಿಲ್ಲ. ಅದಕ್ಕೆ ಚಾರಿತ್ರಿಕ,ರಾಜಕೀಯ ಹಾಗೂ ಧಾರ್ಮಿಕ ಅಥವಾ ಸಾಮಾಜಿಕ ಯಾವುದಾದರೊಂದರ ವಾಸನೆಗಳೂ ಇರುತ್ತವೆ. ಕೃತಿ
ಕಾಲ್ಪನಿಕ ಅಥವಾ ಪುರಾಣ ಎಂದಾದರೂ ಅದಕ್ಕೆ ವರ್ತಮಾನದ ಬಿಸುಪು ಇಲ್ಲವೇ ಇಲ್ಲ ಎನ್ನಲಾಗದು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳಿಂದ ರೂಪಿಸಲ್ಪಟ್ಟ ಕೃತಿಯು ಆಯಾ ಕಲಾರಾಧನೆಯಲ್ಲಿ ಮಾತ್ರ ನಿಲ್ಲದೆ ಅದರ ಅಂತರಾಳವು ಕಾಲಾತೀತವಾಗಿಯೂ ನಿಲ್ಲಬಲ್ಲವು. ಈ ನೆಲೆಯಲ್ಲಿ ಮಾಸ್ತಿ ಮತ್ತು ವೈದೇಹಿ ಅವರ ಎರಡು ಕಥೆಯನ್ನು ತೂಗಿ ನೋಡಬಹುದು.
ಮಾಸ್ತಿಯವರ ಕಥನ ಕೇಂದ್ರಗಳಲ್ಲಿ ಸ್ತ್ರೀಯರ ಇರವು ಅತ್ಯಂತ ಮಹತ್ವದ್ದಾಗಿದೆ. ಹೆಣ್ಣು ಕೌಟುಂಬಿಕ ಆದರ್ಶದ ಶಕ್ತಿ ಎಂಬಂತೆ ಮಾಸ್ತಿಯವರು ಹಲವು ರೂಪಗಳಲ್ಲಿ ಚಿತ್ರಿಸಿದ್ದಾರೆ. ದಾಂಪತ್ಯದ ಸೊಗಸನ್ನು ಸಾರುವ ನವೋದಯದ ಬಹುದೊಡ್ಡ ಮೌಲ್ಯವನ್ನು ಇವರ ಕಥೆಗಳು ಸಾಕ್ಷೀಕರಿಸುವಂತಿವೆ. ಪುರುಷರ ಗುರಿ ಮತ್ತು ಉದ್ದೇಶಗಳ ಏಳು ಬೀಳುಗಳ ನಡುವೆ ನೆರಳಂತೆ ಕಾಣುವ ಮಾಸ್ತಿಯವರ ಕಥೆಗಳ ಮಹಿಳೆ ಕುಟುಂಬದಿಂದಾಗುವ ನೋವು ಮತ್ತು ಸಂಕಟಗಳನ್ನು ಏಕಾಂಗಿಯಾಗಿಯೇ ಭರಿಸುವ ದಿಟ್ಟೆಯಾಗಿದ್ದಾಳೆ. ತ್ಯಾಗ ಮತ್ತು ಕ್ಷಮೆಯ ಬಂಧನಗಳಲ್ಲಿ ನರಳುವ ಆಕೆ ಪುರುಷಾಧಿಕಾರದ ನೊಗ ಹೊತ್ತ ಅವ್ಯಕ್ತ ಬಂಧಿಯಂತೆಯೂ ಕಾಣುತ್ತಾಳೆ. ಈ ಕ್ರಮವನ್ನು,ಇಂತಹ ಗುಣಗಳನ್ನು ತಕ್ಕಮಟ್ಟಿಗೆ ಪ್ರಶ್ನಿಸುತ್ತಾ ಸಣ್ಣಗೆ ಎದುರುಗೊಳ್ಳುತ್ತಾ ಸದ್ದಿಲ್ಲದೆ ಹೆಣ್ಣ ದ್ವನಿಯನ್ನ ಅತ್ಯಂತ ಆಳಕ್ಕಿಳಿಯವಂತೆ ರೂಪಿಸಬಲ್ಲವರು ಕನ್ನಡದ ಮತ್ತೊಬ್ಬ ಪ್ರತಿಭಾವಂತ ಲೇಖಕಿ ವೈದೇಹಿ.
ಇಲ್ಲಿ ಮಾಸ್ತಿಯವರ ಹೇಮಕೂಟದಿಂದ ಬಂದಮೇಲೆ ಮತ್ತು ವೈದೇಹಿಯವರ ಶಾಕುಂತಲೆಯೊಂದಿಗೆ ಕಳೆದ ಅಪರಾಹ್ನ ಕಥೆಗಳ ಎರಡು ಭಿನ್ನ ಧ್ವನಿಗಳನ್ನು ನೋಡಬಹುದಾಗಿದೆ.
ಕಾಳಿದಾಸನ ಸೃಷ್ಟಿಯ ಶಾಕುಂತಲೆಯನ್ನು ದುಷ್ಯಂತ ಪ್ರಧಾನವಾಗಿ ನೋಡದೆ( ಪ್ರಭು ಮತ್ತು ಧರ್ಮ ಪ್ರಧಾನ) ಶಾಕುಂತಲೆಯ ನೆಲೆಯಲ್ಲೇ ನೋಡುವ ಮಾಸ್ತಿಯವರಿಗೆ ಶಾಪ ಮತ್ತು ವರಗಳಿಗಿಂತ ರಾಜ ಮತ್ತು ಹೆಣ್ಣು ಎಂಬ ವರ್ತಮಾನವೇ ಪ್ರಧಾನವಾಗಿ ಕಾಣುತ್ತದೆ. ಪವಾಡದ ಮಸುಕಿನಲ್ಲಿ ಮರೆಯಾಗಿದ್ದ ಸಾಕುಂತಲೆಯ ನೋವನ್ನು ಹೆಕ್ಕುವ ಮಾಸ್ತಿ “ ಶಕುಂತಲೆ ಆಶ್ರಮದಿಂದ ಹೋದ ತಿಂಗಳ ಮೇಲೆ ಗೌತಮಿಯೂ ಶಾರ್ಜ್ಞರವ ಶಾರದ್ವತರೂ ಹಿಂದಕ್ಕೆ ಬಂದರು. ಅವರಿಂದ ಶಾಕುಂತಲೆಗೆ ಆದ ಅವಮಾನದ ಕಥೆಯನ್ನು ಕೇಳಿ ಆಶ್ರಮವಾಸಿಗಳೆಲ್ಲ ನೊಂದರು. ಶಕುಂತಲೆಯನ್ನು ಮೇನಕೆ ಕರೆದುಕೊಂಡು ಹೋದದ್ದಾಗಲೀ, ಅವಳು ಮರೀಚಿ ಋಷಿಗಳ ಆಶ್ರಮದಲ್ಲಿ ಮಗನನ್ನು ಹೆತ್ತು ಸುಖವಾಗಿದ್ದಾಳೆಂಬುದಾಗಲಿ ಇವರಿಗೆ ತಿಳಿಯಲಿಲ್ಲ”, ಹೀಗೆ ಹತ್ತಿರ ಹತ್ತಿರ ಆರು ವರ್ಷ ಆದಮೇಲೆ ಒಂದು ದಿನ ರಾಜ ಪುರುಷನೊಬ್ಬನು ಚಕ್ರವರ್ತಿಯ ಕಡೆಯಿಂದ ಮರ್ಯಾದೆಗಳ ಸಮೇತ ಬಂದು ರಾಜನು ಹೇಮಕೂಟದಲ್ಲಿ ಶಕುಂತಲೆಯನ್ನು ಕಂಡ ವಿಷಯವನ್ನು ಅಲ್ಲಿಂದ ಅವಳನ್ನು ಕುಮಾರ ಭರತನನ್ನೂ ಕರೆತಂದ ವಿಷಯವನ್ನು ಕಣ್ವ ಋಷಿಗಳ ಸನ್ನಿಧಿಯಲ್ಲಿ ನಿವೇದಿಸಿದನು. ಆ ದಿನ ಆಶ್ರಮವಾಸಿಗಳ ಆನಂದ ಎಷ್ಟೆಂದು ಹೇಳುವಂತಿಲ್ಲ ಕುಲಪತಿಗಳು ಐದು ವರ್ಷ ನಕ್ಕಿರಲಿಲ್ಲ. ಅಂದು ನಕ್ಕರು”, ಕುಲಪತಿಗಳ ಸಾಕುಮಗಳು ಸುಖವಾಗಿದ್ದಾಳೆ. ಪತಿಯೊಂದಿಗೆ ಅರಮನೆಯಲ್ಲಿದ್ದಾಳೆ. ರಾಷ್ಟ್ರದ ರಾಣಿಯಾಗಿದ್ದಾಳೆ. ಭವಿಷ್ಯದ ಚಕ್ರವರ್ತಿಯನ್ನು ಸಾಕುತಿದ್ದಾಳೆ. ಎಂಬ ಭಾವ ಆಶ್ರಮವಾಸಿಗಳ ಹೃದಯದಲ್ಲಿ ಅಲ್ಲಿಯ ಉಳಿದೆಲ್ಲ ಜೀವನದಲ್ಲಿ ಮಾಲಿನಿಯ ಪ್ರಸನ್ನ ಸಲಿಲಾಶಯಗಳಲ್ಲಿ,ತಪೋವನಕ್ಕೆ ಹರಿತಂದ ಗಾಳಿ ಬೆಳಕಿನಲ್ಲಿ, ಸರ್ವತ್ರ ಪ್ರಕಾಶಗೊಂಡಿತು”
ಇಲ್ಲಿ ಮಾಸ್ತಿಯವರು ಗ್ರಹಿಸುವ ನಂಬುವ,ಸ್ತ್ರೀ ಗುಣ ಅವಳ ತ್ಯಾಗಮೂಲವಾದ ಮಾತೃತ್ವವನ್ನು. ಪತಿಗೆ ಕುಟುಂಬಕ್ಕೆ ಮೀಸಲಿಟ್ಟ ಅವಳ ನೆಮ್ಮದಿಯನ್ನು. ಇಲ್ಲಿ ಶಕುಂತಲೆ “ ಲಿದ ಗಂಡನಿಂದ ನಿರಾಕೃತಳಾಗಿ ಹೋಗಿ ಹೇಮಕೂಟದಲ್ಲಿ ಆರು ವರ್ಷವನ್ನು ಕಳೆದು ಹದಿನೆಂಟು ವರ್ಷದ ತರುಣಿ ಮೂವತೈದು ವರ್ಷದ ಹೆಂಗಸಂತೆ ಜೀವನದ ಭಾರದಿಂದ ತಗ್ಗಿ ಹೋಗಿದ್ದಳು. ಪತಿ ಬಂದು ತನ್ನನೊಪ್ಪಿಕೊಂಡಾಗ ಅವಳ ಸ್ವಭಾವದಲ್ಲಿ ರೋಷಕ್ಕೆ ಸ್ಥಳವಿಲ್ಲವಾಗಿ ಹೋಗಿತ್ತು. ಆ ಮೇಲೆ ಮಗನನ್ನು ಕರೆದುಕೊಂಡು ಹಸ್ತಿನಾವತಿಗೆ ರಾಣಿಯೆಂದು ಬಂದಾಗಾಗಲಿ ಅವಳ ಮನಸ್ಸು ಉತ್ಸಾಹದಿಂದ ಉಬ್ಬಲಿಲ್ಲ. ಒಂದು ಸ್ಥಿತಿ ಮೀರಿದನಂತರ ಮನಸ್ಸು ಎಂಥಾ ಸಂತೋಷದಲ್ಲೂ ಉಬ್ಬುವುದನ್ನು ಮರೆಯುತ್ತದೆ. ಅವಳಿಗೆ ಜೀವನದಲ್ಲಿ ಕಲ್ಯಾಣ ಮರಳಿ ಮೂಡಿದ ಕ್ಷಣದಲ್ಲಿ ತನಗೆ ಸುಖ ಬಂದಿತೆಂಬ ಭಾವನೆಗಿಂತ, ʼತನ್ನ ತಂದೆಗೆ ಇನ್ನು ಚಿಂತೆ ಇಲ್ಲ. ತನ್ನ ಸಖಿಯರಿಗೆ ಇನ್ನು ಖೇದವಿಲ್ಲ. ತನ್ನ ಅಜ್ಜಿ ಇನ್ನು ಯೋಚಿಸಬೇಕಾದುದಿಲ್ಲ. ತನ್ನ ಮಗನಿಗೆ ಹುಟ್ಟಿನಿಂದ ಸಲ್ಲಬೇಕಾದ ಪದವಿ ದೊರೆಯುತ್ತದೆ. ತನ್ನ ನಡತೆ ಯಾವುದರಿಂದಲಾದರೂ ಅದು ಅವನಿಗೆ ತಪ್ಪಿ ಹೋಗಬೇಕಾದ ಪ್ರಮೇಯವಿಲ್ಲ; ಎನ್ನುವ ಭಾವವೇ ಮುಖ್ಯವಾಗಿತ್ತು”
ಪರಂಪರೆ ಹಾಗಿರಲಿಲ್ಲ. ಹೆಣ್ಣು ಯಾವುದೇ ಹಕ್ಕನ್ನು ಹೊಂದಿರುವುದಕ್ಕೆ ಅನರ್ಹಳು ಎಂದೇ ಆಕೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿಸಿತ್ತು. ವಿದ್ಯೆ ಜ್ಞಾನ,ಏನೊಂದೂ ಇಲ್ಲದ ಸ್ತ್ರೀ ಪುರುಷನ ಮೇಲೆಯೇ ಅವಲಂಬಿತವಾಗಿರುವುದನ್ನೇ ಮೌಲ್ಯವೆಂದಿತ್ತು.ಅವನ ಪರಂಪರೆಯ ನೆರಳಾಗಿ ನಡೆವುದನ್ನೇ ಸಾದ್ವಿತನ ಎಂದು ಸಾರಿತ್ತು. ಆತನನ್ನ ಪ್ರಶ್ನಿಸುವ ಹಕ್ಕು ಆಕೆಗೆ ಇರಲಿಲ್ಲ.ರಕ್ತ ಮಾಂಸದ ಭೋಗ ವಸ್ತುವಾಗಿ ಮನೋರಂಜಿಸುವ ವಿದ್ಯೆಯ ತೇರಾಗಿ ನೋಡುತಿದ್ದ ಪರಂಪರೆ ಆಕೆಯನ್ನ ಶೂದ್ರನಂತೆಯೇ ಕಾಣುತಿತ್ತು.ಇನ್ನು ಮನು ವಂತೂ “ ನ ಸ್ತ್ರೀ ಸ್ವತಂತ್ರಂ ಅರ್ಹತಿ” ಎಂದು ಸಾರಿ ಆಕೆಯನ್ನ ಪುರುಷರ ನೆರಳಲ್ಲಿ ಅರಳುವ ಪರಾವಲಂಬಿ ಜೀವವಾಗಿಸಿದ್ದ.
ಮಾಸ್ತಿಯವರ ನೋಟವು ಈ ನೆಲೆಯಲ್ಲಿ ನಿಲ್ಲದೇ ಅವಳ ಪ್ರತಿಕ್ರಿಯೆಯನ್ನು ಮಾತ್ರ ಸೂಕ್ಷ್ಮವಾಗಿ ನೀಡಿದ್ದಾರೆ. ರಾಜರ ಜಾಣ ಮರೆವನ್ನು,ಬಹುಪತ್ನಿತ್ವದ ಹಿಂದಿನ ವಾಂಛೆಯನ್ನು ನೀಡಿದರೂ ಅವರು ಎಲ್ಲೂ ಶಕುಂತಲೆಯನ್ನು ಪುರುಷನ ನೆರಳನ್ನೂ ಪ್ರಶ್ನಿಸುವಂತೆ ಚಿತ್ರಿಸಿಲ್ಲ. ಈ ನೆಲೆಯನ್ನು ಸೂಕ್ಷ್ಮವಾಗಿ ಎದರುಗೊಳ್ಳವು ಕಥನವೇ ವೈದೇಹಿ ಅವರ “ ಶಕುಂತಲೆಯೊಂದಿಗೆ ಕಳೆದ ಅಪರಾಹ್ನ” ಹೆಣ್ಣನ್ನು ಉಪಭೋಗ ಸಾಮಾಗ್ರಿಯಾಗಿ ನೋಡುವ ದೃಷ್ಟಿಕೋನವನ್ನೇ ಪ್ರಶ್ನೆಗೊಡ್ಡುತ್ತದೆ. ಇಲ್ಲಿ ನೇರ ಮಾತುಗಾರಿಕೆಯಿಲ್ಲದಿದ್ದರೂ ಸ್ವಗತದಲ್ಲಿ ಮತ್ತು ಗಟ್ಟಿಯಾದ ಮೌನದಲ್ಲೇ ಆಕೆಯ ಪ್ರತಿಭಟನೆಯ ದ್ವನಿ ಇರುವುದನ್ನು ಕಾಣಬಹುದಾಗಿದೆ. ಲೋಕದೊಂದಿಗೆ ಕುಟುಂಬ ಹೊಂದಾಣಿಕೆ ಮತ್ತು ಲೋಕ ಪ್ರೇಮಕ್ಕೆ ಮಾಸ್ತಿಯವರ ಶಕುಂತಲೆ ಹಂಬಲಿಸಿದರೆ ವೈದೇಹಿಯವರ ಶಕುಂತಲೆ ತಾನು ತನ್ನ ಆಯ್ಕೆ ಮೊದಲು ಆಮೇಲೆ ಲೋಕ ಎನ್ನುವ ಸ್ಪಷ್ಟ ತರ್ಕದ ಹೆಣ್ಣಾಗಿ ಕಾಣಿಸುತ್ತಾಳೆ.
“ ಕಣ್ವರ ಸಾಕು ಮಗಳು, ಆಶ್ರದ ಗಡಿಯಾಚೆ ಹೋಗದವಳು,ಅವರ ಕಣ್ಣಕನ್ನಡಿಯಲ್ಲಿಯೇ ಕೂಗಳತೆಯಲ್ಲಿಯೇ ಸುತ್ತುತ್ತ ಬೆಳೆದವಳು. ಅವರು ಕಳಿಸಿದಲ್ಲಿಗೆ ಹೋಗಲು ಸಿದ್ದಳೆಂದು ತನಗೆ ತಾನೇ ಅಂದುಕೊಂಡ ಮುಗ್ದೆ. ಆಶ್ರಮದ ವಾತಾವರಣದಲ್ಲಿ ಆ ವರ್ಚಸ್ವೀ ಪುರುಷನನ್ನು ಕಂಡದ್ದೇ ಪರವಶನಾದೆಯೆಂದರೆ ಆಶ್ಚರ್ಯವಿಲ್ಲ ಎಂದೆಯೇನು? ನಿನ್ನಲ್ಲಿ ಮುಚ್ಚು ಮರೆ ಏಕೆ?”
“ ಆತ ನಕ್ಕ. ತುಸು ಹೆಚ್ಚೆನಿಸುವಂತೆಯೇ. ಯಾಕಿರಬಹುದು? ಉತ್ತರ ಹಡುಕುವ ಮೊದಲೇ ಬೆಳದಿಂಗಳು ಹರಡಿತ್ತು. ಆತ ಭ್ರಮರನಾದ ಅಥವಾ ನಿಜವಾಗಿಯೂ ನಾ ಭ್ರಮಿತೆಯಾದೆನೇ?”
***
ಗೆಳತೀ, ಬೆಳದಿಂಗಳ ನಂತರದ ದಿನಗಳು ಎಷ್ಟು ಕರಾಳ!
ಆತ ಹೊರಟು ನಿಂತ.
ಅವುಚಿ ಹಿಡಿದುಕೊಂಡೆ ಬಿಡುವುದಿಲ್ಲವೆಂದೆ. ಹದಿ ಹರೆಯದ ಹುಡುಗಿಯರ ಎಲ್ಲ ಆತಂಕ ಉದ್ವೇಗ ಪ್ರೇಮಾತಿಶಯದ ಪರಾಕಾಷ್ಟೆಯಲ್ಲಿದ್ದೆ ನಾನು. ಆತನನ್ನು ಬಿಟ್ಟು ಮತ್ತುಳಿದ ಪ್ರಪಂಚವೇ ಕಾಣುತ್ತಿರಲಿಲ್ಲ.
ʼನನಗ್ಗೊತ್ತು ರಾಜಧಾನಿಗೆ ಹೋದವ ನನ್ನನ್ನೂ ಮರೆಯುತ್ತೀʼ ಎಂದೆ. ಆತ ಇಲ್ಲವೆನ್ನಲಿಲ್ಲ. ಬದಲು ಬೇಗ ಕರೆಸಿಕೊಳ್ಳುವೆನೆಂದು ಭಾಷೆಕೊಟ್ಟ.
ಹೊರಟೇ ಹೋದ, ಉಂಗುರವಿತ್ತು.
ಭೂಮಿ ಸೂರ್ಯನಿಗೆ ಎಷ್ಟು ಸುತ್ತು ಬಂತೋ!
ದುಷ್ಯಂತ ಮರೆವಿನ ಮರೆಯಲ್ಲಿ ತನ್ನನ್ನು ಅಡಗಿಸಿಕೊಂಡು ಬಿಟ್ಟ. ಕರೆಗೆ ಉತ್ತರವಿಲ್ಲ. ಸುದ್ದಿ ಸಂದೇಶವಿಲ್ಲ. ತಪ್ಪಲಿನ ತಪಸ್ವಿನಿಗೆ ನಿದ್ದೆಯಿಲ್ಲ. ಜಗತ್ತೆಲ್ಲವೂ ಸೊನ್ನೆಯಂತೆ ಕಂಡಿತು. ಹೋಗುವ ಮುನ್ನ ʼಇಷ್ಟು ಮೃದು ಮನವೇಕೆ? ಗಟ್ಟಿಯಾಗು ಎಂದಿದ್ದ. ʼ ನೀನಿಲ್ಲದಿದ್ದರೆ ಸಾಯುತ್ತೇನೆ, ಹುಚ್ಚಿಯಾಗುತ್ತೇನೆ, ಮನುಷ್ಯಳಾಗಿಯೇ ಇರುವುದಿಲ್ಲʼ ಎಂದೆಲ್ಲ ಹಲುಬಿದ್ದಕ್ಕೆ.
ನನ್ನ ಒಡಲಲ್ಲಿ ಆಗಲೇ ದೌಷ್ಯಂತೆಯ ಮೃದುಪಾದ ಒತ್ತುತ್ತಿತ್ತು.
ಆಶ್ರಮದಲ್ಲಿ ಬಿಸಿ ಹವೆ. ನಾರು ಮಡಿಗಳಿಂದಲೂ ನಾರು ಮಾತುಗಳು.
ʼದುಷ್ಯಂತ ಬೇಟೆಗೆ ಹೊರಟನೆಂದರೆ…ʼ
ʼಮಹಾರಾಜನಿಗೇನು? ಇಂಥವಳು ಹದಿನಾರು ಸಾವಿರʼ
ಹಿಂದೊಂದು ಕಾಲದಲ್ಲಿ ಹಂಸಪದಿಕೆ ಎಂಬ ಬುಡಕಟ್ಟಿನ ಹುಡುಗಿಯನ್ನು ಆತ ಪ್ರೀತಿಸಿದ್ದು, ದುಷ್ಯಂತನ ಯೌವನದೊಂದಿಗೇ ಹೆಣೆದುಕೊಂಡು ಬಂದ ಹಲವಾರು ಹಂಸಪದಿಕೆಯರು! ಅಂತಃ ಪುರದ ವಸುಮತಿಯರು, ಶಕುಂತಲೆಯರು!
ದುಷ್ಯಂತ ಜಾಣ ಮರೆವಿನ ಮಲ್ಲ. ಕವಿ ಇದನ್ನು ಮುಚ್ಚಿಡಲೆಂದೇ ಶಾಪಗೀಪ ಇತ್ಯಾದಿಗಳಿಂದ ಆತನ ಲಂಪಟತ್ವವನ್ನು ಮುಚ್ಚಿದ. “ಪುರುಷ ಕಟ್ಟಿದ ವಿಸ್ಮರಣೆಯ ಕತೆ. ರುಚಿಸಲೇ ಬೇಕು. ಕಾವ್ಯ ಮೀಯುವುದೇ ತನಗೆ ಬೇಕಾದ ಸುಖೋಷ್ಣ ಕಲ್ಪನೆಯಲ್ಲಿ”.
ದುಷ್ಯಂತ ಬಂದಿದ್ದೇ ವಾರಸುದಾರಿಕಿಗೆ ಭರತನನ್ನು ಕರೆದು ತನ್ನ ಸಿಂಹಾಸನದ ವಾರಸುದಾರಿಕೆಯನ್ನ ಉಳಿಸಿಕೊಳ್ಳಲಿಕ್ಕೆ. ಆಗಲೇ ಮೆಲ್ಲಗೆ ತಲೆ ಬಿಳಿಯಾದ ಆಕೆಯನ್ನ ನೋಡಲಲ್ಲ ಎಂಬ ಪ್ರಶ್ನೆಗಳಿಂದಲೇ ಛೇದಿಸಿ ನೋಡುವ ವೈದೇಹಿಯವರು ಶಕುಂತಲೆಯನ್ನ ಪರಂಪರೆಯಿಂದ ಪ್ರಸ್ತುತತೆಗೆ ತಾಳೆಹಾಕುತ್ತಾರೆ. ಇವರು ಕೆವಿ ಸುಬ್ಬಣ್ಣನವರ ಲೋಕ ಶಾಕುಂತಲದಿಂದ ಪ್ರೇರಣೆ ಪಡೆದರೆ, ಕಾಳಿದಾಸನಿಂದ ಪ್ರೇರಣೆ ಪಡೆದ ಮಾಸ್ತಿಯವರು ಶಕುಂತಲೆಯ ನಿರುಮ್ಮಳತೆಯನ್ನು ಮಗನಿಗೆ ಪಟ್ಟಕಟ್ಟಿ ಪತಿಯೊಂದಿಗೆ ಹೇಮಕೂಟಕ್ಕೆ ಬರುವ ಕನಸಿನ ಮೂಲಕ ಕುಟುಂಬ ಧರ್ಮವನ್ನ ಬೆಸೆದುನೋಡಿದರೆ, ವೈದೇಹಿಯವರು ಹೇಮಕೂಟಕ್ಕೆ ಬಂದು ಭರತನನ್ನು ಪಟ್ಟಕ್ಕೆ ಕರೆದುಕೊಂಡು ಹೊರಟು ಹೋದ ದುಷ್ಯಂತನ ಮೂಲಕ ಅನುಭೋಗದ ವಿಷಯದಲ್ಲಿ ಪತಿಯಾದರೂ ಮಗನಾದರೂ ಅಷ್ಟೇ. ಅನಿವಾರ್ಯತೆ ಅಲ್ಲದಾಗ ಹೆಣ್ಣು ಒಬ್ಬಂಟಿಯೇ ಎಂಬ ಗಟ್ಟಿ ಧ್ವನಿಯ ಮೂಲಕ ಕಥೆಯನ್ನು ನಿಲ್ಲಿಸುತ್ತಾರೆ.
ಎರಡೂ ಕಥೆಗಳಲ್ಲಿ ಪ್ರತಿಭಾ ಶಕ್ತಿಯ ಹೊಳಹುಗಳಿವೆ.ನಿರೂಪಣೆಯ ಸೊಗಸುಗಾರಿಕೆಗಳಿವೆ. ಎರಡರಲ್ಲೂ ಶಕುಂತಲೆಯ ಎರಡು ಭಿನ್ನ ಧ್ವನಿಗಳು ಓದುಗರ ಹೃದಯ ಕಲಕುವಂತಿವೆ.
ReplyForward
|